ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ₹ 6 ಕೋಟಿ ವೆಚ್ಚದಲ್ಲಿ ಕೋವಿಡ್ ಆರೋಗ್ಯ ಹಸ್ತ: ಧ್ರುವ ನಾರಾಯಣ

Last Updated 8 ಅಕ್ಟೋಬರ್ 2020, 6:27 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ಮಾಡುವಲ್ಲಿ ವಿಫಲ ಆಗಿರುವುದರಿಂದ ₹ 6 ಕೋಟಿ ವೆಚ್ಚದಲ್ಲಿ ಜನರಿಗೆ ಸೋಂಕು ತಗುಲದಂತೆ ತಡೆಯಲು ಕಾಂಗ್ರೆಸ್ ನಿಂದ ಆರೋಗ್ಯ ಹಸ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ 15 ಸಾವಿರ ಕೊರೊನಾ ವಾರಿಯರ್ ಗಳನ್ನು ನಿಯೋಜಿಸಲಾಗಿದೆ ಎಂದು ಯೋಜನೆ ನಿರ್ವಹಣೆ ಅಧ್ಯಕ್ಷ, ಮಾಜಿ ಸಂಸದ ಧ್ರುವನಾರಾಯಣ ಹೇಳಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವಾರಿಯರ್ ಗಳಿಗೆ ತರಬೇತಿಗೆ ನೀಡಲು ನುರಿತ ತಜ್ಞರನ್ನೂ ನೇಮಿಸಲಾಗಿದೆ. ಚಾಮರಾಜನಗರದಿಂದ ಬೀದರ್ ವರೆಗೆ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. 15000 ಕಾರ್ಯಕರ್ತರಿಗೆ ತಲಾ ಒಂದು ಲಕ್ಷ ರೂಪಾಯಿ ವಿಮೆಯನ್ನು ಶಾಸಕ ಹಾಗೂ ಆರೋಗ್ಯ ಹಸ್ತ ಉಸ್ತುವಾರಿ ಡಾ.ಅಜಯ್ ಸಿಂಗ್ ವೈಯಕ್ತಿಕವಾಗಿ ಮಾಡಿಸಿದ್ದಾರೆ. ತಲಾ ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶದ ವಾರ್ಡ್ಗ ಳಿಗೆ ಒಂದು ಕಿಟ್ ಕೊಡಲಾಗಿದ್ದು ಇದುವರೆಗೆ 8400 ಕಿಟ್ ವಿತರಿಸಲಾಗಿದೆ. 220 ವೈದ್ಯರನ್ನು ಈ ಪ್ರಕ್ರಿಯೆಗೆ ನೇಮಿಸಲಾಗಿದೆ ಎಂದು ‌ಹೇಳಿದರು.

ಆರೋಗ್ಯ ಇಲಾಖೆ ನೋಡಿಕೊಳ್ಳುವ ಸಚಿವರು ಯಾರು ಎನ್ನುವುದೇ ತಿಳಿಯುತ್ತಿಲ್ಲ. ಶ್ರೀರಾಮುಲು, ಡಾ.ಕೆ. ಸುಧಾಕರ್, ಆರ್. ಅಶೋಕ ಹಾಗೂ ಎಸ್. ಸುರೇಶ್ ಕುಮಾರ ಅವರುಗಳೆಲ್ಲ ಕೆಲ ಕಾಲ ಉಸ್ತುವಾರಿ ನೋಡಿಕೊಂಡಿದ್ದರು. ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಕರಣಗಳ ಕೊರತೆಯಿದೆ. ಕೊರೊನಾ ನಿಯಂತ್ರಣದ ಹೆಸರಲ್ಲಿ‌ ಕೋಟಿಗಟ್ಟಲೇ ಸಾರ್ವಜನಿಕ ಹಣ ದುರುಪಯೋಗವಾಗಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಈಗಾಗಾಲೇ ಈ ಕುರಿತು ದಾಖಲೆ ಬಿಡುಗಡೆ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ರಾಜ್ಯದಿಂದ ಆಯ್ಕೆಯಾಗಿ ಹೋದ 25 ಸಂಸದರಿಗೆ ಮೋದಿ ಎದುರು ಮಾತನಾಡಿ ರಾಜ್ಯಕ್ಕೆ ಬರಬೇಕಾಗಿರುವ ಪರಿಹಾರ ಹಾಗೂ ಅನುದಾನ‌ ತರುವಲ್ಲಿ ವಿಫಲರಾಗಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕವಾಗಿ‌ ದಿವಾಳಿಯಾಗಿದೆ. ಸುಮಾರು ₹ 30 ಸಾವಿರ ಕೋಟಿ ಸಾಲ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ರಾಜ್ಯದ ಸಾಲ ₹ 3.68 ಲಕ್ಷ ಕೋಟಿ ಇದ್ದು ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ ₹ 62, 402 ರೂಪಾಯಿ ಸಾಲ ಇದೆ. ಈಗ ಮತ್ತೆ ಸಾಲ ಮಾಡಿದರೆ ಮತ್ತಷ್ಟು ಹೊರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇತ್ತೀಚೆಗೆ ಆರ್ಥಿಕ ಸಚಿವರು ₹ 20 ಲಕ್ಷ ಕೋಟಿ ಹಣ ಆತ್ಮ ನಿರ್ಭರ ಅಡಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಈಗಾಗಲೇ ಕುಸಿದಿರುವ ಆರ್ಥಿಕ‌ ವ್ಯವಸ್ಥೆ ಗೆ ಇದು ಯಾವುದೇ ರೀತಿ‌ ಪ್ರಯೋಜನವಾಗದೇ ಇದು ಆತ್ಮಘಾತುಕವಾಗಲಿದೆ‌ ಎಂದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ಡಾ. ಅಜಯ್ ಸಿಂಗ್ ಮಾತನಾಡಿ, ಸರ್ಕಾರ ಮಾಡಬೇಕಾಗಿರುವ ಈ ಕಾರ್ಯಕ್ರಮವನ್ನು ನಾವು ಮಾಡಬೇಕು ಎನ್ನುವ ಉದ್ದೇಶ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿಶೇಷ ಆಸಕ್ತಿಯಿಂದಾಗಿ ರಾಜ್ಯ 7400 ಗ್ರಾಮ ಪಂಚಾಯತಿಗಳಲ್ಲಿ ಹಾಗೂ ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.

ರಾಜ್ಯದಲ್ಲಿ ಈಗ 6.50 ಲಕ್ಷ ಸೋಂಕಿತರಿದ್ದು, ಪ್ರತಿನಿತ್ಯ ದೇಶದಲ್ಲಿ 75,000 ಪ್ರಕರಣಗಳು ದಾಖಲಾಗುತ್ತಿದ್ದರೆ, ರಾಜ್ಯದಲ್ಲಿ 10,000 ಪ್ರಕರಣಗಳು ವರದಿಯಾಗುತ್ತಿವೆ. ಜನರು ಈ ಕುರಿತು ಜಾಗೃತರಾಗಬೇಕು. ಕೇರಳ ಹಾಗೂ ದೆಹಲಿಯಲ್ಲಿ ಎರಡನೆಯ ಬಾರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಸೋಂಕು ಮತ್ತಷ್ಟು ತೀವ್ರವಾಗಲಿದ್ದು ಜನರಿಗೆ ತಿಳಿವಳಿಕೆ ನೀಡಲು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಯೋಚಿಸಿ ಈ ಕಾರ್ಯಕ್ರಮ ನಿರೂಪಿಸಿದೆ. ಇದು ನಮ್ಮ ಪಕ್ಷದ ಅಳಿಲು ಸೇವೆ ಎಂದು ವಿವರಿಸಿದರು.

ಕೇಂದ್ರ ಸಚಿವ ಸುರೇಶ ಅಂಗಡಿ, ರಾಜ್ಯ ಸಭಾ ಸದಸ್ಯ ಅಶೋಕ ಗಸ್ತಿ, ಶಾಸಕ ನಾರಾಯಣ ರಾವ್ ಅವರ ಕೊರೋನಾದಿಂದ ಮರಣಹೊಂದಿದ್ದಾರೆ. ಸೋಂಕು ಈಗಾಗಲೇ ಸಮುದಾಯ ಮಟ್ಟದಲ್ಲಿ ವ್ಯಾಪಕವಾಗಿ ಹಬ್ಬಿದೆ. ಇದು ಇನ್ನೂ ಯಾವ ಮಟ್ಟಕ್ಕೆ ಹೋಗಿ ಮುಟ್ಟಲಿದೆ ಎನ್ನುವುದು ತಿಳಿಯದಾಗಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗದುಕೊಳ್ಳದೇ ಹಣ ಲೂಟಿಯಲ್ಲಿ ತೊಡಗಿದೆ ಎಂದು ಟೀಕಿಸಿದರು.

ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕಿ ಖನೀಜ್ ಫಾತಿಮಾ, ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ, ಮಧುಸೂದನ್, ಕಿರಣ ದೇಶಮುಖ್ ಸೇರಿದಂತೆ ಮತ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT