ಗುರುವಾರ , ಜುಲೈ 29, 2021
21 °C
ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ ಸ್ಟೇಶನ್‌ ಬಜಾರ್‌ ಠಾಣೆ ಪೊಲೀಸರು

ಆಟಿಕೆ ಪಿಸ್ತೂಲ್, ಚಾಕು ತೋರಿಸಿ ಕಾರು, ನಗದು ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರದ ಅಪಾರ್ಟ್‌ಮೆಂಟ್‌ ಒಂದಕ್ಕೆ ನುಗ್ಗಿದ್ದ ನಾಲ್ವರು ದರೋಡೆಕೋರರ ಗುಂಪು ಮನೆ ಮಾಲೀಕನಿಗೆ ಆಟಿಕೆ ಪಿಸ್ತೂಲ್ ಹಾಗೂ ಚಾಕು ತೋರಿಸಿ ₹ 50 ಸಾವಿರ ನಗದು, ಮಹಿಂದ್ರಾ ಟಿಯುವಿ–300 ಕಾರು ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ದರೋಡೆ ಮಾಡಿಕೊಂಡು ಹೋದ ಬೆನ್ನಲ್ಲೇ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಇಲ್ಲಿನ ಕುವೆಂಪು ನಗರದ ಏಷಿಯನ್‌ ಲೈಫ್‌ಸ್ಟೈಲ್ ಅಪಾರ್ಟ್‌ಮೆಂಟ್‌ನಲ್ಲಿರುವ ಖಾಲಿದ್‌ ಅಹ್ಮದ್‌ ಚಾಂದಸಾಬ್ (68) ಅವರ ಮನೆಗೆ ತೆರಳಿದ ನಾಲ್ವರು ದರೋಡೆಕೋರರ ಗುಂಪು ಗುರುವಾರ ಬೆಳಗಿನ ಜಾವ ಬಾಗಿಲ ಬೆಲ್‌ ಬಡಿಯಿತು. ಖಾಲಿದ್‌ ಅಹ್ಮದ್‌ ಅವರು ಬಾಗಿಲು ತೆಗೆಯುತ್ತಿದ್ದಂತೆಯೇ ಚಾಕು ಹಾಗೂ ಆಟಿಕೆ ಪಿಸ್ತೂಲ್‌ ತೋರಿಸಿ ಮನೆಯ ಬಾಲ್ಕನಿಗೆ ಕರೆದುಕೊಂಡು ಹೋದರು. ಮನೆಯ ಪಡಸಾಲೆಯಲ್ಲಿ ಮಲಗಿದ್ದ ಕಾರು ಚಾಲಕ ಚಂದ್ರಶೇಖರ ಎಂಬುವವರ ಮೇಲೆ ಹಲ್ಲೆ ಮಾಡಿ ಅವರನ್ನೂ ಬಾಲ್ಕನಿಯಲ್ಲಿ ಕೂರಿಸಿ ನಗದು, ಮೂರು ಮೊಬೈಲ್ ಹಾಗೂ ಕಾರನ್ನು ಚಾಲನೆ ಮಾಡಿಕೊಂಡು ಹೋದರು.

ಈ ಕುರಿತು ಖಾಲಿದ್‌ ಅಹ್ಮದ್‌ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸ್ಟೇಶನ್‌ ಬಜಾರ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್ ಎಲ್‌.ಎಚ್‌.ಗೌಂಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎಂಎಸ್‌ಕೆ ಮಿಲ್ ನಿವಾಸಿ ಆಸಿಫ್ ಸಾಹೇಬ ಖಾನ್‌ (22)ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿಕೊಂಡು ದರೋಡೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಕಮಿಷನರ್‌ ಸತೀಶಕುಮಾರ ಎನ್. ತಿಳಿಸಿದರು.

ಆತನಿಂದ ₹ 18 ಸಾವಿರ ನಗದು, ಮಹಿಂದ್ರಾ ಟಿಯುವಿ–300 ಕಾರು, ಪಿಸ್ತೂಲ್, ಕಬ್ಬಿಣದ ಚಾಕು, ಕೃತ್ಯಕ್ಕೆ ಬಳಸಿದ ಬಜಾಜ್‌ ಪಲ್ಸರ್‌ ಬೈಕ್ ಸೇರಿದಂತೆ ಒಟ್ಟು ₹ 4.30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು