ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಆಂದೋಲನವಾದ ರೈತ ಹೋರಾಟ: ಪ್ರೊ. ಪುರುಷೋತ್ತಮ ಬಿಳಿಮಲೆ

ರೈತ ಕೃಷಿ ಕಾರ್ಮಿಕ ಸಂಘಟನೆಯ ಸಂವಾದ
Last Updated 8 ಜೂನ್ 2021, 16:32 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಚಳವಳಿ ಬರೀ ರೈತ ಹೋರಾಟವಾಗಿಲ್ಲ. ಬದಲಾಗಿ ಸಾಮಾಜಿಕ ಆಂದೋಲನದ ಸ್ವರೂಪ ಪಡೆದಿದೆ’ ಎಂದು ಚಿಂತಕ ಪ್ರೊ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ರೈತ ಕೃಷಿ ಕಾರ್ಮಿಕರ ಸಂಘಟನೆಯು ಮಂಗಳವಾರ ಆಯೋಜಿಸಿದ್ದ ದೇಶದ ಪ್ರಸಕ್ತ ರೈತ ಹೋರಾಟದ ಕುರಿತು ಆಯೋಜಿಸಿದ್ದ ಆನ್‌ಲೈನ್ ಸಂವಾದದಲ್ಲಿ ಮಾತನಾಡಿದ ಅವರು, ‘ಉತ್ತರ ಭಾರತದ ವಿವಿಧ ರಾಜ್ಯಗಳ ಸಹಸ್ರಾರು ರೈತರು ಹಲವು ತಿಂಗಳಿಂದ ಕಾಯ್ದೆಗಳ ರದ್ದತಿಗಾಗಿ ಒತ್ತಾಯಿಸಿ ಧರಣಿ ಕುಳಿತಿದ್ದಾರೆ’ ಎಂದರು.

‘ಅನ್ನದಾತರ ಬವಣೆಗಳ ಬಗ್ಗೆ ಕಿಂಚಿತ್ತೂ ಚಿಂತೆ ಮಾಡದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಐಟಿ ಸೆಲ್‌ ಬಳಸಿ ರೈತ ಹೋರಾಟ ಅವಮಾನಗೊಳಿಸುತ್ತಿದೆ. ಅದರ ಅಂಗ ಸಂಸ್ಥೆಗಳೂ ರೈತರನ್ನು ಅಲ್ಲಿಂದ ತೆರವುಗೊಳಿಸಲು ಹಲವು ಬಗೆಯ ಪ್ರಯತ್ನ ನಡೆಸಿವೆ. ಆದರೆ, ಕಾಯ್ದೆ ರದ್ದುಗೊಂಡ ಬಳಿಕವಷ್ಟೇ ಅಲ್ಲಿಂದ ತೆರಳುವುದಾಗಿ ಪಟ್ಟು ಹಿಡಿದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಬಳಿಕ ಇಷ್ಟೊಂದು ದೀರ್ಘ ಕಾಲೀನ ಸಮರಶೀಲ ಹೋರಾಟ ನಾನು ಕಂಡಿಲ್ಲ’ ಎಂದರು.

‘ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಯಾದ ಮಹದಾಯಿ ವಿವಾದವನ್ನು ಕೇಂದ್ರ ಸರ್ಕಾರ ತಕ್ಷಣ ಬಗೆಹರಿಸಬಹುದಿತ್ತು. ಕೇಂದ್ರದಲ್ಲಿ, ಕರ್ನಾಟಕ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೂ ಏಕೆ ಬಗೆಹರಿಯುತ್ತಿಲ್ಲ’ ಎಂದರು.

ಹಿರಿಯ ಪತ್ರಕರ್ತ ಡಿ. ಉಮಾಪತಿ ಮಾತನಾಡಿ, ‘ಕೃಷಿಯಲ್ಲಿ ಮೊದಲಿನಿಂದಲೂ ಮಹಿಳೆಯ ಪಾತ್ರ ದೊಡ್ಡದು. ಎತ್ತು ಖರೀದಿಸಲು ಶಕ್ತಿ ಇಲ್ಲದ ಉತ್ತರ ಪ್ರದೇಶ ಹಾಗೂ ಬಿಹಾರದಂತಹ ಹಿಂದುಳಿದ ರಾಜ್ಯಗಳಲ್ಲಿ ಎತ್ತಿನ ಬದಲು ನೆಲ ಉತ್ತಲು ನೊಗಕ್ಕೆ ಹೆಗಲು ಕೊಡುವವರು ಮಹಿಳೆಯರೇ ಆಗಿದ್ದಾರೆ’ ಎಂದರು.

ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಚ್‌.ವಿ. ದಿವಾಕರ್ ಮಾತನಾಡಿ, ‘ಸಂಘಟನೆಯು ದೇಶದ 21 ರಾಜ್ಯಗಳಲ್ಲಿ, ಕರ್ನಾಟಕದ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದು, ರೈತರ ಹಲವು ಸಮಸ್ಯೆಗಳ ವಿರುದ್ಧ ರೈತಾಪಿ ಜನರನ್ನು ಸಂಘಟಿಸುತ್ತಿದೆ’ ಎಂದರು. ಆರ್‌ಕೆಎಸ್‌ ಮುಖಂಡ ಎಂ. ಶಶಿಧರ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT