ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಖ್ಯಾತ ನೇತ್ರತಜ್ಞ ಡಾ.ಚಂದ್ರಪ್ಪ ರೇಷ್ಮಿ ಇನ್ನಿಲ್ಲ

Published 12 ಆಗಸ್ಟ್ 2023, 16:42 IST
Last Updated 12 ಆಗಸ್ಟ್ 2023, 16:42 IST
ಅಕ್ಷರ ಗಾತ್ರ

ಚಿತ್ತಾಪುರ: ಪಟ್ಟಣದ ರೇಷ್ಮಿ ಮನೆತನದ ಖ್ಯಾತ ನೇತ್ರತಜ್ಞ ಡಾ.ಚಂದ್ರಪ್ಪ ಸಿದ್ರಾಮಪ್ಪ ರೇಷ್ಮಿ (90) ಅವರು ತೀವ್ರ ಅನಾರೋಗ್ಯದಿಂದ ಶನಿವಾರ ಕಲಬುರಗಿಯಲ್ಲಿ ನಿಧನರಾದರು.

ಅವರಿಗೆ ಅಮೆರಿಕದ ಪ್ರಜೆಯಾಗಿರುವ ಪತ್ನಿ ಕ್ಯಾಥರಿನ್ ಜಿನ್ನಿಸ್ ರೇಷ್ಮೆ, ಮಗ ಚಂದ್ರಜಿನ್ನಿಸ್ ರೇಷ್ಮೆ, ಮಗಳು ಶಾಲಿನಿ ರೇಷ್ಮೆ ಇದ್ದಾರೆ.

ಡಾ.ಚಂದ್ರಪ್ಪ ರೇಷ್ಮಿ ಅವರು ಪಟ್ಟಣದ ಕೃಷಿಕ ಕುಟುಂಬದ ಸಿದ್ರಾಮಪ್ಪ ಮತ್ತು ವೀರಮ್ಮ ದಂಪತಿಗೆ ಎರಡನೇ ಮಗನಾಗಿ ಜನಿಸಿದ್ದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಚಿತ್ತಾಪುರದಲ್ಲಿ ಮುಗಿಸಿ, ಕಲಬುರಗಿಯ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದರು. 1957ರಲ್ಲಿ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಅಧ್ಯಯನ ಮುಗಿಸಿ ಹೆಚ್ಚಿನ ವ್ಯಾಸಂಗ ಮಾಡಲೆಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ನೇತ್ರ ವೈದ್ಯಕೀಯದ ಎಂ.ಎಸ್. ಶಿಕ್ಷಣ ಪಡೆದುಕೊಂಡಿದ್ದರು.

ನೇತ್ರ ತಜ್ಞರಾಗಿ ಅಮೆರಿಕದಲ್ಲೇ ವೃತ್ತಿ ಜೀವನ ಆರಂಭಿಸಿದ ಅವರು ಜಗತ್ತಿನ ಶ್ರೇಷ್ಠ ವೈದ್ಯರೆಂಬ ಹೆಗ್ಗಳಿಕೆ ಪಡೆದುಕೊಂಡಿದ್ದರು‌. ಕ್ಯಾತಲಿನ್ ಅವರನ್ನು ಮದುವೆಯಾಗಿ 60 ವರ್ಷಕ್ಕೂ ಹೆಚ್ಚು ಕಾಲ ಅಮೆರಿಕದ ಪಿಟ್ಸ್ ಬರ್ಗ್‌ನಲ್ಲಿ ನೆಲೆಸಿದ್ದರು.

ಪತ್ನಿ, ಪುತ್ರ, ಪುತ್ರಿಯೊಂದಿಗೆ ತಮ್ಮ ಹುಟ್ಟೂರಾದ ಚಿತ್ತಾಪುರಕ್ಕೆ ಬಂದು ಹೋಗುತ್ತಿದ್ದರು. ಅವರು ಬಂದಾಗ ಅವರ ಪರಿಚಯಸ್ಥರು ಅಥವಾ ಸಂಬಂಧಿಕರಿಗೆ‌ ಕಣ್ಣಿನ ಸಮಸ್ಯೆ ಇದ್ದರೆ ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖ ಮಾಡುತ್ತಿದ್ದರು.

ನೇತ್ರಚಿಕಿತ್ಸೆಗೆ ಸಂಬಂಧಿಸಿದ ಅಮೆರಿಕ ಸರ್ಕಾರದ ಸಮಿತಿಯ ಸದಸ್ಯರಾಗಿ ಎರಡು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದರು.

ಭಾರತದ ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್‌ಸಿಂಗ್, ಖ್ಯಾತ ಉದ್ಯಮಿ ಜೆಆರ್‌ಡಿ ಟಾಟಾ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವಿಜಯಭಾಸ್ಕರ ರೆಡ್ಡಿ ಅವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ ಕೀರ್ತಿ ಅವರದ್ದಾಗಿತ್ತು. ರೇಷ್ಮಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಿ.ಎಸ್. ಶಂಕರ ಪ್ರಶಸ್ತಿಗಳು ಬಂದಿದ್ದವು.

ತಮ್ಮ ಕೊನೆಯ ಕಾಲವನ್ನು ತವರು ಜಿಲ್ಲೆ ಕಲಬುರಗಿಯಲ್ಲಿಯೇ ಕಳೆಯಲು ಬಯಸಿ ಏಳು ವರ್ಷಗಳ ಹಿಂದೆ ಅಮೆರಿಕದಿಂದ ವಾಪಸಾಗಿದ್ದರು.

ಭಾನುವಾರ ಮಧ್ಯಾಹ್ನ 3ಕ್ಕೆ ಚಿತ್ತಾಪುರದ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಖ್ಯಾತ ಉದ್ಯಮಿ ಜೆಆರ್‌ಡಿ ಟಾಟಾ ಅವರೊಂದಿಗೆ ಡಾ. ಚಂದ್ರಪ್ಪ ರೇಷ್ಮಿ
ಖ್ಯಾತ ಉದ್ಯಮಿ ಜೆಆರ್‌ಡಿ ಟಾಟಾ ಅವರೊಂದಿಗೆ ಡಾ. ಚಂದ್ರಪ್ಪ ರೇಷ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT