ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು

Published 11 ಜುಲೈ 2024, 14:22 IST
Last Updated 11 ಜುಲೈ 2024, 14:22 IST
ಅಕ್ಷರ ಗಾತ್ರ

ಕಲಬುರಗಿ: ಕಾಲೇಜಿನಿಂದ ಮನೆಗೆ ಹೊರಟಿದ್ದ ಬಾಲಕಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಅ‍ಪರಾಧ ಸಾಬೀತಾಗಿದ್ದರಿಂದ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಪೋಕ್ಸೊ) ನ್ಯಾಯಾಲಯವು ಅಪರಾಧಿ ದೀಪಕ್ ಕಲ್ಯಾಣಿ ಎಂಬಾತನಿಗೆ 20 ವರ್ಷ ಜೈಲು ಹಾಗೂ ದಂಡ ವಿಧಿಸಿದೆ.

ಕಮಲಾಪುರ ತಾಲ್ಲೂಕಿನ ಧಮ್ಮೂರ ಕ್ರಾಸ್ ಬಳಿ 2023ರ ಆಗಸ್ಟ್ 4ರಂದು ನಿಂತಿದ್ದ ಬಾಲಕಿಯನ್ನು ದೀಪಕ್‌ ಒತ್ತಾಯಪೂರ್ವಕವಾಗಿ ಕಲಬುರಗಿಗೆ ಕರೆತಂದು ರೈಲಿನ ಮೂಲಕ ಬೆಂಗಳೂರಿಗೆ ಕರೆದೊಯ್ದಿದ್ದ. ಅಲ್ಲಿ ತಾನಿದ್ದ ಬಾಡಿಗೆ ಮನೆಯ ಮಾಲೀಕರಿಗೆ ಆಕೆಯನ್ನು ತನ್ನ ತಂಗಿ ಎಂದು ಹೇಳಿ ಉಳಿಸಿಕೊಂಡಿದ್ದ. ನಂತರ ಮನೆಯಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಮಗಳು ಕಾಣೆಯಾಗಿದ್ದರಿಂದ ಪೋಷಕರು ಅಪಹರಣ ಪ್ರಕರಣವನ್ನು ದಾಖಲಿಸಿದ್ದರು. ಈ ವಿಷಯ ತಿಳಿದು ದೀಪಕ್ ಬಾಲಕಿಯನ್ನು ಬೆಂಗಳೂರಿನಿಂದ ಕರೆದುಕೊಂಡು ಬಂದು ಊರಿನ ಬಳಿ ಬಿಟ್ಟಿದ್ದ. ಪೋಷಕರು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದ್ದ ಗ್ರಾಮೀಣ ವೃತ್ತದ ಸಿಪಿಐ ವಿ. ನಾರಾಯಣ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಪೋಕ್ಸೊ ಕಾಯ್ದೆಯಡಿಯ ಅಪರಾಧಕ್ಕೆ 20 ವರ್ಷ ಜೈಲು ಶಿಕ್ಷೆ ಹಾಗೂ ಒಟ್ಟು ₹ 28,500 ದಂಡ ವಿಧಿಸಿದ್ದಾರೆ. ಸಂತ್ರಸ್ತೆಗೆ ಕಾನೂನು ಪ್ರಾಧಿಕಾರದಿಂದ ₹ 7 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT