ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಮುಕ್ತ ಕಲಬುರಗಿ: ಇನ್ನೂ ಕನಸು

ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಿದ ಪ್ಲಾಸ್ಟಿಕ್ ಬಳಕೆ; ಪರಿಸರಸ್ನೇಹಿ ಕೈಚೀಲಗಳ ಕುರಿತು ಬೇಕಿದೆ ಹೆಚ್ಚಿನ ಜಾಗೃತಿ
Last Updated 10 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಕಲಬುರಗಿ: ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರಿ ಐದು ವರ್ಷಗಳಾಗಿವೆ. ಪ್ಲಾಸ್ಟಿಕ್‌ ಬಳಸದಂತೆ ಪರಿಸರ, ಅರಣ್ಯ ಮತ್ತು ಜೀವ ವಿಜ್ಞಾನ ಇಲಾಖೆಯವರು ಹಲವು ಬಾರಿ ಕೋರಿದ್ದಾರೆ. ಆದರೆ, ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಬಿದ್ದಿಲ್ಲ.

ಆರೋಗ್ಯ ಮತ್ತು ಪರಿಸರಕ್ಕೆ ಹಾನಿಕಾರಕ ಎಂಬ ಕಾರಣಕ್ಕೆ 50 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಕೈಚೀಲಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮತ್ತು ಅವುಗಳ ಉತ್ಪನ್ನಗಳ ಬಳಕೆ ಇನ್ನೂ ಹೆಚ್ಚಿದೆ.

ಮಾರುಕಟ್ಟೆ, ಕಿರಾಣಿ ಅಂಗಡಿ, ಬೇಕರಿ, ಮಾಲ್,ಬಾರ್ ಮತ್ತು ರೆಸ್ಟೊರೆಂಟ್, ಖಾನಾವಳಿ, ಹೋಟೆಲ್‌ಗಳಲ್ಲಿ ಊಟ, ತಿನಿಸುಗಳನ್ನು ಪಾರ್ಸೆಲ್ ಮಾಡಲು ಹಾಗೂ ತರಕಾರಿ, ಹೂವು, ಹಣ್ಣು, ದಿನಸಿ ವಸ್ತುಗಳನ್ನು ಕೊಂಡೊಯ್ಯಲು ಪ್ಲಾಸ್ಟಿಕ್ ಕೈಚೀಲಗಳನ್ನೇ ಯಥೇಚ್ಛವಾಗಿ ಬಳಸಲಾಗುತ್ತಿದೆ. ಬಿಸಿ ಬಿಸಿ ಚಹಾವನ್ನೂ ಪ್ಲಾಸ್ಟಿಕ್ ಕೈಚೀಲಗಳಲ್ಲಿ ಕಟ್ಟಿಕೊಡಲಾಗುತ್ತದೆ!

‘ಎಲ್ಲಾ ರೀತಿಯ ಪ್ಲಾಸ್ಟಿಕ್ ಕೈಚೀಲ, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಊಟದ ಮೇಜಿನ ಮೇಲೆ ಹಾಕುವ ಪ್ಲಾಸ್ಟಿಕ್ ಹಾಳೆ, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‌ನಿಂದ ತಯಾರಾದಂತಹ ವಸ್ತುಗಳ ಬಳಕೆ ನಿಷೇಧಿಸಲಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.

‘ಕಡಿಮೆ ದರದಲ್ಲಿ ಪ್ಲಾಸ್ಟಿಕ್‌ ಸಿಗುತ್ತದೆ. ಅಲ್ಲದೇ, ಬಳಕೆಗೂ ಸುಲಭ’ ಎಂದು ಜಿಲ್ಲೆಯ ವ್ಯಾಪಾರಿಗಳು ಮತ್ತು ಜನರು ಪ್ಲಾಸ್ಟಿಕ್ ಬಳಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ನಗರದ ಆಳಂದ ರಸ್ತೆ, ರಿಂಗ್ ರಸ್ತೆ ಬದಿ, ಸೂಪರ್ ಮಾರುಕಟ್ಟೆ, ಕಣ್ಣಿ ಮಾರುಕಟ್ಟೆ, ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ ಸುತ್ತಮುತ್ತ, ಬಡಾವಣೆಗಳ ಖಾಲಿ ನಿವೇಶನಗಳು, ನಗರ ಹೊರವಲಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೇ ಕಾಣಸಿಗುತ್ತದೆ. ಚರಂಡಿ, ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇರಿ ಕೊಳಚೆ ನೀರಿನ ಹರಿವಿಗೂ ತಡೆಯನ್ನುಂಟು ಮಾಡುತ್ತಿದೆ. ಉದ್ಯಾನ, ಧಾರ್ಮಿಕ ಕೇಂದ್ರ, ಕೋಟೆಯ ಸುತ್ತ ಹರಡಿರುವ ಪ್ಲಾಸ್ಟಿಕ್ ನಗರದ ಅಂದಕ್ಕೆ ಧಕ್ಕೆ ತಂದಿದೆ.

2 ವರ್ಷಗಳ ಹಿಂದೆ ಅಂದಿನ ರಾಷ್ಟ್ರೀಯ ಹಸಿರು ಪೀಠದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ, ನ್ಯಾಯಮೂರ್ತಿ ಸುಭಾಷ್‌ ಬಿ.ಆಡಿ ಕಲಬುರ್ಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ‘ನವೆಂಬರ್‌ 1, 2019ರೊಳಗೆ ಕಲಬುರ್ಗಿಯನ್ನು ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಯಾಗಿಸಬೇಕು. ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

‘ಪಾಲಿಕೆ ವತಿಯಿಂದ ನಗರ ಸಂಚಾರ ಕೈಗೊಂಡು ಮಳಿಗೆಗಳಲ್ಲಿರುವ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ವ್ಯಾಪಾರಿಗಳಿಗೆ ದಂಡವನ್ನೂ ವಿಧಿಸಲಾಗಿದೆ.ನಗರದಲ್ಲಿದ್ದ ಎರಡು ಪ್ಲಾಸ್ಟಿಕ್ ಉತ್ಪಾದಕ ಘಟಕಗಳನ್ನು ಮುಚ್ಚಿಸಲಾಗಿದೆ. ಪ್ಲಾಸ್ಟಿಕ್ ತಯಾರಿಕಾ ಘಟಕಗಳಿದ್ದರೆ, ಅವುಗಳ ಮಾಲೀಕರ ಮೇಲೆ ಎಫ್‌ಐಆರ್ ದಾಖಲಿಸಲು ಸೂಚಿಸಲಾಗಿದೆ. ಹೊರಗಡೆಯಿಂದ ಬರುವ ಪ್ಲಾಸ್ಟಿಕ್‌ನ್ನು ಗಡಿಯಲ್ಲೆ ತಡೆಯುವಂತೆ ಪೊಲೀಸರಿಗೆ ತಿಳಿಸಲಾಗಿದೆ’ ಎಂದು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ತಿಳಿಸಿದರು.

‘ಈವರೆಗೂ ಮಳಿಗೆಗಳ ಮೇಲೆ ದಾಳಿ ಹಾಗೂ ವಿವಿಧ ಕಾರ್ಯಕ್ರಮ ಮೂಲಕ 26.3 ಟನ್ ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬೀದಿನಾಟಕ, ಜಾಗೃತಿ ಜಾಥಾ ಮೂಲಕ ಪ್ಲಾಸ್ಟಿಕ್ ದುಷ್ಪರಿಣಾಮ ಕುರಿತು ಅರಿವು ಮೂಡಿಸುತ್ತಿದ್ದೇವೆ. ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ‘ನಮ್ಮ ನಡೆ ತ್ಯಾಜ್ಯ ಮುಕ್ತದೆಡೆಗೆ’ ಎಂಬ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ನೋಡಲ್ ಅಧಿಕಾರಿ ಗುರುಬಾಯಿ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಧೀರ್ಘಕಾಲಿಕ ಬಳಕೆಯಿಂದ ಆಪತ್ತು’

‘ಪ್ಲಾಸ್ಟಿಕ್‌ನಲ್ಲಿ ತಂದ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ’ ಎಂದು ಇಲ್ಲಿನ ಮಕ್ತುಂಪುರ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೇಣುಕಾ ಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಡಿಮೆ ಮೈಕ್ರಾನ್‌ ಹೊಂದಿರುವ ಪ್ಲಾಸ್ಟಿಕ್‌ ಬಹಳ ಅಪಾಯಕಾರಿ. ಬಿಸಿ ಆಹಾರ ಪದಾರ್ಥವನ್ನು ಇಂಥ ಪ್ಲಾಸ್ಟಿಕ್‌ನಲ್ಲಿ ಹಾಕುವುದರಿಂದ ವಿಷಕಾರಿ ರಾಸಾಯನಿಕಗಳು ಆಹಾರ ಸೇರುವ ಸಾಧ್ಯತೆ ಇದೆ. ಇಂಥ ಆಹಾರ ಸೇವನೆಯಿಂದ ಪಚನಶಕ್ತಿ ಕುಂಠಿತಗೊಳ್ಳುತ್ತದೆ’ ಎಂದು ಅವರು ತಿಳಿಸಿದರು. ‘ಪ್ಲಾಸ್ಟಿಕ್‌ನಲ್ಲಿ ತಂದ ಆಹಾರ ಸೇವೆನಯಿಂದ ಬೊಜ್ಜು, ಹೃದ್ರೋಗ, ಅಲರ್ಜಿ, ಅಸ್ತಮಾ, ಕಿಡ್ನಿ ಹಾಗೂ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲು ಮುಂದಾಗಬೇಕು’ ಎಂದರು

‘ರಸ್ತೆಯಲ್ಲಿ ಹಾಕುವ ಪ್ಲಾಸ್ಟಿಕ್ ತ್ಯಾಜ್ಯ ಜಾನುವಾರುಗಳ ಜೀವಕ್ಕೆ ಕುತ್ತಾಗಬಹುದು’ ಎಂದು ಇಲ್ಲಿನ ಮುಖ್ಯ ಪಶು ವೈದ್ಯಾಧಿಕಾರಿ (ತಾಂತ್ರಿಕ) ಡಾ.ಯಲ್ಲಪ‍್ಪ ಇಂಗಳೆ ವಿವರಿಸಿದರು. ‘ಜಾನುವಾರುಗಳು ಲವಣಾಂಶ ಇರುವ ಪದಾರ್ಥಗಳನ್ನು ಹುಡುಕುತ್ತಿರುತ್ತವೆ. ಪ್ಲಾಸ್ಟಿಕ್ ಕೈಚೀಲಗಳಲ್ಲಿ ಇರುವ ಸಾಂಬಾರ್, ಖಾರದ ತಿನಿಸುಗಳನ್ನು ಅವು ಪ್ಲಾಸ್ಟಿಕ್ ಸಮೇತ ತಿನ್ನುತ್ತವೆ. ಜಾನುವಾರುಗಳ ಹೊಟ್ಟೆ ಸೇರುವ ಪ್ಲಾಸ್ಟಿಕ್ ಬೇಗ ಕರಗುವುದಿಲ್ಲ. ಇದರಿಂದ ಅವುಗಳ ಪಚನಶಕ್ತಿ ಕುಂದುತ್ತದೆ. ಇದರಿಂದ ಹೊಟ್ಟೆ ಉಬ್ಬರ ಉಂಟಾಗಿ ನಂತದಲ್ಲಿ ಅವು ಸಾವಿಗೀಡಾಗಬಹುದು’ ಎಂದು ತಿಳಿಸಿದರು.

‘ಪ್ಲಾಸ್ಟಿಕ್ ಕೊಟ್ಟು, ಸಕ್ಕರೆ ತಗೊಳ್ಳಿ’

ಪ್ಲಾಸ್ಟಿಕ್ ಹಾವಳಿ ತಡೆಗಟ್ಟಲು ಕಲಬುರಗಿ ತಾಲ್ಲೂಕು ಪಂಚಾಯಿತಿ ಕಳೆದ ವರ್ಷ ವಿನೂತನ ಯೋಜನೆ ಆರಂಭಿಸಿದ್ದು, ಪ್ಲಾಸ್ಟಿಕ್ ಚೀಲ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ತಂದು ಕೊಟ್ಟರೆ ಅದಕ್ಕೆ ಪ್ರತಿಯಾಗಿ ಗ್ರಾಮಸ್ಥರಿಗೆ ಅಷ್ಟೇ ತೂಕದ ಸಕ್ಕರೆ ಉಚಿತವಾಗಿ ನೀಡುತ್ತಿದೆ.

‘ತಾಲ್ಲೂಕಿನ ಎಲ್ಲ 28 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವ ಅಭಿಯಾನ ಆರಂಭಿಸಲಾಗಿದೆ.ಗ್ರಾಮದ ವಿವಿಧೆಡೆ ಬಿದ್ದಿರುವ, ಮನೆ–ಅಂಗಡಿಗಳಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್‌ ಚೀಲಗಳನ್ನು ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ತಲುಪಿಸಿದರೆ ಅವರಿಗೆ ಸಕ್ಕರೆ ನೀಡಲಾಗುತ್ತದೆ. ಯೋಜನೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇವರು ಏನಂತಾರೆ?

*ಜಿಲ್ಲಾ ಪಂಚಾಯಿತಿ ವತಿಯಿಂದ ಗ್ರಾಮೀಣ ಭಾಗಗಳಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಅಧಿಕಾರಿಗಳೊಂದಿಗೆ ಸಹಕರಿಸಬೇಕು

– ದಿಲಿಷ್ ಶಶಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕಲಬುರ್ಗಿ

*ಕಲಬುರಗಿ ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸುವ ನಿಟ್ಟಿನಲ್ಲಿ ಕಾರ್ಯಾಚರಣೆಗಾಗಿ ಪಾಲಿಕೆಯಿಂದ ಮೂರು ತಂಡಗಳನ್ನು ರಚಿಸಲಾಗಿದೆ. ಅಧಿಕಾರಿಗಳು ನಿರಂತರವಾಗಿ ಪರಿಶೀಲನೆ ಮಾಡಲಿದ್ದಾರೆ.

–ಸ್ನೇಹಲ್ ಸುಧಾಕರ ಲೋಖಂಡೆ, ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT