ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳಿಗೆ ಪರಿಹಾರ | ಯುವಕರಲ್ಲಿ ಕಳಪೆ ಕೌಶಲ: ಚಿನ್ನಯ್ಯ ಮಠ್

ಪಿಡಿಎ ಅಂತರ್‌ ಕಾಲೇಜು ತಾಂತ್ರಿಕ- ಸಾಂಸ್ಕೃತಿಕ ಉತ್ಸವ: ಚಿನ್ನಯ್ಯ ಮಠ್
Published 16 ಮೇ 2024, 13:32 IST
Last Updated 16 ಮೇ 2024, 13:32 IST
ಅಕ್ಷರ ಗಾತ್ರ

ಕಲಬುರಗಿ: ‘ಇಂದಿನ ಪೀಳಿಗೆಯ ಯುವಕರಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೌಶಲಗಳು ಬಹಳ ಕಳಪೆಯಾಗಿದ್ದು, ಭಿನ್ನ ಮಾರ್ಗ ಮತ್ತು ಸಾಮೂಹಿಕ ಪ್ರಯತ್ನದ ಮೂಲಕ ಅವುಗಳಿಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ’ ಎಂದು ನಿಂಬ್ಲೆ ವಿಷನ್ ಪ್ರೈವೇಟ್ ಲಿಮಿಟೆಡ್‌ ಕಂಪನಿ ಸಿಇಒ ಚಿನ್ನಯ್ಯ ಮಠ್ ಹೇಳಿದರು.

ಇಲ್ಲಿನ ಹೈದರಾಬಾದ್ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಪೂಜ್ಯ ದೊಡ್ಡಪ್ಪ ಅಪ್ಪ (ಪಿಡಿಎ) ಎಂಜಿನಿಯರಿಂಗ್ ಕಾಲೇಜಿನ ‘ಸ್ಯಾಕ್ಸ್’ ಸಭಾಂಗಣದಲ್ಲಿ ಗುರುವಾರ ನಡೆದ ಅಂತರ್‌ ಕಾಲೇಜು ತಾಂತ್ರಿಕ- ಸಾಂಸ್ಕೃತಿಕ ಉತ್ಸವ ನಿರ್ಮಾಣ–2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತದ ಸಮಸ್ಯೆಗಳು ತೀರ ಭಿನ್ನವಾಗಿವೆ. ಅನ್ಯ ರಾಷ್ಟ್ರಗಳಿಂದ ಬಂದಂತಹ ಪರಿಹಾರಗಳ ಮೊರೆ ಹೋಗುವುದನ್ನು ಬಿಟ್ಟು, ದೇಸಿಯವಾದ ಸ್ಥಳೀಯ ಮಾರ್ಗದಲ್ಲಿ ಪರಿಹಾರಗಳನ್ನು ಹುಡುಕಬೇಕು. ಇಸ್ರೇಲ್ ಮತ್ತು ಕಲಬುರಗಿಯ ಭೂಪ್ರದೇಶದ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಹೀಗಾಗಿ, ನಮ್ಮ ಭಾಗದ ಕೃಷಿಕರಿಗೆ ನೆರವಾಗುವ ನಮ್ಮದೇಯಾದ ಬೇಸಾಯ ಪದ್ಧತಿಯನ್ನು ಕಂಡುಕೊಳ್ಳಬೇಕಿದೆ’ ಎಂದರು.

‘ನಾವು ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದೇವೆ. ಸಾಕಷ್ಟು ಸವಾಲುಗಳು ನಮ್ಮ ಮುಂದಿವೆ. ಕೆಲವರು ಕೃತಕ ಬದ್ಧಿಮತ್ತೆ (ಎಐ) ಉದ್ಯೋಗ ಅವಕಾಶಗಳನ್ನು ಕಿತ್ತುಕೊಂಡಿದೆ ಎನ್ನುತ್ತಿದ್ದಾರೆ. ಒಮ್ಮೆ ಇ–ಕಾಮರ್ಸ್‌ನತ್ತ ಕಣ್ಣು ಹಾಯಿಸಿದರೆ, ಅದು ಎಷ್ಟೊಂದು ಅವಕಾಶಗಳು ಸೃಷ್ಟಿಸಿದೆ ಎಂಬುದು ಕಣ್ಣಿಗೆ ರಾಚುತ್ತದೆ. ನಮ್ಮ ಮುಂದೆ ಎಂತಹುದ್ದೇ ಸವಾಲು ಬಂದರೂ ಸಾಮೂಹಿಕ ಪ್ರಯತ್ನ ಮತ್ತ ಸವಾಲನ್ನು ಗ್ರಹಿಸುವ ಶಕ್ತಿಯಿಂದ ನಿವಾರಣೆ ಮಾಡಬಹುದು. ಇದಕ್ಕಾಗಿ ವಿದ್ಯಾರ್ಥಿಗಳು ಸದಾ ಸನ್ನದ್ಧರಾಗಬೇಕು’ ಎಂದು ಸಲಹೆ ನೀಡಿದರು.

ರಾಮನ್ ಮ್ಯಾಗ್ಸೆಸ್ ಪ್ರಶಸ್ತಿ ಪುರಸ್ಕೃತೆ ನೀಲಿಮಾ ಮಿಶ್ರಾ ಮಾತನಾಡಿ, ‘ಬಾಲ್ಯದಲ್ಲಿ ಹಸಿವಿನಿಂದಾಗಿ ನನಗೆ ರಾತ್ರಿ ನಿದ್ರೆಯೇ ಬರುತ್ತಿರಲಿಲ್ಲ. ರಸ್ತೆ ಬದಿಯಲ್ಲಿನ ಅನಾಥರು, ಬಡವರು, ಶ್ರಮಿಕರು ಖಾಲಿ ಹೊಟ್ಟೆಯಲ್ಲಿ ಹೇಗೆ ದಿನ ಕಳೆಯುತ್ತಾರೆ ಎಂದು ನೆನೆದು ಸಂಕಟವಾಯಿತು. ಅಂದಿನಿಂದ ಅಸಹಾಯಕರ, ಬಡವರಪರ ಕೆಲಸ ಮಾಡಲು ತೊಡಗಿಕೊಂಡು ಇವತ್ತು ಇಲ್ಲಿಗೆ ಬಂದು ನಿಂತಿದ್ದೇನೆ’ ಎಂದರು.

‘ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣದಲ್ಲಿ ತೊಡಗಿಸಿಕೊಂಡು, ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಸೂಜಿ, ದಾರದಿಂದ ಬಟ್ಟೆ ಹೊಲಿಯುವಂತಹ ಗೃಹ ಉದ್ಯಮ ಕಲಿಸಿದ್ದೇವೆ. ಬಡ ಮಹಿಳೆಯರು ಹೊಲಿದ ಜಾಕೆಟ್‌ಗಳು ಮಹಾರಾಷ್ಟ್ರದ ಹಲವೆಡೆ ಮಾರಾಟ ಆಗುತ್ತಿವೆ. ಇಲ್ಲಿನ ವಿದ್ಯಾರ್ಥಿಗಳು ಸಹ ಬಡ ಮಹಿಳೆಯರು ಹೊಲಿದ ಜಾಕೆಟ್‌ಗಳನ್ನು ಖರೀದಿಸಿ, ಅವರಿಗೆ ನಿತ್ಯ ಕೆಲಸ ಸಿಗುವಂತೆ ಮಾಡಬೇಕು’ ಎಂದು ಕೋರಿದರು.

ಎಚ್‌ಕೆಇ ಅಧ್ಯಕ್ಷ ಶಶಿಲ್ ಜಿ.ನಮೋಶಿ ಮಾತನಾಡಿ, ‘1973ರಲ್ಲಿ ಪಿಡಿಎ ಕಾಲೇಜು ರಾಜ್ಯದ ಎರಡನೇ ಅತ್ಯುತ್ತಮ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿತ್ತು. ಆದರೆ, ಬದಲಾದ ಕಾಲದಲ್ಲಿ ಅದೇ ಸ್ಥಾನ ಉಳಿಸಿಕೊಳ್ಳಲು ಆಗದೆ ಇದ್ದರೂ ರಾಜ್ಯದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದಾಗಿದೆ. ನಾವು ಒಂದು ಉತ್ತಮ ತಂಡವನ್ನು ಕಟ್ಟಿಕೊಂಡು, ರಾಜ್ಯದ ಅಗ್ರ ಐದು ಕಾಲೇಜುಗಳ ಸಾಲಿನಲ್ಲಿ ಸೇರುವಂತೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮೆದಿನಿ ಟೆಕ್ನಾಲಜಿಸ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕಲ್ಲೂರ್, ಕಿರುತೆರೆ ನಟ ಅಭಿಷೇಕ ಗೀತೆ, ವಿಟಿಯು ಪ್ರಾದೇಶಿಕ ಕಚೇರಿಯ ಪ್ರಾಧ್ಯಾಪಕಿ ಶುಭಾಂಗಿನಿ, ಸಂಸ್ಥೆಯ ಉಪಾಧ್ಯಕ್ಷ ರಾಜಾ ಬಿ.ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಎಸ್‌.ಚಿಂಚೋಳಿ, ಸದಸ್ಯರಾದ ಅನಿಲ್‌ಕುಮಾರ ಎಸ್‌.ಮರಗೋಳ, ನಾಗಣ್ಣ ಎಸ್.ಘಂಟಿ, ನಿಶಾಂತ್ ಜಿ.ಯಾಲೆ, ಡಾ.ಶರಣಬಸಪ್ಪ ಆರ್‌. ಹರವಾಳ, ಪಿಡಿಎ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

‘ಸ್ಟಾರ್ಟ್‌ಅಪ್‌ಗಳಲ್ಲಿ ಉತ್ತರ ಕರ್ನಾಟಕ ಹಿಂದೆ’

‘ಹೊಸ–ಹೊಸ ಸ್ಟಾರ್ಟ್‌ಅಪ್‌ಗಳು ತಮಿಳುನಾಡು ಕೇರಳ ಮತ್ತು ರಾಜ್ಯದ ಬೆಂಗಳೂರಿನಿಂದ ಹೊರಬರುತ್ತಿವೆ. ಆದರೆ ಉತ್ತರ ಕರ್ನಾಟಕ ಭಾಗದವರು ಅಂತಹ ನವೋದ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ’ ಎಂದು ಚಿನ್ನಯ್ಯ ಮಠ್ ವಿಷಾದ ವ್ಯಕ್ತಪಡಿಸಿದರು.  ‘ಸ್ಟಾರ್ಟ್‌ಅಪ್‌ ಮತ್ತು ಹಾರ್ಡ್‌ವೇರ್‌ನಲ್ಲಿ ಆಸಕ್ತ ವಿದ್ಯಾರ್ಥಿಗಳು ಮುಂದೆ ಬಂದರೆ ಅವರಿಗೆ ಸಹಕಾರ ನೀಡಲಾಗುವುದು. ಶೈಕ್ಷಣಿಕ ಸಂಸ್ಥೆಗಳು ಸಹ ಉದ್ಯಮ ಮತ್ತು ಕಾಲೇಜಿನ ನಡುವಿನ ಅಂತರವನ್ನು ತಗ್ಗಿಸಬೇಕು. ಕಲಬುರಗಿಯಲ್ಲಿ ಹಾರ್ಡ್‌ವೇರ್ ತಯಾರಿಕಾ ಕೇಂದ್ರ ಸ್ಥಾಪಿಸುವ ಇಚ್ಛೆ ಇದೆ. ಎಚ್‌ಕೆಇ ಸಂಸ್ಥೆಯು ಒಂದು ತಂಡವನ್ನು ಕಟ್ಟಿದರೆ ಅದಕ್ಕೆ ಬೇಕಾದ ನೆರವನ್ನು ಕೊಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT