ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಬಹಿಷ್ಕಾರ ಹಿಂಪಡೆದ ಶುಕ್ರವಾಡಿ ಮತದಾರರು!

ಗ್ರಾಮಸ್ಥರೊಂದಿಗೆ ಚುನಾವಣಾಧಿಕಾರಿಗಳ ಮಾತುಕತೆ, ಬೇಡಿಕೆ ಈಡೇರಿಕೆ ಭರವಸೆ
Published 30 ಏಪ್ರಿಲ್ 2024, 6:11 IST
Last Updated 30 ಏಪ್ರಿಲ್ 2024, 6:11 IST
ಅಕ್ಷರ ಗಾತ್ರ

ಆಳಂದ: ಲೋಕಸಭೆ ಚುನಾವಣೆ(ಮೇ 7)ಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದ ಆಳಂದ ತಾಲ್ಲೂಕಿನ ಶುಕ್ರವಾಡಿ ಗ್ರಾಮಕ್ಕೆ ಸೋಮವಾರ ಚುನಾವಣಾಧಿಕಾರಿ ಮಹಾಂತೇಶ ಮುಳಗುಂದಾ ಹಾಗೂ ತಹಶೀಲ್ದಾರ್‌ ಪ್ರಕಾಶ ಹೊಸಮನಿ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ, ಮತದಾರರ ಮನವೊಲಿಸುವಲ್ಲಿ ಯಶಸ್ವಿಯಾದರು.

ಎರಡು ದಿನಗಳ ಹಿಂದೆ 90 ವರ್ಷದ ಮತದಾರರ ಮನೆಗೆ ಚುನಾವಣಾಧಿಕಾರಿಗಳು ಭೇಟಿ ನೀಡಿದಾಗ ಮತದಾರರಾದ ಭೀಮಶಾ ಲಾಡವಂತಿ, ಮತದಾನ ಮಾಡದೇ ಚುನಾವಣಾ ಸಿಬ್ಬಂದಿ ವಾಪಸ್‌ ಬಂದಿದ್ದರು. ಗ್ರಾಮಸ್ಥರು ಗ್ರಾಮದ ಸಂಪರ್ಕ ರಸ್ತೆ ಸಮಸ್ಯೆ ಬಗೆಹರಿಸಲು ಹಾಗೂ ಗ್ರಾಮಕ್ಕೆ ಬಸ್‌ ಸೌಕರ್ಯ ಕಲ್ಪಿಸಲು ಒತ್ತಾಯಿಸಿ, ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿ, ಲೋಕಸಭಾ ಚುನಾವಣೆ ಬಹಿಷ್ಕರಿಸುವ ಎಚ್ಚೆರಿಕೆ ಸಹ ನೀಡಿದರು.

ಹೀಗಾಗಿ ಸೋಮವಾರ ತಹಶೀಲ್ದಾರ್‌ ಪ್ರಕಾಶ ಹೊಸಮನಿ ಅಧ್ಯಕ್ಷತೆಯಲ್ಲಿ ಗ್ರಾಮದಲ್ಲಿ ಸಭೆ ನಡೆಸಲಾಯಿತು.

ಗ್ರಾಮದ ಪ್ರಮುಖರಾದ ಬಾಬುರಾವ ಪಾಟೀಲ, ಹಾವಳಪ್ಪ ರಂಜೇರಿ, ಕಾಶಿನಾಥ ಜಮದಾರ, ಮಹಾದೇವ ಮಾನೆ ಮಾತನಾಡಿ, ‘ಕಳೆದ 12 ವರ್ಷಗಳಿಂದ ರಸ್ತೆ ದುರಸ್ತಿ ಕೈಗೊಂಡಿಲ್ಲ. ಇದು ಗ್ರಾಮಸ್ಥರು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ವಾಹನ ಸಂಚಾರ ಕಷ್ಟವಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ಬಸ್‌ ಸೌಕರ್ಯದಿಂದ ವಂಚಿತರಾಗಿದ್ದಾರೆ. ಹೀಗಾಗಿ ಗ್ರಾಮದ ರಸ್ತೆ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ಪಟ್ಟು ಹಿಡಿದರು.

ಚುನಾವಣಾಧಿಕಾರಿ ಮಹಾಂತೇಶ ಮುಳಗುಂದಾ ಮಾತನಾಡಿ, ‘ಪ್ರಜಾಪ್ರಭುತ್ವದ ಯಶಸ್ವಿಗೆ ಮತದಾನವು ಪವಿತ್ರ ಹಕ್ಕು ಆಗಿದೆ. ಪ್ರತಿಯೊಬ್ಬರೂ ಮತದಾನ ಕೈಗೊಳ್ಳಬೇಕು. ಗ್ರಾಮಸ್ಥರ ಬೇಡಿಕೆಗೆ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿ ಪರಿಹಾರ ಕೈಗೊಳ್ಳಲಿದ್ದಾರೆ ಎಂದರು.

ತಹಶೀಲ್ದಾರ್‌ ಪ್ರಕಾಶ ಹೊಸಮನಿ ಮಾತನಾಡಿ, ‘ಮಂಗಳವಾರದಿಂದ ಶುಕ್ರವಾಡಿ ಗ್ರಾಮಕ್ಕೆ ಬಸ್‌ ಸೌಕರ್ಯ ಆರಂಭಗೊಳ್ಳಲಿದೆ. ಜಮೀನಿನ ಮಾಲೀಕರ ಪರವಾಗಿ ಕೋರ್ಟ್‌ ತೀರ್ಪು ನೀಡಿದರಿಂದ ಸಮಸ್ಯೆ ಕಗ್ಗಂಟು ಆಗುತ್ತಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದು ಮತ್ತು ಜಮೀನದಾರರ ಜತೆ ಮಾತುಕತೆ ನಡೆಸಿ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ತಹಶೀಲ್ದಾರ್‌ ಹಾಗೂ ಚುನಾವಣಾಧಿಕಾರಿಗಳ ಭರವಸೆ ನಂತರ ಗ್ರಾಮಸ್ಥರು ಮೇ 7ರಂದು ಮತದಾನ ಬಹಿಷ್ಕಾರದ ತಮ್ಮ ಗ್ರಾಮದ ನಿರ್ಧಾರವನ್ನು ಹಿಂಪಡೆದು, ಎಲ್ಲರೂ ಮತದಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸ್ಥಳದಲ್ಲಿಯೇ ವೃದ್ಧ ಮತದಾರ ಭೀಮಶಾ ಲಾಡವಂತಿ ಅವರು ಮತದಾನ ಮಾಡಿದರು. ಪಿಎಸ್‌ಐ ಶರಣಬಸಪ್ಪ ಕೊಡ್ಲ, ಶಿರಸ್ತೇದಾರ ಶ್ರೀನಿವಾಸ ಕುಲಕರ್ಣಿ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಮಹಾದೇವ, ಗ್ರಾಮ ಲೆಕ್ಕಿಗ ಚಂದ್ರು ಚವ್ಹಾಣ ಹಾಗೂ ಗ್ರಾಮದ ಪ್ರಮುಖರಾದ ಮಲ್ಲಯ್ಯ ಗುತ್ತೇದಾರ, ಸುನೀಲ ಮುಗುಳೆ, ಬಂಡೆಪ್ಪ ಮರಡಿ, ಮಹಾದೇವ ಮಾನೆ ಸೇರಿದಂತೆ ಮಹಿಳೆಯರು, ಯುವಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಆಳಂದ ತಾಲ್ಲೂಕಿನ ಶುಕ್ರವಾಡಿ ಗ್ರಾಮಸ್ಥರೊಂದಿಗೆ ಚುನಾವಣಾಧಿಕಾರಿ ಮಹಾಂತೇಶ ಮುಳಗುಂದಾ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ತಹಶೀಲ್ದಾರ್‌ ಪ್ರಕಾಶ ಹೊಸಮನಿ ಇದ್ದರು.
ಆಳಂದ ತಾಲ್ಲೂಕಿನ ಶುಕ್ರವಾಡಿ ಗ್ರಾಮಸ್ಥರೊಂದಿಗೆ ಚುನಾವಣಾಧಿಕಾರಿ ಮಹಾಂತೇಶ ಮುಳಗುಂದಾ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ತಹಶೀಲ್ದಾರ್‌ ಪ್ರಕಾಶ ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT