ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಕೂಟರ ಉತ್ಸವ ಆಚರಿಸಲು ಒತ್ತಾಯ: 1 ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

Last Updated 13 ಅಕ್ಟೋಬರ್ 2019, 13:12 IST
ಅಕ್ಷರ ಗಾತ್ರ

ಸೇಡಂ: ಹಂಪಿ ಉತ್ಸವ ಮಾದರಿಯಲ್ಲಿ ರಾಷ್ಟ್ರಕೂಟರ ಉತ್ಸವ ಆಚರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಮ್ಮಿಕೊಂಡಿರುವ ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ದೇವರು ಭಾನುವಾರ ಸಹಿ ಮಾಡುವ ಮೂಲಕ ಚಾಲನೆ ನೀಡಿದರು.

ರಾಷ್ಟ್ರಕೂಟರ ಉತ್ಸವ ಸರ್ಕಾರದಿಂದಲೇ ಆಚಚರಿಸುವಂತೆ ಈ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಪದಾಧಿಕಾರಿಗಳು ಮಳಖೇಡ ಕೋಟೆಯಿಂದ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ್ದರು. ಜೊತೆಗೆ ರಕ್ತದಿಂದ ಮುಖ್ಯಮಂತ್ರಿಗಳಿಗೆ ಪತ್ರ ಕೂಡ ಬರೆದಿದ್ದರು.ಇದರ ಫಲವಾಗಿ ಒಂದು ಬಾರಿ ಸರ್ಕಾರದಿಂದ ರಾಷ್ಟ್ರಕೂಟರ ಉತ್ಸವ ಆಚರಿಸಲಾಗಿತ್ತು. ಈಗ ಸ್ಥಗಿತಗೊಂಡು 2 ವರ್ಷಗಳಾಗಿವೆ. ಪುನಃ ಸರ್ಕಾರದಿಂದ ಆಚರಿಸಬೇಕು ಎಂದು ಒಂದು ಲಕ್ಷ ಸಹಿ ಸಂಗ್ರಹಕ್ಕೆ ಪದಾಧಿಕಾರಿಗಳು ಮುಂದಾಗಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಮಾತನಾಡಿ, ‘ಕನ್ನಡ ಸಾಹಿತ್ಯ ಲೋಕಕ್ಕೆ ಮೇರು ಕೃತಿ ಕವಿರಾಜಮಾರ್ಗ ನೀಡಿದ ನಾಡು ಮಳಖೇಡ. ರಾಷ್ಟ್ರಕೂಟರ ಇತಿಹಾಸ ಮತ್ತು ಮಳಖೇಡದ ಮಹಿಮೆ ನಾಡಿನ ಜನತೆಗೆ ತಿಳಿಯಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದಲೇ ಪ್ರತಿವರ್ಷ ರಾಷ್ಟ್ರಕೂಟರ ಉತ್ಸವ ಆಚರಣೆಯಾಗಬೇಕು. ಅದಕ್ಕೆ ಯಾವುದೇ ರೀತಿಯ ಕಾನೂನು ತೊಡಕು ಇರಬಾರದು. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ದೇವರು ಮಾತನಾಡಿ, ‘ಈ ಭಾಗದ ಇತಿಹಾಸವನ್ನು ನಾಡಿನ ಜನಕ್ಕೆ ಪರಿಚಯಿಸುವುದಕ್ಕೆ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ರಾಷ್ಟ್ರಕೂಟರ ಉತ್ಸವ ಆಚರಿಸುವ ಅಗತ್ಯ ಇದೆ. ಸರ್ಕಾರ ಪುನಃ ಉತ್ಸವ ಆಚರಣೆಗೆ ಮುಂದಾಗಬೇಕು. ಇದಕ್ಕೆ ಸ್ವಾಮೀಜಿಗಳ ಬೆಂಬಲ ಇದೆ’ ಎಂದರು.

ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸಿದ್ದು ಬಾನಾರ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ, ಬಸವರಾಜ ಪಾಟೀಲ ಊಡಗಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಅನೀಲಕುಮಾರ ಸಕ್ರಿ, ಜಗನ್ನಾಥರೆಡ್ಡಿ ಗೋಟುರ, ಶಿವಪುತ್ರಪ್ಪ ಮೊಘಾ, ವಿದ್ಯಾಸಾಗರ ದುದ್ದೇಲಿ, ದೇವು ನಾಟೀಕಾರ, ಭೀಮಯ್ಯ ಗುತ್ತೇದಾರ, ಶ್ರೀನಿವಾಸರೆಡ್ಡಿ ಮದನಾ, ಚಂದ್ರಶೇಖರ ನಾಮವಾರ, ರವಿಸಿಂಗ, ಸುಭಾಷ, ಆಶಪ್ಪ ಇಮಡಾಪೂರ, ಗುಂಡಪ್ಪ ಪೂಜಾರಿ, ಭೀಮಾಶಂಕರ ನಾಟೀಕಾರ, ಸಂಜಪ್ಪಮದನಾ, ಸಿದ್ದಲಿಂಗಪ್ಪ, ಕಾಳೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT