ಶನಿವಾರ, ಆಗಸ್ಟ್ 13, 2022
26 °C

ಕಲಬುರಗಿ | ತುಂತುರು ಮಳೆ; ಗರಿಗೆದರಿದ ಕೃಷಿ ಚಟುವಟಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವಿವಿಧೆಡೆ ಆಗಾಗ ಜಿಟಿ ಜಿಟಿ ಇನ್ನೊಮ್ಮೆ ತುಂತುರು ಮಳೆಯಾಗಿದ್ದು, ಇದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಅಲ್ಲಲ್ಲಿ ತೊಗರಿ, ಹತ್ತಿ ಬಿತ್ತನೆ ಕಾರ್ಯ ಆರಂಭಗೊಂಡಿದೆ.

ತುಂತುರು ಮಳೆಯಿಂದಾಗಿ ಬಿಸಿಲಿನ ಝಳದ ಜಿಲ್ಲೆ ತಣ್ಣನೆ ಗಾಳಿಯಿಂದಾಗಿ ಶೀತ ವಾತಾವರಣ ಕಂಡುಬರುತ್ತಿದೆ. ಭಾನುವಾರ, ಸೋಮವಾರ, ಮಂಗಳವಾರ ಮೂರು ದಿನ ಬೆಳಿಗ್ಗೆಯಿಂದಲೂ ಮೋಡ ಕವಿದಿತ್ತು. ತಂಪು ವಾತಾವರಣ ಹಾಗೂ ತೇವಾಂಶ ಹೆಚ್ಚಳದಿಂದ ಮೊಳಕೆಹೊಡೆದ ಬೆಳೆಗಳು ನಳನಳಿಸುತ್ತಿವೆ.

ಚಿತ್ತಾಪುರ, ಸೇಡಂ, ಚಿಂಚೋಳಿ, ಯಡ್ರಾಮಿ, ಕಮಲಾಪುರ ಸೇರಿದಂತೆ ಹಲವೆಡೆ ಹತ್ತಿ, ಹೆಸರು, ಉದ್ದು ಬಿತ್ತನೆ ಮಾಡಲಾಗಿದೆ. ಆಗೊಮ್ಮೆ, ಈಗೊಮ್ಮೆ ಬಂದ ಹಗುರ ಮಳೆಗೆ ಬೆಳೆಗಳು ಉತ್ತಮವಾಗಿ ಬಂದಿವೆ. ಎಡೆಕುಂಟೆ ಹೊಡೆಯುವ ಕಾರ್ಯಕ್ಕೆ ರೈತರು ತಯಾರಿ ಆಗುತ್ತಿದ್ದಾರೆ. ಮತ್ತೊಂದೆಡೆ ತೊಗರಿ ಬಿತ್ತನೆಗೂ ಸಜ್ಜಾಗಿದ್ದಾರೆ.

ವಿವಿಧಡೆ ದಾಖಲಾದ ಮಳೆ: ಚಿಂಚೋಳಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸಂಜೆ ವೇಳೆಗೆ ಧಾರಾಕಾರ ಮಳೆಯಾಯಿತು. ಇದರಿಂದ ಮಳೆ ನೀರು ರಸ್ತೆಗಳ ಮೇಲೆ ಹೊಳೆಯಂತೆ ಹರಿದಾಡಿತು. ದೇಗಲ್ಮಡಿಯಲ್ಲಿ 51 ಮಿ.ಮೀ., ಸಿರೋಳ್ಳಿ– 46, ಚಿಮ್ಮಾಇದಲಾಯಿ– 31 ಮಿ.ಮೀ., ಪೊಲ್ಕಪಳ್ಳಿ– 28.50, ಐನಾಪುರ– 24 ಮಿ.ಮೀ. ಮತ್ತು ಕೋಡ್ಲಿಯಲ್ಲಿ 12 ಮಿ.ಮೀ. ಮಳೆಯಾಗಿದೆ.

ಕಲಬುರಗಿ ಸುತ್ತಲಿನ ಸಾವಳಗಿ, ನಂದಿಕೂರು, ಕುಸನೂರು, ಪಟ್ಟಣ, ಕಿಣ್ಣಿ ಸಡಕ್ ವ್ಯಾಪ್ತಿಯಲ್ಲಿ ಸುಮಾರು 4.50 ಮಿ.ಮೀ. ಮಳೆಯಾಗಿದೆ. ರಾತ್ರಿ 8ರ ವೇಳೆ ನಗರದಲ್ಲಿ ಸುಮಾರು 20 ನಿಮಿಷ ಹಗುರ ಮಳೆಯಾಯಿತು. ಇದರಿಂದ ರಸ್ತೆಯ ಮೇಲೆಲ್ಲಾ ಮಳೆ ನೀರು ನಿಂತಿತು.

ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿ ತುಂತುರ ಮಳೆಯಾಗಿದೆ. ಉಳಿದಂತೆ ಕಮಲಾಪುರದಲ್ಲಿ 22.50 ಮಿ.ಮೀ., ಆಳಂದದ ಸಲಗರದಲ್ಲಿ 9.50 ಮಿ.ಮೀ., ಸೇಡಂನ ಕುಲಕುಂದಾ ಗ್ರಾಮದಲ್ಲಿ 21 ಮಿ.ಮೀ., ಕಾಳಗಿ ತಾಲ್ಲೂಕಿನಲ್ಲಿ 10 ಮಿ.ಮೀ. ಚಿತ್ತಾಪುರ ತಾಲ್ಲೂಕಿನಲ್ಲಿ 6.50 ಮಿ.ಮೀ. ಹಾಗೂ ಶಹಾಬಾದ್‌ನಲ್ಲಿ 4.50 ಮಿ.ಮೀ.ನಷ್ಟ ಮಳೆ ಬಿತ್ತು.

ಮಂಗಳವಾರ ಮಳೆಯ ಸುರಿವ ಪ್ರಮಾಣ ಕಡಿಮೆ ಇತ್ತು. ಗಾಳಿಯ ಬೀಸಿದ್ದರಿಂದ ವಾತಾವರಣ ಬದಲಾಗಿ. ಕಲಬುರಗಿ, ಬೀದರ್ ಮತ್ತು ಯಾದಗಿರಿಯಲ್ಲಿ ಹಗುರ ಮಳೆಯಾಗಿದೆ. ಮುಂದಿನೆ ಎರಡು ದಿನಗಳ ಕಾಲ ತುಂತುರು ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ಹೇಳಿದ್ದಾರೆ.

ರೈತರ ಮೊಗದಲ್ಲಿ ಮಂದಹಾಸ

ಚಿಂಚೋಳಿ: ತಾಲ್ಲೂಕಿನಾದ್ಯಂತ ಮಂಗಳವಾರ ಬಿರುಸಿನ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಚಿಂಚೋಳಿ, ಚಂದಾಪುರ, ಸಂಗಾಪುರ, ಧರ್ಮಾಸಾಗರ, ಐನಾಪುರ, ಯಲಮಾಮಡಿ, ಗಡಿಲಿಂಗದಳ್ಳಿ, ಚಿಮ್ಮನಚೋಡ, ನರನಾಳ, ಕೊಳ್ಳೂರು, ನಾಗಾಈದಲಾಯಿ, ತುಮಕುಂಟಾ, ಸಾಲೇಬೀರನಹಳ್ಳಿ, ಚಿಮ್ಮನಚೋಡ, ಬೆನಕೆಪಳ್ಳಿ, ಚನ್ನೂರು, ರಾಯಕೋಡ, ಸುಲೇಪೇಟ, ಖೊದಂಪುರ, ತಾಜಲಾಪುರ, ಕನಕಪುರ, ಐನೋಳ್ಳಿ, ಚಂದ್ರಂಪಳ್ಳಿ ಇತರೆ ಕಡೆ ಉತ್ತಮ ಮಳೆಯಾಯಿತು.

ಮಳೆಯಾದ ಪ್ರದೇಶದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿದವು. ತಾಲ್ಲೂಕಿನ ನಾಗಾಈದಲಾಯಿ ಬಳಿಯ ಹಳ್ಳ ಹುಕ್ಕಿ ಹರಿಯಿತು. ಕೊಳ್ಳೂರು ಗ್ರಾಮದಲ್ಲಿ ಮಳೆ ನೀರು ರಸ್ತೆ ಮೇಲೆ ಹರಿದಾಡಿತು. ಹನುಮಾನ ಮಂದಿರದ ಬಳಿ ಎರಡು ಅಡಿ ಎತ್ತರದವರೆಗೆ ನೀರು ಹರಿದದ್ದು ಕಂಡುಬಂತು.

ಈಗಾಗಲೇ ಬಿತ್ತನೆಯಾದ ಬೆಳೆಗಳು ಮೊಳಕೆಯೊಡೆದಿವೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಹಗುರ ಮಳೆ ಬೆಳೆಗಳಿಗೆ ವರದಾನವಾಗಿದೆ.

*ಹದವಾದ ಮಳೆಯಾದ ಪ್ರದೇಶದಲ್ಲಿ ಭೂಮಿಯ ತೇವಾಂಶ ಹೆಚ್ಚಾಗಿದೆ. ಆ ಭಾಗದ ರೈತರು ಸೋಯಾ ಬಿತ್ತನೆ ಮಾಡಬಹುದಾಗಿದೆ
-ವೀರಶೆಟ್ಟಿ ರಾಠೋಡ, ಸಹಾಯಕ ಕೃಷಿ ನಿರ್ದೆಶಕ ಚಿಂಚೋಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು