ಶನಿವಾರ, ಸೆಪ್ಟೆಂಬರ್ 18, 2021
24 °C
ಖಾಲಿ ಹುದ್ದೆ ಭರ್ತಿ, ಕೃಷಿ ಕಾಯ್ದೆಗಳ ರದ್ದತಿ, ಕಾರ್ಮಿಕ ವಿರೋಧಿ ಕಾಯ್ದೆಗಳ ವಾಪಸ್‌ಗೆ ಒತ್ತಾಯ

ಕಲಬುರ್ಗಿ: ಸಂಘಟನೆಗಳ ಸರಣಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು, ಕಾರ್ಮಿಕ ವಿರೋಧಿ ನೀತಿಗಳನ್ನು ರದ್ದುಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಸಂಘಟನೆಗಳವರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನಿರುದ್ಯೋಗಿ ಯುವಜನ ಹೋರಾಟ ಸಮಿತಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ತಡೆಹಿಡಿದಿರುವ ನೇಮಕ ಪ್ರಕ್ರಿಯೆ ಪುನರಾರಂಭಿಸಬೇಕು, ಪ್ರಥಮ, ದ್ವಿತೀಯ ದರ್ಜೆ ಸಹಾಯಕರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿ ಆದೇಶ ನೀಡಬೇಕು. ಸರ್ಕಾರಿ ಐಟಿಐಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಲಾಕ್‍ಡೌನ್ ಅವಧಿ ವೇತನ ಬಿಡುಗಡೆ ಮಾಡಿ ಸೇವಾಭದ್ರತೆ ಒದಗಿಸಬೇಕು. ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಇಲಾಖೆಯಲ್ಲಿನ ಗುತ್ತಿಗೆ, ಹೊರಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಬೇಕು. ಶಾಲೆಗಳಲ್ಲಿ ಸಂಗೀತ, ರಂಗಭೂಮಿ, ಚಿತ್ರಕಲೆ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಭ್ರಷ್ಟಾಚಾರ, ಅಕ್ರಮ ತಡೆಗಟ್ಟಬೇಕು. ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯ ದುರುಪಯೋಗಕ್ಕೆ ಕಡಿವಾಣ ಹಾಕಬೇಕು ಎಂದರು.

ಸಮಿತಿ ಜಿಲ್ಲಾ ಸಂಚಾಲಕ ಭೀಮಾಶಂಕರ ಪಾಣೇಗಾಂವ, ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಎಸ್.ಎಚ್, ಶರಣು ವಿ.ಕೆ., ಅಣವೀರಪ್ಪ ಬೋಳೆವಾಡ, ಮಲ್ಲಿನಾಥ ಹುಂಡೇಕಲ್, ಈಶ್ವರ ಇ.ಕೆ., ಮಮತಾ ಪಾಟೀಲ, ಸಂಗಮೇಶ ಕೊಳ್ಳಿ, ವಾಜಿದ್ ಸೈಯದ್, ಜಾವೀದ್ ಖಾನ್, ಸಾನಿಯಾ ಕೋಟಾರ ಇದ್ದರು.

ಸಿಐಟಿಯು, ಪ್ರಾಂತ ರೈತ ಸಂಘ, ಕೃಷಿಕೂಲಿಕಾರರ ಸಂಘ, ಆರ್‌ಕೆಎಸ್‌: ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥ ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಕರ್ನಾಟಕ ಪ್ರಾಂತ ರೈತ ಸಂಘ, ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ರೈತ ಕೃಷಿ ಕಾರ್ಮಿಕರ ಸಂಘಟನೆ (ಆರ್‌ಕೆಎಸ್‌) ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

’ವಲಸೆ, ಅಸಂಘಟಿತ ವಲಯಗಳ ಕಾರ್ಮಿಕರನ್ನು ನೋಂದಣಿ ಮಾಡಬೇಕು. ದಿನಗೂಲಿ, ಗುತ್ತಿಗೆ, ಯೋಜನಾ ಕಾರ್ಮಿಕರು, ಅಸಂಘಟಿತ ಸೇರಿ ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಸುರಕ್ಷೆ ಮತ್ತು ಪಿಂಚಣಿ ಖಾತರಿಪಡಿಸಬೇಕು. ಆಹಾರ ಕಿಟ್ ನೀಡಬೇಕು. ರಾಜ್ಯದಲ್ಲಿ ಕಟ್ಟಡ ಕಾರ್ಮಿಕರಿಗೆ ನೀಡಲಾದ ಆಹಾರ ಕಿಟ್, ಟೂಲ್‍ಕಿಟ್‍ನಲ್ಲಿನ ಅವ್ಯವಹಾರ ತನಿಖೆಗೆ ಒಳಪಡಿಸಬೇಕು. ಉದ್ಯೋಗ ಖಾತರಿ ಯೋಜನೆಗೆ ಅನುದಾನ ಹೆಚ್ಚಿಸಿ, ದಿನಕ್ಕೆ ₹ 600 ರಂತೆ ಕನಿಷ್ಠ 200 ದಿನಗಳ ಕೆಲಸ ಕೊಡಬೇಕು, ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕುಟುಂಬಗಳಿಗೆ ತಿಂಗಳಿಗೆ ₹ 10 ಸಾವಿರ ನಗದು ವರ್ಗಾವಣೆ ಮಾಡಬೇಕು, ಎಲ್ಲ ಮುಂಚೂಣಿ ದುಡಿಮೆಗಾರರಿಗೆ ಆದ್ಯತೆ ನೀಡಿ ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಿಸಬೇಕು‘ ಎಂದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಗೌರಮ್ಮ ಪಾಟೀಲ, ಪ್ರಭಾವತಿ, ರತ್ನಾ, ನಗರ ಅಧ್ಯಕ್ಷೆ ರಫತ್ ಸುಲ್ತಾನಾ, ಗುರುಲಿಂಗಯ್ಯ ಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ಶಾಂತಪ್ಪ ಪಾಟೀಲ, ವಿಠ್ಠಲ್ ಪೂಜಾರಿ, ರೈತ ಕೃಷಿ ಕಾರ್ಮಿಕ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್‌.ಬಿ. ಇತರರು ಇದ್ದರು.

ಕಲ್ಯಾಣ ಕರ್ನಾಟಕ ಜನಪರ ಸಂಘಟನೆಗಳ ಒಕ್ಕೂಟ: ನಗರದ ಮಿನಿ ವಿಧಾನಸೌಧ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಿನಿ ವಿಧಾನಸೌಧದಲ್ಲಿ ಸರ್ಕಾರದ ಅನೇಕ ಕಚೇರಿಗಳಿವೆ. ಹಲವಾರು ಕೆಲಸ ಕಾರ್ಯಗಳಿಗೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಾರೆ. ಬಣ್ಣ ಹಚ್ಚುವ ಮೂಲಕ ಕಂಗೊಳಿಸುವಂತೆ ನೋಡಿಕೊಳ್ಳಬೇಕು. ಸುತ್ತಲಿನ ವಾತಾವರಣ ಸ್ವಚ್ಛಗೊಳಿಸಬೇಕು. ಡಿಸಿ ಕಚೇರಿ ಎದುರಿನ ಗಾರ್ಡನ್ ನಿರ್ವಹಣೆ ಆದ್ಯತೆಯಾಗಬೇಕು ಎಂದು ಹೇಳಿದರು.

ಒಕ್ಕೂಟದ ಗೌರವಾಧ್ಯಕ್ಷ ಜಗನ್ನಾಥ ಸೂರ್ಯವಂಶಿ, ಅಧ್ಯಕ್ಷ ನಂದಕುಮಾರ ನಾಗಭುಜಂಗೆ, ಹಣಮಂತ ಬಸನಾಳಕರ್, ಮನೋಹರ ಬೀರನೂರ, ದತ್ತು ಭಾಸಗಿ, ಗೋಪಾಲ ನಾಟೀಕಾರ, ಸಂದೀಪ ಭರಣಿ, ಆನಂದ ತೆಗನೂರ, ಮಲ್ಲಿಕಾರ್ಜುನ ಸರಡಗಿ, ಶರಣು ಬಡಿಗೇರ, ಶಶಿಗಿರಿ ಮರತೂರಕರ, ಶಿವಕುಮಾರ ಭಾಗೋಡಿ, ರಾಘವೇಂದ್ರ ಕುಲಕರ್ಣಿ, ಬಾಬು, ಚಂದ್ರಹಾಸ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.