ಮಂಗಳವಾರ, ಫೆಬ್ರವರಿ 7, 2023
27 °C

ಕಲಬುರಗಿ: ತಲೆ ನೋವಾದ ‘ಪ್ಯಾರಾಸೆಟಮಾಲ್’ ಅಭಾವ

ಮಲ್ಲಿಕಾರ್ಜುನ ನಾಲವಾರ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ವಿಳಂಬ ಟೆಂಡರ್‌ನಿಂದಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಪ್ಯಾರಾಸೆಟಮಾಲ್, ಡಿಕ್ಲೋಫೆನಾಕ್‌ನಂತಹ ಅತ್ಯವಶ್ಯಕ ಜೀವರಕ್ಷಕ ಔಷಧಿಗಳ ಪೂರೈಕೆಯಲ್ಲಿ ವ್ಯತ್ಯವಾಗುತ್ತಿದೆ.

ಸರ್ಕಾರಿ ಆರೋಗ್ಯ ಕೇಂದ್ರಗಳು ಈಗಾಗಲೇ ಮೂಲಸೌಕರ್ಯ, ವೈದ್ಯರು, ಸಿಬ್ಬಂದಿ ಕೊರತೆಗಳಿಂದ ತೆವಳುತ್ತಾ ಸಾಗುತ್ತಿವೆ. ಇದರ ಮಧ್ಯೆಯೇ ರೋಗ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಕೆಯಾಗುವ ಜನರಲ್‌ ಔಷಧಿಗಳ ಅಭಾವವು ರೋಗಿಗಳನ್ನು ಪರದಾಡುವಂತೆ ಮಾಡಿದೆ. ತಾತ್ಕಾಲಿಕ ಉಪಶಮನ ಎಂಬಂತೆ ವೈದ್ಯರೇ ತಮಗೆ ಮೀಸಲಿದ್ದ ಅನುದಾನದಲ್ಲಿ ಸ್ಥಳೀಯವಾಗಿ ಖರೀದಿಸಿ, ರೋಗಿಗಳಿಗೆ ಕೊಡುತ್ತಿದ್ದಾರೆ.

ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಜಿಲ್ಲಾ ಔಷಧಿ ಉಗ್ರಾಣದಿಂದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಮಾತ್ರೆ, ಕ್ಯಾಪ್ಶುಲ್, ಆಯಿಂಟ್‌ಮೆಂಟ್‌, ಸಿರಫ್, ಇಂಜೆಕ್ಷನ್ ಸೇರಿ 462 ಬಗೆಯ ವಿವಿಧ ಔಷಧಿಗಳನ್ನು ಸರಬರಾಜ ಮಾಡುತ್ತಿದೆ. ಇದರಲ್ಲಿ 301 ಅವಶ್ಯ, 59 ಅಗತ್ಯ ಔಷಧಿಗಳು, 80 ಅತ್ಯಂತ ಅಗತ್ಯ ಔಷಧಿಗಳು ಹಾಗೂ 19 ಬಹು ಅಗತ್ಯ ಔಷಧಿಗಳಾಗಿ ವಿಂಗಡಿಸಿ ಪೂರೈಸುತ್ತಿದೆ. ಸದ್ಯ ಉಗ್ರಾಣದಲ್ಲಿ 213 ವಿದಧ ಹಲವು ಔಷಧಿಗಳು ₹6.90 ಕೋಟಿಯಷ್ಟು ದಾಸ್ತಾನು ಇದೆ. ಇದರಲ್ಲಿ 500 ಎಂ.ಜಿ.ಯ 21 ಯುನಿಟ್ ಪ್ಯಾರಾಸೆಟಮಾಲ್ ಇದೆ.

‘ನಿತ್ಯ 300–350 ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಾರೆ. ಸುಮಾರು 1,200 ಪ್ಯಾರಾಸೆಟಮಾಲ್, 250 ಆಂಟಿಬಯೊಟೆಕ್‌, 200 ರಾಂಟ್ಯಾಕ್, 300 ಸಿಪಿಎಂ, 600 ಡೈಕ್ಲೋ ಮಾತ್ರೆಗಳು, 200 ಇಂಜೆಕ್ಷನ್, 100ಕ್ಕೂ ಅಧಿಕ ಸಿರಫ್ ಟಾನಿಕ್‌ಗಳನ್ನು ರೋಗಿಗಳಿಗೆ ನೀಡುತ್ತಿದ್ದೇವೆ. ತುರ್ತು ಸಂದರ್ಭದಲ್ಲಿ ಔಷಧಿ ಖರೀದಿಗಾಗಿ ನೀಡುವ ಬಹುತೇಕ ಅನುದಾನವನ್ನು ಅತ್ಯವಶ್ಯಕ ಔಷಧಿಗಳ ಖರೀದಿಗೆ ಮೀಸಲಿಡುತ್ತೇವೆ. ವರ್ಷದಲ್ಲಿ ಆಗಾಗ ಸಂಭವಿಸುವ ಪೂರೈಕೆಯ ವ್ಯತ್ಯಯದಿಂದ ಅತ್ಯವಶ್ಯಕ ಔಷಧಿಗಳ ನಿರ್ವಹಣೆ ಕಷ್ಟವಾಗುತ್ತಿದೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಹೇಳಿದರು.

‘ಕಳೆದ ಎರಡು ವರ್ಷಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯವಾಗುತ್ತಿದೆ. ಇಂಡೆಂಟ್ ಮಾಡಿದರೂ ಸರಬರಾಜು ಮಾಡಲು ಆಸ್ಪತ್ರೆ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ’ ಎಂದು ಮತ್ತೊಬ್ಬ ವೈದ್ಯರು ದೂರಿದರು.

‘ಔಷಧಿ ಅಭಾವ ಇದ್ದಾಗ ರೋಗಿಗಳಿಗೆ ಹೊರಗಡೆ ಔಷಧಿ ಚೀಟಿ ಬರೆದು ಕೊಡುವಂತಿಲ್ಲ. ಇಂತಹ ಪರಿಸ್ಥಿತಿ ನಿರ್ವಹಣೆಗಾಗಿ ಆಯಾ ಆಸ್ಪತ್ರೆಗಳಿಗೆ ಸ್ಥಳೀಯವಾಗಿ ಔಷಧಿ ಖರೀದಿಗೆ ವಾರ್ಷಿಕ ಅನುದಾನ ಕೊಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ₹ 1 ಲಕ್ಷ, ಸಮುದಾಯ ಆರೋಗ್ಯ ಕೇಂದ್ರ ₹ 5 ಲಕ್ಷ ಹಾಗೂ ತಾಲ್ಲೂಕು ಆಸ್ಪತ್ರೆಗೆ ತಲಾ ₹10 ಲಕ್ಷ ಅನುದಾನ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಶೇಖರ ಮಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟೆಂಡರ್ ಪ್ರಕ್ರಿಯೆಯಿಂದ ಅಗತ್ಯ ಔಷಧಿ ಪೂರೈಕೆಯಲ್ಲಿ ಸ್ವಲ್ಪ ತಡವಾಗಿದೆ. ಅನಾನುಕೂಲತೆ ತಡೆಯಲು ಸ್ಥಳೀಯವಾಗಿ ಜನೌಷಧಿ ಕೇಂದ್ರಗಳಲ್ಲಿ ಖರೀದಿಸುವಂತೆ ವೈದ್ಯರಿಗೆ ಸೂಚಿಸಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಆರ್ಡರ್ ಕೊಟ್ಟ ಬಳಿಕ ಪೂರೈಕೆಯಲ್ಲಿ ಯಾವುದೇ ಅಭಾವ ಕಂಡುಬರುವುದಿಲ್ಲ’ ಎಂದರು.

‘ಒಂದು ತಿಂಗಳಿಂದ ಕೊರತೆ’

‘ಜಿಲ್ಲೆಯಲ್ಲಿ ಒಂದು ತಿಂಗಳಿಂದ ಕೆಲವು ಔಷಧಿಗಳ ಪೂರೈಕೆಯಲ್ಲಿ ಕೊರತೆಯಾಗಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ’ ಎಂದು ಡಾ.ರಾಜಶೇಖರ ಮಾಲಿ ಹೇಳಿದರು.

‘ಸ್ಥಳೀಯವಾಗಿ ಔಷಧಿ ಖರೀದಿಸಲು ಸರ್ಕಾರ ಪ್ರತಿ ಕೇಂದ್ರದ ವೈದ್ಯರಿಗೆ ಅನುದಾನ ನೀಡಿದೆ. ಆ ಹಣದಲ್ಲಿ ಜಿಲ್ಲೆಯಲ್ಲಿ ಎಲ್ಲಿ ಬೇಕಾದರೂ ಔಷಧಿಗಳನ್ನು ಕೊಳ್ಳಬಹುದು. ಕೊರತೆ ಇರುವುದನ್ನು ಗಮನಕ್ಕೆ ತಂದರೆ ತಕ್ಷಣವೇ ಅವರಿಗೆ ಸರಬರಾಜು ಮಾಡಲಾಗುವುದು’ ಎಂದರು.

‘ಆರೋಗ್ಯ ಕೇಂದ್ರಗಳ ವೈದ್ಯರು ಜಿಲ್ಲಾ ಆರೋಗ್ಯ ಇಲಾಖೆಗೆ ತಮಗೆ ಬೇಕಾದಷ್ಟು ಇಂಡೆಂಟ್‌ ಸಲ್ಲಿಸುತ್ತಾರೆ. ಅದನ್ನು ವೈದ್ಯಕೀಯ ಸರಬರಾಜು ನಿಗಮಕ್ಕೆ ಕಳುಹಿಸಿದ ಬಳಿಕ ಟೆಂಡರ್ ಕರೆದು, ಖರೀದಿ ಮಾಡಿದ ಔಷಧವನ್ನು ಜಿಲ್ಲಾ ಉಗ್ರಾಣಕ್ಕೆ ಬರುತ್ತದೆ. ಇಲ್ಲಿಂದ ಆರೋಗ್ಯ ಕೇಂದ್ರಗಳಿಗೆ ಪೂರೈಸಲಾಗುತ್ತದೆ’ ಎಂದು ಔಷಧಿ ಉಗ್ರಾಣದ ಅಧಿಕಾರಿ ಹೇಳಿದರು.

ಜಿಲ್ಲೆಯ ಆರೋಗ್ಯ ಕೇಂದ್ರಗಳು

83; ಸಮುದಾಯ ಆರೋಗ್ಯ ಕೇಂದ್ರಗಳು

16; ಪ್ರಾಥಮಿಕ ಆರೋಗ್ಯ ಕೇಂದ್ರಗಳು

15; ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು

6; ತಾಲ್ಲೂಕು ಆಸ್ಪತ್ರೆಗಳು

1; ಜಿಲ್ಲಾ ಆಸ್ಪತ್ರೆ

ಜಿಲ್ಲಾ ಉಗ್ರಾಣದ ಔಷಧಿ ಸರಬರಾಜು

301; ಅವಶ್ಯ ಔಷಧಿಗಳು

80; ಅತ್ಯಂತ ಅವಶ್ಯ ಔಷಧಿಗಳು

59; ಅತಿ ಅಗತ್ಯ ಔಷಧಿಗಳು

19; ಬಹು ಅಗತ್ಯ ಔಷಧಿಗಳು

462; ಒಟ್ಟು ಔಷಧಿಗಳು

ಕಲಬುರಗಿ ಜಿಲ್ಲೆಯ ಔಷಧಿ ಸರಬರಾಜು ಪ್ರಮಾಣ

ವರ್ಷ; ಬಳಕೆಯ ಪ್ರಮಾಣ; ಮೊತ್ತ(₹ ಕೋಟಿ)

2019–2020; 38,60,965; 8.65

2020–22021; 49,61,047; 26.19

2021–22; 52,10,024; 15.92

ಪ್ರಸ್ತುತ ದಾಸ್ತಾನು; ₹6.9 ಕೋಟಿ

ಆಧಾರ; ಜಿಲ್ಲಾ ಔಷಧಿ ಉಗ್ರಾಣ, ಜಿಲ್ಲಾ ಆರೋಗ್ಯ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು