ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ತಾಪುರ: ದಂಡೋತಿ ಸೇತುವೆಗೆ ಸಚಿವ ಶರಣಪ್ರಕಾಶ ಭೇಟಿ

ತುರ್ತು ದುರಸ್ತಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ
Published 3 ಸೆಪ್ಟೆಂಬರ್ 2024, 15:36 IST
Last Updated 3 ಸೆಪ್ಟೆಂಬರ್ 2024, 15:36 IST
ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನ ದಂಡೋತಿ ಹತ್ತಿರದ ಕಾಗಿಣಾ ನದಿಯ ಸೇತುವೆ ಮೇಲಿನ ಸಿಮೆಂಟ್ ರಸ್ತೆ ಕಿತ್ತುಹೋಗಿ ಸಂಚಾರಕ್ಕೆ ಸಮಸ್ಯೆಯಾಗಿದೆ ಎನ್ನುವ ಸುದ್ಧಿ ತಿಳಿದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಮಂಗಳವಾರ ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದರು.

ದಂಡೋತಿ ಹತ್ತಿರದ ಕಾಗಿಣಾ ನದಿಗೆ ಹೊಸ ಸೇತುವೆ ನಿರ್ಮಾಣ ಮಾಡುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರ ಮಟ್ಟದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ. ಹೊಸ ಸೇತುವೆ ಬಗ್ಗೆ ಲೋಕೋಪಯೋಗಿ ಇಲಾಖೆಯು ಸಲ್ಲಿಸಿರುವ ಅಂದಾಜು ಪಟ್ಟಿಯಂತೆ ಪ್ರಿಯಾಂಕ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪ್ರವಾಹದಿಂದ ಸಿಮೆಂಟ್ ರಸ್ತೆ ಕಿತ್ತು ಹೋಗಿರುವ ಸ್ಥಳದಲ್ಲಿ ಅಗತ್ಯ ದುರಸ್ತಿ ಕಾರ್ಯ ಬೇಗನೆ ಮಾಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ದುರಸ್ತಿ ಕೈಗೊಂಡು ಸಂಚಾರಕ್ಕೆ ಮುಕ್ತವಾಗುವಂತೆ ತುರ್ತು ಕ್ರಮ ಕೈಗೊಳ್ಳಬೇಕು. ಯಾವುದೇ ಅನಾಹುತ, ಅಪಾಯ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಸಚಿವರು ಸೂಚಿಸಿದರು.

ನೂತನ ಸೇತುವೆ ನಿರ್ಮಾಣ ಸಂಬಂಧ ಈ ಮೊದಲು ₹ 48 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಿ ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗ ಮತ್ತೆ ನೂತನ ದರಪಟ್ಟಿ ಆಧರಿಸಿ ಅಂದಾಜು ಪಟ್ಟಿಯ ಮೊತ್ತವನ್ನು ಪರಿಷ್ಕರಿಸಿ ಮತ್ತೊಮ್ಮೆ ₹ 53 ಕೋಟಿಯ ಅಂದಾಜ ಪಟ್ಟಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದು ಸರ್ಕಾರದ ಮಟ್ಟದಲ್ಲಿದೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಮಹ್ಮದ್ ಸಲೀಂ ಅವರು ಸಚಿವರ ಗಮನಕ್ಕೆ ತಂದರು.

ಸೇಡಂ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ಅಮರೇಶ ಬಿರಾದಾರ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಲೋಕೋಪಯೋಗಿ ಎಂಜಿನಿಯರ್ ಮಹಮ್ಮದ್ ಶಂಸುದ್ದೀನ್‌ ಅವರು ಇದ್ದರು.

ದುರಸ್ತಿ ಮುಗಿದ ನಂತರ ಸಂಚಾರ: ಸೇತುವೆ ಮೇಲಿನ ಸಿಮೆಂಟ್ ರಸ್ತೆ ಕಿತ್ತು ಹಾನಿಯಾಗಿರುವ ಸ್ಥಳದಲ್ಲಿ ತಾಂತ್ರಿಕ ರೀತಿಯಲ್ಲಿ ದುರಸ್ತಿ ಕೆಲಸ ಮಾಡಿಸುವವರೆಗೆ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ದುರಸ್ತಿ ಕೆಲಸ ಮುಗಿದ ನಂತರವೇ ಸಾರಿಗೆ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗುತ್ತದೆ ಎಂದು ತಹಶೀಲ್ದಾರ್ ಅಮರೇಶ ಬಿರಾದಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT