ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಮ್ಸ್‌’ ಮಾದರಿಯಲ್ಲಿ ‘ಜಿಮ್ಸ್‌’ ಅಭಿವೃದ್ಧಿ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳು ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಉದ್ಘಾಟಿಸಿದ ಸಚಿವ ಡಾ.ಕೆ.ಸುಧಾಕರ್‌ ಭರವಸೆ
Last Updated 22 ಫೆಬ್ರುವರಿ 2021, 4:55 IST
ಅಕ್ಷರ ಗಾತ್ರ

ಕುಸನೂರು (ಕಲಬುರ್ಗಿ): ‘ಕಲಬುರ್ಗಿಗೆ ‘ಏಮ್ಸ್‌’ ಬರುತ್ತದೋ ಇಲ್ಲವೋ ಎಂದು ವಿಚಾರ ಮಾಡುತ್ತ ಕೂರುವ ಬದಲು, ಈಗಿರುವ ‘ಜಿಮ್ಸ್‌’ ಅನ್ನೇ ‘ಏಮ್ಸ್‌’ ಮಾದರಿಯಲ್ಲೇ ಅಭಿವೃದ್ಧಿ ಪಡಿಸೋಣ’ ಎಂದುಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.

ತಾಲ್ಲೂಕಿನ ಕುಸನೂರು ಗ್ರಾಮದ ಬಳಿ, ಸೇಡಂ ರಸ್ತೆಯಲ್ಲಿ ನಿರ್ಮಿಸಲಾದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳು ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಭಾಗದಲ್ಲಿ ಪೌಷ್ಟಿಕಾಂಶ ಕೊರತೆ ಹೆಚ್ಚಿದೆ. ಹವಾಮಾನದ ಕಾರಣಕ್ಕೆ ಅನಾರೋಗ್ಯಕ್ಕೆ ಈಡಾಗುವವರ ಸಂಖ್ಯೆಯೂ ಹೆಚ್ಚು. ಹಾಗಾಗಿ, ವೈದ್ಯಕೀಯ ವ್ಯವಸ್ಥೆ ಗುಣಮಟ್ಟಗೊಳಿಸುವುದು ಈಗ ಅಗತ್ಯ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕವೇ ಅಭಿವೃದ್ಧಿ ಹೆಜ್ಜೆ ಇಟ್ಟಿದ್ದಾರೆ’ ಎಂದರು.

‘ದೇಶದಲ್ಲಿ ಕೇವಲ 31 ದಿನಗಳಲ್ಲಿ 1 ಕೋಟಿ ಜನ ಲಸಿಕೆ ಪಡೆದಿದ್ದಾರೆ. ರಾಜ್ಯದಲ್ಲಿ ಕೂಡ 6 ಲಕ್ಷ ಸಿಬ್ಬಂದಿಗೆ ಲಸಿಕೆ ನೀಡಿದ್ದೇವೆ. ಇದು ಕೂಡ ಗಮನಾರ್ಹ ಸಾಧನೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯೇ ಇನ್ನೂ ಲಸಿಕೆ ಪಡೆಯಲು ಮೀನ– ಮೇಷ ಎಣಿಸುತ್ತಿದ್ದಾರೆ. ದೇಶಿ ಲಸಿಕೆ ಮೇಲೆ ನಂಬಿಕೆ ಇಡಿ. ಈಗಾಗಲೇ ಉನ್ನತ ಅಧಿಕಾರಿಗಳು, ಸಿಬ್ಬಂದಿ, ವಾರಿಯರ್ಸ್‌ಗಳು ಪಡೆದಿದ್ದಾರೆ. ಯಾರಿಗೂ ಅಪಾಯವಾಗಿಲ್ಲ’ ಎಂದರು.

ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ: ‘ಕೋವಿಡ್ ಬಂದ ನಂತರವೇ ವೈದ್ಯಕೀಯ ಕ್ಷೇತ್ರದ ಮಹತ್ವ ಎಷ್ಟಿದೆ ಎಂದು ಪ್ರಪಂಚಕ್ಕೆ ಅರಿವಾಗಿದೆ. ಸೋಂಕು ವಿಪರೀತವಾದಾಗ ನಮ್ಮಲ್ಲಿ ವೈದ್ಯರು ಇದ್ದರೂ ವೈದ್ಯಕೀಯ ಸಿಬ್ಬಂದಿ ಕೊರತೆ ಬಹಳ ಕಾಡಿತು. ಹಿಂದಿನ ಸರ್ಕಾರಗಳು ಆರೋಗ್ಯಕ್ಕೆ ಆದ್ಯತೆ ನೀಡದ ಕಾರಣ, ಈ ಸಮಸ್ಯೆ ತಲೆದೋರಿತು. ಈಗ ಆ ಕೊರತೆ ನೀಗಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಶೇ 137ರಷ್ಟು ಹೆಚ್ಚು ಅನುದಾನ ನೀಡಿದ್ದಾರೆ. ದೇಶದಾದ್ಯಂತ 138 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಮುಂದಾಗಿದ್ದಾರೆ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕೂಡ ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದೇನೆ’ ಎಂದರು.

ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ; ಈ ಮೂರನ್ನೂ ಒಂದುಗೂಡಿಸಿ ಕೆಲಸ ಮಾಡಿದರೆ ಹೆಚ್ಚಿನ ಸಾಧನೆ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೊಂದಾಣಿಕೆ ಸಾಧಿಸಿಕೊಳ್ಳಬೇಕು.

ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಆರ್.ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಡಾ.ಸಾಯಿಬಣ್ಣ ತಳವಾರ, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗಮ್ಮ ಅಮೃತರಾವ್‌ ಪಾಟೀಲ ಸೇರಿದಂತೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಹಾಗೂ ಸೆನೆಟ್‌ ಸದಸ್ಯರು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.

‘ಗುಣಮಟ್ಟಕ್ಕೆ ಆದ್ಯತೆ ನೀಡಿ’

ಕಲಬುರ್ಗಿ: ‘ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜುಗಳ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಇಂಥ ಕಾಲೇಜು ಸ್ಥಾಪನೆಗೆ ಅನುಮತಿ ನೀಡುವ ಮುನ್ನ ಗುಣಮಟ್ಟದ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು’ ಎಂದು ಸಚಿವ ಡಾ. ಕೆ.ಸುಧಾಕರ ಅವರು ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಗೆ ಸಲಹೆ ನೀಡಿದರು.

‘ಪ್ರಸಕ್ತ ವರ್ಷ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಪದವಿಗೆ ಪ್ರವೇಶ ಪಡೆದಿದ್ದಾರೆ. ಸ್ನಾತಕೋತ್ತರ ಪದವಿ ಪ್ರವೇಶಗಳ ಸಂಖ್ಯೆಯಲ್ಲೂ ಗಮನಾರ್ಹ ಹೆಚ್ಚಳ ಕಂಡುಬಂದಿದೆ’ ಎಂದರು.

ನಾಲ್ಕು ವೈದ್ಯಕೀಯ ಕಾಲೇಜು: ‘ರಾಜ್ಯಕ್ಕೆ ಹೊಸದಾಗಿ ಮತ್ತೆ ನಾಲ್ಕು ವೈದ್ಯಕೀಯ ಕಾಲೇಜುಗಳು ಮಂಜೂರಾಗಿವೆ. ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಯಾದಗಿರಿ ಹಾಗೂ ಹಾವೇರಿಗಳಲ್ಲಿ ಇವುಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ 17 ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಗುಣಮಟ್ಟ ಸುಧಾರಿಸಲಾಗುವುದು’ ಎಂದರು.

ಪ್ರಾದೇಶಿಕ ಕೇಂದ್ರದ ರೂವಾರಿಗಳು

ಕಲಬುರ್ಗಿ: ‘ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದ ಕಲಬುರ್ಗಿಯ ಡಾ.ಎಚ್.ವೀರಭದ್ರಪ್ಪ ಅವರ ಸಮಿತಿ ಅಧ್ಯಯನ ನಡೆಸಿ, 2014ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಡಾ.ಮಲಕರೆಡ್ಡಿ ಅವರು ಕಲಬುರ್ಗಿ ಹಾಗೂ ಬೆಳಗಾವಿಗಳಲ್ಲಿ ಆರೋಗ್ಯ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರಗಳನ್ನು ನಿರ್ಮಿಸಲು ಸಿದ್ಧತೆ ಮಾಡಿದ್ದರು’ ಎಂದು ಡಾ. ಕೆ.ಸುಧಾಕರ್ ತಿಳಿಸಿದರು.

‘ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಜಾಗ ಮಂಜೂರು ಮಾಡಿಸಿದ್ದರು. ಡಾ.ಗಲಗಲಿ ಎಂಬುವರು ಜಾಗ ನೀಡಿದರು. ಕಲ್ಯಾಣ ಕರ್ನಾಟಕ ಭಾಗದ ಈ ಕನಸು ಹಲವು ವರ್ಷಗಳ ಬಳಿಕ ನನಸಾಗಿದೆ. ಇದಕ್ಕೆ ಶ್ರಮಿಸಿದ ಎಲ್ಲ ರೂವಾರಿಗಳನ್ನೂ ನೆನೆಯುತ್ತೇನೆ’ ಎಂದು ಅವರು ತಿಳಿಸಿದರು.

ಏಮ್ಸ್ ತರಲು ಬೆಂಬಿಡದ ಪ್ರಯತ್ನ: ಸಂಸದ

ಕಲಬುರ್ಗಿ: ‘ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನು ಕಲಬುರ್ಗಿಗೇ ತರಲು ಎಡೆಬಿಡದ ಪ್ರಯತ್ನ ನಡೆಸಿದ್ದೇನೆ. ಇದಕ್ಕೆ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ ಅವರ ಸಹಕಾರ ಮತ್ತು ಬೆಂಬಲ ಅಗತ್ಯ’ ಎಂದು ಸಂಸದ ಡಾ.ಉಮೇಶ ಜಾಧವ ಕೋರಿದರು.

‘ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಸಂಸದರು ಮತ್ತು ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದ್ದೇವೆ. ಕಲಬುರ್ಗಿಗೆ ಆಗದೇ ಹೋದರೆ ಈ ಭಾಗದ ಎಲ್ಲಿಯಾದರೂ ಏಮ್ಸ್ ಕೊಡಲೇಬೇಕೆಂದು ಬೇಡಿಕೆ ಇಟ್ಟಿದ್ದೇವೆ. ಫೆ.22ರಂದು ಕೇಂದ್ರ ಕಾರ್ಮಿಕ ಇಲಾಖೆಯ ಸಚಿವರು ಮತ್ತು ಕಾರ್ಯದರ್ಶಿಗಳ ಸಭೆಯ ನಡೆಯಲಿದ್ದು, ಅಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಲಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT