ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್ಐ ಅಕ್ರಮ: ಆರ್.ಡಿ. ಪಾಟೀಲ ಸಹಚರ, ಹಾಸ್ಟೆಲ್ ವಾರ್ಡನ್ ಬಂಧನ

Last Updated 29 ಸೆಪ್ಟೆಂಬರ್ 2022, 8:53 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಸಹಚರ, ಹಾಸ್ಟೆಲ್ ವಾರ್ಡನ್ ರಾವುತಪ್ಪ‌ ಬಸವಂತ್ರಾಯ ವಾಲೀಕಾರ (35) ಎಂಬಾತನನ್ನು ಗುರುವಾರ ಬಂಧಿಸಿದೆ.

ನಗರದ ಜ್ಞಾನಜ್ಯೋತಿ ಇಂಗ್ಲಿಷ್ ‌ಮಾಧ್ಯಮ ಶಾಲೆಯ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ರಾವುತಪ್ಪ ಬ್ಲೂಟೂತ್ ಬಳಸಿ ಉತ್ತರ ಹೇಳುವ ಮೂಲಕ ಅಭ್ಯರ್ಥಿಗಳು ಪಾಸ್ ಆಗಲು ಸಹಕರಿಸಿದ್ದ. ಜೊತೆಗೆ, ಆರ್.ಡಿ. ಪಾಟೀಲಗೆ ಗಿರಾಕಿಗಳನ್ನು ಹುಡುಕಿ ತರುತ್ತಿದ್ದ. ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವ ತಜ್ಞರ ತಂಡವನ್ನು ಈತನೇ ಗೊತ್ತು ಮಾಡುತ್ತಿದ್ದ. ಒಮ್ಮೊಮ್ಮೆ ಈತನೇ ಉತ್ತರಗಳನ್ನು ಹೇಳುತ್ತಿದ್ದ ಎನ್ನಲಾಗಿದೆ.

ಆರ್.ಡಿ. ಪಾಟೀಲ ಸ್ವಗ್ರಾಮ, ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ರಾವುತಪ್ಪ ಪಾಟೀಲ ಜೊತೆಗೆ ಸೇರಿಕೊಂಡು ಅಕ್ರಮ ಮಾಡಿರುವ ಆರೋಪಗಳಿವೆ.

ಬೆಂಗಳೂರಿನಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಎ.ಇ, ಜೆ.ಇ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಅಭ್ಯರ್ಥಿಗಳಿಗೆ ಅಕ್ರಮವಾಗಿ ಉತ್ತರಗಳನ್ನು ಹೇಳಿಸಿದ್ದ ಎಂದು ಗೊತ್ತಾಗಿದೆ.

ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್ ವಾರ್ಡನ್ ಆಗಿ 2019ರಲ್ಲಿ ನೇಮಕವಾಗಿದ್ದ. ಪಿಎಸ್ಐ ಅಕ್ರಮ ಹೊರಬೀಳುತ್ತಿದ್ದಂತೆಯೇ ನಾಪತ್ತೆಯಾಗಿದ್ದ. ಹಾಸ್ಟೆಲ್ ಕರ್ತವ್ಯಕ್ಕೂ ಗೈರಾಗಿದ್ದ ಎಂದು ಮೂಲಗಳು ತಿಳಿಸಿವೆ.

ಸಿಐಡಿ ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ ಹಾಗೂ ವೀರೇಂದ್ರ ಕುಮಾರ್ ಅವರಿದ್ದ ತಂಡ ಆರೋಪಿಯನ್ನು ಬಂಧಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಈತನ ಬಂಧನದೊಂದಿಗೆ 53 ಜನರನ್ನು ಸಿಐಡಿ ಬಂಧಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT