ಶನಿವಾರ, ಮೇ 15, 2021
25 °C

ಆಮ್ಲಜನಕ ಕೊರತೆ: ಕಲಬುರ್ಗಿಯಲ್ಲಿ ಮತ್ತೆ ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ (ಕಲಬುರ್ಗಿ ಜಿಲ್ಲೆ): ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿ ಆಮ್ಲಜನಕದ ಕೊರತೆಯಿಂದ ನಾಲ್ವರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

ಈ ಆಸ್ಪತ್ರೆಯಲ್ಲಿ ಒಟ್ಟು 30 ರೋಗಿಗಳು ಅಡ್ಮಿಟ್‌ ಆಗಿದ್ದಾರೆ. ಆದರೆ, ಸೋಮವಾರ ಆರು ಸಿಲಿಂಡರ್‌ ಮಾತ್ರ ಇದ್ದವು. ಅವುಗಳನ್ನು ಆರು ಮಂದಿಗೆ ನೀಡಲಾಗಿತ್ತು. ಆದರೆ, ಸೋಮವಾರ ತಡರಾತ್ರಿ ಆರೂ ಸಿಲಿಂಡರ್‌ಗಳು ಖಾಲಿ ಆದ ಕಾರಣ ನಾಲ್ವರು ಬೆಡ್‌ಗಳ ಮೇಲೆ ನರಳಾಡಿ ಪ್ರಾಣ ಬಿಟ್ಟಿದ್ದಾರೆ.

ಅಫಜಲಪುರ ತಾಲ್ಲೂಕಿನ ಮಾತೊಳ್ಳಿ ಗ್ರಾಮದ ಅಮೋಗಿ ಗಂಗಪ್ಪ (45), ಶಿವಪುರದ ಬಸವನಗೌಡ ಭೀಮನಗೌಡ (35), ಅಫಜಲಪುರದವರಾದ ಅಂಬಿಕಾ ನಾಗರಾಜ ಪಾಟೀಲ (37) ಹಾಗೂ ಹಸೀನಾಬೇಗಂ ಇಮಾಮ್‌ಬೇಗ್‌ (65) ಆಮ್ಲಜನಕ ಕೊರತೆಯಿಂದ ಸಾವಿಗೀಡಾದವರು.

ತಾಲ್ಲೂಕು ಆರೋಗ್ಯಾಧಿಕಾರಿಗಳು ಮಂಗಳವಾರ ಬೆಳಿಗ್ಗೆ ಆಮ್ಲಜನಕ ಪೂರೈಸುವಂತೆ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದಾರೆ. ಬೆಳಿಗ್ಗೆ 11.30ರ ಸುಮಾರಿಗೆ ಆಮ್ಲಜನಕ ಸಿಲಿಂಡರ್‌ಗಳು ಆಸ್ಪತ್ರೆ ತಲುಪಿದ್ದರಿಂದ ಉಳಿದವರು ನಿಟ್ಟುಸಿರು ಬಿಟ್ಟಿದ್ದಾರೆ.

ಆಮ್ಲಜನಕ ಕೊರತೆಯಿಂದಾಗಿಯೇ ಭಾನುವಾರ ಕೂಡ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಶನಿವಾರ ಕೂಡ ಮೂವರು ಸತ್ತಿದ್ದರು. ಮೂರು ದಿನಗಳಲ್ಲಿ 12 ಮಂದಿ ಆಮ್ಲಜನಕ ಕೊರತೆಯಿಂದಾಗಿಯೇ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ... ಸಕಾಲದಲ್ಲಿ ಪೂರೈಕೆಯಾಗದ ಆಮ್ಲಜನಕ: 24 ಸಾವು?

ಅಫಜಲಪುರ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ
‘ಅಫಜಲಪುರ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಅಗತ್ಯಕ್ಕೆ ತಕ್ಕಷ್ಟು ಸಿಲಿಂಡರ್‌ ಗಳು ಇಲ್ಲ. ಖಾಲಿಯಾಗುತ್ತಿದ್ದಂತೆಯೇ ಕಲಬುರ್ಗಿಗೆ ಹೋಗಿ ತುಂಬಿಸಿಕೊಂಡು ಬರುತ್ತಿದ್ದೇವೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ’ ಎಂದು ಅಫಜಲಪುರ ಕ್ಷೇತ್ರದ ಶಾಸಕ ಎಂ.ವೈ. ಪಾಟೀಲ ದೂರಿದ್ದಾರೆ.

‘ಸರ್ಕಾರಕ್ಕೆ ಗಂಭೀರತೆ ಇಲ್ಲ. ಅಫಜಲಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಫಿಜಿಷಿಯನ್‌ರೇ ಇಲ್ಲ. ಅಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವವರು ಯಾರು’ ಎಂದು ಅವರು ಪ್ರಶ್ನಿಸಿದ್ದಾರೆ.

ಆಮ್ಲಜನಕ ಕೊರತೆ ಇಲ್ಲ: ಸಚಿವ
‘ಅಫಜಲಪುರ ಆಸ್ಪತ್ರೆಯಲ್ಲಿ ನಾಲ್ಕು ಆಮ್ಲಜನಕ ಸಿಲಿಂಡರ್‌ ಇವೆ. ಕೋವಿಡ್‌ನಿಂದ ಆರೋಗ್ಯ ವಿಷಮಿಸಿದ್ದರಿಂದ ಸೋಮವಾರ ಮೂವರು ಹಾಗೂ ಮಂಗಳವಾರ ಒಬ್ಬ ರೋಗಿ ಸತ್ತಿದ್ದಾರೆ. ಆಮ್ಜಜನಕದ ಕೊರತೆಯಿಂದ ಈ ಸಾವು ಸಂಭವಿಸಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸೋಂಕಿತರು ಮೃತಪಟ್ಟಿದ್ದು ಆಮ್ಲಜನಕದ ಕೊರತೆಯಿಂದಲ್ಲ ಎಂದು ಸಂಸದ ಉಮೇಶ ಜಾಧವ ಅವರೂ ಹೇಳಿದ್ದಾರೆ.

ಇದನ್ನೂ ಓದಿ... ಆಮ್ಲಜನಕ ದುರಂತ: ನಿರ್ಲಕ್ಷ್ಯ ವಹಿಸಿತೇ ಜಿಲ್ಲಾಡಳಿತ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು