ಮಂಗಳವಾರ, ಜುಲೈ 5, 2022
21 °C
ಏರುಗತಿಯಲ್ಲಿ ಸಾಗಿದ ಡೀಸೆಲ್ ದರದಿಂದ ಬಸವಳಿದ ಸಾರಿಗೆ ಸಂಸ್ಥೆ

ಕಲಬುರ್ಗಿ: ಈಶಾನ್ಯ ಸಾರಿಗೆ ಸಂಸ್ಥೆಗೆ ನಿತ್ಯ ₹ 77 ಲಕ್ಷ ನಷ್ಟ!

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದರಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ನಿತ್ಯ ₹ 77 ಲಕ್ಷ ನಷ್ಟವಾಗುತ್ತಿದೆ.

ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸುವವರ ಸಂಖ್ಯೆ ಈಗ ಹೆಚ್ಚುತ್ತಿರುವುದರಿಂದ ಹೆಚ್ಚು ರೂಟ್‌ಗಳಲ್ಲಿ ಬಸ್‌ಗಳ ಸಂಚಾರ ಆರಂಭಿಸಲಾಗುತ್ತಿದೆ. ಹೀಗಾಗಿ ನಷ್ಟದ ಪ್ರಮಾಣ ಹೆಚ್ಚುತ್ತಲೇ ಇದೆ. ಬಸ್ ಪ್ರಯಾಣ ದರ ಹೆಚ್ಚಳ ಮಾಡಬೇಕು ಎಂದು ಪ್ರಸ್ತಾವ ಸಲ್ಲಿಸಲು ಸಂಸ್ಥೆಯ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

2020ರ ಏಪ್ರಿಲ್ 1ರಂದು ಡೀಸೆಲ್ ದರ ₹ 50.20 ಇತ್ತು. ಇದೀಗ ₹ 77.90ಕ್ಕೆ ಏರಿದೆ (ಸಂಸ್ಥೆ ಡೀಸೆಲ್‌ನ್ನು ಸಗಟು ದರದಲ್ಲಿ ಖರೀದಿಸುವುದರಿಂದ ಮಾರುಕಟ್ಟೆ ದರಕ್ಕಿಂತ ಕಡಿಮೆ ಇರುತ್ತದೆ). ಹಿರಿಯ ನಾಗರಿಕರು, ಅಂಗವಿಕಲರು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ವಿವಿಧ ಸ್ತರದ ಜನರಿಗೆ ರಿಯಾಯಿತಿ ದರದಲ್ಲಿ ಬಸ್‌ಪಾಸ್‌ ನೀಡಬೇಕಿರುವುದರಿಂದ ಅಲ್ಲಿಯೂ ಸಂಸ್ಥೆಗೆ ನಿರೀಕ್ಷಿತ ವರಮಾನ ಬರುತ್ತಿಲ್ಲ. ಇದೆಲ್ಲದರ ಪರಿಣಾಮ ಡೀಸೆಲ್‌ ದರ ಹೆಚ್ಚಳವಾದಷ್ಟೂ ನಷ್ಟದ ಪ್ರಮಾಣ ಹೆಚ್ಚಾಗುತ್ತದೆ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಬಯಸದ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು.

‘ಸರ್ಕಾರದ ಅನುಮೋದನೆ ಇಲ್ಲದೇ ಪ್ರಯಾಣ ದರ ಹೆಚ್ಚಳ ಮಾಡುವಂತಿಲ್ಲ. ಸರ್ಕಾರ ನಿರ್ಧಾರ ಕೈಗೊಳ್ಳುವವರಿಗೂ ನಷ್ಟ ಕಡಿಮೆ ಮಾಡುವ ಪರ್ಯಾಯ ಕ್ರಮಗಳ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದು ಅವರು ತಿಳಿಸಿದರು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕಲಬುರ್ಗಿ, ಬೀದರ್, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಸಾರಿಗೆ ಸಂಸ್ಥೆಗೆ ನಿತ್ಯ ₹5 ಕೋಟಿಯಷ್ಟು ಟಿಕೆಟ್ ಮಾರಾಟದಿಂದ ಹಣ ಸಂಗ್ರಹವಾಗುತ್ತಿದೆ.

ಓವರ್‌ಟೈಮ್ ಭತ್ಯೆ ಸಿಕ್ಕಿಲ್ಲ: ಕೊರೊನಾ ಲಾಕ್‌ಡೌನ್‌ ಮುಗಿದ ಬಳಿಕ ಬಸ್‌ ಸಂಚಾರ ಆರಂಭವಾಗಿದ್ದರೂ ಹೆಚ್ಚುವರಿ ಕೆಲಸ ಮಾಡಿದ (ಒಟಿ) ಚಾಲಕರು ಹಾಗೂ ನಿರ್ವಾಹಕರಿಗೆ ಹೆಚ್ಚುವರಿ ಕೆಲಸಕ್ಕಾಗಿ ಭತ್ಯೆ ಕೊಟ್ಟಿರಲಿಲ್ಲ. ಇದೀಗ ಎಲ್ಲ ರೂಟ್‌ಗಳಲ್ಲಿ ಸಂಚಾರ ಆರಂಭವಾಗಿದ್ದರಿಂದ ಮಾರ್ಚ್ 1ರಿಂದ ಭತ್ಯೆ ನೀಡಲಾಗುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ (ಸಿಪಿಎಂ) ಡಿ. ಕೊಟ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾತ್ರೆಗಳಿಗೆ ಹೆಚ್ಚುವರಿ ಬಸ್ ಇಲ್ಲ
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ವ್ಯಾಪ್ತಿಯ ಜಿಲ್ಲೆಗಳಲ್ಲಿ ನಡೆಯುವ ಜಾತ್ರೆಗಳ ಸಂದರ್ಭದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಿ ವರಮಾನ ಹೆಚ್ಚಿಸಿಕೊಳ್ಳುತ್ತಿತ್ತು. ಆದರೆ, ಕೊರೊನಾ ನಿಮಿತ್ತ ಇನ್ನೂ ನಿರ್ಬಂಧ ಮುಂದುವರಿದಿರುವುದರಿಂದ ಯಾವ ಪುಣ್ಯಕ್ಷೇತ್ರಗಳಿಗೂ ಹೆಚ್ಚುವರಿ ಬಸ್ ಬಿಡುತ್ತಿಲ್ಲ. ಮದುವೆಗಳಿಗೂ ಹೆಚ್ಚು ಜನ ಬಸ್‌ಗಳನ್ನು ಮುಂಗಡ ಕಾಯ್ದಿರಿಸುತ್ತಿಲ್ಲ. ಯುಗಾದಿ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ಆಂಧ್ರಪ್ರದೇಶದ ಶ್ರೀಶೈಲಕ್ಕೆ ಹೆಚ್ಚುವರಿ ಬಸ್ ಬಿಡಲಾಗುತ್ತಿತ್ತು. ಕೋವಿಡ್ ನಿಮಿತ್ತ ಬಸ್ ಓಡಿಸಲು ಅನುಮತಿ ಸಿಗುವುದೋ ಇಲ್ಲವೋ ಎಂಬುದನ್ನು ಕಾದು ನೋಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು