ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು; ತೆರೆಯ ಹಿಂದಿನ ಸಮಾಜ ಸೇವಕಿ ಮಾಲಿನಿ

Last Updated 1 ಜನವರಿ 2022, 10:49 IST
ಅಕ್ಷರ ಗಾತ್ರ

ಕಲಬುರಗಿ: ಕೆಪಿಟಿಸಿಎಲ್‌ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿರುವ ಮಾಲಿನಿ ಬುಕ್ಕೆಗಾರ ಅವರು, ಕಳೆದ ಒಂದು ದಶಕದಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ತಮ್ಮ ಸಂಬಳದಲ್ಲಿನ ಒಂದಿಷ್ಟು ಹಣವನ್ನು ಅವರು ಸಮಾಜದ ಕೆಲಸಕ್ಕಾಗಿಯೇ ವಿನಿಯೋಗಿಸುತ್ತಾರೆ. ಆದರೆ, ಪ್ರಚಾರ ಬಯಸದೇ, ತೆರೆಯ ಹಿಂದೆಯೇ ನಿಂತು ಸಹಾಯ ಮಾಡುವುದು ಅವರ ವಿಶೇಷ ಗುಣ.

ಚಿತ್ತಾಪುರದಲ್ಲಿ ಹುಟ್ಟಿ ಬೆಳೆದ ಮಾಲಿನಿ ಅವರು ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದ್ದಾರೆ. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯಲ್ಲಿ ಶಿಕ್ಷಣ ಮುಗಿಸಿದ್ದಾರೆ. ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ನಂತರ 2003ರಲ್ಲಿ ಜೆಸ್ಕಾಂನಲ್ಲಿ ಸೇವೆಗೆ ಸೇರಿದರು. ಒಂಬತ್ತು ವರ್ಷ ಜೆಸ್ಕಾಂನಲ್ಲಿ ಕೆಲಸ ಮಾಡಿದ ನಂತರ ಈಗ ಕಳೆದ ಒಂಬತ್ತು ವರ್ಷಗಳಿಂದ ಕೆಪಿಟಿಸಿಎಲ್‌ನಲ್ಲಿದ್ದಾರೆ. ಅವರ ಪತಿ ಶಿವಕುಮಾರ್‌ ಕೂಡ ಇದೇ ಕಚೇರಿಯಲ್ಲಿ ಎಂಜಿನಿಯರ್‌.

ಸಮಾಜ ಸೇವೆ ಮಾಡುವ ಗುಣ ಅವರಿಗೆ ತಾತನ ಪ್ರೇರಣೆಯಿಂದ ಬಂದಿದೆ. ಕೃಷಿಕರಾದ ಅವರ ತಾತ ಕೂಡ ಹಳ್ಳಿ ಜನರ ಸೇವೆಗೆ ಹೆಸರಾದವರು. ಸರ್ಕಾರಿ ಶಾಲೆ ಶಿಕ್ಷಕರಾಗಿದ್ದ ತಂದೆ ಹಾಗೂ ತಾಯಿ ಕೂಡ ಬಡ ಮಕ್ಕಳ ನೆರವಿಗೆ ನಿಂತವರು. ಅದನ್ನು ನೋಡಿಕೊಂಡು ಬೆಳೆದ ಮಾಲಿನಿ ಕೂಡ ತಮ್ಮ ವೃತ್ತಿಗೆ ಸೇರಿದ ದಿನದಿಂದ ಅಸಹಾಯಕರಿಗೆ ನೆರವಾಗುತ್ತಿದ್ದಾರೆ.

ಸಂಕಲ್ಪ, ನಾಲ್ಕುಚಕ್ರ, ನೆರವು ಸೇರಿದಂತೆ ಹಲವು ಸಾಮಾಜಿಕ ಸಂಘಟನೆಗಳು, ಎನ್‌ಜಿಒಗಳೊಂದಿಗೂ ಅವರು ಕೈಜೋಡಿಸಿದ್ದಾರೆ. ಸಮಾಜ ಸೇವೆ, ಜಾಗೃತಿ ಕಾರ್ಯಕ್ರಮಗಳಿಗೆ ಬೇಕಾದ ಆರ್ಥಿಕ ಸಹಾಯ ಮಾಡುತ್ತಾರೆ. ಪರಿಸರ ಸಂರಕ್ಷಣೆ, ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮ
ಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬಂದಿದ್ದಾರೆ. ಮನೆಯಲ್ಲಿ ಮಹಿಳೆಯರಿಗೆ ಉಚಿತ ಯೋಗ ತರಬೇತಿ, ಕಚೇರಿಯಲ್ಲಿ ಸಿಬ್ಬಂದಿಗೆ ಉಚಿತ ಫಿಟ್‌ನೆಸ್‌ ತರಬೇತಿ ನೀಡುವುದು ಅವರ ಎಂದಿನ ರೂಢಿ.

ಜೈಪುರದ ನಾರಾಯಣ ಸೇವಾ ಸಂಸ್ಥಾನವು ಪ್ರತಿ ವರ್ಷ ಅಂಗವಿಕಲರ ಉಚಿತ ಶಸ್ತ್ರಚಿಕಿತ್ಸೆ ಮಾಡುತ್ತದೆ. ಅದರಲ್ಲಿ ಐದು ಮಕ್ಕಳ ಶಸ್ತ್ರಚಿಕಿತ್ಸೆಗೆ ದೇಣಿಗೆ ಕಳುಹಿಸುತ್ತಾರೆ. ಅವರ ತಂದೆ– ತಾಯಿ ನಡೆಸಿಕೊಂಡು ಬಂದಿದ್ದ ಜಿಲ್ಲೆಯ ವಿವಿಧ ಧಾರ್ಮಿಕ ಕಾರ್ಯಕ್ರಮ, ಗೋ ಸೇವೆ, ಅನ್ನ
ಸಂತರ್ಪಣೆಗೂ ಹಣಕಾಸಿನ ನೆರವು ನೀಡುತ್ತಾರೆ.ಲಾಕ್‌ಡೌನ್‌ ಹಾಗೂ ಪ್ರವಾಹದ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದವರ ನೆರವಿಗೂ ಧಾವಿಸಿದರು. ಬಡ ಮಕ್ಕಳ ಬಸ್‌ಪಾಸ್‌, ಶಾಲಾ– ಕಾಲೇಜು ಶುಲ್ಕ ಭರಿಸುವುದು ಸೇರಿದಂತೆ ಯಾರಿಗೂ ಗೊತ್ತಿಲ್ಲದಂತೆ ಅವರು ನೆರವು ನೀಡುತ್ತ ಬಂದಿದ್ದಾರೆ.

ಮಾಲಿನಿ ಅವರ ಸಹೋದರಿ ಕೂಡ ಯೋಗಪಟು. ಇಬ್ಬರೂ ಸೇರಿಕೊಂಡು ಕಲಬುರಗಿಯಲ್ಲಿ ಉಚಿತ ಯೋಗ ಹಾಗೂ ಫಿಟ್‌ನೆಸ್‌ ತರಬೇತಿ ಕೇಂದ್ರ ತೆರೆಯಬೇಕು, ನಿರಾಶ್ರಿತರು ತಂಗಲು ಒಂದು ಆಶ್ರಯಧಾಮ ಕಟ್ಟಬೇಕು ಎಂಬ ಕನಸು ಅವರದು. ಏನೆಲ್ಲ ಮಾಡಿದ ಮೇಲೂ ಅವರು ಸಭೆ, ಸಮಾರಂಭ, ಸನ್ಮಾನ ಮುಂತಾದ ವೇದಿಕೆಗಳಲ್ಲಿ ಕಾಣಿಸಿಕೊಂಡವರಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT