ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮಗಂಟು ರೋಗ; ಆತಂಕ ‍ಪಡಬೇಕಿಲ್ಲ: ಡಾ.ಯಲ್ಲಪ‍್ಪ ಇಂಗಳೆ

ಜಿಲ್ಲೆಯ ಮೂಲೆಮೂಲೆಯಿಂದ ಕರೆ ಮಾಡಿದ ರೈತರು, ಜಾನುವಾರುಗಳ ಸೋಂಕು ನಿವಾರಣೆಗೆ ಇನ್ನಿಲ್ಲದ ಕಾಳಜಿ, ವೈದ್ಯಾಧಿಕಾರಿಗಳಿಂದ ಸೂಕ್ತ ಉತ್ತರ
Last Updated 28 ಸೆಪ್ಟೆಂಬರ್ 2020, 16:01 IST
ಅಕ್ಷರ ಗಾತ್ರ

ಕಲಬುರ್ಗಿ: ಫೋನ್‌ ಇನ್‌ನಲ್ಲಿ ಪಾಲ್ಗೊಂಡ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಹನುಮಂತಪ್ಪ ಅವರು ರೈತರ ಹತ್ತು ಹಲವು ಗೊಂದಲಗಳನ್ನು ದೂರು ಮಾಡಿದರು. ತಮ್ಮ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ ಎಂದು ದೂರಿದ ಕೆಲವು ರೈತರಿಗೆ ತಕ್ಷಣ ಸ್ಪಂದಿಸಿದ ಅವರು, ಸಂಬಂಧಿಸಿದ ತಾಲ್ಲೂಕು ಸಹಾಯಕ ನಿರ್ದೇಶಕರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿದರು. ಮುಖ್ಯ ಪಶು ವೈದ್ಯಾಧಿಕಾರಿ (ತಾಂತ್ರಿಕ) ಡಾ.ಯಲ್ಲಪ‍್ಪ ಇಂಗಳೆ ಕೂಡ ಅವರೊಂದಿಗೆ ನೆರವಾದರು.

ವೈರಸ್‌ನಿಂದ ಹರಡುತ್ತಿರುವ ಚರ್ಮಗಂಟು (ಲುಂಪಿಸ್ಕಿನ್‌) ನಿಯಂತ್ರಣ ಹೇಗೆ? ಕಾಲು– ಬಾಯಿ ಬೇನೆಗೆ ಮುಂಜಾಗೃತಾ ಕ್ರಮಗಳೇನು? ಪಶುಸಂಗೋಪನೆಗೆ ಸರ್ಕಾರದಿಂದ ಇರುವ ಸೌಲಭ್ಯಗಳೇನು? ಯಾವ ಜಾನುವಾರು ಸತ್ತರೆ ಎಷ್ಟು ಪರಿಹಾರ ಸಿಗುತ್ತದೆ... ಇವೇ ಮುಂತಾದ ಪ್ರಶ್ನೆಗಳಿಗೆ ರೈತರು ಉತ್ತರ ಕಂಡುಕೊಂಡರು.

ಆಯ್ದ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

* ಸಂತೋಷ, ಸುಲೇಪೇಟ: ಹೈನುಗಾರಿಕೆ ಮಾಡಲು ಏನಾದರೂ ಆರ್ಥಿಕ ನೆರವು ಇದೆಯೆ?

–ಹೈನೋದ್ಯಮ, ಗೋಶಾಲೆ, ವಿವಿಧ ಕಾರಣಗಳಿಗೆ ಜಾನುವಾರು ಸಾಕಣೆ ಮಾಡುವವರಿಗೆ ಬ್ಯಾಂಕುಗಳಿಂದ ರಿಯಾಯಿತಿ ದರದ ಸಾಲ ಸೌಲಭ್ಯವಿದೆ. ಅಗತ್ಯವಿದ್ದವರು ಆಯಾ ತಾಲ್ಲೂಕು ಸಹಾಯಕ ನಿರ್ದೇಶಕರ ಕಚೇರಿಗೆ ಹೋಗಿ ಹೆಚ್ಚಿನ ಮಾಹಿತಿ ಪಡೆಯಬಹುದು.

* ಮಲ್ಲಿಕಾರ್ಜುನ, ದೇಗಲಮರಡಿ: ಕುರಿಗಳಿಗೆ ರೋಗ ಬಂದಿದೆ ಎಂದು ದೂರು ಹೇಳಿದರೂ ಯಾರೂ ಸಹಾಯಕ್ಕೆ ಬರಿತ್ತಿಲ್ಲ ಏಕೆ?

–ಸಂಬಂಧಿಸಿದವರಿಗೆ ಸೂಚನೆ ನೀಡಿ, ತಕ್ಷಣ ನಿಮ್ಮ ಕುರಿಗಳ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡುತ್ತೇನೆ.

* ಪ್ರಶಾಂತ ರಾಠೋಡ, ಯಡ್ರಾಮಿ: ಸದ್ಯ ತಲೆದೋರಿದ ವೈರಾಣು ಉಪಟಳ ನಿಯಂತ್ರಣ ಹೇಗೆ ಸಾಧ್ಯ?

–ಲುಂಪಿಸ್ಕಿನ್‌ ಕಾಯಿಲೆಯ ವೈರಸ್‌ನಿಂದ ಬರುತ್ತದೆ. ಸೋಂಕಿತ ಜಾನುವಾರುವನ್ನು ಕಚ್ಚಿದ ಸೊಳ್ಳೆ, ಕುಡ್ಡುನೊಣ, ತಿಗಣೆಗಳ ಮೂಲಕ ಒಂದರಿಂದ ಇನ್ನೊಂದು ಪ್ರಾಣಿಗೆ ಹರಡುತ್ತದೆ. ಇದು ಮಾರಣಾಂತಿಕ ಕಾಯಿಲೆ ಅಲ್ಲ. ಮೂರು ಅಥವಾ ನಾಲ್ಕು ದಿನ ಇದ್ದು ಹೋಗುತ್ತದೆ. ಸಮಯಕ್ಕೆ ತಕ್ಕಂತೆ ಔಷಧೋಪಚಾರ ಮಾಡಿ. ಈ ಸೋಂಕು ನಿಯಂತ್ರಣಕ್ಕೆ ಬೇಕಾದಷ್ಟು ಔಷಧಿಗಳು ಸದ್ಯಕ್ಕೆ ಇಲಾಖೆಯಲ್ಲಿ ಇವೆ. ರೈತರು ಚಿಂತಿಸುವ ಅಗತ್ಯವಿಲ್ಲ.

* ವೈಜನಾಥ, ಐನಾಪುರ: ಲುಂಪಿಸ್ಕಿನ್‌ನಿಂದ ಕಂದ ಹಾಕುವ ಸಾಧ್ಯತೆ ಇದೆಯೇ?

–ಪ್ರಾಣಿಗಳು ಏಳೆಂಟು ತಿಂಗಳ ಗರ್ಭ ಧರಿಸಿದ್ದಾಗ ಸೋಂಕು‌ ತಗುಲಿದರೆ ಕಂದ ಹಾಕುವ ಸಾಧ್ಯತೆ ಹೆಚ್ಚು. ಬಹಳಷ್ಟು ಪ್ರಕರಣಗಳಲ್ಲಿ ನಿವಾರಣೆ ಆಗಿದ್ದೂ ಇದೆ. ಜ್ವರ, ಬಾವು ಕಾಣಿಸಿಕೊಂಡ ತಕ್ಷಣ ರೋಗ ನಿರೋಧಕ ಔಷಧಿ ಕೊಡಿಸಿ. ಸೊಳ್ಳೆ, ನೊಣಗಳು ಆಗದಂತೆ ಎಚ್ಚರಿಕೆ ವಹಿಸಿ.

* ದೇವೇಂದ್ರಪ್ಪ ಚಿಂಚೋಳಿ: ಎತ್ತುಗಳಿಗೆ ಬಾಯಲ್ಲಿ ಜೊಲ್ಲು ಬರುತ್ತಿದೆ, ಮೈಮೇಲೆ ಹುಣ್ಣುಗಳಾಗಿವೆ. ಪರಿಹಾರ ಏನು?

–ಕಾಲು– ಬಾಯಿ ಬೇನೆಗೆ ಈಗಾಗಲೇ ಔಷಧೋಪಚಾರ ಮಾಡಲಾಗುತ್ತಿದೆ. ಹತ್ತಿರದ ಪಶು ಚಿಕಿತ್ಸಾಲಯಕ್ಕೆ ಹೋಗಿ ತಪಾಸಣೆ ಮಾಡಿಸಿ. ಇದರ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತದೆ. ಮೈ ಮೇಲೆ ಆದ ಗಾಯಗಳನ್ನು ಸ್ವಚ್ಛವಾಗಿ ತೊಳೆಯಿರಿ. ಒಣಗಿದ ನೆಲದಲ್ಲೇ ಎತ್ತುಗಳನ್ನು ಕಟ್ಟಿ. ಗಾಯಕ್ಕೆ ಹುಳು ಬೀಳದಂತೆ ನೋಡಿಕೊಳ್ಳಿ.

* ಶಿವಶೆಟ್ಟಿ ಪಾಟೀಲ, ತಾ.ಪಂ ಸದಸ್ಯ, ಕಮಲಾಪುರ: ಜಾನುವಾರು ಸತ್ತರೆ ಪರಿಹಾರ ನೀಡುವ ವಿಧಾನಗಳೇನು?

–‍ಪ್ರಸಕ್ತ ವರ್ಷ ಯಾವುದೇ ಜಾನುವಾರ ಸೋಂಕಿನಿಂದ ಸತ್ತರೆ ಪರಿಹಾರ ನೀಡುತ್ತಿಲ್ಲ. ರಾಜ್ಯ ಸರ್ಕಾರವೇ ಇದನ್ನು ನಿಲ್ಲಿಸಿದೆ. ಆದರೆ, ಪ್ರಕೃತಿ ವಿಕೋಪಗಳಾದ ಬರ, ನೆರೆ, ಬೆಂಕಿ ಅವಘಡ ಮುಂತಾದ ಸಂದಭರ್ಗಳಲ್ಲಿ ಸತ್ತರೆ ಅವುಗಳ ಆಧಾರದ ಮೇಲೆ ಪರಿಹಾರ ಸಿಗುತ್ತದೆ. ಈ ಪಾರಿಹಾರವನ್ನು ಕಂದಾಯ ಇಲಾಖೆ ನೀಡುತ್ತದೆ. ಪಶು ಸೇವಾ ಇಲಾಖೆ ಅದರ ಪರಿಶೀಲನೆ, ಮೌಲ್ಯಮಾಪನ ಮಾತ್ರ ಮಾಡುತ್ತದೆ.

‌* ಸಂಗನಗೌಡ ಅಂಬರಖೇಡ, ಯಡ್ರಾಮಿ: ಎರಡು ಜೋಡಿ ಎತ್ತುಗಳನ್ನು ಖರೀದಿಸಿದ ವಾರಕ್ಕೇ ಸೋಂಕು ತಗುಲಿದೆ. ವೈದ್ಯರು ಔಷಧಿ ನೀಡುವ ಬದಲು ಅಂಗಡಿಯಲ್ಲಿ ಖರೀದಿಸಲು ಬರೆದುಕೊಡುತ್ತಿದ್ದಾರೆ. ಹೀಗಾದರೆ ರೈತರ ಪಾಡೇನು?

–ಜಿಲ್ಲೆಯಲ್ಲಿ ತಕ್ಕಷ್ಟು ಔಷಧ ದಾಸ್ತಾನು ಇದೆ. ಎಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆಯೋ ಅಲ್ಲಿ ಹೆಚ್ಚುವರಿ ಔಷಧ ತರಿಸಲಾಗುವುದು. ಇಲಾಖೆಯಲ್ಲಿ ಸಿಗದಿದ್ದವನ್ನು ಮಾತ್ರ ಬರೆದುಕೊಡಬೇಕು ಎಂದು ವೈದ್ಯರಿಗೆ ಸೂಚಿಸಿದ್ದೇವೆ. ಸರ್ಕಾರಿ ಔಷಧಕ್ಕೆ ಬಿಡಿಗಾಸೂ ಕೊಡಬೇಕಿಲ್ಲ.‌ ಕಳೆದ ಆರು ತಿಂಗಳಿಂದ ಕೋವಿಡ್‌ ಕಾರಣ ಔಷಧಗಳು ಪೂರೈಕೆ ಆಗಿಲ್ಲ. ಈಗ ಏಕಾಏಕಿ ಪ್ರಾಣಿಗಳಿಗೂ ವೈರಾಣು ಹರಡಿದ್ದರಿಂದ ಬೇಡಿಕೆ ಕೂಡ ಮೂರುಪಟ್ಟು ಹೆಚ್ಚಾಗಿದೆ. ಹಾಗಾಗಿ, ಕೆಲವು ಕಡೆ ಸಮಸ್ಯೆ ತಲೆದೋರಿರಬಹುದು. ಅಂಥ ರೈತರು ಇಲಾಖೆಯಲ್ಲಿ ಸಂಪರ್ಕಿಸಿದರೆ ತಕ್ಷಣ ಸಮಸ್ಯೆ ಬಗೆಹರಿಸುತ್ತೇವೆ.

* ಶ್ರೀಕಾಂತ ಬಿರಾದಾರ, ಕಮಲಾನಗರ: ಹೈನುಗಾರಿಕೆಗೆ ಉತ್ತೇಜನ ನೀಡಲು ಯಾವ ಕ್ರಮ ಕೈಗೊಂಡಿದ್ದೀರಿ?

-ಜಿಲ್ಲೆಯ 3 ಸಾವಿರ ಆಸಕ್ತರಿಗೆ ತರಬೇತಿ ಕೊಟ್ಟಿದ್ದೇವೆ. ನಬಾರ್ಡ್ ಸೇರಿದಂತೆ ಹಲವು ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರಿಗೆ ಜಾನುವಾರುಗಳನ್ನು ಖರೀದಿಸಲು ಸಾಲವನ್ನು ನೀಡಲಾಗಿದೆ. ಇಲಾಖೆಯಲ್ಲಿ ವಿವಿಧ ಯೋಜನೆಗಳಿವೆ. ಪ್ರಸಕ್ತ ವರ್ಷ ಕೆಲ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ಹಂಚಿಕೆಯಾದರೆ ಮತ್ತೆ ಯೋಜನೆಗಳು ಮುಂದುವರಿಯಲಿವೆ.

* ಸಾಹೇಬಗೌಡ ಯಡ್ರಾಮಿ:ಯಡ್ರಾಮಿ ತಾಲ್ಲೂಕಾಗಿ ಘೋಷಣೆಯಾದರೂ ಪಶು ಆಸ್ಪತ್ರೆಗಳು ಸಮರ್ಪಕವಾಗಿಲ್ಲ. ಈ ಬಗ್ಗೆ ಗಮನ ಹರಿಸಿ.

-ಜಿಲ್ಲೆಯಲ್ಲಿ 214 ಪಶು ಆಸ್ಪತ್ರೆಗಳಿವೆ. ಆದರೆ, ಅರ್ಧಕ್ಕರ್ಧ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಇದ್ದ ಸಿಬ್ಬಂದಿಯಲ್ಲೇ ಎಲ್ಲ ತಾಲ್ಲೂಕುಗಳನ್ನು ಸಂಭಾಳಿಸಬೇಕಿದೆ. ಹುದ್ದೆ ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಪ್ರಸ್ತುತ ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಸೇವೆ ನೀಡುತ್ತಿದ್ದೇವೆ. ಯಾವ ಊರಿನಲ್ಲಿ ಜಾನುವಾರುಗಳಿಗೆ ಹೆಚ್ಚು ಸಮಸ್ಯೆ ಇದೆ ಎಂದು ತಿಳಿಸಿದರೆ ಅಲ್ಲಿಗೆ ವೈದ್ಯರನ್ನು ಕಳಿಸಿಕೊಡುತ್ತೇವೆ.

* ಸಿದ್ದು ಪಾಂಚಾಳ, ವಾಡಿ:ಬಳವರ್ಗಿ ಗ್ರಾಮದಲ್ಲಿ ಇತ್ತೀಚೆಗೆ ನನ್ನ 30 ಕುರಿ ಮರಿಗಳು ಸೇರಿದಂತೆ ಒಟ್ಟಾರೆ 200 ಕುರಿಗಳು ಸತ್ತು ಹೋದವು. ಕಾರಣ ಏನೆಂಬುದು ಗೊತ್ತಾಗಲಿಲ್ಲ.

-ಈ ಬಗ್ಗೆ ಚಿತ್ತಾಪುರ ತಾಲ್ಲೂಕು ಪಶು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆಯುವೆ. ಅವರು ಕುರಿ ಮರಿಗಳ ಮರಣೋತ್ತರ ಪರೀಕ್ಷೆ ವರದಿ ಮಾಡಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವೆ.

* ಶಿವಯೋಗಿ ನಾಟೇಕಾರ, ಸನ್ನತಿ:ಸನ್ನತಿಯಲ್ಲಿ ಪಶು ಆಸ್ಪತ್ರೆಯನ್ನು ಆರಂಭಿಸಬೇಕು. ಇದರಿಂದ ಊರಿನ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯಲಿದೆ

-ಗ್ರಾಮದ ಸುತ್ತಮುತ್ತಲೂ 5 ಕಿ.ಮೀ. ಅಂತರದಲ್ಲಿ ಆಸ್ಪತ್ರೆ ಇಲ್ಲದಿದ್ದರೆ ಪಶು ಆಸ್ಪತ್ರೆಯನ್ನು ಆರಂಭಿಸಲು ಅವಕಾಶವಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ.

* ಮಳೆಗಾಲದಲ್ಲಿ ಬರುವ ಸಾಮಾನ್ಯ ರೋಗಗಳು ಯಾವುವು?

1)ಚಪ್ಪೆರೋಗ: ಬ್ಯಾಕ್ಟೀರಿಯಾ ರೋಗ. ದನ, ಎಮ್ಮೆ, ಆಡು, ಮೇಕೆಗೆ ಬರುತ್ತದೆ.

2) ಗಂಟಲು ಬೇನೆರೋಗ: ಬ್ಯಾಕ್ಟೀರಿಯಾ ರೋಗವಾಗಿದ್ದು, ದನ ಎಮ್ಮೆ ಆಡು, ಮೇಕೆ ಮತ್ತು ಹಂದಿಗಳಲ್ಲಿ ಕಂಡುಬರುತ್ತದೆ.

3) ಕರಳು ಬೇನೆ: ಬ್ಯಾಕ್ಟೀರಿಯಾ ರೋಗ. ಆಡು, ಮೇಕೆಗೆ ಬರುತ್ತದೆ.

4) ನೆರಡಿ ರೋಗ: ಇದು ಕೂಡ ಬ್ಯಾಕ್ಟೀರಿಯಾ ರೋಗ. ಆಡು, ಮೇಕೆಳಿಗೆ ಬರುತ್ತದೆ.‌

5) ಪಿಪಿಆರ್: ಇದು ವೈರಸ್‌ನಿಂದ ಬರುವ ರೋಗ. ಆಡು, ಮೇಕೆಗಳಲ್ಲಿ ಕಾಣುತ್ತದೆ.

ಈ ಮೇಲಿನ ಎಲ್ಲ ರೋಗಗಳಿಗೂ ಜಿಲ್ಲೆಯಲ್ಲಿ ಸಾಕಷ್ಟು ಲಸಿಕೆ ಲಭ್ಯವಿದೆ.

ಚರ್ಮಗಂಟು ರೋಗ; ಇಲ್ಲಿವೆ ಪರಿಹಾರ

* ‘ಕ್ಯಾಪ್ರಿ ಪಾಕಸ್‌’ ವೈರಸ್‍ನಿಂದ ಬರುವ ಈ ರೋಗವು ಎತ್ತು, ಆಕಳು, ಎಮ್ಮೆ ಮತ್ತು ಕರುಗಳಲ್ಲಿ ಮಾತ್ರ ಕಾಣಿಸುತ್ತದೆ. ಈ ವೈರಾಣು ನೊಣ, ಸೊಳ್ಳೆ ಹಾಗೂ ಉಣ್ಣೆ ಕಚ್ಚುವ ಮೂಲಕ ಒಂದು ಜಾನುವಾರದಿಂದ ಇನ್ನೊಂದು ಜಾನುವಾರಕ್ಕೆ ಹರಡುತ್ತದೆ.

* ಲುಂಪಿಸ್ಕಿನ್ ಡಿಸೀಸ್ ಬಂದಿರುವ ಜಾನುವಾರುಗಳನ್ನು ಉಳಿದ ಆರೋಗ್ಯವಂತಹ ಜಾನುವಾರುಗಳಿಂದ ಬೇರ್ಪಡಿಸಬೇಕು.

* ಎಲ್ಲ ಜಾನುವಾರುಗಳ ಮೈಗೆ ಬೇವಿನ ಎಣ್ಣೆ ಸವರಬೇಕು. ಇದರಿಂದ ಸೋಂಕು ಹರಡುವುದಿಲ್ಲ.

* ಜಾನುವಾರುಗಳ ಮೈಮೇಲೆ ಚಿಕ್ಕಚಿಕ್ಕ ಗಡ್ಡೆಗಳು ಕಾಣಿಸಿಕೊಂಡಿದ್ದರೆ, ದನದ ಕೊಟ್ಟಿಗೆಯಲ್ಲಿ ಕಟ್ಟದೇ ಹೊರಗಡೆ ಕಟ್ಟಬೇಕು.

* ನೊಣ, ಸೊಳ್ಳೆ ಹಾಗೂ ಉಣ್ಣೆಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು.

* ನೊಣ ಹಾಗೂ ಸೊಳ್ಳೆಗಳು ಬೆಳಗಿನ ಜಾವ ಹಾಗೂ ಸಾಯಂಕಾಲದ ಸಮಯದಲ್ಲಿ ಜಾನುವಾರಗಳಿಗೆ ಅತೀಯಾಗಿ ಕಚ್ಚುತ್ತವೆ. ಹೀಗಾಗಿ ದಪ್ಪನೆಯ ಸೊಳ್ಳೆಯ ಪರದೆಯ ಒಳಗಡೆ ಜಾನುವಾರುಗಳನ್ನು ಕಟ್ಟಬೇಕು. ನಂತರ ಬೇವಿನ ಎಲೆಗಳ ಹೊಗೆಯಿಂದ ಸೊಳ್ಳೆಗಳ ಕಡಿತವನ್ನು ನಿಯಂತ್ರಿಸಬೇಕು.

* ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಜಾನುವಾರುಗಳ ಚಲನೆಯನ್ನು ನಿರ್ಬಂಧಿಸಬೇಕು.

* ರೋಗ ಬಂದ ಪ್ರದೇಶದಿಂದ ಯಾವುದೇ ಜಾನುವಾರುಗಳ ಮಾರಾಟ ಮಾಡುವುದನ್ನು ನಿರ್ಬಂಧಿಸಬೇಕು.

* ಜಾನುವಾರುಗಳನ್ನು ಕಟ್ಟುವ ಜಾಗ, ಹಗ್ಗ, ಸರಪಳಿ ಅಥವಾ ಇತ್ಯಾದಿ ವಸ್ತುಗಳನ್ನು ಕ್ರಿಮಿನಾಶಕಗಳಾದ ಈಥರ್ (ಶೇ 20), ಕ್ಲೋರೊಫಾರ್ಮ್‌ (ಶೇ 1), ಫಾರ್ಮಲಿನ್ (ಶೇ 1) ಅಥವಾ ಫಿನಾಲ್ (ಶೇ 2)ನಿಂದ ಸ್ವಚ್ಛಗೊಳಿಸಬೇಕು.

* ಎಲ್ಲದಕ್ಕಿಂತ ಮುಖ್ಯವಾಗಿ, ಜಾನುವಾರುಗಳಲ್ಲಿ ಮುದ್ದೆರೋಗದ ಲಕ್ಷಣಗಳು ಕಂಡಕೂಡಲೇ ಪಶು ವೈದ್ಯಾಧಿಕಾರಿಗಳ ಗಮನಕ್ಕೆ ತಂದುಚಿಕಿತ್ಸೆ ಕೊಡಿಸಬೇಕು.

ಬಾಕ್ಸ್–2

ಅಧಿಕಾರಿಗಳನ್ನು ಸಂಪರ್ಕಿಸಿ...

ಕಲಬುರ್ಗಿ ಕಚೇರಿ;08472 278627

ಉಪ ನಿರ್ದೇಶಕರು;9141010232

ತಾಲ್ಲೂಕು ಸಹಾಯಕ ನಿರ್ದೇಶಕರು

ಆಳಂದ;ಡಾ.ಸಂಜಯ ರೆಡ್ಡಿ;9448651345

ಅಫಜಲಪುರ;ಡಾ.ಮಲ್ಲಪ್ಪ ಗಂಗನಳ್ಳಿ;9901616585

ಚಿಂಚೋಳಿ;ಡಾ.ಧನರಾಜ ಬೋಮ್ಮ;9480688595

ಚಿತ್ತಾಪುರ;ಡಾ.ಬಸಲಿಂಗಪ್ಪ ಡಿಗ್ಗಿ;9590709252

ಕಲಬುರ್ಗಿ;ಡಾ.ಬಸೆಟ್ಟಪ್ಪ ಪಾಟೀಲ;8310819040

ಜೇವರ್ಗಿ;ಡಾ.ರಾಜು ದೇಶಮುಖ;9880492380

ಸೇಡಂ;ಡಾ.ಮಾರುತಿ ನಾಯಕ;9449618724

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT