ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಹಲವು ರೈಲುಗಳ ಸಂಚಾರ ರದ್ದು ಆದೇಶಕ್ಕೆ ತಡೆ

ಆಂಧ್ರಪ್ರದೇಶದ ಪ್ರಶಾಂತಿ ನಿಲಯಮ್‌– ಬಾಸಂಪಳ್ಳೆ ನಿಲ್ದಾಣಗಳ ಮಧ್ಯೆ ಕಾಮಗಾರಿ
Published 25 ನವೆಂಬರ್ 2023, 15:57 IST
Last Updated 25 ನವೆಂಬರ್ 2023, 15:57 IST
ಅಕ್ಷರ ಗಾತ್ರ

ಕಲಬುರಗಿ: ಆಂಧ್ರಪ್ರದೇಶದ ಸಾಯಿ ಪ್ರಶಾಂತಿ ನಿಲಯಮ್‌– ಬಾಸಂಪಳ್ಳೆ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಸುರಂಗ ಮಾರ್ಗದ ಕಾಮಗಾರಿಗಾಗಿ ನವೆಂಬರ್ 30ರಿಂದ 2024ರ ಫೆಬ್ರುವರಿ 1ರವರೆಗೆ ಹಾಸನ–ಸೋಲಾಪುರ ರೈಲು ಸೇರಿದಂತೆ ಹಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ ಆದೇಶಕ್ಕೆ ನೈರುತ್ಯ ರೈಲ್ವೆ ಶನಿವಾರ ತಡೆ ನೀಡಿದೆ.

ಕಲಬುರಗಿ, ಯಾದಗಿರಿ ಭಾಗದಿಂದ ನಿತ್ಯ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರು ಇದೇ ರೈಲನ್ನು ಅವಲಂಬಿಸಿದ್ದರು. ಇದೀಗ ಸುಮಾರು ಎರಡು ತಿಂಗಳು ಈ ರೈಲು ಸಂಚಾರ ಸ್ಥಗಿತಗೊಂಡರೆ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ ಅವರು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದ ಬೆನ್ನಲ್ಲೇ ಸಂಜೆಯ ವೇಳೆಗೆ ಕಾಮಗಾರಿಯನ್ನೇ ಸದ್ಯಕ್ಕೆ ಮುಂದೂಡಿ ಎಲ್ಲ ಮಾರ್ಗ ಬದಲಿಸಿದ, ರದ್ದಾದ ರೈಲುಗಳನ್ನು ಮೊದಲಿನಂತೆ ಓಡಿಸುವಂತೆ ಸಂಜೆ ಹೊರಡಿಸಿದ ಮತ್ತೊಂದು ಆದೇಶದಲ್ಲಿ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಸೂಚನೆ ನೀಡಿದ್ದಾರೆ.

ಸಾಯಿ ಪ್ರಶಾಂತಿ ನಿಲಯಮ್– ಬಾಸಂಪಳ್ಳೆ ರೈಲು ನಿಲ್ದಾಣಗಳ ಮಾರ್ಗದ ಮಧ್ಯೆ ವಿದ್ಯುದೀಕರಣ, ಸುರಂಗದಲ್ಲಿ ವೈರಿಂಗ್, ಚರಂಡಿ ನಿರ್ಮಾಣ ಹಾಗೂ ಇತರ ಸಿವಿಲ್ ಕಾಮಗಾರಿಗಳನ್ನು ಮಾಡಬೇಕಿತ್ತು. ಇದಕ್ಕಾಗಿ 63 ದಿನಗಳ ಕಾಲ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಬೇಕಿತ್ತು. ಆದ್ದರಿಂದ ಶನಿವಾರ 31 ರೈಲುಗಳ ಮಾರ್ಗ ಬದಲಿಸಿ, 41 ರೈಲುಗಳ ಸಂಚಾರವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದರು.

ಹಾಸನ– ಸೋಲಾಪುರ ರೈಲು ಸಂಚಾರವನ್ನೂ ರದ್ದುಗೊಳಿಸಿದ್ದರಿಂದ ಕೂಡಲೇ ಸಂಜೀವ ಕಿಶೋರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಂಸದ ಡಾ. ಉಮೇಶ್ ಜಾಧವ್ ಎರಡು ತಿಂಗಳವರೆಗೆ ಈ ರೈಲು ರದ್ದಾದರೆ ಸಹಸ್ರಾರು ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಹಾಗಾಗಿ, ಆದೇಶವನ್ನು ಪುನರ್ ಪರಿಶೀಲಿಸಬೇಕು. ಇಲ್ಲವೇ, ಮಾರ್ಗ ಬದಲಿಸಬೇಕು ಎಂದು ಮನವಿ ಮಾಡಿದ್ದರು.

ಅಂತಿಮವಾಗಿ ಕಾಮಗಾರಿಯನ್ನೇ ಮುಂದಕ್ಕೆ ಹಾಕುವ ನಿರ್ಣಯ ಕೈಗೊಂಡು ತಕ್ಷಣ ಮತ್ತೊಂದು ಆದೇಶ ಹೊರಡಿಸಿದರು.

ಕಲಬುರಗಿಯಿಂದ ಬೆಂಗಳೂರಿಗೆ ಕೆಲವೇ ಕೆಲವು ರೈಲುಗಳಿದ್ದು ಕಾಮಗಾರಿ ಕಾರಣಕ್ಕೆ ಅವುಗಳನ್ನೂ ದೀರ್ಘ ಅವಧಿಯವರೆಗೆ ಸ್ಥಗಿತಗೊಳಿಸಿದ್ದರು. ರೈಲ್ವೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಆದೇಶ ವಾಪಸ್ ಪಡೆದಿದ್ದಾರೆ
- ಡಾ. ಉಮೇಶ್ ಜಾಧವ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT