ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕೋಣೆಯಲ್ಲಿ ಹಲವು ತರಗತಿ!

ನಾಲವಾರ ಸ್ಟೇಷನ್ ಸರ್ಕಾರಿ ಶಾಲೆ ಕಟ್ಟಡ ಸಂಪೂರ್ಣ ಶಿಥಿಲ
Last Updated 9 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ವಾಡಿ: ಪಟ್ಟಣ ಸಮೀಪದ ನಾಲವಾರ ಸ್ಟೇಷನ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಣೆಗಳು ಶಿಥಿಲಾವಸ್ಥೆ ಹಂತಕ್ಕೆ ತಲುಪಿದ್ದು, ಇಲ್ಲಿನ ಮಕ್ಕಳು ಜೀವಭಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಓಬೀರಾಯನ ಕಾಲದ ಹಲವು ಕೋಣೆಗಳು ಮಳೆ ಬಂದಾಗ ಸೋರುತ್ತವೆ. ಕಟ್ಟಡಗಳ ಮೇಲ್ಛಾವಣಿಗಳು ಉದುರಿ ಬೀಳುತ್ತಿದ್ದು, ಮಕ್ಕಳ ಪಾಲಿಗೆ ಜೀವಕಂಟಕವಾಗಿ ಪರಿಣಮಿಸುತ್ತಿವೆ.

ತುಕ್ಕು ಹಿಡಿದ ಚಾವಣಿಯ ಕಬ್ಬಿಣದ ಸರಳುಗಳು ಹೊರಗೆ ಕಾಣಿಸುತ್ತಿವೆ. ಸತ್ವ ಕಳೆದುಕೊಂಡ ಸಿಮೆಂಟ್ ಅವಶೇಷಗಳು ಕಳಚಿ ಬೀಳುತ್ತಿವೆ.

ಕಟ್ಟಡಗಳ ದುರಸ್ತಿ, ನವೀಕರಣ ಹಾಗೂ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಯೋಜನೆ, ಜಿಲ್ಲಾ ಪಂಚಾಯಿತಿ, ತಾ.ಪಂ ನ ವಿವಿಧ ಯೋಜನೆಯಡಿ ಅನುದಾನ ಮಂಜೂರಿಗೆ ಅವಕಾಶವಿದೆ. ಆದರೆ ಈ ಶಾಲೆಗೆ ಮಾತ್ರ ದುರಸ್ತಿ ಭಾಗ್ಯ ದೊರಕಿಲ್ಲ. 1 ರಿಂದ 8ನೇ ತರಗತಿವರೆಗೆ ನಡೆಯುತ್ತಿರುವ ಇಲ್ಲಿ ಒಟ್ಟು 180 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೆ ಕೋಣೆಗಳ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಈ ಸಮಸ್ಯೆ ಪರಿಹರಿಸಿ ಮಕ್ಕಳ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ
ಒತ್ತಾಯವಾಗಿದೆ.

ಶಾಲೆಯಲ್ಲಿ ಒಟ್ಟು 5 ಕೋಣೆಗಳಿವೆ. ಅದರಲ್ಲಿ 4 ಕೋಣೆಗಳು ಶಿಥಿಲಾವಸ್ಥೆ ಹಂತಕ್ಕೆ ತಲುಪಿವೆ. ಕೋಣೆಗಳ ಕೊರತೆಯಿಂದ ಹಲವು ತರಗತಿಗಳನ್ನು ಒಂದೇ ಕೋಣೆಯಲ್ಲಿ ನಡೆಸಲಾಗುತ್ತಿದೆ. ಬಿಸಿಯೂಟ ತಯಾರಿಕೆ ಕೋಣೆ ಸಹ ಸೋರುತ್ತಿದ್ದು, ಹಲವು ಬಾರಿ ಬಿಸಿಯೂಟಕ್ಕಾಗಿ ಸಂಗ್ರಹಿಸಿಟ್ಟಿದ್ದ ದವಸ ಧಾನ್ಯಗಳು ಹಾಳಾಗಿ ಹೋಗಿವೆ ಎನ್ನುತ್ತಾರೆ ಪೋಷಕರು.

ಈಗಾಗಲೇ ಹಲವು ಬಾರಿ ಮೇಲ್ಛಾವಣಿಯ ಸಿಮೆಂಟ್ ಕಳಚಿ ಬಿದ್ದಿದೆ. ಸದಾ ಆತಂಕದಲ್ಲಿ ಪಾಠ ಆಲಿಸಬೇಕಾದ ಸ್ಥಿತಿ ಉಂಟಾಗಿದೆ. ಕೂಡಲೇ ದುರಸ್ತಿ ಕಾರ್ಯ ಮಾಡಬೇಕು, ಇಲ್ಲವೇ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಬೇಕು ಎನ್ನುತ್ತಾರೆ ಸ್ಥಳೀಯರಾದ ಜಾವೀದ್ ಮುಲ್ಲಾ.

ಮುರಿದ ಬೆಂಚುಗಳು

ಶಾಲೆಗೆ ಪೂರೈಸಿದ ಅಲ್ಪಸ್ವಲ್ಪ ಬೆಂಚುಗಳು ಮುರಿದು ಹೋಗಿವೆ. ಮುರಿದ ಬೆಂಚುಗಳನ್ನು ಅನಿವಾರ್ಯವಾಗಿ ಬಳಸಿಕೊಂಡು ಕೆಲವು ಮಕ್ಕಳು ಕುಳಿತರೆ ಇನ್ನು ಕೆಲವರು ನೆಲದ ಮೇಲೆ ಕುಳಿತು ಪಾಠ ಕೇಳುತ್ತಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಬೇಕು ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT