ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್ ಇನ್: ಕೆಕೆಆರ್‌ಡಿಬಿ ಸಹಕರಿಸಿದರೇ ಇನ್ನಷ್ಟು ಬಸ್‌ ಸೌಲಭ್ಯ

Last Updated 10 ಆಗಸ್ಟ್ 2022, 12:34 IST
ಅಕ್ಷರ ಗಾತ್ರ

ಕಲಬುರಗಿ:ಪ್ರಜಾವಾಣಿಕಚೇರಿಯಲ್ಲಿಬುಧವಾರನಡೆದಫೋನ್ಇನ್‌ಕಾರ್ಯಕ್ರಮದಲ್ಲಿಕಲ್ಯಾಣಕರ್ನಾಟಕರಸ್ತೆ ಸಾರಿಗೆಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರು ಕೇಳುಗರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ಇಂತಿಷ್ಟು ಅವಧಿಯಲ್ಲಿ ಸಮಸ್ಯೆ ಬಗೆಹರಿಸುವ ಕುರಿತು ಭರವಸೆಯೂ ನೀಡಿದರು.

ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಮಾಡಿದ ಕರೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಅವಧಿ ಮುಗಿದ ಬಸ್‌ಗಳು, ಕಡಿಮೆ ಸಿಬ್ಬಂದಿ, ಬಸ್‌ಗಳ ಕೊರತೆ ಇದ್ದರೂ ಎಲ್ಲವನ್ನೂ ಸರಿದರೂಗಿಸಲು ಪ್ರಯತ್ನಿಸಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯನ್ನು ಗಮನದಲ್ಲಿ ಇರಿಸಲಾಗಿದೆ’ ಎಂದರು.

‘450 ಹೊಸ ಬಸ್‌ಗಳ ಖರೀದಿಗೆ ಪ್ರಕ್ರಿಯೆ ನಡೆದಿದ್ದು, ಸಚಿವ ಸಂಪುಟದಿಂದ ಅನುಮೋದನೆ ಪಡೆಯುವ ಪ್ರಯತ್ನವೂ ಅಧ್ಯಕ್ಷರ ಮಟ್ಟದಲ್ಲಿ ನಡೆಯುತ್ತಿದೆ’ ಎಂದರು.

‘10 ಲಕ್ಷಕ್ಕೂ ಅಧಿಕ ಕಿ.ಮೀ. ಓಡಿರುವ ಹಾಗೂ 15 ವರ್ಷ ಮೇಲ್ಪಟ್ಟ ಬಸ್‌ಗಳ ಸಂಖ್ಯೆ ಹೆಚ್ಚಾಗಿವೆ. ಇವುಗಳ ಪ್ರಮಾಣ ತಗ್ಗಿಸಿ ಹೊಸ ಬಸ್ ಖರೀದಿಗೆ ಪ್ರಯತ್ನ ನಡೆಸಿದ್ದೇವೆ. ಈಗಾಗಲೇ 40 ಬಸ್‌ಗಳ ಟೆಂಡರ್ ಆಗಿದೆ. ಇದರಲ್ಲಿ 10 ವೊಲ್ವಾ ಹಾಗೂ30 ಎಸಿ ರಹಿತ ಬಸ್‌ಗಳಿವೆ. ಸಾಲ ಮಾಡಿ ಬಸ್‌ಗಳು ಖರೀದಿಸುವ ಪರಿಸ್ಥಿತಿ ಇದೆ’ಎಂದರು.

‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ತನ್ನ ಅನುದಾನದಲ್ಲಿ ಬಸ್‌ಗಳನ್ನು ಖರೀದಿಸಿ ಕೊಟ್ಟರೆ, ಇಲ್ಲವೇ ಧನ ಸಹಾಯ ಮಾಡಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಬಸ್‌ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.

‘ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಚಿಂತನೆ ನಡೆಸಿದ್ದೇವೆ. ಕ್ರೆಡಲ್ ಅಧ್ಯಕ್ಷ ಚಂದು ‍ಪಾಟೀಲ ಅವರು ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ₹5 ಕೋಟಿವರೆಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಜೆಸ್ಕಾಂ ಸೇರಿದಂತೆ ಇತರೆ ಇಲಾಖೆಯವರು ಮುಂದೆ ಬಂದರೆ ಎಲೆಕ್ಟ್ರಿಕ್ ಬಸ್ ಖರೀದಿಗೆ ಇಂಬು ಸಿಗುತ್ತದೆ’ ಎಂದರು.

‘ಸಿಬ್ಬಂದಿ ಕೊರತೆಯನ್ನು ತಾತ್ಕಾಲಿಕವಾಗಿ ತಗ್ಗಿಸಲು ನಿವೃತ್ತಿ ಹೊಂದಿದ 100 ಜನರುಕೆಲಸ ಮಾಡಲು ಮುಂದೆ ಬಂದಿದ್ದಾರೆ. 1,619ಹೊಸ ಸಿಬ್ಬಂದಿ ನೇಮಕಕ್ಕೆ ಅನುಮೋದನೆ ಸಿಕ್ಕಿದೆ. ಈಗಾಗಲೇ 38 ಸಾವಿರ ಅರ್ಜಿಗಳು ಬಂದಿದ್ದು, ಈ ತಿಂಗಳ ಕೊನೆಯಲ್ಲಿ ಅವುಗಳ ಪರಿಶೀಲಿಸಲಾಗುವುದು’ ಎಂದು ಅವರು ತಿಳಿಸಿದರು.

ಬೆಂಗಳೂರು, ಮುಂಬೈ ಮಾರ್ಗವಾಗಿ ಖಾಸಗಿ ಒಡೆತನದ ಟೂರಿಸ್ಟರ್ ಕ್ಯಾರೇಜ್‌ನ 40 ಬಸ್‌ಗಳು ಸಂಚರಿಸುತ್ತವೆ. ಹೊಸ ಬಸ್‌ಗಳು ಬಂದ ಬಳಿಕ ಮೇಲೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಕೋವಿಡ್ ಬಳಿಕ ಪ್ರತಿ ಕಿಲೊ ಮೀಟರ್ ಗಳಿಕೆ(ಇಪಿಕೆಎಂ) ₹ 20ಕ್ಕಿಂತ ಕಡಿಮೆ ಇರುವ ಮಾರ್ಗದಲ್ಲಿ ಎಕ್ಸ್‌ಪ್ರೆಸ್ ಸೇರಿ ಸಾಮಾನ್ಯ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿದ್ದೇವೆ’ ಎಂದರು.

ಚಿಂಚೋಳಿ, ಸೇಡಂ, ಕಮಲಾಪುರ, ಜೇವರ್ಗಿ, ಬೀದರ್‌ನ ಚಿಟಗುಪ್ಪ, ಸೇಡಂ– ಗುರುಮಠಕಲ್, ಆಳಂದ ಸೇರಿ ಇತರೆ ಗ್ರಾಮಗಳಲ್ಲಿ ಹೆಚ್ಚುವರಿ ಬಸ್, ಗಂಜ್ ಮೂಲಕ ಕೇಂದ್ರ ಬಸ್ ನಿಲ್ದಾಣಕ್ಕೆ ಅಧಿಕ ಬಸ್‌ ಓಡಿಸುವಂತೆ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಮನವಿ ಮಾಡಿದರು. ಇದಕ್ಕೆ ಸಕರಾತ್ಮಕವಾದ ಸ್ಪಂದನೆಯೂ ವ್ಯವಸ್ಥಾಪಕರಿಂದ ದೊರೆಯಿತು.

ಫೋನ್‌ ಕರೆಗಳ ಮಹಾಪುರ: ಬರಹದಲ್ಲಿ ಕಳುಹಿಸಲು ಮನವಿ

ಕಲ್ಯಾಣ ಕರ್ನಾಟಕ ಪ್ರದೇಶದ ಸ್ವಾಮೀಜಿಗಳು, ಸಾಹಿತಿಗಳು, ಪೋಷಕರು, ವಿದ್ಯಾರ್ಥಿ–ವಿದ್ಯಾರ್ಥಿನಿಯರು, ಜನಪ್ರತಿನಿಧಿಗಳಿಂದ ಫೋನ್‌ ಕರೆಗಳ ಮಹಾಪುರವೇ ಹರಿದುಬಂತು.

ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಇದ್ದ ಕಾರಣ ವೀಕ್ಷಕರು ತಮ್ಮ ಸಮಸ್ಯೆಗಳನ್ನು ಕಮೆಂಟ್‌ ಮಾಡಿದರು. ಫೋನ್‌ ಕರೆ ಸಿಗದವರು ಎಸ್‌ಎಂಎಸ್‌, ವಾಟ್ಸ್ಆ್ಯಪ್ ಮೂಲಕ ಸಮಸ್ಯೆಗಳನ್ನು ಹೇಳಿಕೊಂಡರು.

ಸಮಸ್ಯೆಗಳ ಗಂಭೀರತೆ ಅರಿತ ಎಂ. ರಾಚಪ್ಪ ಅವರು, ‘ಪ್ರಯಾಣಿಕರಿಂದ ಬಂದ ಪ್ರಶ್ನೆ, ಸಮಸ್ಯೆಗಳನ್ನು ಬರಹದ ರೂಪದಲ್ಲಿ ನಮಗೆ ಕಳುಹಿಸಿ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ‘ಪ್ರಜಾವಾಣಿ’ ಫೋನ್‌ ಇನ್ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದೆ. ಇಂತಹ ಕಾರ್ಯಕ್ರಮದ ಆಶಯಗಳು ವಿಫಲ ಆಗಬಾರದು’ ಎಂದರು.

ಕಾಳಗಿ, ಚಿಂಚೋಳಿ ಭಾಗದಿಂದ ವ್ಯಾಪಕ ಸಮಸ್ಯೆಗಳಿವೆ. ಫೋನ್‌ ಇನ್‌ನಂತಹ ಕಾರ್ಯಕ್ರಮ 15–20 ದಿನಕ್ಕೆ ಒಮ್ಮೆ ಮಾಡಿದರೆ ಜನರ ಸಮಸ್ಯೆಗಳನ್ನು ನೇರವಾಗಿ, ಸರಳವಾಗಿ ತಿಳಿಯಬಹುದು ಎಂದರು.

ಹಟ್ಟಿ ಚಿನ್ನದ ಗಣಿ ಹೊಸ ಡಿಪೊ: ಪರಿಶೀಲನೆ

ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ಪ್ರಯಾಣಿಕರ ದಟ್ಟಣೆ ವ್ಯಾಪಕವಾಗಿದ್ದು, ಇಲ್ಲಿನ ಕಂಪನಿಗಳು ₹10 ಕೋಟಿ ದೇಣಿಗೆ ಕೊಡಲು ಸಿದ್ಧವಾಗಿವೆ. ಹೊಸ ಡಿಪೊ ಸ್ಥಾಪನೆಗೆ ಮುಂದಾಗುತ್ತಿಲ್ಲ ಏಕೆ?

ಹೊಸ ಡಿಪೊ ಸ್ಥಾಪನೆಗೆ ತಾಲ್ಲೂಕು ಕೇಂದ್ರ ಹಾಗೂ ನಗರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದೇವೆ. ಕೆಲವು ತಾಲ್ಲೂಕು ಕೇಂದ್ರಗಳಲ್ಲೇ ಇನ್ನೂ ಸ್ಥಾಪನೆ ಆಗಿಲ್ಲ. ಎರಡು ಡಿಪೊಗಳ ನಡುವಿನ ಅಂತರ ಸುಮಾರು 30 ಕಿ.ಮೀ ಇರಬೇಕು. ಈಗ ಸರ್ಕಾರದ ನಿಯಮಗಳೂ ಬದಲಾಗಿವೆ. ಟಿಕೆಟ್ ಹಣ ಸಂಗ್ರಹ, ಪ್ರಯಾಣಿಕರ ದಟ್ಟಣೆ, ಸರ್ಕಾದ ಮಾರ್ಗಸೂಚಿಗಳನ್ನು ಅಧ್ಯಯನ ಮಾಡಿ, ಡಿಪೊ ಸ್ಥಾಪನೆಯನ್ನು ಪರಿಶೀಲಿಸಲಾಗುವುದು ಎಂದ ರಾಚಪ್ಪ ಅವರು ಭರವಸೆ ನೀಡಿದರು.

ಸಂಚಾರ ನಿಯಂತ್ರಣಾಧಿಕಾರಿ ನಿಯೋಜನೆ

ವಿಜಯನಗರದ ಹೊಸಪೇಟೆ ತಾಲ್ಲೂಕಿನ ಹನುಮನಹಳ್ಳಿ ಗ್ರಾ.ಪಂ ಸದಸ್ಯ ಶ್ರೀಧರ ಕರೆ ಮಾಡಿ, ಸ್ಥಳೀಯ ಸಮಸ್ಯೆಗಳನ್ನು ವಿವರಿಸಿದರು.

ಬೆಂಗಳೂರು–ಹೊಸಪೇಟೆಯ ಮೇಲ್ಸೇತುವೆ ಸಮೀಪದ ಹನುಮನಹಳ್ಳಿಗೆ ಬಸ್‌ಗಳೇ ನಿಲ್ಲುತ್ತಿಲ್ಲ. ನಿತ್ಯ 450 ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳುತ್ತಾರೆ. ಮರೆಮನಹಳ್ಳಿಗೆ 5 ಕಿ.ಮೀ ಮತ್ತು ಹೊಸಪೇಟೆಗೆ 12 ಕಿ.ಮೀ ದೂರ ನಡೆದುಕೊಂಡು, ಇಲ್ಲವೇ ಖಾಸಗಿ ವಾಹನಗಳಲ್ಲಿ ತೆರಳುತ್ತಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಚಪ್ಪ ಅವರು, ‘ತಕ್ಷಣವೇ ಸ್ಥಳೀಯ ಡಿಪೊಗೆ ಸಂಪರ್ಕಿಸಿ ಲಿಖಿತ ಮಾಹಿತಿ ಪಡೆದು, ಸಂಚಾರ ನಿಯಂತ್ರಣಾಧಿಕಾರಿಯನ್ನು ನಿಯೋಜನೆ ಮಾಡಿ ಬಸ್‌ಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಲಾಗುವುದು’ ಎಂದರು.

ಬಸ್ ವಿಳಂಬ ಏಕೆ?

ಕಲಬುರಗಿ– ಬಳ್ಳಾರಿ, ಬೆಂಗಳೂರು ಬಸ್‌ಗಳನ್ನು ಯಡ್ರಾಮಿ, ಹುಣಸಗಿ, ನಾರಾಯಣಪುರ, ಲಿಂಗಸೂಗುರು ಮುಖಾಂತರ ಓಡಿಸುವ ಭರವಸೆ ಕೊಟ್ಟಿದ್ದರು. ಇನ್ನು ಈಡೇರಿಸಿಲ್ಲ ಏಕೆ ಎಂದು ಯಾದಗಿರಿಯ ಸಂಜು ಕುಲಕರ್ಣಿ ಪ್ರಶ್ನಿಸಿದರು.

ಈ ರೀತಿಯಾಗಿ ಸುತ್ತಿ, ಬಳಸಿ ಹೋಗುವುದು ಕಷ್ಟ ಆಗುತ್ತಿದೆ. ಇದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿ, ಖಾಸಗಿ ಬಸ್‌ಗಳಲ್ಲಿ ಹೋಗುವುದಾಗಿ ತಕರಾರು ತೆಗೆಯುತ್ತಿದ್ದಾರೆ. ಹೊಬಳಿ ಮಟ್ಟದಲ್ಲಿ ಖಾಸಗಿ ಹಾಗೂ ಹೊಬಳಿಯಿಂದ ನಗರ, ಪಟ್ಟಣಕ್ಕೆ ಸರ್ಕಾರಿ ಬಸ್ ಸಂಚರಿಸುತ್ತವೆ. ಗ್ರಾಮಗಳ ಜೋಡಣೆಗೆ ಖಾಸಗಿ ಬಸ್‌ಗಳನ್ನು ಬಳಸಬಹುದು. ನಮ್ಮಲ್ಲಿ ಈಗಾಗಲೇ ಬಸ್‌ಗಳ ಕೊರತೆ ಇವೆ. ಈ ಮಾರ್ಗಗಳಲ್ಲಿ ವಾಯ್ ಹೋಗುವ ವ್ಯವಸ್ಥೆ ಮಾಡಲಾಗುವುದು ಎಂದರು.

‘ಕಲ್ಯಾಣ ಕರ್ನಾಟಕದಲ್ಲಿ ಕಲಬುರಗಿ ಬಿಟ್ಟರೆ ಬೇರೆ ಕಡೆ ನಗರ ಸಾರಿಗೆ ವ್ಯವಸ್ಥೆ ಇಲ್ಲ. ಆದರೆ, ನಗರ ಸಭೆಯ ಪ್ರದೇಶದಲ್ಲಿ ಸಾರಿಗೆ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ. ಯಾದಗಿರಿ, ಸುರುಪುರದಂತಹ ನಗರಗಳಿಗೆ ಬಸ್‌ ಸೌಲಭ್ಯ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿ, ನಿರ್ಧರಿಸಲಾಗುವುದು’ ಎಂದರು.

ವಿದ್ಯಾರ್ಥಿಗಳ ಪರವಾಗಿ ಸ್ವಾಮೀಜಿಗಳು ಕರೆ

ಕಲ್ಲ ಹಿಪ್ಪರಗಾದ ರಾಚೋಟೇಶ್ವರ ಸ್ವಾಮೀಜಿ ಕರೆ ಮಾಡಿ, ‘ಕಲ್ಲ ಹಿಪ್ಪರಗಾ, ಬಾಣಮಗಿ, ಸಳಗಿ ಮತ್ತು ಹೇರೂರು ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ಗಳು ಬರುತ್ತಿಲ್ಲ. ಜತೆಗೆ ಬಸ್ ನಿಲ್ದಾಣವೂ ಇಲ್ಲ. ಇದರಿಂದ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ’ ಎಂದರು.

ಇದಕ್ಕೆ ಸ್ಪಂದಿಸಿದ ವ್ಯವಸ್ಥಾಪಕರು, ‘ಸಮಯಕ್ಕೆ ಸರಿಯಾಗಿ ನಿತ್ಯ ಬಸ್‌ಗಳು ಓಡಿಸುವ ವ್ಯವಸ್ಥೆ ಮಾಡಲಾಗುವುದು. ನರೇಗಾ, ಕೆಕೆಆರ್‌ಡಿಬಿ, ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿ ಅನುದಾನದಡಿ ಬಸ್ ನಿಲ್ದಾಣ ನಿರ್ಮಿಸಿಕೊಳ್ಳಬಹುದು. ಈ ಬಗ್ಗೆ ನಾವೇ ಖುದ್ದಾಗಿ ಶಾಸಕರಿಗೆ ಪತ್ರ ಬರೆಯುತ್ತೇವೆ’ ಎಂದರು.

ಜೇವರ್ಗಿಯ ಆಂದೋಲ ಸ್ವಾಮೀಜಿಯೂ ಕರೆ ಮಾಡಿ, ‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಲ್ಲ (ಕೆ) ಗ್ರಾಮಕ್ಕೆ ಬೆಳಿಗ್ಗೆ 8.30 ಹಾಗೂ ಸಂಜೆ 5.30ರ ಅವಧಿಯಲ್ಲಿ ಬಸ್ ಸಂಚವಾಗಲಿ’ ಎಂದರು. ತಕ್ಷಣವೇ ಕ್ರಮ ತೆಗೆದುಕೊಳ್ಳುವ ಆಶ್ವಾಸನೆಯನ್ನು ವ್ಯವಸ್ಥಾಪಕರು ನೀಡಿದರು.


ಕೇಂದ್ರ ಬಸ್ ನಿಲ್ದಾಣದ ಹಿಂಭಾಗದಲ್ಲಿ ಹೊರದ್ವಾರ

‘ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ನಿಲ್ದಾಣದ ಹಿಂಭಾಗದಿಂದ ಹೊರ ದ್ವಾರ ನಿರ್ಮಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಸಾಹಿತಿ ಸಿ.ಎಸ್‌.ಮಾಲಿ ಪಾಟೀಲ ಅವರ ಪ್ರಶ್ನೆಗೆ ರಾಚಪ್ಪ ಅವರು ಉತ್ತರಿಸಿದರು.

‘ನಿಲ್ದಾಣದ ಮುಂದೆ ಆಟೊ, ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿದೆ. ಕಾಯಂ ಆಗಿ ಒಬ್ಬ ಟ್ರಾಫಿಕ್ ಪೊಲೀಸ್ ನಿಯೋಜನೆ ಮಾಡುವಂತೆ ಸಂಚಾರಿ ಪೊಲೀಸರಿಗೆ ಮನವಿ ಮಾಡಲಾಗುವುದು. ನಮ್ಮ ಒಬ್ಬ ಸಿಬ್ಬಂದಿ ಸಿವಿಲ್ ಸಮವಸ್ತ್ರದಲ್ಲಿ ನಿಯೋಜನೆ ಮಾಡಿ ವಾಹನ ದಟ್ಟಣೆ ನಿಯಂತ್ರಿಸಲಾಗುವುದು. ನಿಲ್ದಾಣದ ಸ್ವಚ್ಛತೆಗೂ ಗಮನ ಕೊಡುತ್ತೇವೆ. ಸನ್ನತಿಗೆ ಹೆಚ್ಚುವರಿ ಬಸ್‌ಗಳನ್ನು ಓಡಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಅಭಯ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT