ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಕಾಲು ರೋಗ; ಮಾತ್ರೆ ನುಂಗಿಸುವ ಅಭಿಯಾನ

Last Updated 20 ಜನವರಿ 2021, 13:48 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯ ಜನರನ್ನು ತೀವ್ರವಾಗಿ ಕಾಡುತ್ತಿರುವ ಆನೆಕಾಲು ರೋಗ ನಿಯಂತ್ರಣಕ್ಕಾಗಿ ಈ ಬಾರಿ ಪರಿಣಾಮಕಾರಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಎಲ್ಲ ಅರ್ಹರಿಗೂ ಖುದ್ದು ಮುಂದೆ ನಿಂತು ಇದರ ಮಾತ್ರೆಗಳನ್ನು ನುಂಗಿಸಲಾಗುವುದು. ಅವರ ಎಡಗೈ ತೋರು ಬೆರಳಿಗೆ ಶಾಹಿ ಗುರುತು ಹಾಕಿ ಖಚಿತ ಮಾಡಿಕೊಳ್ಳಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ಹೇಳಿದರು.

‘ಕ್ಯೂಲೆಕ್ಸ್‌ ಎಂಬ ಹೆಣ್ಣುಸೊಳ್ಳೆ ಕಚ್ಚಿದರೆ ಆನೆಕಾಲು ರೋಗ ತಗಲುತ್ತದೆ. ಇದರ ನಿಯಂತ್ರಣಕ್ಕಾಗಿ 2004ರಿಂದಲೂ ಡಿಇಸಿ ಹಾಗೂ ಅಲ್ಬೆಂಡೊಜೋಲ್‌ ಮಾತ್ರೆಗಳನ್ನು ನೀಡಲಾಗುತ್ತಿದೆ. ಆದರೆ, ಈ ಬಾರಿ ಹೆಚ್ಚು ಪರಿಣಾಮಕಾರಿ ಆದ ‘ಐವರ್‌ಮೆಕ್ಟಿನ್‌’ ಎಂಬ ಹೊಸ ಮಾತ್ರೆಯನ್ನೂ ನೀಡಲಾಗುತ್ತಿದೆ. ಆನೆಕಾಲು ರೋಗದ ವಿರುದ್ಧ ಹೋರಾಡುವ ಜತೆಗೆ ಇತರ 22 ತರದ ಸಾಂಕ್ರಾಮಿಕ ರೋಗಾಣುಗಳಿಗೂ ಇದು ಲಸಿಕೆಯಾಗಿ ಕೆಲಸ ಮಾಡುತ್ತದೆ’ ಎಂದು ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಜ. 22ರಿಂದ 31ರವರೆಗೆ ಮನೆ ಮನೆಗೆ ಹೋಗಿ ಮಾತ್ರೆ ನುಂಗಿಸಲಾಗುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆಯ ಸಹಕಾರ ‍ಪಡೆಯಲಾಗುವುದು. ಮನೆ, ಕಚೇರಿ, ಶಾಲೆ, ಕಾಲೇಜು ಎಲ್ಲ ಕಡೆಗೂ ಸಿಬ್ಬಂದಿ ತೆರಳಿ ಮಾತ್ರೆ ನುಂಗಿಸುವರು. ರೋಗ ತೀವ್ರವಾಗಿ ಉಲ್ಬಣಿಸಿದ ದೇಶದ 202 ಜಿಲ್ಲೆಗಳಲ್ಲಿ ಕಲಬುರ್ಗಿಯೂ ಸೇರಿದೆ. ಹಾಗಾಗಿ, ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜಿಲ್ಲೆಯ ಒಟ್ಟು 26,96,315 ಮಂದಿಗೆ ಮಾತ್ರೆ ನುಂಗಿಸುವ ಗುರಿ ಹೊಂದಲಾಗಿದೆ. ಈವರೆಗೆ 7,483 ರೋಗಿಗಳನ್ನು ಗುರುತಿಸಲಾಗಿದೆ. ಇದರಲ್ಲಿ 7,078 ಸಕ್ರಿಯ ಪ್ರಕಣಗಳಿವೆ. 405 ಶಸ್ತ್ರಚಿಕಿತ್ಸೆ ನೀಡಲಾಗಿದೆ’ ಎಂದು ಅವರು ಹೇಳಿದರು.‌

ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡ್ಡಮನಿ ಪ್ರೊಜೆಕ್ಟರ್‌ ಮೂಲಕ ರೋಗದ ಮಾಹಿತಿ ನೀಡಿದರು. ಕೇಂದ್ರ ಆರೋಗ್ಯ ಮಂತ್ರಾಲಯದ ವಿಭಾಗೀಯ ಹಿರಿಯ ನಿರ್ದೇಶಕ ಡಾ.ರವಿಕುಮಾರ ವಿಡಿಯೊ ಸಂವಾದ ನಡೆಸಿದರು. ಕಾರ್ಯಕ್ರಮಾಧಿಕಾರಿ ಡಾ.ಬಸವರಾಜ ಗುಳಗಿ, ಡಾ.ಶರೀಫ್‌, ಡಾ.ಶರಣಬಸಪ್ಪ ಯಾತನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT