ಕಾಳಗಿ: ‘ತಾಲ್ಲೂಕಿನ ಕಲಗುರ್ತಿ ಗ್ರಾಮದಲ್ಲಿ ಕೋಲಿ ಸಮಾಜದ ಯುವಕ ದೇವಾನಂದ ಕೋರಬಾ ಆತ್ಮಹತ್ಯೆ ಮತ್ತು ಅದೇ ಗ್ರಾಮದ ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣ ಜರುಗಿ ಎರಡೂವರೆ ತಿಂಗಳಾಗಿದೆ. ಘಟನೆಗೆ ಸಂಬಂಧಪಟ್ಟ ತಪ್ಪಿತಸ್ಥರನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ನೇರ ಕಾರಣರಾಗಿದ್ದು, ಸಚಿವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಕೋಲಿ ಸಮಾಜ ಸಮನ್ವಯ ಸಮಿತಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ, ಬಸವರಾಜ ಸಪ್ಪಣ್ಣಗೋಳ ಆಗ್ರಹಿಸಿದ್ದಾರೆ.
ಸೋಮವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಾಳಗಿ ತಾಲ್ಲೂಕು ಕೋಲಿ ಸಮಾಜದಿಂದ ಕಲಗುರ್ತಿಯ ಎರಡು ಘಟನೆಗಳಿಗೆ ಸಂಬಂಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಆರೋಪಿ ಶಿವರಾಜ ಪಾಟೀಲ ಮತ್ತು ಸಂಗಡಿಗರು ಸಚಿವರ ಜತೆ ಫೊಟೊ ತೆಗೆಸಿಕೊಂಡು ರಾಜಾರೋಷವಾಗಿ ವಾಟ್ಸಪ್, ಫೇಸ್‌ಬುಕ್‌ಗೆ ಬಿಡುತ್ತಾರೆ. ಪ್ರಕರಣ ಮುಚ್ಚಿಹಾಕಲು ಪೊಲೀಸರ ಮುಖಾಂತರ ದೇವಾನಂದ ಕುಟುಂಬಕ್ಕೆ ₹3 ಲಕ್ಷ ಹಣ ನೀಡುತ್ತಾರೆ. ಇಷ್ಟೆಲ್ಲ ಗೊತ್ತಿದ್ದರೂ ಸಚಿವರು ಸೌಜನ್ಯಕ್ಕಾಗಿಯಾದರೂ ಸಂತ್ರಸ್ತರಿಗೆ ಸಾಂತ್ವನ ಹೇಳದೆ ಆರೋಪಿಗಳನ್ನು ರಕ್ಷಿಸಿ ಕೋಲಿ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ದೇವಾನಂದ ಕೋರಬಾ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕು. ₹25ಲಕ್ಷ ಪರಿಹಾರ ನೀಡಿ, ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಅಪ್ರಾಪ್ತೆಯನ್ನು ಪತ್ತೆ ಹಚ್ಚುವಲ್ಲಿ ಕರ್ತವ್ಯ ನಿರ್ಲಕ್ಷ್ಯತೋರಿದ ಮಾಡಬೂಳ ಪೊಲೀಸರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬಾಲಕಿ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು’ ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡ ಶಿವಶರಣಪ್ಪ ಗುತ್ತೇದಾರ, ರೇವಣಸಿದ್ದಪ್ಪ ಮುಕರಂಬಾ, ಶಿವಕುಮಾರ ಕಮಕನೂರ, ಜಗನ್ನಾಥ ಚಂದನಕೇರಿ, ಕಾಶಿನಾಥ ತೆಲಗಾಣಿ, ಮಾರುತಿ ನಾಯಿಕೋಡಿ, ಪೀರಪ್ಪ ನಾಟೀಕಾರ, ಭೀಮರಾಯ ದಂಡೋತಿ, ಸಿದ್ದಪ್ಪ ಕೇಶ್ವಾರ, ಮಲ್ಲಪ್ಪ ದಿಗ್ಗಾಂವ, ಮಲ್ಲು ಮರಗುತ್ತಿ, ಪ್ರಭಾಕರ ರಟಕಲ್, ನೀಲೇಶ ತೀರ್ಥ, ನಾಗಣ್ಣಾ ತಳವಾರ, ಮಲಕಪ್ಪ ಸಾಸರಗಾಂವ, ಜಗನ್ನಾಥ ಮೊಗಿ, ಬಸವರಾಜ ಹಲಚೇರಿ, ಪರಮಾನಂದ ಭಾಗೋಡಿ, ರಾಜು ಯಡ್ರಾಮಿ ಸೇರಿ ಅನೇಕರು ಇದ್ದರು.
ನಿಜಶರಣ ಅಂಬಿಗರ ಚೌಡಯ್ಯ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನೆ ಜರುಗಿತು. ಕಲಬುರಗಿ-ಚಿಂಚೋಳಿ ವಾಹನ ಸಂಚಾರ ಸ್ಥಗಿತಗೊಂಡು ಕೆಲಕಾಲ ಪ್ರಯಾಣಿಕರು ಪರದಾಡಿದರು. ತಹಶೀಲ್ದಾರ್ ಘಮಾವತಿ ರಾಠೋಡ ಮನವಿಪತ್ರ ಸ್ವೀಕರಿಸಿದರು. ಪಿಎಸ್ಐ ವಿಶ್ವನಾಥ ಬಾಕಳೆ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.