ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ| ವಿವಿಧ ಬೇಡಿಕೆ; ನಗರದಲ್ಲಿ ಸರಣಿ ಪ್ರತಿಭಟನೆ

ಹೈದರಾಬಾದ್‌ ಕರ್ನಾಟಕ ನರ್ಸಿಂಗ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್, ಹಾಸ್ಟೆಲ್‌ ನೌಕರರಿಂದ ಮನವಿ
Last Updated 24 ಡಿಸೆಂಬರ್ 2019, 11:21 IST
ಅಕ್ಷರ ಗಾತ್ರ

ಕಲಬುರ್ಗಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಸೋಮವಾರ ಮೂರ ಪ್ರತ್ಯೇಕ ಕಡೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ಜಗತ್‌ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.

ಶುಶ್ರೂಷಕರ ಬೃಹತ್ ಪ್ರತಿಭಟನೆ

‘ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಶುಶ್ರೂಷಾ ಪರಿಷತ್ ವಿಭಾಗೀಯ ಕಚೇರಿ ನೀಡಬೇಕು, ಶುಶ್ರೂಷಾ ಪರೀಕ್ಷಾ ಮಂಡಳಿ ವಿಭಾಗೀಯ ಕಚೇರಿ ಹಾಗೂ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಭಾಗೀಯ ಕಚೇರಿ ಸ್ಥಾಪಿಸಬೇಕು’ ಎಂದು ಆಗ್ರಹಿಸಿ ಹೈದರಾಬಾದ್‌ ಕರ್ನಾಟಕ ನರ್ಸಿಂಗ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು.

ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಸುಮಾರು ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷ ಡಾ. ನಿಂಗಣಗೌಡ, ದಿವ್ಯಾ ಹಾಗರಗಿ, ಕಿರಣ್, ಹರ್ಷದ್, ಖತೀಬ್ ನೇತೃತ್ವ ವಹಿಸಿದ್ದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

‘ಶುಶ್ರೂಷಕರು ತಮ್ಮ ಕೆಲಸ, ಕಾರ್ಯಗಳಿಗಾಗಿ ದೂರದ ಬೆಂಗಳೂರಿಗೆ ಹೋಗಿ ಬರುವುದು ತುಂಬಾ ತೊಂದರೆ ಆಗಲಿದೆ. ಆದ್ದರಿಂದ ವಿಭಾಗೀಯ ಕಚೇರಿಗಳನ್ನು ಆರಂಭಿಸಬೇಕು. ಕಲ್ಯಾಣ ಕರ್ನಾಟಕದಲ್ಲಿ ಸುಮಾರು 300ಕ್ಕಿಂತಲೂ ಹೆಚ್ಚು ಶುಶ್ರೂಷಾ ತರಬೇತಿ ಶಾಲೆ, ಕಾಲೇಜುಗಳಿವೆ. ಅದರಲ್ಲಿ ಸುಮಾರು 100ರಷ್ಟು ಕಲಬುರ್ಗಿ ಜಿಲ್ಲೆಯಲ್ಲಿಯೇ ಇವೆ. ಪ್ರತಿ ವರ್ಷ ಸುಮಾರು 12,000 ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಹಾಗೂ ಕರ್ತವ್ಯ ನಿರತ ಶಾಲಾ, ಕಾಲೇಜುಗಳ ಸಿಬ್ಬಂದಿ ಹಾಗೂ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಾವಿರಾರು ಶುಶ್ರೂಷಕರು ನೋಂದಣಿ ಮಾಡಿಸಲು ಹಾಗೂ ಪ್ರತಿ ಮೂರು ವರ್ಷಗಳಿಗೊಮ್ಮೆ ನವೀಕರಣ ನೋಂದಣಿಗಾಗಿ ಬೆಂಗಳೂರಿಗೆ 4–5 ಬಾರಿ ಬೆಂಗಳೂರಿಗೆ ಹೋಗಬೇಕಾಗಿದೆ. ಇದರಿಂದ ತುಂಬಾ ತೊಂದರೆ ಆಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈ ಹಿಂದೆ ಸಚಿವರಾಗಿದ್ದ ಡಾ. ಶರಣಪ್ರಕಾಶ ಪಾಟೀಲ ಅವರು ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಶುಶ್ರೂಷಾ ಪರಿಷತ್ ವಿಭಾಗೀಯ ಕಚೇರಿ ಆರಂಭಿಸಲು ಇಚ್ಛಿಸಿದ್ದು, ಅದರಂತೆ ಆ ಕಡತವೂ ಪರಿಶೀಲನೆಯಲ್ಲಿದೆ. ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದ್ದು, ಅದೇ ರೀತಿ ಈ ವಿಭಾಗದವರಿಗೆ ಅನುಕೂಲ ಕಲ್ಪಿಸಲು ವಿಭಾಗೀಯ ಕಚೇರಿಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಹಾಸ್ಟೆಲ್‌ ನೌಕರರ ವಜಾಗೆ ವಿರೋಧ

‘ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು’ ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಹೊರಗುತ್ತಿಗೆ ನೌಕರರು ಪ್ರತಿಭಟನೆ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ‘ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆಯ ಅಡಿಯಲ್ಲಿ ಬರುವ ವಸತಿ ನಿಲಯಗಳಲ್ಲಿ ಕಳೆದ 4 ತಿಂಗಳಿಂದ ಬಾಕಿ ವೇತನ ಉಳಿಸಿಕೊಂಡಿದ್ದು, ಕೂಡಲೇ ಪಾವತಿಸಬೇಕು’ ಎಂದು ಒತ್ತಾಯಿಸಿದರು.

‘ಇಲಾಖೆಯ ಕಲಬುರ್ಗಿ ವಿಸ್ತೀರಿಣಾಧಿಕಾರಿ ಕರಬಸಮ್ಮ ಅವರು ಅವ್ಯವಹಾರ ಎಸಗಿದ್ದು, ಅವರ ವಿರುದ್ಧ ತನಿಖೆ ಕೈಗೊಂಡು ಶಿಸ್ತು ಕ್ರಮಕ್ಕೆ ಆಗ್ರಹಿಸಿ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೇಘರಾಜ್ ಕಠಾರೆ, ಸುರೇಶ್ ದೊಡ್ಡಮನಿ ಅಫಜಲಪುರ, ಮಲ್ಲಮ್ಮ ಕೋಡ್ಲಿ, ಪ್ರದೀಪ ತಿಲ್ಲಾಪುರ, ರಾಮಚಂದ್ರ ಪವಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT