ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐದು ವರ್ಷಗಳ ಬಳಿಕ ಪ್ರಥಮ ಪ್ರಜೆಗೆ ಅಧಿಕಾರ

ನಾಳೆ ಮೇಯರ್–ಉಪಮೇಯರ್ ಚುನಾವಣೆ ನಿಗದಿ; ಮತ್ತೆ ಕಿಂಗ್ ಮೇಕರ್ ಆದ ಜೆಡಿಎಸ್
Published : 22 ಮಾರ್ಚ್ 2023, 6:09 IST
ಫಾಲೋ ಮಾಡಿ
Comments

ಕಲಬುರಗಿ: ಮೇಯರ್–ಉಪ ಮೇಯರ್ ಚುನಾವಣೆ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿರು ವುದರಿಂದ ಇದೇ 23ರಂದು ನಿಗದಿಯಾ ಗಿರುವ ಮೇಯರ್–ಉಪಮೇಯರ್ ಚುನಾವಣೆ ನಿರಾತಂಕವಾಗಿ ನಡೆಯಲಿದ್ದು, ಸುಮಾರು ಐದು ವರ್ಷಗಳ ಬಳಿಕ ನಗರದ ಪ್ರಥಮ ಪ್ರಜೆಗೆ ಅಧಿಕಾರ ಸಿಗಲಿದೆ.

2021ರ ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ 27 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 23 ಸ್ಥಾನಗಳನ್ನು ಗಳಿಸಿದ್ದು, ಜೆಡಿಎಸ್ ನಾಲ್ಕು ಸ್ಥಾನಗಳನ್ನು ಪಡೆದಿದೆ. ಬಿಜೆಪಿಯು ಬೇರೆ ಜಿಲ್ಲೆಗಳಲ್ಲಿರುವ ತನ್ನ ಪಕ್ಷದ ವಿಧಾನಪರಿಷತ್ ಸದಸ್ಯರ ಪಟ್ಟಿಯನ್ನು ಸೇರ್ಪಡೆ ಮಾಡಿಸಿದ್ದಕ್ಕೆ ಕೆರಳಿದ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲು ಹತ್ತಿತ್ತು. ಆದರೆ, ಹೈಕೋರ್ಟ್ ಪ್ರಕರಣವನ್ನು ಇತ್ಯರ್ಥಪಡಿಸಿದ್ದು, ಚುನಾವಣೆ ಘೋಷಣೆಯಾದ ಈ ಹಂತದಲ್ಲಿ ಪ್ರಕ್ರಿಯೆಗೆ ತಡೆ ನೀಡಲಾಗದು ಎಂದು ಅಭಿಪ್ರಾಯಪಟ್ಟು ಮನವಿಯನ್ನು ವಜಾ ಮಾಡಿದೆ.

55 ಪಾಲಿಕೆ ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಒಳಗೊಂಡು ಚುನಾವಣಾಧಿಕಾರಿಗಳು ಮೊದಲು 70 ಮಂದಿ ಮತದಾರರ ಪಟ್ಟಿ ಸಿದ್ಧಪಡಿಸಿದ್ದರು. ಆದರೆ, ಬಿಜೆಪಿಯಿಂದ ಗೆದ್ದಿದ್ದ ಪ್ರಿಯಾಂಕಾ ಭೋಯಿ ಅವರನ್ನು ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ನ್ಯಾಯಾಲಯ ಅನರ್ಹಗೊಳಿಸಿದೆ. ಬಾಬುರಾವ ಚಿಂಚನಸೂರ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅವರ ಮತವೂ ಬಿಜೆಪಿಗೆ ಇಲ್ಲವಾಗಿದೆ. ಹೀಗಾಗಿ, 68 ಜನರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ.

ರಾಜ್ಯಸಭೆ ಸದಸ್ಯರೂ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ಸದಸ್ಯ ಲಹರ್‌ಸಿಂಗ್ ಸಿರೋಯಾ, ಸಂಸದ ಡಾ. ಉಮೇಶ ಜಾಧವ್, ಶಾಸಕರಾದ ಖನೀಜ್ ಫಾತಿಮಾ, ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಸುನೀಲ್ ವಲ್ಯಾಪುರೆ, ಲಕ್ಷ್ಮಣ ಸವದಿ, ಮುನಿರಾಜುಗೌಡ, ಭಾರತಿ ಶೆಟ್ಟಿ, ರಘುನಾಥರಾವ್ ಮಲ್ಕಾಪೂರೆ, ಚಂದ್ರಶೇಖರ ಪಾಟೀಲ ಹಾಗೂ ಸಾಬಣ್ಣ ತಳವಾರ ಮತದಾನ ಮಾಡಲಿರುವ ಜನಪ್ರತಿನಿಧಿಗಳು.

ಬಿಜೆಪಿ 34, ಕಾಂಗ್ರೆಸ್‌ 30 ಹಾಗೂ ಜೆಡಿಎಸ್ 4 ಸದಸ್ಯರನ್ನು ಹೊಂದಿದೆ. ಸರಳ ಬಹುಮತಕ್ಕೆ 35 ಮತಗಳು ಬೇಕು. ಬಿಜೆಪಿಗೆ ಜೆಡಿಎಸ್‌ ಬೆಂಬಲ ಸೂಚಿಸುವ ಸಾಧ್ಯತೆ ಕಡಿಮೆ ಇದ್ದು, ಕಾಂಗ್ರೆಸ್‌ ಮುಖಂಡರು ತಮಗೆ ಬೆಂಬಲಿ ಸುವಂತೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಒಂದೊಮ್ಮೆ ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲ ಸೂಚಿಸಿದರೂ ಬಹು ಮತಕ್ಕೆ ಒಂದು ಮತ ಕಡಿಮೆ ಬೀಳಲಿದೆ.

ಬಿಜೆಪಿಯಿಂದ ಆಯ್ಕೆಯಾದ ಕೆಲ ವಿಧಾನಪರಿಷತ್ ಸದಸ್ಯರು ಚುನಾವಣೆಗೂ ಮುನ್ನ ಪಕ್ಷದ ಮುಖಂ ಡರು ಕರೆದಿರುವ ಸಭೆಯಲ್ಲಿ ಪಾಲ್ಗೊ ಳ್ಳಲು ಬುಧವಾರವೇ ನಗರಕ್ಕೆ ಬಂದಿಳಿಯಲಿ ದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತದಾನದ ಹಕ್ಕು ಹೊಂದಿರುವ ರಾಜ್ಯಸಭೆ ಸದಸ್ಯರೂ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಯಲ್ಲಿ ಭಾಗವಹಿಸಲಿದ್ದಾರೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ತಿಳಿಸಿದ್ದಾರೆ.

ಕಾಂಗ್ರೆಸ್‌ ಪರ ಜೆಡಿಎಸ್ ಒಲವು: ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆಗಳು ಘೋಷಣೆಯಾಗಲಿರುವುದರಿಂದ ಬಿಜೆಪಿಯೊಂದಿಗೆ ಕೂಡಿ ಪಾಲಿಕೆಯಲ್ಲಿ ಅಧಿಕಾರ ಹಿಡಿದರೆ ಕೆಟ್ಟ ಸಂದೇಶ ರವಾನೆಯಾಗಬಹುದು ಎಂಬ ಉದ್ದೇಶದಿಂದ ಜೆಡಿಎಸ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಕುರಿತು ಕಾಂಗ್ರೆಸ್‌ ಮುಖಂಡರು ಪಕ್ಷದ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷರೂ ಆದ ಉಸ್ತಾದ್ ನಾಸಿರ್ ಹುಸೇನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ, ಯಾವುದೇ ತೀರ್ಮಾನಕ್ಕೆ ಬಂದಿಲ್ಲ.

ವಿಶಾಲ ದರ್ಗಿ, ಕೃಷ್ಣ ನಾಯಕ ರೇಸ್‌ನಲ್ಲಿ

ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸಾಧ್ಯವಾದರೆ ಪಕ್ಷದ ಮುಖಂಡರು ಪಾಲಿಕೆ ಸದಸ್ಯ ವಿಶಾಲ ದರ್ಗಿ ಅಥವಾ ಕೃಷ್ಣ ನಾಯಕ ಅವರನ್ನು ಮೇಯರ್ ಮಾಡಬಹುದು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

ಪರಿಶಿಷ್ಟ ಬಲಗೈ ಸಮುದಾಯಕ್ಕೆ ಸೇರಿದ ವಿಶಾಲ ದರ್ಗಿ ಅವರನ್ನು ಮೇಯರ್ ಹುದ್ದೆಗೆ ಪರಿಗಣಿಸುವಂತೆ ಒತ್ತಡಗಳು ಹೆಚ್ಚಾಗಿವೆ ಎನ್ನಲಾಗಿದೆ. ಲಂಬಾಣಿ ಸಮುದಾಯಕ್ಕೆ ಸೇರಿದ ಕೃಷ್ಣ ನಾಯಕ ಹಾಗೂ ಭೋವಿ ಸಮಾಜಕ್ಕೆ ಸೇರಿದ ಹೊನ್ನಮ್ಮ ಬಾಬು ಹಾಗರಗಿ ಅವರಿಗೂ ಮೇಯರ್ ಹುದ್ದೆ ನೀಡಬೇಕು ಎಂದು ಅವರ ಸಮುದಾಯದವರು ಒತ್ತಾಯಿಸಿದ್ದಾರೆ.

ಚುನಾವಣೆ ಕುರಿತು ಪರಾಮರ್ಶೆ ನಡೆಸಲು ಪಕ್ಷದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ನೇತೃತ್ವದಲ್ಲಿ ಮಂಗಳವಾರ ಸಂಜೆ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯಿತು. ಆದರೆ, ಯಾವುದೇ ತೀರ್ಮಾನಕ್ಕೆ ಬರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಇಂದು ಬಿಜೆಪಿ ಮಹತ್ವದ ಸಭೆ

ಮೇಯರ್–ಉಪಮೇಯರ್ ಯಾರನ್ನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ಇದೇ 22ರಂದು ಬೆಳಿಗ್ಗೆ ನಗರದಲ್ಲಿ ಬಿಜೆಪಿಯ ಪಾಲಿಕೆ ಸದಸ್ಯರ ಹಾಗೂ ಜನಪ್ರತಿನಿಧಿಗಳ ಮಹತ್ವದ ಸಭೆ ನಡೆಯಲಿದೆ.

ಕೆಕೆಆರ್‌ಡಿಬಿ ಅಧ್ಯಕ್ಷ, ಕಲಬುರಗಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಬಿನ್ನಾಡಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಮೇಯರ್ ಹುದ್ದೆಯನ್ನು ಕಲಬುರಗಿ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ವಾರ್ಡ್‌ಗೆ ಕೊಟ್ಟರೆ, ಉಪ ಮೇಯರ್ ಹುದ್ದೆಯನ್ನು ಕಲಬುರಗಿ ಉತ್ತರ ಕ್ಷೇತ್ರದ ಸದಸ್ಯರೊಬ್ಬರಿಗೆ ನೀಡುವ ಬಗ್ಗೆ ಚರ್ಚೆ ನಡೆಯಲಿದೆ.

ಮಾ 23ರಂದು ನಿಷೇಧಾಜ್ಞೆ ಜಾರಿ

ಕಲಬುರಗಿ ಟೌನ್‌ಹಾಲ್‌ನಲ್ಲಿ ಇದೇ 23ರಂದು ಮಹಾನಗರ ಪಾಲಿಕೆಯ ಚುನಾವಣೆ ಇದೇ ನಡೆಯಲಿರುವುದರಿಂದ ಅಂದು ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಟೌನ್‌ಹಾಲ್‌ ಸುತ್ತಲಿನ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ವಿಧಿಸಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯೂ ಆದ ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರು ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT