ಗುರುವಾರ , ನವೆಂಬರ್ 21, 2019
22 °C
6 ತಿಂಗಳಲ್ಲಿ 58 ಸಾವಿರ ಜನ ಭೇಟಿ: ಶಾಲಾ ಮಕ್ಕಳದೇ ಸಿಂಹಪಾಲು, ಹೊರ ಜಿಲ್ಲೆಯವರೂ ಹೆಚ್ಚು

ವಿಜ್ಞಾನ ಕೇಂದ್ರ; ಸಂದರ್ಶಕರ ಸಂಖ್ಯೆ ಇಳಿಕೆ

Published:
Updated:
Prajavani

ಕಲಬುರ್ಗಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿಜ್ಞಾನದ ಪ್ರಾಯೋಗಿಕ ಜ್ಞಾನ ನೀಡುವ ಉದ್ದೇಶದಿಂದ ಸ್ಥಾಪಿಸಿರುವ ಇಲ್ಲಿಯ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ಇದು ಕಲ್ಯಾಣ ಕರ್ನಾಟಕ ಭಾಗದ ಏಕೈಕ ದೊಡ್ಡ ವಿಜ್ಞಾನ ಕೇಂದ್ರ ಎನ್ನುವುದು ವಿಶೇಷ.

ಜಿಲ್ಲಾ ವಿಜ್ಞಾನ ಕೇಂದ್ರ ಪ್ರತಿ ಆರ್ಥಿಕ ವರ್ಷದಲ್ಲಿ ಎರಡು ಲಕ್ಷ ಜನ ಭೇಟಿ ನೀಡಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ಏಪ್ರಿಲ್ 2018 ರಿಂದ ಮಾರ್ಚ್‌ 2019ರವರೆಗೂ ಶುಲ್ಕ ಪಾವತಿಸಿ ಹಾಗೂ ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗೆ ಶುಲ್ಕ ರಹಿತವಾಗಿ ಭೇಟಿ ನೀಡಿದವರ ಸಂಖ್ಯೆ 1,88,797.

ಈ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೂ 6 ತಿಂಗಳ ಅವಧಿಯಲ್ಲಿ ಒಟ್ಟು 58,007 ಜನ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಇದು ಕಡಿಮೆ. ಸಂದರ್ಶಕರ ಸಂಖ್ಯೆ ಕಡಿಮೆಯಾಗಲು ಆಸಕ್ತಿ ಕೊರತೆ ಹಾಗೂ ಕೇಂದ್ರ ಇರುವ ಕುರಿತು ಮಾಹಿತಿ ಇಲ್ಲದಿರುವುದೇ ಕಾರಣ ಎಂದು ತಿಳಿದುಬಂದಿದೆ.

‘ವಿಜ್ಞಾನ ಕೇಂದ್ರಕ್ಕೆ ನವೆಂಬರ್, ಡಿಸೆಂಬರ್ ಹಾಗೂ ಫೆಬ್ರುವರಿ ತಿಂಗಳಲ್ಲಿ ಹೆಚ್ಚು ಜನ ಭೇಟಿ ನೀಡುತ್ತಾರೆ. ಈ ತಿಂಗಳುಗಳಲ್ಲಿ ಶೈಕ್ಷಣಿಕ ಪ್ರವಾಸ ಪ್ರಾರಂಭವಾಗುವುದರಿಂದ ಹಾಗೇ ಭೇಟಿ ನೀಡುವವರಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಮುಂದಿನ ದಿನಗಳಲ್ಲಿ ಸಂದರ್ಶಕರ ಸಂಖ್ಯೆ ಹೆಚ್ಚಾಗಬಹುದು’ ಎಂದು ಆಶಾವಾದವನ್ನು ವ್ಯಕ್ತಪಡಿಸುತ್ತಾರೆ ಕೇಂದ್ರದ ನಿರ್ದೇಶಕರಾದ ಲಕ್ಷ್ಮೀನಾರಾಯಣ ಅವರು.

ವಿಜಯಪುರ ಜಿಲ್ಲೆಯವರು ಹೆಚ್ಚು: ‘ಕಲಬುರ್ಗಿ ಜಿಲ್ಲೆಗಿಂತ ವಿಜಯಪುರ ಜಿಲ್ಲೆಯವರು ವಿಜ್ಞಾನ ಕೇಂದ್ರಕ್ಕೆ ಹೆಚ್ಚು ಭೇಟಿ ನೀಡುತ್ತಾರೆ ಎನ್ನುವುದು ಸೋಜಿಗದ ಸಂಗತಿ.  ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣ ಕಲಬುರ್ಗಿ ನಗರಕ್ಕೆ ಹತ್ತಿರವಾಗುವುದರಿಂದ ಅಲ್ಲಿನ ಶಾಲಾ–ಕಾಲೇಜುಗಳ ಮಕ್ಕಳೇ ಹೆಚ್ಚು ಬರುತ್ತಾರೆ’ ಎನ್ನುತ್ತಾರೆ ಅವರು.

ಹೆಚ್ಚು ಭೇಟಿ ನೀಡುವವರ ಪಟ್ಟಿಯಲ್ಲಿ ಯಾದಗಿರಿ ಎರಡನೇ ಸ್ಥಾನದಲ್ಲಿದೆ. ಬೀದರ್, ರಾಯಚೂರು ಹಾಗೂ ಕೊಪ್ಪಳಗಳಿಂದಲೂ ಜನ ಭೇಟಿ ನೀಡುತ್ತಾರೆ.

ವಿಶೇಷ ಎಂದರೆ ನೆರೆ ರಾಜ್ಯ ಮಹಾರಾಷ್ಟ್ರದ ನಾಂದೇಡ್, ಲಾತೂರು, ಪಂಡರಪುರ ಹಾಗೂ ಸೊಲ್ಲಾಪುರದಿಂದಲೂ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಆದರೆ ಈ ಆರು ತಿಂಗಳ ಅವಧಿಯಲ್ಲಿ ಸಂದರ್ಶಕರ ಸಂಖ್ಯೆ ಕಡಿಮೆಯಾಗಿದೆ.

ಎರಡು ವಿಶೇಷ ವಾಹನಗಳು: ನೀತಿ ಆಯೋಗ ಕಲ್ಯಾಣ ಕರ್ನಾಟಕದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳು ಎಂದು ಗುರುತಿಸಿದೆ. ಈ ಜಿಲ್ಲೆಗಳಲ್ಲಿ ವೈಜ್ಞಾನಿಕ ಚಟುವಟಿಕೆಗಳನ್ನು ಹೆಚ್ಚಿಸಲು ಎರಡು ವಿಜ್ಞಾನ ವಾಹನಗಳ ಖರೀದಿಗೆ ಅನುದಾನ ನೀಡಿದ್ದು, ವಾಹನಗಳನ್ನು ಖರೀದಿಸಲಾಗಿದೆ.

ಬೆಂಗಳೂರಿನ ವಿಜ್ಞಾನ ಕೇಂದ್ರದಿಂದ ರಾಯಚೂರಿಗೆ ವಿಶೇಷ ವಿಜ್ಞಾನ ವಾಹನ ಬರಲಿದೆ. ಯಾದಗಿರಿಗೆ ಇಲ್ಲಿಂದಲೇ ವಾಹನ ಕಳುಹಿಸಲಾಗುತ್ತದೆ ಎಂದು ಅವರು ತಿಳಿಸಿದರು.

ವಿಜ್ಞಾನ ಕೇಂದ್ರದಲ್ಲಿ ಏನೇನಿದೆ?: ಕಲಬುರ್ಗಿಯಲ್ಲಿರುವ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ 4 ಪ್ರದರ್ಶನಾಲಯಗಳಿವೆ. ಕನ್ನಡಿಗಳ ವ್ಯೂಹ, 3ಡಿ ಗ್ಯಾಲರಿ, ಡೈನೋಸಾರ್ ಉದ್ಯಾನ ಹಾಗೂ ಪ್ಲಾನೇಟೆರಿಯಂ ಅನ್ನು ಸಹ ಇಲ್ಲಿ ನೋಡಬಹುದು.

ವಿಜ್ಞಾನ ಕೇಂದ್ರ ದೀಪಾವಳಿ ಹಾಗೂ ಗಣೇಶ ಚತುರ್ಥಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 6.30ರವರೆಗೂ ತೆರೆದಿರುತ್ತದೆ.

ಪ್ರತಿಕ್ರಿಯಿಸಿ (+)