ಶನಿವಾರ, ಜನವರಿ 29, 2022
17 °C
ಕ.ಕ ಭಾಗದ ಅಮೂರ್ತ ಪರಂಪರೆ ಕುರಿತು ವಿಚಾರ ಸಂಕಿರಣ

ವಚನಕಾರರ, ಸೂಫಿ ಸಂತರ ನೆಲೆವೀಡು ಕಲ್ಯಾಣ ಕರ್ನಾಟಕ- ಹೃಷಿಕೇಶ್ ಬಹದ್ದೂರ್ ದೇಸಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಕಲ್ಯಾಣ ಕರ್ನಾಟಕವು ವಚನಕಾರರು, ಸೂಫಿ ಸಂತರು, ತತ್ವ ಪದಕಾರರ ನೆಲೆಯೆಂದು ಗುರುತಿಸಿಕೊಂಡಿದೆ. ಇದರಲ್ಲೇ ಈ ಭಾಗದ ಜೀವಂತಿಕೆ ಅಡಗಿದೆ’ ಎಂದು ಪತ್ರಕರ್ತ ಹೃಷಿಕೇಶ್ ಬಹದ್ದೂರ್ ದೇಸಾಯಿ ಪ್ರತಿಪಾದಿಸಿದರು.

ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ (ಸ್ವಾಯತ್ತ) ಇತಿಹಾಸ ಸ್ನಾತಕೋತ್ತರ ಅಧ್ಯಯನ ವಿಭಾಗ, ಪುರಾತತ್ವ ಇಲಾಖೆ ಸಹಯೋಗದಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಶ್ರದ್ಧೆಯಿಂದ ದೇವರು ಅಥವಾ ಗುರುವಿನಲ್ಲಿ ನಂಬಿಕೆ ಇಟ್ಟುಕೊಂಡು ಮಾಡುವ ಕಾಯಕಗಳನ್ನು ತಿಳಿಸುವ ಹಲವು ಪಂಥಗಳು ನಮ್ಮಲ್ಲಿವೆ. ಅದರಲ್ಲಿ ಸೂಫಿಗಳು, ವಚನಕಾರರು, ತತ್ವಪದಕಾರರು, ದಾಸರು ಇದ್ದಾರೆ. ಎಲ್ಲವುಗಳ ಮೂಲ ಉದ್ದೇಶ ಮನುಷ್ಯತ್ವದ ಅನಾವರಣ. ಅದರಾಚೆ ಅಧ್ಯಾತ್ಮದ ಅರಿವು ಪಡೆದು ಜೀವನ ರೂಪಿಸಿಕೊಳ್ಳುವುದಾಗಿತ್ತು. ಜಾತಿ, ಧರ್ಮ, ಬಣ್ಣ ಮತ್ತು ಭಾಷೆ ತುಸು ಹಿನ್ನೆಲೆಯಲ್ಲಿದ್ದವು. ಗುರುಪಂಥ ಮತ್ತು ಶಿಷ್ಯಪರಂಪರೆಯ ಮತ್ತೊಂದು ರೂಪವೇ ಅಮೂರ್ತ ಪರಂಪರೆ’ ಎಂದು ಅಭಿಪ್ರಾಯಪಟ್ಟರು.

‘ಕಡಕೋಳದ ಮಡಿವಾಳಪ್ಪ, ತಿಂಥಣಿಯ ಮೌನೇಶ್ವರ, ಕೊಡೇಕಲ್ ಬಸವಣ್ಣ, ಅಷ್ಟೂರಿನ ಅಲ್ಲಮಪ್ರಭು ಹೀಗೆ ಮಾನವೀಯ ಮೌಲ್ಯಗಳ ಉನ್ನತಿಗಾಗಿ ಶ್ರಮಿಸಿದ ಜಾತ್ಯತೀತ ಮನೋಭಾವದ ಜನಕಲ್ಯಾಣ ಬಯಸಿ ಕಾಯಕ ಮಾಡಿದ ಸಂತರನ್ನು, ಶರಣರನ್ನು ನೆನಪಿಸಿಕೊಳ್ಳಬೇಕಿದೆ’ ಎಂದರು.

ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಶಿವಪ್ರಕಾಶ್ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗವು ಐತಿಹಾಸಿಕವಾಗಿ ಅತ್ಯಂತ ಶ್ರೀಮಂತ ನೆಲ. ಇಲ್ಲಿನ ಹಲವು ಪರಂಪರೆಗಳಿಂದ ಅತ್ಯಂತ ಶ್ರದ್ಧೆಯ ಕಾಯಕಗಳನ್ನು ರೂಢಿಸಿಕೊಳ್ಳುವ ಮೂಲಕ ಜನರು ದೇವರನ್ನು ಕಾಣುವ ಮತ್ತು ನಂಬಿಕೆಯಿಂದ ಜೀವಿಸಿದ್ದ ಹಲವು ಉದಾಹರಣೆಗಳು ಸಿಗುತ್ತದೆ’ ಎಂದರು.

ಚಿತ್ತಾಪುರ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯಕುಮಾರ ಸಾಲಿಮನಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಶಂಕ್ರೆಪ್ಪ ಎಸ್. ಹತ್ತಿ ಅಧ್ಯಕ್ಷತೆ ವಹಿಸಿದ್ದರು. ಅನೀಲಕುಮಾರ ಹಾಲು, ಶಿವಕುಮಾರ ಮಠಪತಿ ಇದ್ದರು.

ಇತಿಹಾಸ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಇಂದುಮತಿ ಪಿ. ಪಾಟೀಲ ಮಾತನಾಡಿ, ‘ಶತಮಾನಗಳಿಂದ ನಾವು ಅನುಸರಿಸಿಕೊಂಡ ರೂಢಿ, ಪರಂಪರೆಗಳು ಹೇಗೆ ಮತ್ತು ಏಕೆ ಆರಂಭವಾದವು ಎಂಬುದರ ಬಗ್ಗೆ ನಮಗೆ ಮಾಹಿತಿಯೇ ಇರುವುದಿಲ್ಲ. ತಿಳಿವಳಿಕೆ ಇರುವುದಿಲ್ಲ. ಇಂಥವೇ ಅಮೂರ್ತ ಪರಂಪರೆಗಳಾಗಿವೆ’ ಎಂದರು.

ಶಾರದಾದೇವಿ ಜಾಧವ್ ನಿರೂಪಿಸಿದರು.

ನಂತರ ನಡೆದ ವಿಚಾರ ಸಂಕಿರಣದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಶಿವಗಂಗಾ ರುಮ್ಮಾ ಅವರು ಕಲ್ಯಾಣ ಕರ್ನಾಟಕದಲ್ಲಿ ಶಾಕ್ತ ಪರಂಪರೆ, ಡಾ. ಚಂದ್ರಶೇಖರ ಬಿರಾದಾರ ಅವರು ದರ್ಶನ, ಪಂಥ–ಧರ್ಮಗಳ ಕುರಿತು ಮಾತನಾಡಿದರು. 3ನೇ ಗೋಷ್ಠಿಯಲ್ಲಿ ಪ್ರಬಂಧಗಳನ್ನು ಮಂಡಿಸಲಾಯಿತು.

ಸಮಾರೋಪದಲ್ಲಿ ಸಂಸ್ಕೃತಿ ಚಿಂತಕ ಬಿ.ಪೀರ್‌ಬಾಷಾ ಸಮಾರೋಪ ಭಾಷಣ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು