ಶನಿವಾರ, ಜುಲೈ 24, 2021
22 °C
ವಿವಿಧ ನಾಲೆಗಳಿಂದ ಹರಿದು ಬರುತ್ತಿರುವ ನೀರು; ನೂರಾರು ಎಕರೆ ಬೆಳೆ ಹಾನಿ

ಕಲಬುರ್ಗಿ: ಸೊನ್ನ, ನಾಗರಾಳ ಜಲಾಶಯದಿಂದ ನೀರು ಹೊರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ ಹೊರವಲಯದ ಕಪನೂರ ಹಳ್ಳದ ನೀರು ಹೊಲಗಳಿಗೆ ನುಗ್ಗಿದ್ದರಿಂದ ಬೆಳೆಗೆ ಹಾನಿಯಾಗಿದೆ

ಕಲಬುರ್ಗಿ: ಬುಧವಾರ ಹಾಗೂ ಗುರುವಾರ ಸುರಿದ ಭಾರಿ ವರ್ಷಧಾರೆಯಿಂದಾಗಿ ಜಿಲ್ಲೆಯ ಪ್ರಮುಖ ಜಲಾಶಯ, ಬ್ರಿಜ್‌ ಕಂ ಬ್ಯಾರೇಜ್‌ಗಳು ಭರ್ತಿಯಾಗಿವೆ.

ಜಿಲ್ಲೆಯ ಕಮಲಾಪುರ ಸುತ್ತಮುತ್ತ ಹಾಗೂ ಬೀದರ್‌ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಮಲಾಪುರ ತಾಲ್ಲೂಕಿನ ಬೆಳಕೋಟಾ ಗ್ರಾಮದ ಬಳಿ ಇರುವ ಗಂಡೋರಿ ನಾಲಾಕ್ಕೆ (ಚಂದ್ರಶೇಖರ ಪಾಟೀಲ ಅಣೆಕಟ್ಟು) ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು, ಭರ್ತಿಯಾಗಲು ಎರಡೂವರೆ ಮೀಟರ್‌ ಬಾಕಿ ಇದೆ.

ನಾಲಾ ಭರ್ತಿಯಾದ ಬಳಿಕ ನೀರನ್ನು ಹೊರಬಿಡಲು ಸಿದ್ಧತೆ ನಡೆಸಿದ್ದು, ಜಲಾಶಯದ ಅಂಚಿನಲ್ಲಿರುವ ಗ್ರಾಮಗಳ ಜನರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಗುರುವಾರವೂ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನೀರಾವರಿ ನಿಗಮದ ಎಂಜಿನಿಯರ್‌ಗಳು ಪ್ರತಿ ಗಂಟೆಗೆ ಒಮ್ಮೆಯಂತೆ ಜಲಾಶಯದ ನೀರಿನ ಮಟ್ಟದ ನಿಗಾ ಇರಿಸಿದ್ದಾರೆ.

ಕಮಲಾಪುರ ಸುತ್ತಮುತ್ತಲಿನ ಬೆಳಕೋಟಾ, ನವನಿಹಾಳದ ಮಧ್ಯದಲ್ಲಿ ಹಾದು ಹೋಗಿರುವ ಹಳ್ಳದಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದ್ದರಿಂದ ಸೇತುವೆ ಸಂಚಾರಕ್ಕೆ ಮುಕ್ತವಾಗಿತ್ತು. ದಸ್ತಾಪುರ ಗ್ರಾಮದ ಬಳಿ ಇರುವ ಸೇತುವೆಯೂ ಸಂಚಾರಕ್ಕೆ ಮುಕ್ತವಾಗಿದೆ. ಗುರುವಾರ ಮಧ್ಯಾಹ್ನದ ಬಳಿಕ ಗಂಡೋರಿ ನಾಲಾ ಸುತ್ತಮುತ್ತ ಮತ್ತೆ ಮಳೆ ಸುರಿದಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಕಮಲಾಪುರ ತಹಶೀಲ್ದಾರ್‌ ಅಂಜುಮ್ ತಬಸ್ಸುಮ್ ಅವರು ನಾಲಾ ಜಲಾಶಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ‘ಜಲಾಶಯದ ಸಂಗ್ರಹ ಸಾಮರ್ಥ್ಯ 1.8 ಟಿಎಂಸಿ ಅಡಿ ಇದ್ದು, ಭರ್ತಿಯಾಗಲು ಎರಡೂವರೆ ಮೀಟರ್‌ ಮಾತ್ರ ಬಾಕಿ ಇದೆ. ಬಸವ ಕಲ್ಯಾಣದ ಚಿಕಣಾ ನಾಲೆ ಸೇರಿದಂತೆ ಸಣ್ಣಪುಟ್ಟ ಹಳ್ಳ, ತೊರೆಗಳು ತುಂಬಿ ಹರಿಯುತ್ತಿವೆ. ಹಮಾಮಾನ ಇಲಾಖೆ ಜುಲೈ 14ರಿಂದ 16ರವರೆಗೆ ಭಾರಿ ಮಳೆ ಬರಲಿದೆ ಎಂದು ಮುನ್ಸೂಚನೆ ನೀಡಿದೆ. ಜಲಾಶಯದಿಂದ ನೀರು ಬಿಟ್ಟರೆ ಕೆಳಗಿನ ಪ್ರದೇಶದ ಜನರು ಇತ್ತ ಬಾರದಂತೆ ಸೂಚನೆ ನೀಡಲಾಗಿದೆ. ಪರಿಸ್ಥಿತಿಯನ್ನು ಎದುರಿಸಲು ಕಂದಾಯ ಇಲಾಖೆ, ‍ಪೊಲೀಸ್‌ ಇಲಾಖೆ ಸಿದ್ಧತೆ ಮಾಡಿಕೊಂಡಿವೆ’ ಎಂದರು.

ಗಂಡೋರಿ ನಾಲಾ ಜಲಾಶಯ ಗರಿಷ್ಠ 467 ಮೀಟರ್ ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ 464.20 ಮೀಟರ್‌ ನೀರಿನ ಸಂಗ್ರಹವಿದೆ. ಎರಡು ದಿನಗಳಿಂದ 1580 ಕ್ಯುಸೆಕ್‌ ನೀರು ಹರಿದು ಬಂದಿದೆ. ಈಗ 200 ಕ್ಯುಸೆಕ್‌ ಒಳಹರಿವಿದೆ ಎಂದು ಜಲಾಶಯದ ಎಂಜಿನಿಯರ್ ಫಾರಿಕ್ ತಿಳಿಸಿದರು.

ಬೆಣ್ಣೆತೊರಾ ಜಲಾಶಯ ಗರಿಷ್ಠ 438.89 ಮೀಟರ್. ಸದ್ಯ 436.40 ಮೀಟರ್‌ ನೀರು ಸಂಗ್ರಹಗೊಂಡಿದೆ. ಎರಡು ದಿನಗಳಿಂದ 0.58 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಗುರುವಾರ ಬೆಳಿಗ್ಗೆ 5 ಸಾವಿರ ಕ್ಯುಸೆಕ್‌ ಒಳಹರಿವು ಇತ್ತು ಎಂದು ಜಲಾಶಯದ ಕಿರಿಯ ಎಂಜಿನಿಯರ್‌ ವಿರೇಶ ಮಾಮನಿ ತಿಳಿಸಿದ್ದಾರೆ.

ತಾಲ್ಲೂಕಿನ ಶರಣಸಿರಸಗಿ ಗ್ರಾಮದಲ್ಲಿ 116 ಮಿಲಿ ಮೀಟರ್, ಆಳಂದ ತಾಲ್ಲೂಕು ಕಡಗಂಚಿಯ ಕೇಂದ್ರೀಯ ವಿ.ವಿ. ಬಳಿ 108 ಮಿ.ಮೀ. ಮಳೆ ಸುರಿದಿದೆ.

ಗ್ರಾಮಗಳ ಸಂಪರ್ಕ ಕಡಿತ

ಚಿಂಚೋಳಿ: ತಾಲ್ಲೂಕಿನ ನಾಗರಾಳ ಜಲಾಶಯದಿಂದ ನದಿಗೆ ಗುರುವಾರ ನೀರು ಬಿಟ್ಟಿದ್ದರಿಂದ ವಿವಿಧೆಡೆ ಸಂಪರ್ಕ ಕಡಿತವಾಗಿತ್ತು.

ಚಿಮ್ಮನಚೋಡ ಬಳಿಯ ಮುಲ್ಲಾಮಾರಿ ನದಿಯ ಸೇತುವೆ, ತಾಜಲಾಪುರ ಸೇತುವೆ, ಕನಕಪುರ, ಗಾರಂಪಳ್ಳಿ, ನೀಮಾಹೊಸಳ್ಳಿ, ಚಂದಾಪುರ ಮತ್ತು ಗರಕಪಳ್ಳಿ-ಭಕ್ತಂಪಳ್ಳಿ ಬ್ರಿಜ್ ಕಂ ಬ್ಯಾರೇಜುಗಳು ಪ್ರವಾಹದ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದವು. ಇದರಿಂದ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿತ್ತು.

ಚಂದ್ರಂಪಳ್ಳಿ ಜಲಾಶಯಕ್ಕೆ ಮೂರು ಅಡಿ ನೀರು ಬಂದಿದೆ. ಒಳ ಹರಿವು 722 ಕ್ಯುಸೆಕ್ ಇದ್ದು ಜಲಾಶಯದ ನೀರಿನ ಮಟ್ಟ 1587 ಅಡಿ ಇದೆ ಎಂದು ಸಹಾಯಕ ಎಂಜಿನಿಯರ್ ದಿನೇಶ ಚವ್ಹಾಣ ತಿಳಿಸಿದರು.

2 ಕೆರೆಗಳ ಭರ್ತಿ: ಸಣ್ಣ ನೀರಾವರಿ ಇಲಾಖೆಯ ಐನಾಪುರ ಹಳೆಯ ಮತ್ತು ಹೊಸ ಕೆರೆಗಳು ಭರ್ತಿಯಾಗಿವೆ. ಸಾಲೇಬೀರನಹಳ್ಳಿ ಕೆರೆಗೆ 6 ಅಡಿ, ತುಮಕುಂಟಾ 2 ಅಡಿ, ಹೂಡದಳ್ಳಿ, ದೋಟಿಕೊಳ್ಳ, ಚಂದನಕೇರಾ ಕೆರೆಗಳಿಗೆ 2 ಅಡಿ ನೀರು ಹರಿದು ಬಂದಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಶರಣಪ್ಪ ಕೇಶ್ವಾರ್ ತಿಳಿಸಿದರು.

ಸೇತುವೆ ಮೇಲೆ ಪ್ರವಾಹ: ಸಂಚಾರ ಸ್ಥಗಿತ

ಕಮಲಾಪುರ: ಕಳೆದೆರಡು ದಿನಗಳಿಂದ ಸುರಿದ ಮಳೆಗೆ ತಾಲ್ಲೂಕಿನ ಕುದಮೂಡ ಗ್ರಾಮದ ಪಕ್ಕದ ಎರಡೂ ಹಳ್ಳದಲ್ಲಿ ಪ್ರವಾಹ ಉಂಟಾಗಿ ಸಂಪರ್ಕ ಕಡಿತಗೊಂಡಿತು.

ಗ್ರಾಮಕ್ಕೆ ಎರಡು ಕಡೆಗಳಿಂದ ರಸ್ತೆ ಸಂಪರ್ಕವಿದೆ. ಎರಡೂ ಕಡೆಗಳಲ್ಲಿ ಹಳ್ಳಗಳಿದ್ದು ಕಡಿಮೆ ಎತ್ತರದ ಸೇತುವೆಗಳನ್ನು ನಿರ್ಮಿಸಲಾಗಿದೆ. ಸ್ವಲ್ಪ ಮಳೆಯಾದರೂ ಸೇತುವೆ ಮೇಲೆ ಪ್ರವಾಹ ಬರುತ್ತದೆ. ಸಂಚಾರ ಸ್ಥಗಿತಗೊಂಡು ಗ್ರಾಮದ ಸಂಪರ್ಕ ಕಡಿತಗೊಳುತ್ತದೆ. ಊರಾಚೆಗಿನ ಹೊಲ ಗದ್ದೆಗಳಿಗೆ, ನಗರಗಳಿಗೆ ತೆರಳಿದ ಜನ ಜಾನುವಾರು ಗ್ರಾಮ ಪ್ರವೇಶಿಸಲು ಪರದಾಡಬೇಕಾಗುತ್ತಿದೆ.

ಗ್ರಾಮದ ಬಹುತೇಕ ಜಮೀನುಗಳು ಈ ಹಳ್ಳದಾಚೆಗೆ ಇವೆ. ಬೆಳಿಗ್ಗೆಯಾದರೆ ರೈತರು ಜಾನುವಾರುಗಳೊಂದಿಗೆ ಹೊಲಗಳಿಗೆ ತೆರಳುತ್ತಾರೆ. ಮಧ್ಯಾಹ್ನ ಮಳೆಯಾದರೆ ಪ್ರವಾಹ ಉಂಟಾಗುತ್ತದೆ. ಪ್ರವಾಹ ಕಡಿಮೆಯಾಗುವವರೆಗೆ ಕಾದು ಮನೆ ಸೇರಬೇಕು. ಸೇತುವೆ ಪಕ್ಕದ ಮಣ್ಣು ಕೊಚ್ಚಿಹೋಗಿದ್ದು ಹೊಂಡ ಬಿದ್ದಿದೆ. ಅನೇಕರು ಹೊಂಡದಲ್ಲಿ ಬಿದ್ದು ಗಾಯಗೊಂಡಿದ್ದಾರೆ ಸೇತುವೆ ಎತ್ತರಿಸಬೇಕು ಎಂದು ಮುಖಂಡ ಮಲ್ಲಿಕಾರ್ಜುನ ತಳಕೇರಿ ಆಗ್ರಹಿಸಿದರು.

ಎರಡೂ ಹಳ್ಳದ ಪ್ರವಾಹದಿಂದ ದಂಡೆಗಿರುವ ನೂರಾರು ಎಕರೆ ಜಮೀನಿನಲ್ಲಿ ಬೆಳೆ ಹಾನಿಯಾಗಿದೆ. ಮಣ್ಣು ಕೊಚ್ಚಿ ಹೋಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಬೆಳೆ ಹಾನಿ: ತಾಲ್ಲೂಕಿನಾದ್ಯಂತ ಎಲ್ಲ ಹಳ್ಳ ನಾಲೆಗಳು ತುಂಬಿ ಹರಿದಿದ್ದು ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ. ಬಾಚನಾಳ ಗ್ರಾಮದ ವಿಜಯಕುಮಾರ ಪಾಟೀಲ ಅವರ ಎರಡು ಎಕರೆ ಪುದಿನ, ಎರಡು ಎಕರೆ ಹೆಸರು ಬೆಳೆ ಕೊಚ್ಚಿ ಹೋಗಿದೆ. ಹೊಲದ ಮಣ್ಣು ಸಂಪೂರ್ಣ ಕೊಚ್ಚಿಹೋಗಿದೆ.

ರಾಜನಾಳ, ಗೊಬ್ಬರವಾಡಿ, ಭುಂಯಾರ, ಜೀವಣಗಿ, ಸೊಂತ, ಮರಮಂಚಿ, ಅವರಾದ, ಆಲಗೂಡ, ಬನ್ನೂರ, ಕುಮಸಿ ಗ್ರಾಮಗಳಲ್ಲಿ ಮಳೆ ಹೆಚ್ಚಾಗಿ ಹೊಲಗದ್ದೆಗೆಳಲ್ಲಿ ನೀರು ನಿಂತಿದ್ದು, ಬೆಳೆ ಹಾನಿಯಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಸೊನ್ನ ಬ್ಯಾರೇಜ್‌ನಿಂದ 11 ಸಾವಿರ ಕ್ಯುಸೆಕ್‌ ಹೊರಕ್ಕೆ

ಅಫಜಲಪುರ: ತಾಲ್ಲೂಕಿನ ಸೊನ್ನ ಗ್ರಾಮದ ಸಮೀಪದ ಭೀಮಾ ಬ್ಯಾರೇಜ್‌ನ ಸುತ್ತಮುತ್ತ ಮಳೆಯಾಗುತ್ತಿದ್ದು, ನದಿಗೆ ಸುಮಾರು 11 ಸಾವಿರ ಕ್ಯುಸೆಕ್‌ ನೀರು  ಹರಿದುಬರುತ್ತಿದೆ. ಬ್ಯಾರೇಜ್‌ನಿಂದ 2 ಗೇಟುಗಳ ಮೂಲಕ ಗುರುವಾರ ಅಷ್ಟೇ ಪ್ರಮಾಣದ ನೀರನ್ನು ಬಿಡಲಾಗುತ್ತಿದೆ ಎಂದು ಭೀಮಾ ಏತ ನೀರಾವರಿ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅಶೋಕ ಕಲಾಲ ತಿಳಿಸಿದರು.

ಮಹಾರಾಷ್ಟ್ರದ ಉಜನಿ ಹಾಗೂ ವೀರಭಟ್ಕರ್‌ ಬ್ಯಾರೇಜ್‌ಗಳು ಇನ್ನೂ ಭರ್ತಿಯಾಗಿಲ್ಲ. ಹೀಗಾಗಿ ಅಲ್ಲಿಂದ ನಮಗೆ ನೀರು ಬರುತ್ತಿಲ್ಲ. ಆದರೆ ಭೀಮಾ ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಮಳೆ ನೀರಿನಿಂದಲೇ ಬ್ಯಾರೇಜ್‌ ಭರ್ತಿಯಾಗುತ್ತಿದೆ. ಬ್ಯಾರೇಜ್‌ನ ಸಾಮರ್ಥ್ಯ 3.16 ಟಿಎಂಸಿ ಅಡಿ ಇದ್ದು, ಗುರುವಾರವರೆಗೆ 2.85 ಟಿಎಂಸಿ ಅಡಿ ನೀರು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು