ಮಂಗಳವಾರ, ಡಿಸೆಂಬರ್ 7, 2021
24 °C
ರಾಜ್ಯ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ, ಮಾನವ ಸರ‍ಪಳಿ ನಿರ್ಮಿಸಿ ಸಂಚಾರ ಬಂದ್‌

ಕಲಬುರಗಿ: ಬಸ್‌ ಪಾಸ್‌ ಸೌಕರ್ಯಕ್ಕೆ ಎಬಿವಿಪಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಕರ್ತರು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನಗರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಜಗತ್ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಕೆಲ ಹೊತ್ತು ಸಂಚಾರ ಬಂದ್‌ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ನಡೆದ ವಿದ್ಯಾರ್ಥಿಗಳ ಪಡೆ, ಮಿನಿ ವಿಧಾನಸೌಧ ಮುಂದಿನ ರಸ್ತೆಯಲ್ಲೂ ಮಾನವ ಸರಪಳಿ ನಿರ್ಮಿಸಿ ಸಂಚಾರ ಬಂದ್‌ ಮಾಡಿತು.

ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಎರಡು ವರ್ಷ ಕೊರೊನಾ ವ್ಯಾಪಿಸಿದ ಕಾರಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ಈಗ ಭೌತಿಕ ತರಗತಿಗಳು ಆರಂಭವಾಗಿದ್ದರೂ ಬಸ್‌ ಸೌಕರ್ಯವಿಲ್ಲದ ಕಾರಣ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ತರಗತಿಗಳಿಗಿಂತ ಮುಂಚಿತವಾಗಿ ಸರ್ಕಾರ ಎಲ್ಲ ಮಾರ್ಗಗಳಲ್ಲೂ ಮೊದಲಿದ್ದ ಬಸ್‌ ಸಂಚಾರ ಆರಂಭಿಸಬೇಕಿತ್ತು. ಅಲ್ಲದೇ, ಬಸ್‌ಪಾಸ್‌ ನೀಡುವುದಕ್ಕೂ ವಿಳಂಬ ಮಾಡಲಾಗುತ್ತಿದೆ ಎಂದರು.

ಎಲ್ಲ ತರಗತಿಗಳು ಆರಂಭವಾದರೂ ಹಾಸ್ಟೆಲ್‌ಗಳ ಪ್ರವೇಶ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳು ಇನ್ನೂ ಖಾಲಿ ಇವೆ ಎಂದು ಅವರು ತಿಳಿಸಿದರು.

ಎಬಿವಿಪಿ ಜಿಲ್ಲಾ ಘಟಕದ ಸಂಚಾಲಕ ಓಂಕಾರ ಪಾರೇಶ, ಸಂಘಟನಾ ಕಾರ್ಯದರ್ಶಿ ಶಿವಾನಂದ ಕಂಟೀಕರ್, ಸಹ ಸಂಚಾಲಕ ಅಭಿಷೇಕ ಬಾಳೆ, ವಿಶ್ವವಿದ್ಯಾಲಯ ಪ್ರಮುಖ ರಾಜಶೇಖರ್, ನಗರ ಘಟಕದ ಕಾರ್ಯದರ್ಶಿ ತೋಟಪ್ಪ ದೇಸಾಯಿ, ವಿದ್ಯಾರ್ಥಿನಿ ಪ್ರಮುಖರಾದ ಪ್ರಿಯಾ, ಮುಖಂಡರಾದ ಶಿವಕುಮಾರ ಹರನೂರ, ರವಿಕುಮಾರ, ಚೆನ್ನು ದೊರೆ, ಅಂಜಲಿ, ಮಾಯಾವತಿ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು