ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕಾಗಿಣಾ, ಮುಲ್ಲಾಮಾರಿ ಒಡಲು ಭರ್ತಿ

ಸೇತುವೆಗಳ ಮೇಲೆ ಹರಿದಾಡಿದ ನದಿ ನೀರು: ಹತ್ತಾರು ಹಳ್ಳಿಗಳ ಸಂಪರ್ಕ ಕಡಿತ
Published 25 ಜುಲೈ 2023, 16:28 IST
Last Updated 25 ಜುಲೈ 2023, 16:28 IST
ಅಕ್ಷರ ಗಾತ್ರ

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಪುಷ್ಯ ಮಳೆಯ ಅಬ್ಬರ ತಗ್ಗಿದ್ದರೂ ಮಂಗಳವಾರ ಇಡೀ ದಿನ ಬಿಟ್ಟು ಬಿಟ್ಟು ಜಿಟಿಜಿಟಿಯಾಗಿ ಸುರಿಯಿತು. ನೆರೆಯ ತೆಲಂಗಾಣ ರಾಜ್ಯದ ಗಡಿ ಭಾಗದಲ್ಲಿ ಉತ್ತಮ ಮಳೆ ಬಿದ್ದಿದ್ದರಿಂದ ಕಾಗಿಣಾ ಮತ್ತು ಮುಲ್ಲಾಮಾರಿ ನದಿಗಳಲ್ಲಿ ಪ್ರವಾಹ ಉಂಟಾಯಿತು.

ಚಿಂಚೋಳಿ, ಸೇಡಂ ಮತ್ತು ಚಿತ್ತಾಪುರ ತಾಲ್ಲೂಕುಗಳಲ್ಲಿನ ನದಿ ತೀರದ ಜಮೀನುಗಳಿಗೆ ನೀರು ನುಗ್ಗಿತ್ತು. ಕೆಲವು ಗ್ರಾಮಗಳ ನಡುವಿನ ಸೇತುವೆಗಳು ನೀರಲ್ಲಿ ಮುಳುಗಡೆಯಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು.

ಕಮಲಾಪುರ ತಾಲ್ಲೂಕಿನ ಗಂಡೋರಿನಾಲಾ ಜಲಾಶಯದ ನೀರಿನ ಮಟ್ಟವೂ ಹೆಚ್ಚಾಗಿದ್ದು, ರೈತರು ತಮ್ಮ ಕೃಷಿ ಪಂಪ್‌ಸೆಟ್ ಹೊರ ತೆಗೆದರು. ಕಾಳಗಿ ತಾಲ್ಲೂಕಿನ ರಾಜಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮೈದಾನಕ್ಕೆ ಮಳೆ ನೀರು ನುಗ್ಗಿತು.

ನಿರಂತರ ಮಳೆಗೆ ಸೇಡಂ ತಾಲ್ಲೂಕಿನ ಸಂಗಾವಿ(ಎಂ), ನಾಚವಾರ, ಆಡಕಿ, ಕೊಂತನಪಲ್ಲಿ, ಗಂಗಾರಾವಲಪ್ಪಲಿ, ಇಟಕಾಲ ಗ್ರಾಮಗಳಲ್ಲಿ 6 ಮನೆಗಳು ಬಿದ್ದಿದ್ದು, ಒಟ್ಟಾರಿ 58ಕ್ಕೆ ಏರಿದೆ ಎಂದು ತಹಶೀಲ್ದಾರ್ ಕಚೇರಿ ಮೂಲಗಳು ತಿಳಿಸಿವೆ.

ಸೇಡಂ 38.2 ಮಿ.ಮೀ, ಆಡಕಿ 21, ಮುಧೋಳ 27.2, ಕೋಡ್ಲಾ 24.6 ಮತ್ತು ಕೋಲ್ಕುಂದಾದಲ್ಲಿ 27.6 ಮಿ.ಮೀ ಮಳೆಯಾಗಿದೆ.

ಮುಂಗಾರಿನ ಆರಂಭದಲ್ಲಿ ಮಳೆ ಕೊರತೆ ಕಾರಣ ರೈತರು ಆತಂಕಕ್ಕೆ ಒಳಗಾಗಿದ್ದರು. ಮಳೆ ಕೊರತೆಯ ನಡುವೆ ಚಿತ್ತಾಪುರ, ಚಿಂಚೋಳಿ, ಸೇಡಂ ಸೇರಿ ಕೆಲವು ತಾಲ್ಲೂಕುಗಳಲ್ಲಿ ಶೇ 25ರಷ್ಟು ಬಿತ್ತನೆ ಆಗಿತ್ತು. ಕಳೆದ ಒಂದು ವಾರದಿಂದ ಉತ್ತಮವಾಗಿ ಮಳೆಯಾಗುತ್ತಿದೆ. ಸ್ವಲ್ಪವೇ ಮಳೆ ಬಿಡುವು ಮಾಡಿಕೊಟ್ಟರೆ ತೊಗರಿ, ಹತ್ತಿ, ಸೂರ್ಯಕಾಂತಿ, ನವಣೆ ಬಿತ್ತನೆ ಮಾಡುತ್ತವೆ ಎನ್ನುತ್ತಾರೆ ರೈತರು.

ಕೃಷಿ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತದೆ. ಬಿತ್ತನೆ ಕಾರ್ಯಗಳಿಗೆ ವಿಳಂಬವಾಗಬಹುದು ಎಂಬ ಚಡಪಡಿಕೆ ರೈತರದಾಗಿದೆ. ಕಡಿಮೆ ಮಳೆಯಾಗಿ, ಬಿತ್ತನೆ ಅನುಕೂಲವಾದ ಕೆಲವೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ನಗರದ ಜನಜೀವನ ಅಸ್ತವ್ಯಸ್ತ: ಕೆಲವು ದಿನಗಳಿಂದ ಬೀಳುತ್ತಿರುವ ಜಿಟಿಜಿಟಿ ಮಳೆಗೆ ನಗರದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಮಳೆ ನೀರು ನಿಂತು, ರಸ್ತೆ ಯಾವುದು ತಗ್ಗು ಯಾವುದು ಎಂಬುದು ವಾಹನ ಸವಾರರಿಗೆ ತಿಳಿಯುತ್ತಿಲ್ಲ. ಹರಸಾಹಸಪಟ್ಟು ಸಂಚರಿಸುವಂತೆ ಆಗಿದೆ. ಚರಂಡಿಯ ನೀರು ರಸ್ತೆ ಮೇಲೆ ಹರಿದಾಡಿತು.

ಮುಲ್ಲಾಮಾರಿಗೆ ಹೆಚ್ಚಿನ ನೀರು: ಚಿಂಚೋಳಿ ತಾಲ್ಲೂಕಿನ ನಾಗರಾಳ ಮತ್ತು ಚಂದ್ರಂಪಳ್ಳಿ ಜಲಾಶಯಗಳಿಂದ ಕ್ರಮವಾಗಿ 5,500 ಮತ್ತು 4,300 ಕ್ಯುಸೆಕ್ ನೀರು ಮುಲ್ಲಾಮಾರಿ ನದಿಗೆ ಮಂಗಳವಾರ ಹರಿಬಿಡಲಾಯಿತು.

ಚಂದ್ರಂಪಳ್ಳಿ ಗ್ರಾಮದ ಪ್ರವೇಶದಲ್ಲಿರುವ ಸೇತುವೆಯ ಕೆಳಗಡೆ ಭೋರ್ಗರೆಯುವ ನೀರಿನ ದೃಶ್ಯ ಗಮನಸೆಳೆಯಿತು. 

‘ನಾಗರಾಳ ಜಲಾಶಯದ ಒಳಹರಿವು ತಗ್ಗಿದ್ದು, 4 ಸಾವಿರ ಕ್ಯುಸೆಕ್ ಒಳಹರಿವಿದೆ. ನೀರು ಬಿಡುಗಡೆ ಮುಂದುವರಿಯಲಿದೆ’ ಎಂದು ಎಇಇ ಅರುಣಕುಮಾರ ವಡಗೇರಿ ತಿಳಿಸಿದರು.

‘ಚಂದ್ರಂಪಳ್ಳಿ ಜಲಾಶಯಕ್ಕೆ 4,900 ಕ್ಯುಸೆಕ್ ಒಳಹರಿವಿದ್ದು, 900 ಕ್ಯುಸೆಕ್ ನೀರು ನದಿಗೆ ಬಿಡಲಾಗುವುದು’ ಎಂದು ಎಇಇ ಚೇತನ ಕಳಸ್ಕರ್ ತಿಳಿಸಿದರು.

ಪಟ್ಟಣ ಸಮೀಪದ ಸೇತುವೆ ಕೆಳಗಡೆ ಅಪಾರ ಪ್ರಮಾಣದ ಹರಿಯುತ್ತಿದ್ದ ನೀರು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಸೇಡಂ ತಾಲ್ಲೂಕಿನ ಮಳಖೇಡ ಜಯತೀರ್ಥರ ಮೂಲ ವೃಂದಾನವಕ್ಕೆ ಕಾಗಿಣಾ ನೀರು ನುಗ್ಗಿರುವುದು
ಸೇಡಂ ತಾಲ್ಲೂಕಿನ ಮಳಖೇಡ ಜಯತೀರ್ಥರ ಮೂಲ ವೃಂದಾನವಕ್ಕೆ ಕಾಗಿಣಾ ನೀರು ನುಗ್ಗಿರುವುದು
ಚಿತ್ತಾಪುರ ತಾಲ್ಲೂಕಿನ ದಂಡೋತಿ ಸಮೀಪ ಕಾಗಿಣಾ ನದಿ ತುಂಬಿ ಹರಿಯುತ್ತಿದ್ದರೂ ಸೇತುವೆ ನಿಂತ ಜನರು
ಚಿತ್ತಾಪುರ ತಾಲ್ಲೂಕಿನ ದಂಡೋತಿ ಸಮೀಪ ಕಾಗಿಣಾ ನದಿ ತುಂಬಿ ಹರಿಯುತ್ತಿದ್ದರೂ ಸೇತುವೆ ನಿಂತ ಜನರು

ಜಯತೀರ್ಥರ ಮೂಲ ವೃಂದಾವನಕ್ಕೆ ನುಗ್ಗಿದ ನೀರು

ಸೇಡಂ: ಭಾರಿ ಮಳೆಯಿಂದಾಗಿ ಕಾಗಿಣಾ ನದಿ ತುಂಬಿ ಹರಿದು ಜಯತೀರ್ಥರ ಮೂಲವೃಂದಾವನಕ್ಕೆ ನೀರು ನುಗ್ಗಿತ್ತು. ಮಠದ ಮೂಲ ಕೇಂದ್ರದ ಸುತ್ತಲೂ ನೀರಿದ್ದು ಯಾವುದೇ ಹಾನಿಯುಂಟಾಗಿಲ್ಲ. ಕಾಗಿಣಾ ನದಿ ನೀರಿನತ್ತ ತೆರಳದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ನದಿ ದಡದತ್ತ ತೆರಳಲು ಜನರನ್ನು ಬಿಡುತ್ತಿಲ್ಲ. ಚಿತ್ತಾಪುರ ಮಾರ್ಗದಿಂದ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.  ನಾಗರಾಳ ಜಲಾಶಯ ಮುಲ್ಲಾಮಾರಿ ಹಾಗೂ ಬೆಣ್ಣೆತೊರೆ ನೀರು ಸೇರಿದ್ದರ ಫಲವಾಗಿ ಮಂಗಳವಾರ ದಿನವಿಡೀ ಕಾಗಿಣಾ ಒಡಲು ತುಂಬಿತ್ತು. ತಾಲ್ಲೂಕಿನ ನದಿ ದಂಡೆಯ ಹೊಲಗಳು ಜಲಾವೃತಗೊಂಡವು. ಬಿಬ್ಬಳ್ಳಿ-ಕಾಚೂರು ಸೇತುವೆ ಮೇಲೆ ನದಿ ನೀರು ಹರಿದಿದ್ದರಿಂದ ಕಾಚೂರು ಯಡಗಾ ತೊಟ್ನಳ್ಳಿ ಸಂಪರ್ಕ ಸ್ಥಗಿತಗೊಂಡಿತ್ತು. ‘ಬಿಬ್ಬಳ್ಳಿ ಸೇತುವೆಯ ಕಬ್ಬಿಣ ಗೇಟ್‌ಗಳನ್ನು ತೆಗೆದು ಸೇತುವೆ ಮೇಲಿಡಲಾಗಿದೆ. ನೀರಿನ ಒತ್ತಡದಿಂದ ಅವು ಹರಿದು ಅಡ್ಡಾದಿಡ್ಡಿಯಾಗಿ ಬಿದ್ದಿವೆ’ ಎಂದು ಮುಖಂಡ ದೇವು ನಾಟಿಕಾರ ಹೇಳಿದರು. ಸಂಗಾವಿ (ಎಂ) ಗ್ರಾಮದ ಸೇತುವೆ ಸಂಪೂರ್ಣ ಮುಳುಗಿತ್ತು. ಮಳಖೇಡ ಜತೆಗಿನ ಸಂಪರ್ಕ ಕಡಿತವಾಯಿತು. ಮಳಖೇಡ ಸೇತುವೆ ಮೇಲೆ ನೀರು ಹರಿದಿದ್ದರಿಂದ ರಾಜ್ಯ ಹೆದ್ದಾರಿ-10ರಲ್ಲಿ ಕಲಬುರಗಿ– ವಾಗ್ದಾರಿ ರಿಬ್ಬನಪಲ್ಲಿ ಸಂಪರ್ಕ ಸ್ಥಗಿತಗೊಂಡಿತ್ತು. ಸೇಡಂನಿಂದ ಮಳಖೇಡ ಚಿತ್ತಾಪುರ ಶಹಾಬಾದ್ ಮೂಲಕ ಕಲಬುರಗಿಗೆ ತೆರಳಿದರು. ಲಾರಿಗಳು ರಸ್ತೆಗಳ ಮೇಲೆ ಸಾಲುಗಟ್ಟಿ ನಿಂತಿದ್ದು ಕಂಡು ಬಂತು. ನಿರ್ಮಾಣ ಹಂತದಲ್ಲಿದ್ದ ದೊಡ್ಡ ಸೇತುವೆ ಮೇಲೇರಲು ಕೆಲವರು ಹರಸಾಹಸ ಪಡುತ್ತಿದ್ದರು. ಸಮಖೇಡ ತಾಂಡಾ ಮತ್ತು ಮಳಖೇಡ ನಡುವಿನ ಪ್ರಯಾಣಿಕರು ಕಬ್ಬಿಣದ ಏಣಿಯ ಮೂಲಕ ಏರಲು ಪರದಾಡಿದರು.

ಪ್ರವಾಹ ಲೆಕ್ಕಿಸದೆ ಸೇತುವೆ ದಾಟಿದ ಜನರು

ಚಿತ್ತಾಪುರ: ಇಲ್ಲಿನ ದಂಡೋತಿ ಗ್ರಾಮದ ಸಮೀಪದ ಕಾಗಿಣಾ ನದಿಯಲ್ಲಿ ಮಂಗಳವಾರ ಮಧ್ಯಾಹ್ನ ಭಾರಿ ಪ್ರವಾಹ ಉಕ್ಕೇರಿ ಬಂದು ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಪಟ್ಟಣದಿಂದ ಕಲಬುರಗಿ ಕಾಳಗಿ ಸೇಡಂಗೆ ಇದೇ ಸೇತುವೆ ಸಂಪರ್ಕ ಕಲ್ಪಿಸುತ್ತಿದ್ದು ಸಂಚಾರ ಕಡಿತದಿಂದ ಪ್ರಯಾಣಿಕರು ಪರದಾಡಿದರು. ಕಲಬುರಗಿ–ಚಿತ್ತಾಪುರ ನಡುವಿನ ಬಸ್‌ ಲಾರಿಗಳು ಶಹಾಬಾದ್‌ ಮಾರ್ಗವಾಗಿ ಸಂಚರಿಸಿದವು. ಮಳಖೇಡ ಮಾರ್ಗವಾಗಿ ಸೇಡಂ ತಲುಪಿದವು. ಸೇತುವೆ ಮೇಲಿನ ಕಬ್ಬಿಣದ ಪೈಪ್‌ ಪ್ರವಾಹದ ವೇಗಕ್ಕೆ ಕಿತ್ತು ಸೇತುವೆ ಮೇಲೆ ಅಡ್ಡಲಾಗಿ ಬಿದ್ದಿತ್ತು. ಸೇತುವೆಯ ಮೇಲೆ ರಭಸದಿಂದ ಹರಿಯುತ್ತಿದ್ದರೂ ಜನರು ಸೇತುವೆ ದಾಟುವ ದುಸ್ಸಾಹಸ ಮಾಡಿದರು. ಪ್ರವಾಹವು ಏರುಗತಿಯಲ್ಲಿರುವಾಗ ಕೆಲವರು ಸೇತುವೆ ಮಧ್ಯದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಒಂದು ವಾರದಲ್ಲಿ ಮೂರು ಸಲ ಸೇತುವೆ ಮುಳುಗಡೆಯಾಗಿದೆ. ತುಂಬಿ ಹರಿಯುತ್ತದೆ ವೇಳೆ ಜನರು ನದಿ ದಾಟುವುದನ್ನು ತಡೆಯುವಲ್ಲಿ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ. ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ನಿಯೋಜಿಸಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು. ಕದ್ದರಗಿ ಮತ್ತು ಶಹಾಬಾದ್ ತಾಲ್ಲೂಕಿನ ಮುತ್ತಗಾ ಗ್ರಾಮದ ಬಾಂದಾರ ಸೇತುವೆ ಮುಳುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT