ಭಾನುವಾರ, ಆಗಸ್ಟ್ 1, 2021
27 °C

ಕಲಬುರ್ಗಿ: ಸೌಲಭ್ಯ ವಂಚಿತ ಕೆಎಸ್‌ಆರ್‌ಟಿಸಿ ಕಾಲೊನಿ

ಹನಮಂತ ಕೊಪ್ಪದ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಈ ಬಡಾವಣೆಯಲ್ಲಿ ಸುಸಜ್ಜಿತ ಸಿಸಿ ರಸ್ತೆಗಳಿಲ್ಲ. ಒಳಚರಂಡಿ ಸಂಪರ್ಕ (ಯುಜಿಡಿ) ಇಲ್ಲ. ಶುದ್ಧ ನೀರಿನ ಘಟಕವಿಲ್ಲ. ಉದ್ಯಾನ ಇಲ್ಲ. ಅಂಗನವಾಡಿ ಕೇಂದ್ರವಿಲ್ಲ. ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರೂ ಸ್ಪಂದಿಸುವವರೂ ಇಲ್ಲ..

ಇಲ್ಲಿನ ಹೀರಾಪುರಕ್ಕೆ ಹೊಂದಿಕೊಂಡಿರುವ ಕೆಎಸ್‌ಆರ್‌ಟಿಸಿ ಕಾಲೊನಿಯಲ್ಲಿನ ‘ಇಲ್ಲ’ಗಳ ಪಟ್ಟಿಯನ್ನು ವಿವರಿಸುತ್ತ ಹೋದರು ಬಡಾವಣೆಯ ಮುಖಂಡ ಅಂಬಾದಾಸ ಗಾಜರೆ.

ಬಡಾವಣೆಯಲ್ಲಿ ಸುಮಾರು 100 ಮನೆಗಳಿದ್ದು, 500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಭೀಮಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಬಡಾವಣೆಯಲ್ಲಿ ಸಾರಿಗೆ ಸಿಬ್ಬಂದಿ, ಪೊಲೀಸರು, ಶಿಕ್ಷಕರು, ಎಂಜಿನಿಯರ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇದ್ದಾರೆ.

ಬಡಾವಣೆ ಆರಂಭವಾಗಿ 2 ದಶಕ ಕಳೆದರೂ ಮೂಲಸೌಕರ್ಯ ಮರೀಚಿಕೆಯಾಗಿದೆ. ಇತ್ತಿಚೆಗೆ ನಿರ್ಮಿಸಿದ್ದ ಒಂದು ಸಿಸಿ ರಸ್ತೆ ಬಿಟ್ಟರೆ ಇಡೀ ಬಡಾವಣೆಯಲ್ಲಿ ಸುಸಜ್ಜಿತ ರಸ್ತೆಗಳೇ ಇಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಇಲ್ಲಿನ ಮಣ್ಣಿನ ರಸ್ತೆಗಳು ಕೆಸರು ಗದ್ದೆಗಳಾಗುತ್ತಿದ್ದು, ನಿವಾಸಿಗಳು ಪರದಾಡುವಂತಾಗಿದೆ.

ಬಡಾವಣೆಗಳಲ್ಲಿ ಚರಂಡಿ ನಿರ್ಮಿಸಿಲ್ಲ. ಒಳಚರಂಡಿ ವ್ಯವಸ್ಥೆ (ಯುಜಿಡಿ) ಸಂಪರ್ಕ ಕಲ್ಪಿಸದ ಕಾರಣ ಕೊಳಚೆ ನೀರು ಮನೆಗಳ ಸುತ್ತಮುತ್ತಲಿನ ಖಾಲಿ ಜಾಗ ಹಾಗೂ ರಸ್ತೆಗಳ ಮೇಲೆ ಸಂಗ್ರಹವಾಗುತ್ತಿದೆ. ಇದರಿಂದ ದುರ್ನಾತದಿಂದ ನಿತ್ಯ ಹಿಂಸೆ ಅನುಭವಿಸುವಂತಾಗಿದೆ. ಬಹುತೇಕ ಮನೆಗಳಲ್ಲಿ ಶೌಚಾಲಯ ಇಲ್ಲದ ಕಾರಣ ಬಹಿರ್ದೆಸೆ ಮುಂದುವರೆದಿದೆ.

ಬಡಾವಣೆಯ ಖಾಲಿ ನಿವೇಶನಗಳಲ್ಲಿ ಆಳೆತ್ತರಕ್ಕೆ ಬೆಳೆದು ನಿಂತ ಗಿಡ-ಗಂಟಿಗಳು ಸೊಳ್ಳೆಗಳ ತಾಣಗಳಾಗಿದ್ದು, ಅವುಗಳ ಸುತ್ತಮುತ್ತ ವಾಸಿಸುವ ಜನರು ತೀವ್ರ ಹಿಂಸೆ ಅನುಭವಿಸುತ್ತಿದ್ದಾರೆ. ನಿರ್ವಹಣೆ ಕೊರತೆಯಿಂದ ಹುಲ್ಲು, ಕಳೆ ಸಸ್ಯಗಳು ಹುಲುಸಾಗಿ ಬೆಳೆದಿವೆ. ಜತೆಗೆ ಕೊಳಚೆ ನೀರು ಸಹ ಅಲ್ಲಿಯೆ ಸಂಗ್ರಹವಾಗುತ್ತಿರುವುದರಿಂದ ದುರ್ನಾತದಿಂದ ಸುತ್ತಮುತ್ತಲು ವಾಸಿಸುವರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಬಡಾವಣೆಯಲ್ಲಿ ಬೀದಿದೀಪದ ವ್ಯವಸ್ಥೆ ಸಮರ್ಪಕವಾಗಿದೆ. ಕುಡಿಯುವ ನೀರಿಗಾಗಿ ಕೆಲವರು ಬೋರ್‌ವೆಲ್ ಕೊರೆಸಿದ್ದಾರೆ. ಆದರೆ ಬಹುತೇಕ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಇಲ್ಲ. ಇದರಿಂದಾಗಿ ನೀರಿಗಾಗಿ ಪಕ್ಕದ ಬಡಾವಣೆಗೆ ಹೋಗಬೇಕಾದ ಪರಿಸ್ಥಿತಿಯಿದೆ.

‘ಸಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಖಾಲಿ ನಿವೇಶನಗಳಲ್ಲಿರುವ ಗಿಡ ಗಂಟಿಗಳನ್ನು ತೆರವುಗೊಳಿಸಬೇಕು. ಶುದ್ಧ ನೀರಿನ ಘಟಕ ಸ್ಥಾಪಿಸಬೇಕು. ಬಡಾವಣೆಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೆಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯಿತಿ ಪ್ರತಿನಿಧಿಯೇ ಇಲ್ಲ!

‘ಕೆಎಸ್‌ಆರ್‌ಟಿಸಿ ಕಾಲೊನಿಯು ಭೀಮಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟರೂ ನಮಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇಲ್ಲ. ನಾವು ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದೇವೆ. ಹೀಗಾಗಿ ನಮ್ಮ ಸಮಸ್ಯೆ ಕೇಳಲು ಗ್ರಾಮ ಪಂಚಾಯಿತಿ ಪ್ರತಿನಿಧಿಯೆ ಇಲ್ಲದಂತಾಗಿದೆ’ ಎನ್ನುತ್ತಾರೆ ಸ್ಥಳೀಯರು.

‘ಈ ಬಡಾವಣೆ ಕೃಷಿಯೇತರ ಭೂಮಿ (ಎನ್‌.ಎ)ಯಾಗಿದ್ದು, ಅಲ್ಲಿನ ಅಭಿವೃದ್ಧಿಗೆ ಬರುವ ಅನುದಾನ ಕಡಿಮೆ. ಆದರೂ ಗ್ರಾಮ ಪಂಚಾಯಿತಿ ವತಿಯಿಂದ ₹1 ಲಕ್ಷದೊಳಗಿನ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಬಡಾವಣೆಯಲ್ಲಿ ಬೀದಿ ದೀಪ ಅಳವಡಿಸಿದ್ದೇವೆ. ಬಡಾವಣೆ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ’ ಎಂದು ಭೀಮಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಯ್ಯದ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು.

***

ಹದಗೆಟ್ಟ ರಸ್ತೆ, ಹಾವು ಚೇಳುಗಳ ಕಾಟದಿಂದ ಮನೆಯಿಂದ ಹೊರಬರುವುದೆ ಕಷ್ಟಕರವಾಗಿದೆ. ಬಡಾವಣೆಗೆ ಸೌಲಭ್ಯ ಒದಗಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ

- ಚಾಂದ್‌ಪಾಷಾ, ಶಿಕ್ಷಕ

***

ಬಡಾವಣೆಯಲ್ಲಿ ಈಚೆಗೆ ಹಾವುಗಳು ಕಾಣಿಸಿಕೊಂಡಿದ್ದು, ಜನರು ಜೀವ ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಗಿಡ ಗಂಟಿಗಳನ್ನು ತೆರವುಗೊಳಿಸಿ, ಸ್ವಚ್ಛತೆಗೆ ಕ್ರಮ ಕೈಗೊಳ್ಳಬೆಕು

- ನೀಲಮ್ಮ ಭಜಂತ್ರಿ, ಸ್ಥಳೀಯ ನಿವಾಸಿ

***

ಬಡಾವಣೆಗೆ ನಿತ್ಯ ಬಸ್ ಬರುತ್ತದೆ. ಆದರೆ ತಂಗುದಾಣ ಇಲ್ಲದ ಕಾರಣ ಜನರು ಪರದಾಡುವಂತಾಗಿದೆ. ಕೆಸರು ಗದ್ದೆ, ಬಿಸಿಲಿನಲ್ಲಿಯೆ ಬಸ್‌ಗಾಗಿ ಕಾಯುವ ಪರಿಸ್ಥಿತಿ ಇದೆ. ಇಲ್ಲಿ ಬಸ್ ತಂಗುದಾಣ ನಿರ್ಮಿಸಿದರೆ ಅನುಕೂಲ

- ಮಧುಸೂದನ್, ವಿದ್ಯಾರ್ಥಿ

***

ಈ ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರವಿಲ್ಲ. ಮಕ್ಕಳಿಗೆ ಆಟವಾಡಲು ಆಟದ ಮೈದಾನ, ಉದ್ಯಾನ ಇಲ್ಲ. ಸಂಬಂಧಪಟ್ಟವರು ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು

-ರಾಬರ್ಟ್, ಎಂಜಿನಿಯರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು