ಗುರುವಾರ , ಮೇ 13, 2021
16 °C
ಕೋವಿಡ್ ನಿರ್ವಹಣೆಗಾಗಿ ಐಎಎಸ್ ದರ್ಜೆಯ ಅಧಿಕಾರಿ ನೇಮಕಕ್ಕೆ ಪ್ರಿಯಾಂಕ್ ಒತ್ತಾಯ

ದುಪ್ಪಟ್ಟು ಬೆಲೆಗೆ ರೆಮ್‌ಡಿಸಿವಿರ್ ಇಂಜೆಕ್ಷನ್ ಬಿಕರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊರೊನಾ ರೋಗಿಗಳಿಗೆ ನೀಡಲಾಗುವ ರೆಮ್‌ಡಿಸಿವಿರ್ ಇಂಜೆಕ್ಷನ್‌ ಮೂಲ ಬೆಲೆಗಿಂತ ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತಿದ್ದು, ಸೋಂಕಿತರ ಸಂಬಂಧಿಗಳು ದೂರದ ಹೈದರಾಬಾದ್, ಸೊಲ್ಲಾ‍ಪುರದಿಂದ ಇಂಜೆಕ್ಷನ್ ತರಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ನಿಗದಿತ ಬೆಲೆಗೆ ಇಂಜೆಕ್ಷನ್ ಹಾಗೂ ಸಮರ್ಪಕ ಆಕ್ಸಿಜನ್ ವ್ಯವಸ್ಥೆ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕ್, ‘ಕಲಬುರ್ಗಿ ಜಿಲ್ಲೆ ಕೊರೊನಾದಿಂದ ಜರ್ಝರಿತವಾಗಿದೆ.‌ ದಿನಕ್ಕೆ ನೂರಾರು ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಹಲವಾರು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಜೊತೆಗೆ ಆಕ್ಸಿಜನ್ ಕೊರತೆಯಿಂದಾಗಿ ಹೊಸ ರೋಗಿಗಳಿಗೆ ಆಸ್ಪತ್ರೆಗಳ ಬೆಡ್ ಸಿಗದೆ ಪರಿಸ್ಥಿತಿ ಕೈಮೀರುವ ಹಂತ ತಲುಪುವ ಸಾಧ್ಯತೆ ದಟ್ಟವಾಗಿವೆ. ಹಾಗಾಗಿ‌ ಜಿಲ್ಲೆಯಲ್ಲ್ಲಿನ ಕೋವಿಡ್ ಸ್ಥಿತಿಗತಿಯನ್ನು ನಿಭಾಯಿಸಲು ಐಎಎಸ್ ಶ್ರೇಣಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆ ಜಿಮ್ಸ್‌ನಲ್ಲಿ ಸೋಂಕಿತರಿಗಾಗಿ 175 ಬೆಡ್ ಹಾಗೂ ಇಎಸ್ಐಸಿನಲ್ಲಿ 150 ಬೆಡ್‌ಗಳನ್ನು ಜೊತೆಗೆ 16 ಖಾಸಗಿ ಆಸ್ಪತ್ರೆಗಳ ಬೆಡ್‌ಗಳು ಸೇರಿದರೆ ಒಟ್ಟು 914 ಬೆಡ್‌ಗಳು ಲಭ್ಯವಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳುತ್ತಿವೆಯಾದರೂ ಪ್ರಸ್ತುತ ಸನ್ನಿವೇಶದಲ್ಲಿ ದಾಖಲಾಗುತ್ತಿರುವ ಹೊಸ ಸೋಂಕಿತರಿಗೆ ಅಷ್ಟೊಂದು ಬೆಡ್‌ಗಳು ಸಾಕಾಗುವುದಿಲ್ಲ. ನಿಯಮಗಳ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿನ ಒಟ್ಟು ಬೆಡ್‌ಗಳಲ್ಲಿ‌ ಶೇ 20ರಷ್ಟು ಬೆಡ್‌ನ್ನು ಸರ್ಕಾರಿ ಆಸ್ಪತ್ರೆಯಿಂದ ಕಳಿಸಲಾದ ಸೋಂಕಿತರಿಗಾಗಿ‌ ಮೀಸಲಿಡಬೇಕು. ಆದರೆ, ಖಾಸಗಿ ಆಸ್ಪತ್ರೆಗಳು ಈ ನಿಯಮ ಪಾಲನೆ ಮಾಡುತ್ತಿವೆಯಾ ಎನ್ನುವುದರ ಬಗ್ಗೆ ಮಾಹಿತಿಯನ್ನು ಕಾಲಕಾಲಕ್ಕೆ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಹಣದಾಸೆಗೆ ರೋಗಿಗಳನ್ನು ಕಳಿಸಿಕೊಡುತ್ತಿರುವ ಆರೋಪಗಳಿವೆ. ಆ‌ ಕುರಿತು‌ ಕಟ್ಟುನಿಟ್ಟಿನ‌ ಕ್ರಮ ಕೈಗೊಳ್ಳಬೇಕು. ಜೊತೆಗೆ ಮಹಾರಾಷ್ಟ್ರದಲ್ಲಿ ಈಗಾಗಲೇ ಲಾಕ್‌ಡೌನ್ ಘೋಷಣೆಯಾಗಿದ್ದು ಅಲ್ಲಿಂದ ಜನರು ತಂಡೋಪತಂಡವಾಗಿ ಜಿಲ್ಲೆಯ ಗಡಿಯೊಳಗೆ ನುಸುಳಿಕೊಂಡು ಬರುತ್ತಿದ್ದಾರೆ. ಆದರೆ ಚೆಕ್ ಪೋಸ್ಟ್ ನಲ್ಲಿ ಹಾಗೂ ರೈಲ್ವೆ ನಿಲ್ದಾಣದಲ್ಲಿ ಕಾಟಾಚಾರದ ಚೆಕ್ (ಸ್ಕ್ರೀನ್ ಟೆಸ್ಟಿಂಗ್) ಮಾಡಿ ಹಾಗೆ ಬಿಟ್ಟು ಕಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ರಚಿಸಿದ್ದ ತಜ್ಞರ ಸಮಿತಿ, ಕಾಲ್ ಸೆಂಟರ್ ಹಾಗೂ ಫಿವರ್ ಕ್ಲಿನಿಕ್ ಇನ್ನೂ ಅಸ್ತಿತ್ವದಲ್ಲಿದ್ದು ಕಾರ್ಯನಿರ್ವಾಹಿಸುತ್ತಿವೆಯಾ ಅಥವಾ ಇಲ್ಲವಾ ಎನ್ನುವ ಕುರಿತು ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು