ಮಂಗಳವಾರ, ಜೂನ್ 22, 2021
27 °C
ಚಿಂಚೋಳಿ ತಾಲ್ಲೂಕಿನ ವಿವಿಧೆಡೆ ಬೇಸಾಯ; ಹೆಚ್ಚಿದ ಬೇಡಿಕೆ; ಇನ್ನೂ ಉತ್ತಮ ಆದಾಯ ನಿರೀಕ್ಷೆ

ಈರುಳ್ಳಿ ಬೀಜ: ಚೀಲಕ್ಕೆ ₹45 ಸಾವಿರ ದರ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಈರುಳ್ಳಿ ಬೀಜಕ್ಕೆ ಮತ್ತೆ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ರೈತರಿಂದ 70 ಕೆ.ಜಿಯ ಒಂದು ಚೀಲ ಈರುಳ್ಳಿ ಬೀಜಕ್ಕೆ ₹45 ಸಾವಿರ ದರವಿದೆ.

ಮೊದಲು ಬಿತ್ತನೆ ನಡೆಸಿದವರ ಹೊಲದಲ್ಲಿ ಸೊಲ್ಲಾಪುರದ ಗಡ್ಡೆ ಹಚ್ಚಿದವರಿಗೆ ಎಕರೆಗೆ ಸರಾಸರಿ 5 ಚೀಲ ಇಳುವರಿ ಬಂದರೆ, ಮನ್ನಾಎಖ್ಖೆಳ್ಳಿಯ ಗಡ್ಡೆ ತಂದು ಹಚ್ಚಿದವರ ಹೊಲದಲ್ಲಿ ಎಕರೆಗೆ 3ರಿಂದ 4 ಚೀಲ ಇಳುವರಿ ಬರುತ್ತಿದೆ.

ಒಟ್ಟು 120 ದಿನಗಳ ಅವಧಿಯ ಈರುಳ್ಳಿ ಬೀಜ ಬೇಸಾಯಕ್ಕೆ ಎಕರೆಗೆ 1 ಲಕ್ಷದಿಂದ 1.25 ಲಕ್ಷ ಖರ್ಚು ತಗಲುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ  ದರ ಹೆಚ್ಚಾಗಿದ್ದರಿಂದ ಮತ್ತು ಅತಿವೃಷ್ಟಿಯಿಂದ ಬೀಜಕ್ಕೆ ಭಾರಿ ಬೇಡಿಕೆ ಇತ್ತು. ಆಗ ಒಂದು ಚೀಲಕ್ಕೆ ₹ 1 ಲಕ್ಷ ದರದಲ್ಲಿ ಈರುಳ್ಳಿ ಬೀಜ ಮಾರಾಟವಾಗಿತ್ತು. ಪ್ರಮಾಣಿತ ಕಂಪನಿಯ ಬೀಜಗಳು ಕೆಜಿಗೆ ₹2500 ದರದಲ್ಲಿ ರೈತರು ಖರೀದಿಸಿದ್ದರು.

ತಾಲ್ಲೂಕಿನ ಐನೋಳ್ಳಿ, ದೇಗಲಮಡಿ, ಚಂದ್ರಂಪಳ್ಳಿ, ಯಂಪಳ್ಳಿ, ಪಟಪಳ್ಳಿ, ಫತೆಪುರ, ಕೊಳ್ಳೂರು, ಯಂಪಳ್ಳಿ, ಶಿಕಾರ ಮೋತಕಪಳ್ಳಿ, ಹಸರಗುಂಡಗಿ, ತುಮಕುಂಟಾ, ನಾಗಾಈದಲಾಯಿ, ಸಾಲೇಬೀರನಹಳ್ಳಿ, ಮರಪಳ್ಳಿ, ಯಂಪಳ್ಳಿ, ದಸ್ತಾಪುರ, ಚಿಮ್ಮನಚೋಡ, ನಾಗರಾಳ್, ಅಣವಾರ ಮೊದಲಾದ ಕಡೆ ರೈತರು ಈರುಳ್ಳಿ ಬೀಜ ಬೇಸಾಯ ಮಾಡುತ್ತಾರೆ.

ನೀರಾವರಿ ಸೌಲಭ್ಯ ಹೊಂದಿದವರು, ಚಂದ್ರಂಪಳ್ಳಿ ನೀರಾವರಿ ಯೋಜನೆ, ಸಾಲೇಬೀರನಹಳ್ಳಿ, ಹಸರಗುಂಡಗಿ ಸಣ್ಣ ನೀರಾವರಿ ಕೆರೆ, ತುಮಕುಂಟಾ ಕೆರೆ ಹಾಗೂ ಮುಲ್ಲಾಮಾರಿ ನದಿ ಪಾತ್ರದ ರೈತರು ಬೀಜ ಬೇಸಾಯ ನಡೆಸುವರು.

ಪ್ರಸಕ್ತ ವರ್ಷ ಆರಂಭದಲ್ಲಿಯೇ ಬಿತ್ತನೆ ನಡೆಸಿದವರ ಬೆಳೆ ರೋಗ ಮುಕ್ತವಾಗಿದ್ದು ಉತ್ತಮ ಇಳುವರಿ ಬಂದಿದೆ. ಬಿತ್ತನೆ ವಿಳಂಬ ಮಾಡಿದವರ ಹೊಲದಲ್ಲಿ ಬೆಳೆಗೆ ಮಂಜು ಬಡಿದಿದ್ದರಿಂದ ಇಳುವರಿ ಕುಸಿದಿದೆ ಎನ್ನುತ್ತಾರೆ ರೈತ ಫಕ್ರೊದ್ದಿನ್.

ಚೀಲಕ್ಕೆ ₹42 ಸಾವಿರಕ್ಕೆ ಮಾರಾಟ ಮಾಡಿದ್ದೇನೆ. ಒಂದು ವಾರದ ನಂತರ ಬಂದವರು ₹48 ಸಾವಿರಕ್ಕೆ ಚೀಲ ಬೀಜದ ದರದಲ್ಲಿ ಖರೀದಿಸಿದ್ದಾರೆ ಪ್ರಸಕ್ತ ವರ್ಷ ಇನ್ನೂ ಹೆಚ್ಚಿನ ದರ ಬರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.