ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತಪತ್ರ ಹೊರಡಿಸಲು ಪ್ರಿಯಾಂಕ್‌ ಆಗ್ರಹ

ಆರ್ಥಿಕ ದಿವಾಳಿಯತ್ತ ನಡೆದ ರಾಜ್ಯ ಸರ್ಕಾರ, ನೌರರ ಸಂಬಳವೂ ಇಲ್ಲ, ಸಂತ್ರಸ್ತರ ಪರಿಹಾರವೂ ಇಲ್ಲ
Last Updated 3 ಡಿಸೆಂಬರ್ 2020, 13:26 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ನೌಕರರ ಸಂಬಳ ಹಾಗೂ ಸಂತ್ರಸ್ತರ ಪರಿಹಾರ ಕೊಡಲು ಆಗದ ಸ್ಥಿತಿ ತಲುಪಿದೆ. ಆದರೂ ಸಚಿವರುಗಳು ಬೇಕಾಬಿಟ್ಟಿ ಹೇಳಿಕೆ ನೀಡುವ ಚಟ ಮಾತ್ರ ಬಿಟ್ಟಿಲ್ಲ. ರಾಜ್ಯದ ಜನರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಸರ್ಕಾರ ಈ ಕೂಡಲೇ ಶ್ವೇತಪತ್ರ ಹೊರಡಿಸಬೇಕು’ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

‘ಈಗಾಗಲೇ ₹ 33 ಸಾವಿರ ಕೋಟಿ ಸಾಲ ಮಾಡಲು ಸರ್ಕಾರ ನಿರ್ಧರಿಸಿದೆ. ಇಂಥ ಶೋಚನೀಯ ಸ್ಥಿತಿ ತಲುಪಿದ ಮೇಲೂ, ಉಪಮುಖ್ಯಮಂತ್ರಿ ಅಶ್ವಥನಾರಾಯಣ ಅವರು ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ₹ 1.5 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಹಾಗಾದರೆ, ರಾಜ್ಯದಲ್ಲಿರುವ 6000 ಪಂಚಾಯಿತಿಗಳಿಗೆ ಬೇಕಾಗುವ ₹ 9000 ಕೋಟಿ ಹಣವನ್ನು ಎಲ್ಲಿಂದ ತರುತ್ತಾರೆ? ಹೇಳಿಕೆ ನೀಡುವ ಮುನ್ನ ವಿವೇಚನೆ ಬಳಸಬೇಕು’ ಎಂದೂ ಅವರು ನಗರದಲ್ಲಿ ಗುರುವರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಸಾರಿಗೆ ಸಂಸ್ಥೆ, ಆರೋಗ್ಯ ಇಲಾಖೆಗಳೂ ಸೇರಿಂದತೆ ಬಹುಪಾಲು ಎಲ್ಲ ಇಲಾಖೆಗಳ ನಿವೃತ್ತ ನೌಕರರಿಗೆ ಪಿಂಚಣಿ, ಸಾಲದ ಮೇಲಿನ ಬಡ್ಡಿ ಕಟ್ಟಲೂ ಹಣವಿಲ್ಲ. 14,500 ಅತಿಥಿ ಉಪನ್ಯಾಸಕರಿಗೆ ಮಾರ್ಚ್‌ನಿಂದ ಸಂಬಳ ಕೊಟ್ಟಿಲ್ಲ ಅವರು ಸ್ಥಿತಿ ಚಿಂತಾಜನಕವಾಗಿದೆ. ಸುಮಾರು 428 ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 1000ಕ್ಕೂ ಅತಿಥಿ ಉಪ ನ್ಯಾಸಕರ ಕಾಯಂ ಮಾಡುವ ಕುರಿತು ಯಾವುದೇ ಸ್ಪಷ್ಟ ನಿರ್ಧಾರವಿಲ್ಲ’ ಎಂದರು.

ಕೇಂದ್ರದಿಂದ ಮಲತಾಯಿ ಧೋರಣೆ: ‘ಕೇಂದ್ರ ಸರ್ಕಾರವು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಮುಂದುವರಿಸಿದೆ. ಜಿಎಸ್‌ಟಿ ಪರಿಹಾರವಾಗಿ ನೀಡಬೇಕಾದ ₹ 3 ಸಾವಿರ ಕೋಟಿ, 2019-20ರ ಆಯವ್ಯಯ ಪರಿಷ್ಕೃತ ವರದಿಯಂತೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ₹ 2,877 ಕೋಟಿ ಅನುದಾನ‌ ಕಡಿತಗೊಳಿಸಲಾಗಿದೆ. ‘ರಾಜ್ಯದಿಂದ ₹ 100 ತೆರಿಗೆ ಸಂಗ್ರಹಿಸಿ‌ ಕೊಟ್ಟರೆ ಅದಕ್ಕೆ‌ ಪತ್ರಿಯಾಗಿ ಕೇಂದ್ರವು 15ನೇ ಹಣಕಾಸು ಆಯೋಗದ ನಿಯಮದಂತೆ ₹ 27 ಮಾತ್ರ ಬಿಡುಗಡೆ ಮಾಡುತ್ತದೆ. ಆದರೆ, ಉತ್ತರಪ್ರದೇಶಕ್ಕೆ ₹ 200, ಬಿಹಾರಕ್ಕೆ‌ ₹ 350, ತಮಿಳುನಾಡಿಗೆ ₹ 34 ಬಿಡುಗಡೆ ಮಾಡುತ್ತಿದೆ. ಇದರಿಂದ ಮಲತಾಯಿ ಧೋರಣೆ ತಾಳಿದ್ದು ಸ್ಪಷ್ಟವಾಗುತ್ತದೆ’ ಎಂದು ಹೇಳಿದರು.

‌‘ಪರಿಸ್ಥಿತಿ ಹೀಗೇ ಮುಂದುವರಿದರತೆ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ₹ 60 ಸಾವಿರ ಕೋಟಿ ಅನುದಾನ ಕಳೆದುಕೊಳ್ಳಲಿದೆ. ಇದನ್ನು ಸ್ವತಃ‌ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಬಿಜೆಪಿ ಸರ್ಕಾರಗಳು ಕನ್ನಡಿಗರಿಗೆ ಮಾಡುತ್ತಿರುವ ಬಹುದೊಡ್ಡ ಅನ್ಯಾಯ ಇದು. ಇದನ್ನು ಪ್ರಶ್ನಿಸಬೇಕಿರುವ ನಮ್ಮ ಸಂಸದರು ದೆಹಲಿಯ ಚಾಂದನಿ ಚೌಕ್‌ನಲ್ಲಿ ಚಾಟ್ ತಿನ್ನುತ್ತ ಕಾಲ ಕಳೆಯುತ್ತಿದ್ದಾರೆ’ ಎಂದೂ ಪ್ರಿಯಾಂಕ್‌ ಲೇವಡಿ ಮಾಡಿದರು.

ಕಲಬುರಗಿ ಜಿಲ್ಲೆಯನ್ನು ಯಾರೂ ಕೇಳುವವರೇ ಇಲ್ಲದಾಗಿದೆ. ಉಸ್ತುವಾರಿ‌ ಸಚಿವರು ಈ ಕಡೆ‌ ಸುಳಿದೇ ಇಲ್ಲ. ಆದರೆ,ಶಿರಾ ಉಪಚುನಾವಣೆಯಲ್ಲಿ ಭಾಗವಹಿಸಿದ್ದರು ಮುಂದೆ ಬರುವ ಬಸವಕಲ್ಯಾಣ ಉಪಚುನಾವಣೆಯಲ್ಲಿಯೂ ಭಾಗವಹಿಸಲಿದ್ದಾರೆ ಆದರೆ ಜಿಲ್ಲೆಯಲ್ಲಿ ಆದ ಪ್ರವಾಹ ಸ್ಥಿತಿಗತಿ ಅರಿತುಕೊಳ್ಳುವ ಸಲುವಾಗಿ ಅಧಿಕಾರಿಗಳ ಸಭೆ ನಡೆಸಿ‌ ಸ್ಥಳ ವೀಕ್ಷಣೆ ಮಾಡಲು ಸಮಯವಿಲ್ಲ ಎಂದು ಟೀಕಿಸಿದರು.

‘ಪ್ರಧಾನಿ ಮೋದಿ ‘ಒಂದು ರಾಷ್ಟ್ರ– ಒಂದು‌ ಚುನಾವಣೆ’ ಎಂದು‌ ಹೇಳುತ್ತಾರೆ. ಆದರೆ‌, ಎಲ್ಲೆಂದರಲ್ಲಿ ಸರ್ಕಾರ ಬೀಳಿಸುವುದು, ಉಪಚುನಾವಣೆ ನಡೆಸುವುದರಲ್ಲೇ ಕ್ರಿಯಾಶೀಲರಾಗಿದ್ದಾರೆ. ಒಂದು ಚುನಾವಣೆ ಸಾವಿರಾರು ಸುಳ್ಳು ಎಂಬುದು ಅವರ ಘೋಷಣೆಯಾಗಿದೆ.

ಟ್ರೇನಿಂಗ್‌ ಪಡೆಯದ ವಿಶ್ವನಾಥ: ‘ಆಪರೇಷನ್ ಕಮಲಕ್ಕೆ ಒಳಗಾಗಿ ಲಾಭ ಮಾಡಿಕೊಂಡ ನಮ್ಮ‌ ಜಿಲ್ಲೆಯ ‘ನಾಯಕರ’ ಬಳಿ ಎಚ್‌.ವಿಶ್ವನಾಥ ಅವರು ತರಬೇತಿ ತೆಗೆದುಕೊಳ್ಳಬೇಕಿತ್ತು. ಎಲ್ಲಿ, ಹೇಗೆ ‘ಸೂಟ್‌ಕೇಸ್’ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಅವರು ತಿಳಿದುಕೊಳ್ಳಬಹುದಿತ್ತು’ ಎಂದು ಪ್ರಿಯಾಂಕ್‌ ಪ್ರಶ್ನೆಯೊಂದಕ್ಕೆ ಸೂಚ್ಯವಾಗಿ ಉತ್ತರಿಸಿದರು.‌

ಜಿಲ್ಲಾ ಜಿಲ್ಲಾ ಘಟಕದ ಜಗದೇವ ಗುತ್ತೇದಾರ, ಮುಖಂಡರಾದ ವಿಜಯಕುಮಾರ ಜಿ. ರಾಮಕೃಷ್ಣ ಇದ್ದರು.

‌‘ಮೊಳಕಾಲ್ಮೂರು ಸೇರ್ಪಡೆಗೆ ವಿರೋಧ’

ಕಲಬುರ್ಗಿ: ‘ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕನ್ನು 371(ಜೆ) ಅಡಿಗೆ ಸೇರುವ ಸಚಿವ ಶ್ರೀರಾಮುಲು ಅವರ ಹೇಳಿಕೆ ಸರಿಯಲ್ಲ. ಈ ಭಾಗದ ಜನರ ಅವಿರತ ಹೋರಾಟ ಹಾಗೂ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರ್ಮಸಿಂಗ್ ಅವರ ಮುತುವರ್ಜಿಯಿಂದಾಗಿ ಸಂವಿಧಾನದ ವಿಧಿ 371ಕ್ಕೆ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕ ಭಾಗವನ್ನು ಸೇರಿಸಿ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ಈಗ ಸಚಿವರಾದ ಶ್ರೀರಾಮುಲು ತಮ್ಮ ಕ್ಷೇತ್ರವನ್ನು ಈ ವ್ಯಾಪ್ತಿಗೆ ಸೇರಿಸುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಪ್ರಬಲ ವಿರೋಧವಿದೆ’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಸ್ಪಷ್ಟಪಡಿಸಿದರು.

‘ನಿಜಾಮನ ಆಡಳಿತಕ್ಕೆ ಒಳಪಟ್ಟ ಹೈದರಾಬಾದ್‌ ಕರ್ನಾಟಕ ಭಾಗದ‌ ಐತಿಹಾಸಿಕ ಹಾಗೂ ಭೌಗೋಳಿಕ ಅರಿವಿರದ ಸಚಿವರು ಈ ರೀತಿ ಹೇಳಿದ್ದಾರೆ. ಮೈಸೂರು ಪ್ರಾಂತ್ಯದ ಚಿತ್ರದುರ್ಗ ಪಾಳೆಗಾರರ ಆಳ್ವಿಕೆಗೆ ಒಳಪಟ್ಟಿದ್ದ ಮೊಳಕಾಲ್ಮೂರು ತಾಲ್ಲೂಕನ್ನು 371(ಜೆ) ಅಡಿ ಸೇರಿಸುವ ಪ್ರಯತ್ನ ಕೈಬಿಡಲಿ’ ಎಂದರು.‌

ದಿವಾಳಿಯತ್ತ ಬಿಜೆಪಿ ಮನೆ’

‘ರಾಜ್ಯ ಬಿಜೆಪಿ ಈಗ ಒಡೆದ ಮನೆಯಾಗಿದೆ. ಯಡಿಯೂರಪ್ಪ ಅವರು ತಮ್ಮ‌ ಖುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಕೆಲವರು ಸಚಿವರಾಗಲು ಪ್ರಯತ್ನಿಸುತ್ತಿದ್ದಾರೆ, ಮತ್ತೆ ಕೆಲವರು ಮುಖ್ಯಮಂತ್ರಿಯೇ ಆಗಲು ಪ್ರಯತ್ನಿಸುತ್ತಿದ್ದಾರೆ. ಮೂಲ ಹಾಗೂ ವಲಸಿಗರ ನಡುವೆ ಅಸಮಾಧನ ಬುಗಿಲೆದ್ದಿದೆ. ಇದು ಅವರ ದಿವಾಳಿತನದ ಮುನ್ಸೂಚನೆ’‍ ಎಂದು ಪ‍್ರಿಯಾಂಕ್‌ ಟೀಕಿಸಿದರು.

‘ಕೇವಲ ವಲಸಿಗರಿಂದ ಸರ್ಕಾರ ರಚನೆಯಾಗಿಲ್ಲ ಎಂದು ಕೆಲವರು ಹೇಳಿದರೆ; ವಲಸಿಗರು ಇಲ್ಲದಿರುವಾಗ ತನ್ನ ಶಾಸಕರಿಂದಲೇ ಬಿಜೆಪಿ ಏಕೆ ಸರ್ಕಾರ ರಚಿಸಲಿಲ್ಲವೆಂದು ವಲಸಿಗರು ಕೇಳುತ್ತಿದ್ದಾರೆ.‌ ನಿರುದ್ಯೋಗ ಹೋರಾಡಿಸುವ ಬದಲು ಇವರು ತಮ್ಮ ‘ಉದ್ಯೋಗ’ ಗಟ್ಟಿಮೊಡಿಕೊಳ್ಳುವಲ್ಲೇ ಕಾಲ ಕಳೆಯುತತ್ತಿದ್ದಾರೆ’ ಎಂದೂ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT