ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಳನೇ ವೇತನ ಪರಿಷ್ಕರಣೆ ವರದಿ ಶೀಘ್ರ ಜಾರಿಗೆ ಒತ್ತಾಯ

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ಪ್ರತಿಭಟನೆ
Published 19 ಜೂನ್ 2024, 16:21 IST
Last Updated 19 ಜೂನ್ 2024, 16:21 IST
ಅಕ್ಷರ ಗಾತ್ರ

ಕಲಬುರಗಿ: ಏಳನೇ ವೇತನ ಪರಿಷ್ಕರಣೆ, ಹಳೆ ನಿಶ್ಚಿತ ಪಿಂಚಣಿ ಮರುಸ್ಥಾಪನೆ, ರಾಜ್ಯದಲ್ಲಿ ಖಾಲಿ ಇರುವ 2.60 ಲಕ್ಷ ಹುದ್ದೆಗಳ ಭರ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಸಂಘಟನೆ ಮುಖಂಡರು ಮಾತನಾಡಿ, ‘ಮೂಲವೇತನ ₹35 ಸಾವಿರ ನೀಡುವಂತೆ ಒಕ್ಕೂಟವು ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಆಯೋಗವು ₹27 ಸಾವಿರ ನೀಡಲು ಮುಂದಾಗಿದೆ. ಇದರಿಂದ ಕೆಳಹಂತದ ನೌಕರರಿಗೆ ಅನ್ಯಾಯವಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘7ನೇ ವೇತನ ಪರಿಷ್ಕರಣೆಯನ್ನು ನೌಕರರಿಗೆ ಮಧ್ಯಂತರ ಪರಿಹಾರವನ್ನು ನೀಡಿದ (2023ರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ) ಆರ್ಥಿಕ ಲಾಭವನ್ನು ಪಾವತಿಸಲು ರಾಜ್ಯ ಸರ್ಕಾರ ಆದೇಶ ನೀಡಬೇಕು. ಆಯೋಗವು ತುಟ್ಟಿಭತ್ಯೆ ಗುಣಾಂಕವನ್ನು (2022ರ ಜುಲೈ 1ರಿಂದ ಅನ್ವಯವಾಗುವಂತೆ) 0.722 ಗುಣಾಂಕದಲ್ಲಿ ನೀಡಲು ತಿಳಿಸಿದೆ. ಆದರೂ ರಾಜ್ಯ ನೌಕರರು ಈಗಾಗಲೇ (2024ರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ) 0.9 ಗುಣಾಂಕದಲ್ಲಿ ತುಟ್ಟಿಭತ್ಯೆಯನ್ನು ಪಡೆದಿರುವ ಹಿನ್ನೆಲೆಯಲ್ಲಿ ಈ ತುಟ್ಟಿ ಭತ್ಯೆ ದರವನ್ನು ಕಡಿತಗೊಳಿಸದೆ 0.9 ಗುಣಾಂಕದಲ್ಲಿ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ನೌಕರರು ಮತ್ತು ಪಿಂಚಣಿದಾರರಿಗೆ ಹಾಗೂ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ನಗದು ರಹಿತ ಆರೋಗ್ಯ ವಿಮೆ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾದರಿಯಲ್ಲಿ ಜಾರಿಗೊಳಿಸಬೇಕು. ಹಳೆ ಪಿಂಚಣಿ ಯೋಜನೆ ಮರು ಜಾರಿ ಮಾಡಬೇಕು. ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಬೇಕು’ ಎಂದು ಆಗ್ರಹಿಸಿದರು.

ಈ ವೇಳೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಾಗೋಡಿ, ಪ್ರಕಾಶ ಬಿರಾದಾರ, ಸುಭಾಷ್ ಕಪಾಳೆ ಸೇರಿದಂತೆ ಇತರ ಇಲಾಖೆ ನೌಕರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT