ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳಂದ: ಮಳೆಗೆ ಹದಗೆಟ್ಟ ರಸ್ತೆ, ವಾಹನ ಸಂಚಾರಕ್ಕೆ ಅಡ್ಡಿ

Published : 28 ಸೆಪ್ಟೆಂಬರ್ 2024, 5:55 IST
Last Updated : 28 ಸೆಪ್ಟೆಂಬರ್ 2024, 5:55 IST
ಫಾಲೋ ಮಾಡಿ
Comments

ಆಳಂದ: ತಾಲ್ಲೂಕಿನಲ್ಲಿ ಪ್ರಸಕ್ತ ಮಳೆಗಾಲ ಹೆಚ್ಚಾದಂತೆ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟು, ವಾಹನ ಸಂಚಾರಕ್ಕೆ ಅಡ್ಡಿಯಾಗಿವೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ವಿಶೇಷವಾಗಿ ತಾಲ್ಲೂಕಿನ ಗಡಿಗೆ ಹೊಂದಿಕೊಂಡಿರುವ ಆಳಂದ- ಮಾದನ ಹಿಪ್ಪರಗಿ- ಮೈಂದರ್ಗಿ, ಮಾದನ ಹಿಪ್ಪರಗಿ- ನಿಂಬಾಳ-ಧುಧನಿ ಹಾಗೂ ನರೋಣಾ- ಸಾವಳಗಿ, ಆಳಂದ- ಬಸವಣ್ಣ ಸಂಗೋಳಗಿ ಮುಖ್ಯಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ.

ಆಳಂದ ತಾಲ್ಲೂಕಿನ ಜಿಡಗಾ ಕ್ರಾಸ್‌ ನಂತರ ಮೋಘಾ ಬಿ , ಮಾದನ ಹಿಪ್ಪರಗಿ ಸಂಪರ್ಕ ರಸ್ತೆಯು ನೇರವಾಗಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಾಗಿದೆ. ಮೋಘಾ ಗ್ರಾಮದ ಸಮೀಪದಲ್ಲಿ 3 ಕಿಮೀ ರಸ್ತೆಯು ತಗ್ಗುಗುಂಡಿಗಳು ಹಾಗೂ ಮಳೆ ನೀರಿಗೆ ಹೊಂಡಗಳು ಭರ್ತಿಯಾಗಿವೆ.

ಅಧಿಕ ಸಂಖ್ಯೆಯಲ್ಲಿ ಈ ಭಾಗದಲ್ಲಿ ತರಕಾರಿ ಬೆಳೆಯುವ ರೈತರಿದ್ದು, ಬೆಳಿಗ್ಗೆ, ರಾತ್ರಿ ಟಂಟಂ, ಟೆಂಪೊಗಳಲ್ಲಿ ವಿವಿಧ ತರಕಾರಿ ಹಣ್ಣು ಸಾಗಾಟಕ್ಕೆ ನಿರಂತರ ಸಮಸ್ಯೆ ಎದುರಾಗುತ್ತಿದೆ. ಎದುರಿಗೆ ಬಸ್‌, ಲಾರಿ ಮತ್ತಿತರ ಭಾರಿವಾಹನಗಳು ಎದುರಾದರೆ ಸಂಚಾರ ಕಷ್ಟವಾಗುತ್ತಿದೆ. ಮುಂದೆ ಮೈಂದರ್ಗಿ ರಸ್ತೆಯು ಸಹ ದುರಸ್ತಿ ಕಾರ್ಯ ಕೈಗೊಂಡು 6 ತಿಂಗಳು ಕಳೆದದಿದೆ. ಆದರೆ, ರಸ್ತೆ ಮಾತ್ರ ಪೂರ್ಣಗೊಂಡಿಲ್ಲ. ಜಲ್ಲಿಕಲ್ಲುಗಳು ಹಾಕಿದ ಪರಿಣಾಮ ವಾಹನ ಸಂಚಾರವು ತ್ರಾಸದಾಯಕವಾಗಿದೆ.

ನಿಂಬಾಳ ರಸ್ತೆ: ತಾಲ್ಲೂಕಿನ ಮಾದನ ಹಿಪ್ಪರಗಿ-ಚಲಗೇರಾ, ನಿಂಬಾಳ- ದುಧನಿ ಸಂಪರ್ಕ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಅಫಜಲಪುರ, ಗಾಣಗಾಪುರ, ಸಿಂದಗಿ, ವಿಜಯಪುರ ಸೇರಿದಂತೆ ನೆರೆಯ ಮಹಾರಾಷ್ಟ್ರಕ್ಕೂ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ದುಧನಿಯು ರೈತರ ವಿವಿಧ ಬೆಳೆಗಳು ಖರೀಧಿ ಕೇಂದ್ರವಾಗಿದ್ದು, ಆಳಂದ ತಾಲ್ಲೂಕಿನ ಬಹುತೇಕ ಗ್ರಾಮದ ರೈತರೂ ಉದ್ದು, ಹೆಸರು ಮತ್ತಿತರ ಬೆಳೆಗಳ ಮಾರಾಟಕ್ಕೆ ಈ ರಸ್ತೆ ಮೂಲಕ ಸಂಚರಿಸುವದು ಅನಿವಾರ್ಯ, ಚಲಗೇರಾ, ನಿಂಬಾಳದ ನಡುವಿನ ಈ ರಸ್ತೆಯು ಸಂಪೂರ್ಣ ಹದಗೆಟ್ಟು ಬೈಕ್‌, ಕ್ಲೂಜರ್‌, ಜೀಪ್ ಸೇರಿದಂತೆ ಬಸ್‌, ಕಾರು, ಲಾರಿ, ಟ್ರಾಕ್ಟರ್‌ ಮತ್ತಿತರ ವಾಹನಗಳ ಸಂಚಾರಕ್ಕೆ ಸಂಕಷ್ಟದಾಯಕವಾಗಿದೆ.

ಶಾಲಾ–ಕಾಲೇಜು ವಿದ್ಯಾರ್ಥಿಗಳೂ ರಸ್ತೆಯ ದುಸ್ಥಿತಿಯಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ ನಾಲ್ವರು ಬೈಕ್‌ ಪ್ರಯಾಣಿಕರು ಉರುಳಿ ಬಿದ್ದು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದಿರುವದು ನಡೆದಿದೆ. ಗಾಣಗಾಪುರದ ದತ್ತ ದೇವಸ್ಥಾನ, ಅಫಜಲಪುರ, ವಿಜಯಪುರ ಮತ್ತಿತರ ಸ್ಥಳಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಅಡ್ಡಿಯಾಗುತ್ತಿದೆ.

ನರೋಣಾ ರಸ್ತೆ: ತಾಲ್ಲೂಕಿನ ನರೋಣಾ ಮುಖ್ಯರಸ್ತೆಯ ನರೋಣಾ-ಚಿಂಚನಸೂರು- ಬಬಲಾದ -ಮಹಾಗಾಂವ ಸಂಪರ್ಕ ಕಲ್ಪಿಸಲಿದೆ. ಪ್ರಮುಖವಾಗಿ ನರೋಣಾ ಕ್ಷೇಮಲಿಂಗೇಶ್ವರ ದೇವಸ್ಥಾನ, ಚಿಂಚನಸೂರಿನ ಮಹಾಪುರತಾಯಿ ದೇವಸ್ಥಾನ ಹಾಗೂ ಮುತ್ತಾನ ಬಬಲಾದ ಮಠಕ್ಕೆ ಭಕ್ತರು ನಿರಂತರವಾಗಿ ತೆರಳುವರು. ನರೋಣಾ- ಸಂಗೋಳಗಿ ಮಧ್ಯದ 4 ಕಿಮೀ ರಸ್ತೆಯು ಸಂಪೂರ್ಣ ಹಾಳಾಗಿದೆ. ಮಳೆಗೆ ರಸ್ತೆಯು ಕೊಚ್ಚಿಕೊಂಡು ಕೆಸರುಗದ್ದೆಯಾಗಿದೆ. ಇದರಿಂದ ವಾಹನ ಸಂಚಾರ ಮತ್ತು ರೈತರ ಕೃಷಿ ಚಟುವಟಿಕೆ ಕೈಗೊಳ್ಳಲು ಸಮಸ್ಯೆ ಕಾಡುತ್ತಿದೆ. ರಾತ್ರಿಯಾದಂತೆ ಈ ಮಾರ್ಗದಲ್ಲಿ ಸಂಚರಿಸಲು ಪ್ರಯಾಣಿಕರು ಆತಂಕ ಪಡುತ್ತಿದ್ದಾರೆ.

ಆಳಂದ ತಾಲ್ಲೂಕಿನ ಬಸವಣ್ಣ ಸಂಗೋಳಗಿ ಗ್ರಾಮದ ಸಂಪರ್ಕ ರಸ್ತೆಯು ಹದಗೆಟ್ಟಿದೆ. ಇಲ್ಲಿಯ ಪ್ರಮುಖ ಬಸವೇಶ್ವರ ದೇವಸ್ಥಾನಕ್ಕೆ ಅಧಿಕ ಸಂಖ್ಯೆಯಲ್ಲಿ ದೂರದ ಭಕ್ತರು ಆಗಮಿಸುವರು. ದೇಗಾಂವ, ಬಿಲಗುಂದಾ ಮಧ್ಯದಲ್ಲಿನ ಹಳ್ಳದ ಪ್ರವಾಹಕ್ಕೆ ಸಣ್ಣ ಸೇತುವೆ ಕುಸಿದ ಬಿದ್ದ ಕಾರಣ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುತ್ತಲಿನ ಗ್ರಾಮೀಣ ಭಾಗದ ಜನರು ಆಳಂದ ಪಟ್ಟಣಕ್ಕೆ ಆಗಮಿಸಲು ದೂರದ ಪ್ರಯಾಣ ಅವಲಂಭಿಸಿದ್ದಾರೆ. ರೈತಾಪಿ ವರ್ಗಕ್ಕೆ ರಸ್ತೆ ಹಾಳಾದ ಪರಿಣಾಮ ತೊಂದರೆ ಹೆಚ್ಚಿದೆ.

ಆಳಂದ-ಮುನ್ನೋಳ್ಳಿ ಮಧ್ಯದ ದಬ್ಬದಬ್ಬಿ ಹಳ್ಳದ ಸಮೀಪದ ಮುಖ್ಯರಸ್ತೆಯು ಹದಗೆಟ್ಟಿದ್ದು, ಈ ರಸ್ತೆ ತಕರಾರು ಕೋರ್ಟ್‌ ಮೆಟ್ಟಿಲು ಏರಿದ ಪರಿಣಾಮ ರಸ್ತೆ ಮಳೆ ನೀರಿನಿಂದ ತುಂಬಿ ನಿಂತಿದೆ. ಆಳಂದ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆವರೆಗಿನ ಮುಖ್ಯರಸ್ತೆಯು ಮತ್ತೆ ಹಾಳಾಗಿದೆ. ಎರಡು ಬಾರಿ ದುರಸ್ತಿ ಕೈಗೊಂಡರೂ ರಸ್ತೆ ಮಾತ್ರ ಸುಧಾರಣೆ ಕಾಣಲಿಲ್ಲ. ಭೂಸನೂರು-ಕೊರಳ್ಳಿ ಮಾರ್ಗದ ಸಂಚಾರಕ್ಕೆ ಸಮಸ್ಯೆ ಇದೆ. ಮಾಡಿಯಾಳ-ನಿಂಬರ್ಗಾ ಮಧ್ಯದ ರಸ್ತೆಯು ಮಳೆಗೆ ಹಾಳಾಗಿದ್ದು, ಪ್ರಯಾಣಿಕರು ತೊಂದರೆ ತಪ್ಪಿದಲ್ಲ. ರಸ್ತೆ ದುರಸ್ತಿ ಕಾರ್ಯಕ್ಕೆ ಈಗಾಗಲೇ ಶಾಸಕ ಬಿ.ಆರ್.ಪಾಟೀಲ ಚಾಲನೆ ನೀಡಿದ್ದಾರೆ. ರಸ್ತೆ ಸಂಪೂರ್ಣಗೊಳ್ಳುವರೆಗೂ ಪ್ರಯಾಣಿಕರಿಗೆ ಸಮಸ್ಯೆ ತಪ್ಪಿದಲ್ಲ.

ಆಳಂದ ತಾಲ್ಲೂಕಿನ ಮೋಘಾ ಗ್ರಾಮದ ಮುಖ್ಯರಸ್ತೆ ಮೇಲೆ ತಗ್ಗುಗುಂಡಿಗಳ್ಳಿ ನೀರು
ಆಳಂದ ತಾಲ್ಲೂಕಿನ ಮೋಘಾ ಗ್ರಾಮದ ಮುಖ್ಯರಸ್ತೆ ಮೇಲೆ ತಗ್ಗುಗುಂಡಿಗಳ್ಳಿ ನೀರು
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ-ಮೈಂದರ್ಗಿ ನಡುವಿನ ರಸ್ತೆ ಅಪೂರ್ಣ ಕಾಮಗಾರಿ
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ-ಮೈಂದರ್ಗಿ ನಡುವಿನ ರಸ್ತೆ ಅಪೂರ್ಣ ಕಾಮಗಾರಿ
ಆಳಂದ ತಾಲ್ಲೂಕಿನ ನರೋಣಾ-ಸಂಗೋಳಗಿ ಮಧ್ಯದ ಸಂಪೂರ್ಣ ರಸ್ತೆ ತಗ್ಗುಗುಂಡಿಗಳಲ್ಲಿ ಜಲಾವೃತ್ತ ಸ್ಥಿತಿ
ಆಳಂದ ತಾಲ್ಲೂಕಿನ ನರೋಣಾ-ಸಂಗೋಳಗಿ ಮಧ್ಯದ ಸಂಪೂರ್ಣ ರಸ್ತೆ ತಗ್ಗುಗುಂಡಿಗಳಲ್ಲಿ ಜಲಾವೃತ್ತ ಸ್ಥಿತಿ
ನರೋಣಾ ಚಿಂಚನಸೂರು ಗ್ರಾಮದ ಧಾರ್ಮಿಕ ಸ್ಥಳಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವರು ಮುಖ್ಯಸಂಪರ್ಕ ರಸ್ತೆಯು ಕಾಲ್ನಡಿಗೆಗೂ ಕಷ್ಟವಾಗಿದೆ. ಸಂಪೂರ್ಣ ಹಾಳಾಗಿದ್ದು ತಕ್ಷಣ ದುರಸ್ತಿ ಕೈಗೊಳ್ಳಬೇಕು.
–ಶಿವಕುಮಾರ ಬಿ ರಾಗಿ, ನಿವಾಸಿ ನರೋಣಾ
ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಮಾದನ ಹಿಪ್ಪರಗಿ-ದುಧನಿ ರಸ್ತೆಯು ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಮುಖ್ಯರಸ್ತೆಯಾಗಿದೆ. ಆದರೆ ರಸ್ತೆ ದುಸ್ಥಿತಿಯಿಂದ ನಿರಂತರ ವಾಹನ ಸಂಚಾರವು ಅಪಾಯಕಾರಿಯಾಗಿದೆ
–ನಿಂಗರಾಜ ಉಡುಗಿ, ಮಾದನ ಹಿಪ್ಪರಗಿ
ಆಳಂದ ತಾಲ್ಲೂಕಿನ ಹಾಳಾದ ನಿಂಬರ್ಗಾ-ಮಾಡಿಯಾಳ ರಸ್ತೆ ದುರಸ್ತಿಗೆ ₹25 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ನಿಂಬಾಳ ಮುಖ್ಯರಸ್ತೆ ದುರಸ್ತಿಗೆ ₹15 ಕೋಟಿ ಸೇರಿದಂತೆ ಕುಡಕಿ ಜಾವಳಿ ಮತ್ತಿತರ ರಸ್ತೆ ದುರಸ್ತಿಗೆ ಒಟ್ಟು 35 ಕೋಟಿ ಮಂಜುರಾಗಿದೆ. ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.
–ಆನಂದಕುಮಾರ ಎಇಇ, ಲೋಕಪೋಯೋಗಿ ಇಲಾಖೆ ಆಳಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT