ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೈಸ್ ಮನಿ ಆಮಿಷಕ್ಕೆ ₹37.92 ಲಕ್ಷ ಕಳೆದುಕೊಂಡ ಶಿಕ್ಷಕಿ

Published 20 ಆಗಸ್ಟ್ 2024, 5:25 IST
Last Updated 20 ಆಗಸ್ಟ್ 2024, 5:25 IST
ಅಕ್ಷರ ಗಾತ್ರ

ಕಲಬುರಗಿ: ಅಂಚೆ ಪತ್ರದ ಮೂಲಕ ಬಂದಿದ್ದ ಪ್ರೈಸ್ ಮನಿ ಆಮಿಷದ ಮೊಬೈಲ್ ನಂಬರ್‌ಗೆ ಫೋನ್ ಮಾಡಿದ ಶಿಕ್ಷಕಿಯೊಬ್ಬರು, ವಂಚಕರ ಮಾತಿಗೆ ಮರುಳಾಗಿ ₹37.92 ಲಕ್ಷ ಕಳೆದುಕೊಂಡಿದ್ದಾರೆ.

ನಗರದ ಪವರ್ ಲೇಔಟ್‌ನ ಶಿಕ್ಷಕಿ ಆರತಿ ಗಡ್ಡೇಪ್ಪ ಹಣ ಕಳೆದುಕೊಂಡ ಸಂತ್ರಸ್ತೆ. ಶಿಕ್ಷಕಿ ನೀಡಿದ ದೂರಿನ ಅನ್ವಯ, ಶ್ರೀಕಾಂತ್, ಅವಿನಾಶ್ ಮತ್ತು ಶ್ರೀರಾಮ ಸೇರಿ ಇತರರ ವಿರುದ್ಧ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 4ರಂದು ಮೀಶೊ ಕಂಪನಿ ಹೆಸರಿನಲ್ಲಿ ಆರತಿ ಅವರ ಮನೆಗೆ ಗಿಫ್ಟ್‌ ಕಾರ್ಡ್‌ನ ಅಂಚಿ ಚೀಟಿಯೊಂದು ಬಂದಿತ್ತು. ಅದನ್ನು ಸ್ಕ್ರ್ಯಾಚ್‌ ಮಾಡಿ ನೋಡಿದಾಗ ₹ 11 ಲಕ್ಷ ಪ್ರೈಸ್ ಮನಿ ಎಂದಿತ್ತು. ಪ್ರೈಸ್ ಮನಿ ಆಮಿಷಕ್ಕೆ ಒಳಗಾಗಿ, ಚೀಟಿಯಲ್ಲಿದ್ದ ಮೊಬೈಲ್‌ ನಂಬರ್‌ಗೆ ಆರತಿ ಅವರು ಕರೆ ಮಾಡಿದ್ದಾರೆ.

ವಂಚಕರು ಹೇಳಿದಂತೆ ಆದಾಯ ತೆರಿಗೆ, ಜಿಎಸ್‌ಟಿ, ಎನ್‌ಒಸಿ ಸೇರಿದಂತೆ ನಾನಾ ಕಾರಣಗಳಿಗೆ ಹಂತ– ಹಂತವಾಗಿ ಅವರು ಸೂಚಿಸಿದ ಖಾತೆಗಳಿಗೆ ₹37.92 ಲಕ್ಷ ವರ್ಗಾವಣೆ ಮಾಡಿದ್ದಾರೆ. ಪ್ರೈಸ್ ಮನಿ ಬಾರದೆ ಇದ್ದಾಗ ತಾನು ಮೋಸ ಹೋಗಿದ್ದು ಗೊತ್ತಾಗಿ, ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಸೋಗು, ತಿಂಗಳಲ್ಲಿ 3ನೇ ಬಾರಿ ಒಡವೆ ದೋಚಿ ಪರಾರಿ: ಪೊಲೀಸರೆಂದು ಹೇಳಿ ಬೈಕ್‌ ನಿಲ್ಲಿಸಿದ ದುಷ್ಕರ್ಮಿಗಳು ಬೈಕ್ ಸವಾರರ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ತಿಂಗಳಲ್ಲಿ ಮೂರನೇ ಬಾರಿ ನಡೆದಿದೆ. ಇಂತಹ ಸರಣಿ ಪ್ರಕರಣಗಳಿಂದ ಗ್ರಾಮೀಣ ಭಾಗದ ಬೈಕ್ ಸವಾರರಲ್ಲಿ ಆತಂಕ ಮೂಡಿದೆ.

ಆಗಸ್ಟ್ 1ರಂದು ಸೇಡಂನಲ್ಲಿ ಮನೋಹರ ಸತ್ಯನಾರಾಯಣ ಅವರ ಬಳಿಯಿಂದ ₹1.60 ಲಕ್ಷ ಹಾಗೂ ಆ.10ರಂದು ನೆಲೋಗಿಯಲ್ಲಿ ಮರಳಪ್ಪ ವಾಲೀಕಾರ ಅವರ ಬಳಿಯಿಂದ ₹1.20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಘಟನೆಗಳು ನಡೆದಿದ್ದವು. ಈಗ ನರೋಣ ಠಾಣೆ ವ್ಯಾಪ್ತಿಯ ಕಡಗಂಚಿಯ ದತ್ತಾತ್ರೇಯ ಯಶ್ವಂತರಾಯ ಅವರ ಬಳಿಯಿಂದ ಇಬ್ಬರು ಅಪರಿಚಿತ ಕಳ್ಳರು, ₹90 ಸಾವಿರ ಮೌಲ್ಯದ ಒಡವೆಗಳನ್ನು ದೋಚಿ, ಓಡಿ ಹೋಗಿದ್ದಾರೆ.

ದತ್ತಾತ್ರೇಯ ಅವರು ಕಿರಾಣಿ ಸಾಮಗ್ರಿಗಳ ತರಲು ಕಲಬುರಗಿ ನಗರದತ್ತ ತೆರಳುತ್ತಿದ್ದರು. ಮಾರ್ಗ ಮಧ್ಯದಲ್ಲಿ ಇಬ್ಬರು ಬೈಕ್ ಸವಾರರು ತಾವು ಬೆಂಗಳೂರಿನ ಪೊಲೀಸರೆಂದು ಪರಿಚಯಿಸಿಕೊಂಡು, ತಡೆದು ನಿಲ್ಲಿಸಿದ್ದಾರೆ. ‘ಕಳ್ಳತನ ಹೆಚ್ಚಾಗುತ್ತಿದೆ, ಮೈ ಮೇಲೆ ಚಿನ್ನಾಭರಣ ಹಾಕಿಕೊಂಡು ಓಡಾಡ ಬೇಡಿ. ಕೊರಳಲ್ಲಿನ ಚೈನ್, ಬೆರಳಲ್ಲಿನ ಉಂಗುರ ಕೊಡಿ’ ಎಂದು ತಾಕೀತು ಮಾಡಿದ್ದಾರೆ. ‘ನನ್ನ ಅಂಗಡಿ ಸಮೀಪದಲ್ಲಿದೆ. ಅಲ್ಲಿ ಇರಿಸಿ ಬರುತ್ತೇನೆ’ ಎಂದು ಒಡೆವೆ ಕೊಡಲು ದತ್ತಾತ್ರೇಯ ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದತ್ತಾತ್ರೇಯನನ್ನು ಹೆದರಿಸಿದ ಕಳ್ಳರು, ಆತನನ್ನು ಕೆಳಗೆ ನೂಕಿ, ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT