ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಪ್ಪರ್ ಮಾಲೀಕರ ಪ್ರತಿಭಟನೆ

ನಿಗದಿಗಿಂತ ಹೆಚ್ಚಿನ ಹಣ ಪಡೆದು ಮರಳು ಭರ್ತಿ ಆರೋಪ
Published : 15 ಆಗಸ್ಟ್ 2024, 3:20 IST
Last Updated : 15 ಆಗಸ್ಟ್ 2024, 3:20 IST
ಫಾಲೋ ಮಾಡಿ
Comments

ಕಲಬುರಗಿ: ಪ್ರತಿ ಟನ್‌ ಮರಳಿಗೆ ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಪಡೆದು ಟಿಪ್ಪರ್‌ಗಳಿಗೆ ಭರ್ತಿ ಮಾಡುವಂತೆ ಆಗ್ರಹಿಸಿ ಜಿಲ್ಲಾ ಟಿಪ್ಪರ್ ಮಾಲೀಕರ ಅಭಿವೃದ್ಧಿ ಸಂಘದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

‘ಮರಳು ಗಣಿಗಾರಿಕೆಯ ಗುತ್ತಿಗೆ ಪಡೆದವರು ಸಾರಿಗೆ ಇಲಾಖೆ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಹಣ ತೆಗೆದುಕೊಂಡು ಮರಳು ತುಂಬುತ್ತಿದ್ದಾರೆ. ಸರ್ಕಾರ ಪ್ರತಿ ಟನ್‌ ಮರಳು ಲೋಡ್‌ಗೆ ₹700 ನಿಗದಿ ಮಾಡಿದೆ. ಆದರೆ, ಮನಸೋ ಇಚ್ಛೆಯಂತೆ ಹಣ ಪಡೆದು, ಮರಳು ಭರ್ತಿ ಮಾಡಿ ಸರ್ಕಾರಕ್ಕೆ ರಾಯಲ್ಟಿಯೂ ತಪ್ಪಿಸುತ್ತಿದ್ದಾರೆ‘ ಎಂದು ಪ್ರತಿಭಟನಾಕಾರರು ಆರೋಪಿದರು.

ಆರು ಚಕ್ರದ ಟಿಪ್ಪರ್‌ ಮರಳಿಗೆ ₹15 ಸಾವಿರ, 10 ಚಕ್ರದ ಟಿಪ್ಪರ್‌ಗೆ ₹26 ಸಾವಿರ ಹಾಗೂ 12 ಚಕ್ರದ ಟಿಪ್ಪರ್‌ಗೆ ₹45 ಸಾವಿರ ಪಡೆಯುತ್ತಿದ್ದಾರೆ. ಇಷ್ಟೊಂದು ಹಣ ಪಡೆಯುತ್ತಿರುವುದರಿಂದ ಮನೆ ನಿರ್ಮಾಣ ಮಾಡುವವರಿಗೆ, ಕಟ್ಟಡ ಗುತ್ತಿಗೆದಾರರಿಗೆ ಆರ್ಥಿಕ ಹೊರೆ ಆಗುತ್ತಿದೆ. ನಿರ್ಮಾಣ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು, ಟಿಪ್ಪರ್ ಮಾಲೀಕರಿಗೂ ನಷ್ಟವಾಗುತ್ತಿದೆ ಎಂದು ದೂರಿದರು.

ವಾಹನಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾರಿಗೆ ಇಲಾಖೆ ಸೂಚಿಸಿದಷ್ಟು ಮರಳು ಭರ್ತಿ ಮಾಡುವಂತೆ ಟಿಪ್ಪರ್ ಮಾಲೀಕರು ಒತ್ತಾಯಿಸಿದರೆ, ಮರಳು ಕೊಡಲು ನಿರಾಕರಿಸುತ್ತಾರೆ. ಮರಳು ತರುವಾಗ ಮಾರ್ಗ ಮಧ್ಯದಲ್ಲಿ ಸಾರಿಗೆಯವರು ಹಿಡಿದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ, ಗಣಿ ಇಲಾಖೆಯವರು ಹಿಡಿದು ಸಾರಿಗೆಯವರಿಗೆ, ಪೊಲೀಸ್ ಅಧಿಕಾರಿಗಳು ಹಿಡಿದು ಸಾರಿಗೆ ಮತ್ತು ಗಣಿ ಇಲಾಖೆಗೆ ಬರೆದು, ದಂಡ ವಸೂಲಿ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಪ್ರಾದೇಶಿಕ ಆಯುಕ್ತರ ಸೂಚನೆಯಂತೆ ಟಿಪ್ಪರ್‌ಗಳಿಗೆ ಮರಳು ತುಂಬಬೇಕು. ಜಿಪಿಎಸ್ ಹೊಂದಿರುವ ಟಿಪ್ಪರ್‌ಗಳನ್ನು ಮಾತ್ರ ಮರಳು ಸಾಗಾಟಕ್ಕೆ ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.

ಬೇಡಿಕೆಗಳ ಮನವಿ ಪತ್ರವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಆನಂದ ಬಿ.ರಾಧೆ, ಗೌರವ ಅಧ್ಯಕ್ಷ ಡಿ.ಜಿ. ಜಗದೀಶ, ಪ್ರಮುಖರಾದ ಅಲಿ, ಅಬ್ದುಲ್, ಶ್ರೀಕಾಂತ ರಾಠೋಡ್, ಮಾಣಿಕ ಪಾಟೀಲ ಸೇರಿ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT