ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಉಳಿಸಲು ಕೃಷ್ಣಾ ಕಣಿವೆ ಪ್ರತಿನಿಧಿಗಳ ಸಮಾವೇಶ

ತೆಲಂಗಾಣ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ್‌ ರಾವ್‌ ಪತ್ರಿಕಾಗೋಷ್ಠಿ
Last Updated 8 ಜುಲೈ 2019, 9:40 IST
ಅಕ್ಷರ ಗಾತ್ರ

ಕಲಬುರ್ಗಿ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷ್ಣಾ ಕಣಿವೆಯ ನೀರನ್ನು ಬಳಸಿಕೊಳ್ಳುವ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಜನಪ್ರತಿನಿಧಿಗಳು ಹಾಗೂ ನೀರಾವರಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ವಿವಿಧ ಸಂಘಟನೆಗಳ ಮುಖಂಡರ ಸಮಾವೇಶವನ್ನು ನಡೆಸಲು ನಿರ್ಧರಿಸಲಾಗಿದೆ ಎಂದುತೆಲಂಗಾಣ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ್‌ ರಾವ್‌ ತಿಳಿಸಿದರು.

‌ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಿನೇ ದಿನೇ ನೀರಿನ ಕೊರತೆ ಜನರನ್ನು ಕಾಡುತ್ತಿದೆ. ಕೊಳವೆಬಾವಿಗಳನ್ನು ಕೊರೆದು ನೀರೆತ್ತುತ್ತಿರುವುದರಿಂದ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಇದಕ್ಕಾಗಿ ಮಳೆನೀರು ಬಿದ್ದಲ್ಲಿಯೇ ಇಂಗಿಸುವ ಕಡಿಮೆ ಖರ್ಚಿನ ತಂತ್ರಜ್ಞಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಇದಕ್ಕೆ ಪೂರಕವಾಗಿ ತೆಲಂಗಾಣದ ನಲ್ಗೊಂಡ, ಸಿದ್ದಿಪೇಟ್‌, ರಂಗಾರೆಡ್ಡಿ, ಕರೀಂನಗರ ಜಿಲ್ಲೆಗಳಲ್ಲಿ ಒಟ್ಟು 181 ನೀರು ಮರುಪೂರಣ ಘಟಕಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ತೆಲಂಗಾಣ ಸರ್ಕಾರ ನಿಗಮಕ್ಕೆ ₹ 70 ಕೋಟಿ ಬಿಡುಗಡೆ ಮಾಡಿದೆ. ಈ ಹಣದಲ್ಲಿ 1600 ಸ್ಥಳಗಳಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಲಾಗುವುದು’ ಎಂದರು.

‘ಮೇ 22ರಂದು ಹೈದರಾಬಾದ್‌ನಲ್ಲಿ ಜಲತಜ್ಞ ರಾಜೇಂದ್ರ ಸಿಂಗ್‌ ನೇತೃತ್ವದಲ್ಲಿ ‘ಜಲ ಬಿರಾದಾರಿ’ (ಜಲ ಸಂರಕ್ಷಣೆ ಒಕ್ಕೂಟಗಳು) ಸಮಾವೇಶ ನಡೆಯಿತು. ಇದೇ ಮಾದರಿಯನ್ನು ರಾಜ್ಯದಲ್ಲಿ ಕೃಷ್ಣಾ ನದಿ ಹರಿಯುವ ಪ್ರದೇಶಗಳಲ್ಲಿ ಆಯೋಜಿಸಲಾಗುತ್ತಿದೆ. ಆಳಂದ ತಾಲ್ಲೂಕಿನ ಹಲವೆಡೆ ಮಾಜಿ ಶಾಸಕ ಬಿ.ಆರ್‌.ಪಾಟೀಲ ಅವರು ಚೆಕ್‌ ಡ್ಯಾಮ್‌ಗಳನ್ನು ನಿರ್ಮಿಸಿದ್ದು, ಅದೇ ಮಾದರಿಯನ್ನು ರಾಜ್ಯದ ಇತರ ಜಿಲ್ಲೆಗಳಲ್ಲಿ ಅನುಸರಿಸುವುದರಿಂದ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಂಡು ಬರಲಿದೆ’ ಎಂದು ಹೇಳಿದರು.

‘ಎಲ್ಲ ತೊರೆಗಳ ಹೂಳನ್ನು ಎತ್ತಬೇಕು. ತೊರೆಗಳಿಗೆ ಅಡ್ಡಲಾದ ಮರದ ಬೊಡ್ಡೆಗಳನ್ನು ತೆರವುಗೊಳಿಸಿದರೆ ಸರಾಗ ಹರಿವಿಗೆ ಅನುಕೂಲವಾಗುತ್ತದೆ. ಅದರ ಜೊತೆಗೆ ನಗರ ಪ್ರದೇಶಗಳಲ್ಲಿ ಸ್ನಾನ ಮಾಡಲು ಬಳಕೆ ಮಾಡಿದ ನೀರನ್ನು ಅದೇ ಮನೆಯ ಅಂಗಳದಲ್ಲಿ ಇಂಗಿಸಬೇಕು. ಇದರಿಂದ ಚರಂಡಿಗೆ ನೀರು ಹರಿಯುವುದು ತಪ್ಪುತ್ತದೆ. ಅದೇ ಮಾದರಿಯಲ್ಲಿ ಹೊಲದಲ್ಲಿ ಬಿದ್ದ ನೀರನ್ನು ಅಲ್ಲಿಯೇ ಸಂಗ್ರಹಿಸಿ ಇಂಗುವಂತೆ ಮಾಡಬೇಕು’ ಎಂದು ಪ್ರಕಾಶ್‌ ರಾವ್‌ ಮಾಹಿತಿ ನೀಡಿದರು.

ಆಳಂದ ಮಾಜಿ ಶಾಸಕ ಬಿ.ಆರ್‌.ಪಾಟೀಲ ಮಾತನಾಡಿ, ‘ಮಹಾರಾಷ್ಟ್ರದ ಸಿರಪುರ ಮಾದರಿಯಲ್ಲಿ ನೀರು ಸಂಗ್ರಹ ಯೋಜನೆಯನ್ನು ನಾನು ಶಾಸಕನಾಗಿದ್ದ ಅವಧಿಯಲ್ಲಿ ಅನುಷ್ಠಾನಕ್ಕೆ ತಂದಿದ್ದೆ. ಇದಕ್ಕಾಗಿ ₹ 70 ಕೋಟಿ ಅನುದಾನ ಕೇಳಿದ್ದೆ. ₹ 20 ಕೋಟಿ ಸಿಕ್ಕಿತ್ತು’ ಎಂದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ನಾಯಕಿ ಕೆ.ನೀಲಾ, ಡಾ.ಸಂಪತ್‌ರಾವ್‌, ಹೈದರಾಬಾದ್‌ನ ಭೂವಿಜ್ಞಾನಿ ನಸ್ರುಲ್ಲಾ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT