ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಂತರಿ ಕೊರೊನಾ: ಭಯ ಬೇಡ, ಎಚ್ಚರವಿರಲಿ

ಚಿರಾಯು ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮಂಜುನಾಥ ದೋಶೆಟ್ಟಿ ಮತ್ತು ಡಾ. ಅರುಣ ಮಹಾಮನಿ ಅವರಿಂದ ಉಪಯುಕ್ತ ಮಾಹಿತಿ
Last Updated 6 ಜನವರಿ 2021, 16:44 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮಾರ್ಚ್‌ ತಿಂಗಳಲ್ಲಿ ಕಾಣಿಸಿಕೊಂಡ ಕೊರೊನಾ ಮತ್ತು ಈಗಿನ ರೂಪಾಂತರಿ ಕೊರೊನಾದ ಗುಣಲಕ್ಷಣಗಳಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲ. ಆದರೆ, ರೂಪಾಂತರಿ ಕೊರೊನಾ ಕೊಂಚ ವೇಗ ಮತ್ತು ಸುಲಭವಾಗಿ ಹರಡುತ್ತದೆ. ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ ಮತ್ತು ಸರ್ಕಾರದ ನಿಯಮಾವಳಿಗಳನ್ನು ಅನುಸರಿಸಿದರೆ, ಉತ್ತಮ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ಕಲಬುರ್ಗಿಯ ಚಿರಾಯು ಆಸ್ಪತ್ರೆಯ ನಿರ್ದೇಶಕರು ಮತ್ತು ಮೂತ್ರಕೋಶ ತಜ್ಞರಾದ ಡಾ. ಮಂಜುನಾಥ ದೋಶೆಟ್ಟಿಹೇಳಿದರು.

‘ಮಾಸ್ಕ್‌ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಜನಸಂದಣಿ ಸ್ಥಳಗಳಿಗೆ ಹೋಗದಿರುವುದು, ಆಗಾಗ್ಗೆ ಕೈ ತೊಳೆಯುವುದು, ಶುಚಿತ್ವ ಕಾಪಾಡಿ ಕೊಳ್ಳುವುದು ಮುಂತಾವುಗಳನ್ನು ಪಾಲಿಸುವುದು ಅತ್ಯಗತ್ಯ. ಇವೆಲ್ಲವನ್ನೂ ಕಡ್ಡಾಯವಾಗಿ ರೂಢಿಸಿಕೊಂಡಲ್ಲಿ, ಕೊರೊನಾ ಹರಡುವಿಕೆಯನ್ನು ಹಂತಹಂತವಾಗಿ ತಡೆಗಟ್ಟಲು ಸಾಧ್ಯವಾಗುತ್ತದೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವುದು ಅವಶ್ಯ’ ಎಂದು ಚಿರಾಯು ಆಸ್ಪತ್ರೆಯ ಕನ್ಸಲ್ಟಂಟ್ ಫಿಜಿಶಿಯನ್ ಡಾ. ಅರುಣ ಮಹಾಮನಿ ವಿವರಿಸಿದರು.

‘ಪ್ರಜಾವಾಣಿ’ ಕಲಬುರ್ಗಿ ಕಚೇರಿಯಲ್ಲಿ ಬುಧವಾರ ನಡೆದ ‘ಫೋನ್–ಇನ್’ ಕಾರ್ಯಕ್ರಮದಲ್ಲಿ ಇಬ್ಬರೂ ತಜ್ಞ ವೈದ್ಯರು ಓದುಗರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ಕಲಬುರ್ಗಿ, ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳಿಂದ ಬಂದ ದೂರವಾಣಿ ಕರೆಗಳಿಗೆ ಪ್ರತಿಕ್ರಿಯಿಸಿದ ಅವರು, ಕೊರೊನಾ ಸಂಬಂಧಿಸಿದ ಸಂಶಯಗಳನ್ನು ನಿವಾರಿಸಿದರು. ಮೂತ್ರಕೋಶವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಮತ್ತು ಯಾವುದೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿ ಹೇಳಿದರು.

‘ಬ್ರಿಟನ್‌ನಲ್ಲಿ ಕಾಣಿಸಿಕೊಂಡ ರೂಪಾಂತರಿ ಕೊರೊನಾದ ಸ್ವರೂಪ ಬಗ್ಗೆ ಸಮಗ್ರ ಅಧ್ಯಯನ ಮತ್ತು ಸಂಶೋಧನೆ ಪ್ರಗತಿಯಲ್ಲಿದೆ. ಭಾರತದಲ್ಲಿ ಕೆಲ ಪ್ರದೇಶದಲ್ಲಿ ಮಾತ್ರ ಈ ಕೊರೊನಾ ಕಾಣಿಸಿಕೊಂಡಿದ್ದು, ಅದು ಹರಡದಂತೆ ಕೇಂದ್ರ ಸರ್ಕಾರ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಬೇರೆ ಬೇರೆ ಸ್ವರೂಪದಲ್ಲಿ ಕ್ರಮ ಕೈಗೊಳ್ಳುತ್ತಿವೆ’ ಎಂದು ಅವರು ತಿಳಿಸಿದರು.

ಸುರಪುರದಿಂದ ರಾಘವೇಂದ್ರ ಎಸ್‌.ಭಕ್ರಿ ಮಾಡಿದ ಕರೆಗೆ ಉತ್ತರಿಸಿದ ಡಾ. ಅರುಣ ಮಹಾಮನಿ, ‘ಕೊರೊನಾ ಸೋಂಕು ಬೇರೆಯವರಿಗೆ ಹರಡದಂತೆ ತಡೆಯುವಲ್ಲಿ ಮಾಸ್ಕ್ ಉಪಯುಕ್ತವಾಗುತ್ತದೆ. ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ರೂಪಾಂತರಿ ಕೊರೊನಾ ಸಾಮಾನ್ಯವೆಂದು ಭಾವಿಸದೇ ಎಚ್ಚರಿಕೆ ಕಾಯ್ದುಕೊಳ್ಳುವುದು ತುಂಬಾ ಮುಖ್ಯ’ ಎಂದು ವಿವರಿಸಿದರು.

‘ಮಧುಮೇಹ ಪೀಡಿತರಿಗೆ ಮತ್ತು ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಮೂತ್ರಕೋಶದ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಉಪ್ಪಿನ ಅಂಶ ಕಡಿಮೆಯಿರುವ ಆಹಾರ ಪದಾರ್ಥ ಸೇವಿಸಬೇಕು. ಕರಿದ ಪದಾರ್ಥ, ಜಂಕ್‌ ಫುಡ್‌ನಂತಹ ಆಹಾರ ಸೇವಿಸಬಾರದು. ನಿಯಮಿತವಾಗಿ ನೀರು ಕುಡಿಯುತ್ತಿರಬೇಕು’ ಎಂದು ಡಾ. ಮಂಜುನಾಥ ದೋಶೆಟ್ಟಿ ತಿಳಿಸಿದರು.

ಎಲ್ಲರ ಸಹಕಾರ ಅವಶ್ಯ: ‘ಕೊರೊನಾ ನಿಯಂತ್ರಣ, ಜಾಗೃತಿ ಮತ್ತು ಮುಂಜಾಗ್ರತಾ ಕ್ರಮಗಳು ಎಲ್ಲವನ್ನೂ ಸರ್ಕಾರವೊಂದರಿಂದಲೇ ನಿರೀಕ್ಷಿಸಲಾಗದು. ಸಾರ್ವಜನಿಕರ ಹಿತದೃಷ್ಟಿಯಿಂದ ಖಾಸಗಿ ಸಂಸ್ಥೆಗಳು, ಸ್ವಯಂ–ಸೇವಾ ಸಂಸ್ಥೆಗಳು ಮತ್ತು ಜನರು ಸ್ವಯಂ–ಪ್ರೇರಣೆಯಿಂದ ಜವಾಬ್ದಾರಿ ವಹಿಸಿಕೊಂಡು ಸೋಂಕು ಹರಡುವಿಕೆಗೆ ಕಡಿವಾಣ ಹಾಕಬೇಕು’ ಎಂದರು.

‘ಶಾಲಾ ಕೊಠಡಿ ಅಥವಾ ಕಚೇರಿಯನ್ನು ದಿನಕ್ಕೆ ಒಮ್ಮೆ ಸ್ಯಾನಿಟೈಸ್‌ ಮಾಡಿದರೆ ಸಾಕು, ಪದೇ ಪದೇ ಮಾಡುವುದು ಅಗತ್ಯವಿಲ್ಲ. ವ್ಯಕ್ತಿಯ ಸಾಮಾನ್ಯ ತಾಪಮಾನದ ಪ್ರಮಾಣ 36ರಿಂದ 37 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ದೇಹದ ತಾಪಮಾನವು ಪ್ರತಿ ದಿನವೂ ಪರೀಕ್ಷಿಸಬೇಕು. ತಾಪಮಾನ ಅಧಿಕವಿದ್ದು, ಜ್ವರದ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು’ ಎಂದರು.

ಎಲ್ಲರಿಗೂ ಲಸಿಕೆ ಅಗತ್ಯವಿಲ್ಲ: ಲಸಿಗೆ ಎಲ್ಲರಿಗೂ ಅಗತ್ಯವಿಲ್ಲ. ಆದರೆ, ಯಾರಿಗೆ ಕೊರೊನಾ ಲಕ್ಷಣಗಳಿವೆಯೋ ಅವರು ಲಸಿಕೆ ಪಡೆದುಕೊಂಡರೆ ಇನ್ನೊಬ್ಬರಿಗೆ ಹರಡುವುದಿಲ್ಲ. ಇದರಿಂದ ಕೊರೊನಾ ಹರಡುವ ಸರಪಳಿಯನ್ನು ಕಡಿತ ಮಾಡಿದಂತಾಗುತ್ತದೆ. ಇದು ಸಾಧ್ಯವಾದರೆ ಕೊರೊನಾ ಭಯದಿಂದ ದೇಶ ಮುಕ್ತವಾಗಬಹುದು. ಅಲ್ಲಿಯವರೆಗೂ ಹೆಚ್ಚು ಜನರು ಸೇರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿರಬೇಕು ಎಂದು ‘ಪ್ರಜಾವಾಣಿ’ ಓದುಗರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಏಪ್ರಿಲ್–ಮೇ ತಿಂಗಳಲ್ಲಿ ಸೋಂಕು ಕಡಿಮೆಯಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೂತ್ರಕೋಶ ರಕ್ಷಣೆಗೆ ನೀರು ಕುಡಿಯಿರಿ’

‘ಮೂತ್ರಕೋಶ ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ಪ್ರತಿ ದಿನ ಸಾಕಷ್ಟು ನೀರು ಕುಡಿಯಬೇಕು. ದಿನಕ್ಕೆ 6 ಸಲ ಮೂತ್ರಕ್ಕೆ ಹೋಗುವಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಮೂತ್ರಕೋಶದ ಸಮರ್ಪಕ ಕಾರ್ಯ ನಿರ್ವಹಣೆಯಿಂದ ಆರೋಗ್ಯ ಉತ್ತಮ ರೀತಿ ಕಾಪಾಡಿಕೊಳ್ಳಬಹುದು’ ಎಂದು ಡಾ. ಮಂಜುನಾಥ ದೋಶೆಟ್ಟಿ ತಿಳಿಸಿದರು.

‘ನೀರು ಕುಡಿಯುವುದರಿಂದ ಅನಾರೋಗ್ಯ ಸಮಸ್ಯೆ ಕಾಡುವುದಿಲ್ಲ. ಬೇರೆ ಬೇರೆ ತರಹದ ರೋಗಗಳೂ ಬರುವುದಿಲ್ಲ. ಅದರಲ್ಲೂ ಕೊರೊನಾ ಪೀಡಿತರು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ದೇಹವು ನಿರ್ಜಲೀಕರಣಗೊಂಡಲ್ಲಿ, ಆಯಾಸವಾಗುತ್ತದೆ ಮತ್ತು ಶಕ್ತಿ ಸಾಮರ್ಥ್ಯವು ನಿಧಾನವಾಗಿ ಕುಸಿಯುತ್ತದೆ’ ಎಂದು ಅವರು ತಿಳಿಸಿದರು.

‘ಪ್ರತಿ ದಿನವೂ ಬಿಸಿ ನೀರು ಕುಡಿದುಬಿಟ್ಟರೆ, ಯಾವುದೇ ರೋಗ ಬರುವುದಿಲ್ಲ ಎಂಬ ಭಾವನೆ ಇಟ್ಟುಕೊಳ್ಳಬೇಡಿ. ಬಿಸಿ ನೀರಿನ ಜೊತೆಗೆ ಉತ್ತಮ ಆಹಾರ ಸೇವನೆ ಮತ್ತು ಆರೋಗ್ಯಕಾರಿ ಜೀವನಶೈಲಿ ಇರುವುದು ಕೂಡ ಮುಖ್ಯ’ ಎಂದರು.

‘ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಿ’

ದೇಶದಲ್ಲಿ ಮೊದಲ ಬಾರಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾದಾಗ, ಹಿರಿಯ ನಾಗರಿಕರಿಗೆ ಹೆಚ್ಚು ಬಾಧಿಸುತ್ತದೆ ಎಂಬ ಭಾವನೆಯಿತ್ತು. ಆದರೆ, ದಿನಗಳು ಕಳೆದಂತೆ ಮಧ್ಯವಯಸ್ಕರಿಗೆ, ಯುವಜನರಿಗೆ ಮತ್ತು ಮಕ್ಕಳಲ್ಲೂ ಕಾಣಿಸಿಕೊಳ್ಳತೊಡಗಿತು. ಇದಕ್ಕೆ ಮುಖ್ಯ ಕಾರಣ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇಲ್ಲದಿರುವುದು.

ಕೊರೊನಾ ಕುರಿತ ಆರಂಭಿಕ ಹಂತದ ಅಧ್ಯಯನ ಕೈಗೊಂಡಾಗ, ಹಿರಿಯ ನಾಗರಿಕರತ್ತ ಹೆಚ್ಚಿನ ಕಾಳಜಿ ತೋರುವಂತೆ ಸಲಹೆ ನೀಡಲಾಗಿತ್ತು. ಆದರೆ, ಸೋಂಕು ಕ್ರಮೇಣ ವ್ಯಾಪಿಸುತ್ತಿದ್ದಂತೆ ಎಲ್ಲರೂ ಎಚ್ಚರವಹಿಸಬೇಕು ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಂಬ ಅಂಶ ಅರಿವಿಗೆ ಬಂತು.

ಆರೋಗ್ಯ ಕುರಿತು ಜಾಗೃತಿ, ಉತ್ತಮ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಸಹಜವಾದ ಜೀವನಶೈಲಿ ರೂಢಿಸಿಕೊಂಡು ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡಲ್ಲಿ, ಸೋಂಕು ಬರುವುದಿಲ್ಲ. ದೈನಂದಿನ ಕಾರ್ಯಕ್ಕೆಂದು ಮನೆಯಿಂದ ಹೊರಹೋದ ಸಂದರ್ಭದಲ್ಲಿ ಬೇರೆ ಜನರ ಸಂಪರ್ಕದಿಂದ ಹಿರಿಯರಿಗೆ ಸೋಂಕು ಬರಬಹುದು. ಆದರೆ, ಪುಟ್ಟ ಮಕ್ಕಳು ಮನೆಯಲ್ಲೇ ಹೆಚ್ಚು ಸಮಯ ಇರುವುದರಿಂದ ಅವರಿಗೆ ಸೋಂಕು ಬರುವ ಸಾಧ್ಯತೆ ಕಡಿಮೆಯಿರುತ್ತದೆ’ ಎಂದು ಡಾ. ಮಂಜುನಾಥ ದೋಶೆಟ್ಟಿ ಮಾಹಿತಿ ನೀಡಿದರು.

ಎರಡು ಲಸಿಕೆಗಳಿಗೆ ಮಾನ್ಯತೆ

ಕೋವಿಡ್‌–19 ಹರಡುವಿಕೆ ತಡೆಗಟ್ಟಲು ದೇಶದಲ್ಲಿ ‘ಕೋವಿಶೀಲ್ಡ್’ ಮತ್ತು ‘ಕೋವ್ಯಾಕ್ಸಿನ್’ ಎಂಬ ಎರಡು ಲಸಿಕೆಗಳಿಗೆ ಮಾನ್ಯತೆ ನೀಡಲಾಗಿದೆ. ಸೋಂಕು ಹರಡುವಿಕೆ ತಡೆಗಟ್ಟುವುದು, ರೋಗ ನಿಯಂತ್ರಿಸುವುದು ಮತ್ತು ಕಾಯಿಲೆಮೂಲ ನಿವಾರಿಸುವುದು ಲಸಿಕೆಗಳ ಮೂಲ ಉದ್ದೇಶ. ಕೊರೊನಾ ಸೇನಾನಿಗಳಿಗೆ ಮೊದಲ ಆದ್ಯತೆ ನೀಡಿ, ನಂತರ ಸೇರಿದಂತೆ ಹಂತಹಂತವಾಗಿ ಇತರರಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.

ಪ್ರಾಥಮಿಕ ಹಂತದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಸಿಬ್ಬಂದಿಗಳಿಗೆ, ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಮತ್ತು ನಂತರದ ಹಂತದಲ್ಲಿ ಅಗತ್ಯವಿರುವ 50 ವರ್ಷದೊಳಗಿನ ಜನರಿಗೆ ಲಸಿಕೆ ನೀಡಲಾಗುವುದು. ದೇಶದ ಶೇ 50ರಷ್ಟು ಜನರಿಗೆ ಲಸಿಕೆ ದೊರೆತಲ್ಲಿ, ಉಳಿದ ಶೇ 50ರಷ್ಟು ಜನರಿಗೆ ಸೋಂಕು ಹರಡುವುದು ತಡೆಯಬಹುದು.

‘ಲಸಿಕೆಯಿಂದ ತುಂಬಾನೇ ಕಡಿಮೆ ಜನರಿಗೆ ಸಣ್ಣಪುಟ್ಟ ಜ್ವರ, ಅಲರ್ಜಿ ಕಾಡುತ್ತದೆ ಹೊರತು ಎಲ್ಲರಿಗೂ ಅಲ್ಲ. ಲಸಿಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿ ಯಾರಿಗೂ ಸಹ ಅಡ್ಡಪರಿಣಾಮ ಆಗುವುದಿಲ್ಲ. ಲಸಿಕೆಯನ್ನು ಮಾನ್ಯ ಮಾಡುವ ಮುನ್ನ ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆ ನಡೆಸಲಾಗಿದೆ’ ಎಂದು ಡಾ. ಅರುಣ ಮಹಾಮನಿ ವಿವರಿಸಿದರು.

‘ಲಸಿಕೆಯನ್ನು ಒಂದು ವರ್ಷ ತೆಗೆದುಕೊಂಡರೆ ಸಾಕೆ ಅಥವಾ ಪ್ರತಿ ವರ್ಷ ಪಡೆಯಬೇಕೆ ಎಂಬುದನ್ನು ಅಧ್ಯಯನ ಮತ್ತು ಸಂಶೋಧನೆಯಿಂದ ಮಾತ್ರವೇ ನಿಖರವಾಗಿ ಹೇಳಲು ಸಾಧ್ಯ. ಲಸಿಕೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ, ಸೋಂಕು ನಿವಾರಣೆಗೆ ಕಾರಣವಾದಲ್ಲಿ ಪುನಃ ಲಸಿಕೆ ಹಾಕಿಕೊಳ್ಳುವ ಪ್ರಮೇಯ ಬರುವುದಿಲ್ಲ’ ಎಂದರು.

ಕೋವಿನ್ ಆ್ಯಪ್ ಶೀಘ್ರ ಬಿಡುಗಡೆ

ಸಾರ್ವಜನಿಕರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಶೀಘ್ರವೇ ‘ಕೋವಿನ್ ಆ್ಯಪ್’ ಬಿಡುಗಡೆ ಮಾಡಲಿದೆ. ಸಾರ್ವಜನಿಕರು ಈ ಆ್ಯಪ್‌ನ್ನು ತಮ್ಮ ಮೊಬೈಲ್‌ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಹೆಸರು, ವಿಳಾಸ, ಆರೋಗ್ಯ ಸ್ಥಿತಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡಬೇಕು. ಮಾಹಿತಿ ಆಧಾರದ ಮೇಲೆ ಯಾರಿಗೆ ತುರ್ತಾಗಿ ಲಸಿಕೆ ಅಗತ್ಯವಿದೆ ಎಂಬುದನ್ನು ಪರಿಶೀಲಿಸಲಾಗುವುದು. ಅವರಿಗೆ ಮೊದಲು ಲಸಿಕೆ ನೀಡಿ, ನಂತರ ಉಳಿದವರಿಗೆ ಪರಿಗಣಿಸಲಾಗುವುದು.

ಮೂತ್ರಕೋಶ ರಕ್ಷಣೆ ಹೇಗೆ?

‘ಮಧುಮೇಹ, ರಕ್ತದೊತ್ತಡ ಮತ್ತು ನೋವುನಿವಾರಕ ಔಷಧಿಗಳ ಸೇವನೆಯಿಂದ ಮೂತ್ರಕೋಶದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇವು ಮೂರನ್ನು ಹತೋಟಿಯಲ್ಲಿ ಇಟ್ಟುಕೊಂಡಲ್ಲಿ, ಮೂತ್ರಕೋಶಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗದಂತೆ ನೋಡಿಕೊಳ್ಳಬಹುದು’ ಎಂದು ಡಾ. ಮಂಜುನಾಥ ದೋಶೆಟ್ಟಿ ತಿಳಿಸಿದರು.

‘ತಾತ್ಕಾಲಿಕ ಮತ್ತು ನಿರಂತರ ಎಂಬ ಎರಡು ರೀತಿಯ ಮೂತ್ರಕೋಶ ವೈಫಲ್ಯಗಳಿವೆ. ಮೂತ್ರವು ಹಳದಿ ಬಣ್ಣವಾಗುತ್ತಿದ್ದರೆ, ಮೂತ್ರಕೋಶ ಸಂಬಂಧಿಸಿದ ಸಮಸ್ಯೆಯಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಸಣ್ಣ ಪ್ರಮಾಣದ ಸೋಂಕಿನಿಂದಲೂ ಮೂತ್ರಕೋಶಕ್ಕೆ ತೊಂದರೆಯಾಗಬಹುದು. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಂಡಲ್ಲಿ, ಹೆಚ್ಚಿನ ಹಾನಿ ತಪ್ಪಿಸಬಹುದು’ ಎಂದು ಅವರು ಹೇಳಿದರು.

‘ವೈದ್ಯರ ಮಾರ್ಗದರ್ಶನವಿಲ್ಲದೇ ಮನಸೋಇಚ್ಛೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಆರಂಭದಲ್ಲಿ ಅದರ ಅಡ್ಡಪರಿಣಾಮ ಗೋಚರಿಸದಿದ್ದರೂ ನಂತರದ ಅವಧಿಯಲ್ಲಿ ನಿಧಾನವಾಗಿ ದುಷ್ಪರಿಣಾಮ ಕಾಣಿಸತೊಡಗುತ್ತದೆ. ಮೂತ್ರಕೋಶವು ಬಹುತೇಕ ಹಾನಿಯಾದಲ್ಲಿ, ಬೇರೆಡೆ ಮೂತ್ರಕೋಶವನ್ನು ಅನಿವಾರ್ಯವಾಗಿ ಕಸಿ ಮಾಡಬೇಕಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

2012ರಲ್ಲೇ ಕೊರೊನಾ ಬಂದಿತ್ತು!

‘ಕೊರೊನಾ ಸೋಂಕು 2012ರಲ್ಲೇ ಸಿಂಗಾಪುರ ಮತ್ತು ಏಷ್ಯಾದ ಕೆಲ ದೇಶಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ, ವೇಗವಾಗಿ ಹರಡಿರಲಿಲ್ಲ. ಕ್ರಮೇಣ ಶಮನಗೊಂಡಿತ್ತು. ಆದರೆ, ಆ ಕಾಲಘಟ್ಟದಲ್ಲೇ ಕೊರೊನಾ ಸೋಂಕಿನ ಗುಣಲಕ್ಷಣಗಳನ್ನು ಆಧರಿಸಿ ಲಸಿಕೆಯನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಆಗ ಸೋಂಕು ಕಡಿಮೆಯಾದರೂ ಲಸಿಕೆ ಸಂಶೋಧನೆ ಸ್ಥಗಿತಗೊಂಡಿರಲಿಲ್ಲ. ಈಗ ಕೊರೊನಾ ಎಲ್ಲೆಡೆ ವ್ಯಾಪಿಸಿರುವ ಕಾರಣ ಆಗಿನ ಲಸಿಕೆ ಸಂಶೋಧನೆ ಉಪಯುಕ್ತವಾಗಿದೆ. ವೈಜ್ಞಾನಿಕ ಅಧ್ಯಯನ, ಜನರ ಆರೋಗ್ಯ ಸ್ಥಿತಿ ಎಲ್ಲವನ್ನೂ ಆಧರಿಸಿಯೇ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಡಾ. ಮಂಜುನಾಥ ದೋಶೆಟ್ಟಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT