ಗುರುವಾರ , ಮೇ 19, 2022
23 °C
ಪೊಲೀಸರೇ ಆರೋಗ್ಯದ ಅಂಬಾಸಿಡರ್‌ ಆಗಲಿ: ಎಡಿಜಿಪಿ ಅಲೋಕ್‌ ಕುಮಾರ್‌ ಸಲಹೆ

ಕಲಬುರ್ಗಿ: ಗಮನ ಸೆಳೆದ ‘ಆರೋಗ್ಯಕ್ಕಾಗಿ ಓಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದಲ್ಲಿ ಮಂಗಳವಾರ 800ಕ್ಕೂ ಹೆಚ್ಚು ಪೊಲೀಸರು ‘ಆರೋಗ್ಯಕ್ಕಾಗಿ ಓಟ’ದಲ್ಲಿ ಪಾಲ್ಗೊಳ್ಳುವ ಮೂಲಕ ಜನರ ಗಮನ ಸೆಳೆದರು. ದಿನವಿಡೀ ಖಾಕಿಯಲ್ಲಿ ಕಾಣಿಸಿಕೊಳ್ಳುತ್ತಿದ್ದವರು ಬಿಳಿಬಣ್ಣದ ಟಿ–ಷರ್ಟ್‌ ಧರಿಸಿ ಹುಮ್ಮಸ್ಸಿನಿಂದ 5 ಕಿ.ಮೀ ದೂರ ಓಟದಲ್ಲಿ ಪಾಲ್ಗೊಂಡರು. 

ಕೆಎಸ್‌ಆರ್‌ಪಿ ಕಲಬುರ್ಗಿ 6ನೇ ಘಟಕ ಆಯೋಜಿಸಿದ್ದ ಈ ಓಟದ ಮುಖಾಂತರ ಆರೋಗ್ಯ ಸಂರಕ್ಷಣೆ, ದೈಹಿಕ ಕ್ಷಮತೆ, ಕೋವಿಶೀಲ್ಡ್‌ನ ಪ್ರಯೋಜನದ ಬಗ್ಗೆ ಅರಿವು ಮೂಡಿಸಲಾಯಿತು. ಇಲ್ಲಿನ ಗಂಜ್‌ ಪ್ರದೇಶದಲ್ಲಿರುವ ನಗರೇಶ್ವರ ಶಾಲೆ ಆವರಣದಲ್ಲಿ ಕೆಎಸ್‌ಆರ್‌ಪಿಯ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ಓಟ ಮರುಕಟ್ಟೆ ಸರ್ಕಲ್‌, ಜಗತ್ ವೃತ್ತ, ಜಿಲ್ಲಾಧಿಕಾರಿ ಕಚೇರಿ ಮೂಲಕ ಸಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ
ಕೊನೆಗೊಂಡಿತು.

ಎಸ್‌ಬಿಐನಿಂದ ಬಿಳಿ ಟಿ–ಷರ್ಟ್‌ಗಳ ಮೇಲೆ ‘ಆರೋಗ್ಯಕ್ಕಾಗಿ ಓಟ, ರನ್‌ ಫಾರ್‌ ಫಿಟ್‌’ ಸಾಲುಗಳನ್ನು ಬರೆದು ಗಮನ ಸೆಳೆದರು. ಎಡಿಜಿಪಿ ಅಲೋಕ್‌ ಕುಮಾರ್, ಡಿಸಿಪಿ ಕಿಶೋರ ಬಾಬು, ಎಎಸ್‌ಪಿ ಪ್ರಸನ್ನ ದೇಸಾಯಿ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡರು.

ಕೆಎಸ್‌ಆರ್‌ಪಿಯ 6ನೇ ಪಡೆ, ಕಲಬುರ್ಗಿ ನಗರ ಪೊಲೀಸ್, ಜಿಲ್ಲಾ ಪೊಲೀಸ್, ಎನ್‌ಎಸ್‌ಎಸ್‌, ಎನ್‌ಸಿಸಿ, ಅಗ್ನಿ ಶಾಮಕ ದಳ ಸಿಬ್ಬಂದಿ, ಕ್ರೀಡಾಪಟುಗಳು, ಎಸ್‌ಬಿಐ ಬ್ಯಾಂಕಿನ ಸಿಬ್ಬಂದಿ, ದಾನಮ್ಮ ಪೆಟ್ರೋಲ್ ಬಂಕ್, ಬಿ.ಎನ್.ಆರ್. ಬ್ರಿಕ್ಸ್ ಕಂಪನಿಯ ಸಿಬ್ಬಂದಿ ಸಹ ಓಟದಲ್ಲಿದ್ದರು.

ಹೆಲ್ತ್‌ ಅಂಬಾಸಿಡರ್‌ ಆಗಿ: ಇದಕ್ಕೂ ಮುನ್ನ ಮಾತನಾಡಿದ ಅಲೋಕ್‌ ಕುಮಾರ್‌, ‘ಸಮಾಜವನ್ನು ರಕ್ಷಣೆ ಮಾಡಲು ಇರುವ ಪೊಲೀಸರ ಆರೋಗ್ಯ ಸುಸ್ಥಿತಿಯಲ್ಲಿ ಇರುವುದು ಬಹಳ ಮುಖ್ಯ. ಪ್ರತಿಯೊಬ್ಬ ಪೊಲೀಸ್‌ ತಮ್ಮ ಗಟ್ಟಿಮುಟ್ಟಾದ ಶರೀರ, ಮನಸ್ಸು ಹೊಂದುವ ಮೂಲಕ ಸಮಾಜಕ್ಕೆ ‘ಹೆಲ್ತ್‌ ಅಂಬಾಸಿಡರ್‌’ ಆಗಿ ಹೊರಹೊಮ್ಮಬೇಕು’ ಎಂದು ಕರೆ ನೀಡಿದರು.

‘ಕೆಎಸ್‌ಆರ್‌ಪಿಯ 40 ವರ್ಷದೊಳಗಿನ ಪ್ರತಿಯೊಬ್ಬ ಸಿಬ್ಬಂದಿ ಕಡ್ಡಾಯವಾಗಿ ಪ್ರತಿನಿತ್ಯ ಕನಿಷ್ಠ 5 ಕಿ.ಮೀ ಓಡಲೇಬೇಕು. ಇದರಿಂದ ದೈಹಿಕ ಅರೋಗ್ಯ ಕಾಪಾಡಿಕೊಳ್ಳುವುದಲ್ಲದೆ ನಾಡು ಮತ್ತು ದೇಶ ರಕ್ಷಣೆಗೆ ಸಹಕಾರಿಯಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಫಿಟ್ ಇಂಡಿಯಾ’ ಕನಸನ್ನು ನನಸು ಮಾಡುವುದಕ್ಕಾಗಿ ಈ ಓಟದಂಥ ಯೋಜನೆಗಳನ್ನು ಇಲಾಖೆ ಹಾಕಿಕೊಂಡಿದೆ’ ಎಂದು ಅವರು ಹೇಳಿದರು.

ಕೆ.ಎಸ್.ಆರ್.ಪಿ. 6ನೇ ಘಟಕದ ಕಮಾಂಡೆಂಟ್ ಬಸವರಾಜ ಜಿಳ್ಳೆ, ಎನ್‌ಎಸ್‌ಎಸ್ ಘಟಕದ ಮುಖ್ಯಸ್ಥ ಎಸ್.ಕೆ ತಿವಾರಿ, ವಿವಿಧ ಜಿಲ್ಲೆಗಳ ಕೆಎಸ್‌ಆರ್‌ಪಿ ಘಟಕಗಳ ಕಮಾಂಡೆಂಟ್‍ಗಳಾದ ರಮೇಶ ಬೋರಗಾವಿ, ಎಸ್.ಡಿ. ಪಾಟೀಲ, ರಾಮಕೃಷ್ಣ ಮುದ್ದೇಪಲ್ಲಿ, ಪ್ರವೀಣ ಆಳ್ವ, ಮಹಾದೇವ ಪ್ರಸಾದ್, ಹಮ್ಜಾ ಹುಸೇನ್, ಸಹಾಯಕ ಕಮಾಂಡಂಟ್ ನಿಸಾರ್ ಅಹ್ಮದ್, ವೈಜನಾಥ ಚನ್ನಬಸವ, ಎಸ್‌ಬಿಐ ಬ್ಯಾಂಕಿನ ಎಂ.ಡಿ ಸೌರಭ್ ಸುಕುಮಾರ್, ಬ್ಯಾಂಕಿನ ಡೆಟ್ಯುಟಿ ಜನರಲ್ ಮ್ಯಾನೇಜರ್ ಜೋಬಿ ಜೋಸ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ಸಿಂಪಿ ಹಾಗೂ ವಿವಿಧ ವಿಭಾಗದ ಪೊಲೀಸ್ ಅಧಿಕಾರಿಗಳು– ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು