ಶನಿವಾರ, ಏಪ್ರಿಲ್ 1, 2023
23 °C

ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಸಾಲದ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಸು ಹೆಚ್ಚಾಗಿ ಬೊಲೆರೊ ವಾಹನದಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆಸಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ನಗರದ ಇಸ್ಲಾಮಾಬಾದ್ ಕಾಲೊನಿಯ ಮಕ್ಬುಲ್ ಅಬ್ದುಲ್ ಹಮೀದ್ (53) ಎಂಬಾತನಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹ 15 ಸಾವಿರ ದಂಡ ವಿಧಿಸಿದೆ.

ಅಪರಾಧಿ ಮಕ್ಬುಲ್ ಕೊಲೆಯಾದ ಅಬ್ದುಲ್ ರಹೀಂ ಎಂಬುವವರಿಗೆ ಹಣ ಕೇಳಿದ್ದ. ವಿದೇಶಕ್ಕೆ ಹೋಗುವ ಮೊದಲು ಕೊಡುವುದಾಗಿ ಹೇಳಿ ನಂತರ ಕೊಟ್ಟಿರಲಿಲ್ಲ. ಇದರಿಂದ ಕುಪಿತಗೊಂಡ ಮಕ್ಬುಲ್ ಜೀವ ಬೆದರಿಕೆ ಹಾಕಿದ್ದ. 2020ರ ಮೇ 15ರಂದು ಅಬ್ದುಲ್ ರಹೀಂ ತಮ್ಮ ಸ್ಕೂಟರ್‌ನಲ್ಲಿ ಹುಮನಾಬಾದ್ ರಿಂಗ್ ರೋಡ್ ಸಮೀಪದ ಹಾಗರಗಾ ಕ್ರಾಸ್‌ನ ಪೆಟ್ರೋಲ್ ಪಂಪ್ ಬಳಿ ಹೋಗುತ್ತಿದ್ದಾಗ ಹಿಂದಿನಿಂದ ಬೊಲೆರೊ ವಾಹನ ಚಲಾಯಿಸಿಕೊಂಡು ಬಂದ ಮಕ್ಬುಲ್ ಡಿಕ್ಕಿ ಹೊಡೆಸಿ ಪರಾರಿಯಾದ. ಭಾರಿ ಗಾಯಗೊಂಡಿದ್ದ ಅಬ್ದುಲ್ ರಹೀಂ ಮೃತಪಟ್ಟರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ರೋಜಾ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಎಸ್. ಅಸ್ಲಂ ಬಾಷಾ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದರು.

ಸರ್ಕಾರದ ಪರವಾಗಿ ಮೂರನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ತೇಲಿ ವಾದ ಮಂಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು