ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರು ಸದಾ ಪ್ರಶ್ನಿಸುತ್ತಿರಬೇಕು: ಸಂಸದ ಡಾ. ಉಮೇಶ ಜಾಧವ ಸಲಹೆ

Last Updated 25 ಜುಲೈ 2021, 14:41 IST
ಅಕ್ಷರ ಗಾತ್ರ

ಕಲಬುರ್ಗಿ: ‘ಆಳುವವನಿಗೆ ಕೇಳುವವನಿರಬೇಕು ಎಂಬ ಮಾತಿನಂತೆ ಜನಪ್ರತಿನಿಧಿಗಳನ್ನು ಪತ್ರಕರ್ತರು ಪ್ರಶ್ನಿಸುತ್ತಿರಬೇಕು. ಇದರಿಂದ ನಾವು ಜನರ ಸಮಸ್ಯೆಗಳಿಗೆ ತಕ್ಷಣಕ್ಕೆ ಸ್ಪಂದಿಸಲು ಸಹಕಾರಿಯಾಗುತ್ತದೆ’ ಎಂದು ಸಂಸದ ಡಾ. ಉಮೇಶ ಜಾಧವ ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕವು ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

‘ಹಲವು ವರ್ಷಗಳ ಹಿಂದೆ ಚಿಂಚೋಳಿ ತಾಲ್ಲೂಕಿನ ಕುಂಚಾವರಂನಲ್ಲಿ ಮಕ್ಕಳ ಮಾರಾಟ ಪ್ರಕರಣದ ಬಗ್ಗೆ ಪತ್ರಕರ್ತರು ಸರಣಿ ವರದಿ ಮಾಡಿದ್ದರಿಂದ ಅದು ದೇಶದಾದ್ಯಂತ ಚರ್ಚೆಯಾಗಿ, ಆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಯತ್ನಗಳು ನಡೆದವು’ ಎಂದರು.

‘ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರಿಗೆ ತಾವು ಮನವಿ ಸಲ್ಲಿಸಿದ್ದೀರಿ. ಬೇಡಿಕೆಗಳನ್ನು ಈಡೇರಿಸುವ ಕುರಿತು ನಿರಾಣಿ ಅವರು ನನ್ನೊಂದಿಗೆ ಚರ್ಚಿಸಿದ್ದಾರೆ’ ಎಂದರು.

ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಮಾತನಾಡಿ, ‘ನಾನು ಕಲಬುರ್ಗಿಯಲ್ಲಿ ಪತ್ರಕರ್ತನಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಹಲವು ವಿಚಾರಗಳನ್ನು ಅರಿಯಲು ಸಾಧ್ಯವಾಯಿತು. ವಿವಿಧ ಮಾಧ್ಯಮಗಳಲ್ಲಿ ಈ ಭಾಗದ ಪತ್ರಕರ್ತರ ಸಂಖ್ಯೆ ಕಡಿಮೆ ಇರುವುದರಿಂದ ಈ ಭಾಗದ ವಿಚಾರಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಆದ್ಯತೆ ಸಿಗುತ್ತಿಲ್ಲ’ ಎಂದರು.

ಜೀವಮಾನದ ಸಾಧನೆಗಾಗಿ ಹಿರಿಯ ಪತ್ರಕರ್ತರಾದ ರಾಮಕೃಷ್ಣ ಬಡಶೇಷಿ ಮತ್ತು ಬಾಬುರಾವ ಯಡ್ರಾಮಿ ಅವರಿಗೆ ವಿ.ಎನ್‌.ಕಾಗಲಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಪ್ರಜಾವಾಣಿ’ಯ ಸೇಡಂ ವರದಿಗಾರ ಅವಿನಾಶ ಬೋರಂಚಿ, ಪತ್ರಕರ್ತರಾದ ಕುಮಾರ ಬುರಡಿಕಟ್ಟಿ, ನಾಗರಾಜ ಹೂವಿನಹಳ್ಳಿ, ಬೌದ್ಧಪ್ರಿಯ ನಾಗಸೇನ, ರಾಜಶೇಖರಯ್ಯ ಹೊಕ್ರಾಣಿಮಠ, ಶಿವರಾಜ ವಾಲಿ, ಛಾಯಾಗ್ರಾಹಕರಾದ ಶಿವಶರಣಪ್ಪ ಬೆಣ್ಣೂರ ಮತ್ತು ಗಂಗಾಧರ ಹಿರೇಮಠ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಾಸಕಿ ಕನೀಜ್ ಫಾತಿಮಾ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಜಿಲ್ಲಾ ಘಟಕದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

‘ಮೃತ ಪತ್ರಕರ್ತರ ಕುಟುಂಬಕ್ಕೆ ನೆರವು’

‘ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಪತ್ರಕರ್ತರಿಗೆ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸುವುದು ಸಾಕಷ್ಟು ಸವಾಲಿನ ಕೆಲಸವಾಗಿತ್ತು’ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರ ತಿಳಿಸಿದರು.

‘ತಲಾ ₹ 5 ಲಕ್ಷದಂತೆ ಕೋವಿಡ್‌ನಿಂದ ಮೃತಪಟ್ಟ 45 ಪತ್ರಕರ್ತರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉದಾರವಾಗಿ ನೆರವು ನೀಡಿದರು. ಮನವಿಗೆ ಸ್ಪಂದಿಸಿ ವಿವಿಧ ಪತ್ರಿಕೆಗಳಿಗೆ ನೀಡಬೇಕಿದ್ದ ಜಾಹೀರಾತು ಬಾಕಿ ಮೊತ್ತ ₹ 56 ಕೋಟಿಯನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿದರು. ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಸೀಮಿತವಾಗಿದ್ದ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ತಾಲ್ಲೂಕು ಹಾಗೂ ಗ್ರಾಮೀಣ ಭಾಗದ ಪತ್ರಕರ್ತರಿಗೂ ವಿತರಿಸಲು ಮುಖ್ಯಮಂತ್ರಿ ಸೂಚಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT