ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ: ಸತ್ತವರ ಮೊಬೈಲ್‌ ಬಳಸುತ್ತಿದ್ದ ಆರೋಪಿ ರುದ್ರಗೌಡ

ಮೊಬೈಲ್‌ ಕರೆಗಳ ಜಾಡು ಹಿಡಿದು ಮುಂದುವರಿದ ಸಿಐಡಿ ಅಧಿಕಾರಿಗಳು
Last Updated 25 ಏಪ್ರಿಲ್ 2022, 10:23 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಆರೋಪದಡಿ ಬಂಧಿಸಲಾಗಿರುವ ರುದ್ರಗೌಡ ಡಿ. ಪಾಟೀಲ, ತನ್ನ ಕಾರ್ಯಸಾಧಿಸಲು ಮೃತಪಟ್ಟ ವ್ಯಕ್ತಿಯ ಮೊಬೈಲ್‌ ಬಳಸಿಕೊಂಡಿದ್ದನ್ನು ಸಿಐಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಲಕ್ಷ್ಮಿಪುತ್ರ ಎಂಬ ವ್ಯಕ್ತಿ ಕೋವಿಡ್‌ ತಗಲಿ ಮೃತಪಟ್ಟಿದ್ದಾರೆ. ಬಳಿಕ ಅವರ ಎರಡು ಮೊಬೈಲ್‌ಗಳನ್ನು ಸಿಮ್ ಸಮೇತ ತೆಗೆದುಕೊಂಡು ಬಂದ ರುದ್ರಗೌಡ, ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆದಾಗ ಅದೇ ಮೊಬೈಲ್‌ಗಳನ್ನು ಬಳಸಿದ್ದ. ಮುಂದೆ ಯಾವತ್ತಾದರೂ ಈ ಪ್ರಕರಣ ಹೊರಬಿದ್ದರು ಕೂಡ ತಾನು ಸಿಕ್ಕಿಬೀಳಬಾರದು ಎಂಬ ಉದ್ದೇಶದಿಂದ ಸತ್ತ ವ್ಯಕ್ತಿಯ ಮೊಬೈಲ್‌ ಬಳಸಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಈ ಹಿಂದೆ ನಡೆದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲೂ ಇದೇ ತಂತ್ರ ಬಳಸಿದ ಅನುಮಾನವಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಮತ್ತೊಬ್ಬರ ಮೊಬೈಲ್‌ ಬಳಸುವ ತಂತ್ರವನ್ನೇ ರುದ್ರಗೌಡ ತನ್ನ ಗಿರಾಕಿಗಳಿಗೂ ಹೇಳಿಕೊಡುತ್ತಿದ್ದ. ಅವ್ಯವಹಾರದ ಡೀಲ್‌ ಮಾಡುವಾಗಲೇ ಈ ಶರತ್ತು ಹಾಕುತ್ತಿದ್ದ. ಈಗಾಗಲೇ ಬಂಧಿತನಾಗಿರುವ ಶಾಸಕರ ಗನ್‌ಮ್ಯಾನ್‌ ಹಯ್ಯಾಳಿ ದೇಸಾಯಿ ಈ ಬಾರಿಯ ಪರೀಕ್ಷೆಯಲ್ಲಿ ಇದೇ ತಂತ್ರ ಬಳಸಿದ್ದ. ಹಯ್ಯಾಳಿಗೆ ಮೊಬೈಲ್‌ ನೀಡಿದ ಆರೋಪದಡಿಕಾನ್‌ಸ್ಟೆಬಲ್‌ ರುದ್ರಗೌ ಹಾಗೂ ಶರಣಬಸಪ್ಪ ಕೂಡ ಬಂಧಿತರಾಗಿದ್ದಾರೆ. ಇದೇ ರೀತಿ, ಬೇರೆ ಯಾರ್‍ಯಾರು ಮೊಬೈಲ್ ನೀಡಿದ್ದರು ಎಂಬ ಮಾಹಿತಿ ಪಡೆದಿರುವ ಸಿಐಡಿ ಅಧಿಕಾರಿಗಳು, ಅವರ ಮೇಲೂ ಕಣ್ಣಿಟ್ಟಿದ್ದಾರೆ.

ಒಡಿಶಾದಿಂದ ಎಲೆಕ್ಟ್ರಾನಿಕ್‌ ಡಿವೈಸ್‌ ಖರೀದಿ

ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ನೀಡಿದ ಎಲೆಕ್ಟ್ರಾನಿಕ್‌ ಡಿವೈಸ್‌ಗಳನ್ನು ಒಡಿಶಾದಿಂದ ತರಿಸಿಕೊಂಡಿದ್ದ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರ ಮೂಲಕವೇ ಈ ಡಿವೈಸ್‌ಗಳನ್ನು ಅಭ್ಯರ್ಥಿಗಳಿಗೆ ತಲುಪಿಸಿದ್ದ. ಎ.ಬಿ.ಸಿ.ಡಿ ವರ್ಷನ್‌ನಲ್ಲಿರುವ ಪ್ರಶ್ನೆ ಪತ್ರಿಕೆಗಳನ್ನು ಮುಂಚಿತವಾಗಿಯೇ ತರಿಸಿಕೊಂಡಿದ್ದ. ಪರಿಣತರ ತಂಡದ ಮೂಲಕ ಉತ್ತರಗಳನ್ನು ಸಿದ್ಧಪಡಿಸಿಕೊಂಡಿದ್ದ. ಯಾವ ಅಭ್ಯರ್ಥಿಗೆ ಯಾವ ಸಿರೀಸ್‌ನ ಒಎಂಆರ್‌ ಶೀಟ್‌ ಬರುತ್ತದೆ ಎಂಬುದನ್ನು ನಿರ್ಧರಿಸಿಕೊಂಡು, ಅದರ ಉತ್ತರಗಳನ್ನು ನೀಡುವ ವ್ಯವಸ್ಥೆ ಮಾಡಿದ್ದ. ಪರೀಕ್ಷೆ ಮುಗಿದ ಬಳಿಕ ಆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಅಭ್ಯರ್ಥಿಗಳಿಂದ ವಾಪಸ್‌ ಪಡೆದ ಬಗ್ಗೆಯೂ ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾನೆ.

ನಿನ್ನೆ ತಮ್ಮ, ಇಂದು ಅಣ್ಣನ ಉಡಾಫೆ

‘ಪುಕ್ಕಟ್ಟೆ ಪ್ರಚಾರ ಕೊಡ್ತಿದ್ದೀರಿ, ಥ್ಯಾಂಕ್ಸ್‌‌...’ ಎಂದುಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ ಭಾನುವಾರ ಅಧಿಕಾರಿಗಳ ಮುಂದೆ ಉಡಾಫೆ ಮಾತನಾಡಿದ್ದ. ಇದೇ ರೀತಿಯ ಮಾತುಗಳನ್ನು ಇವರ ಅಣ್ಣ ಮಹಾಂತೇಶ ಪಾಟೀಲ ಸೋಮವಾರ ಮಾಧ್ಯಮದವರಿಗೆ ಹೇಳಿದರು.

‘ಹಾಕ್ರಿಹಾಕ್ರಿ... ಚಂದ್‌ ಹಾಕ್ರಿ. ರೊಕ್ಕ ಕೊಟ್ಟರೂ ಟಿವಿನ್ಯಾಗ್‌ ಅಡ್ವರ್ಟೈಸ್‌ ಬರುದಿಲ್ಲ. ಈಗ ಪುಕ್ಕಟ್ಟೆ ಬರತದ. ಬರ್ಲಿ ಬರ್ಲಿ ಚಂದ್‌ ಬರ್ಲಿ...’ ಎಂದು ಹೇಳುವಾಗಲೇ ಅಧಿಕಾರಿಗಳು ಅವರನ್ನು ಮುಂದಕ್ಕೆ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT