ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್ ಕಮಲ ಆಡಿಯೊ ಪ್ರಕರಣ: ಎಸ್‌ಐಟಿ ಶೀಘ್ರ ರಚನೆ- ಎಂ.ಬಿ.ಪಾಟೀಲ

Last Updated 23 ಫೆಬ್ರುವರಿ 2019, 18:38 IST
ಅಕ್ಷರ ಗಾತ್ರ

ಕಲಬುರ್ಗಿ: ‘ಆಪರೇಷನ್ ಕಮಲ ಆಡಿಯೊ ಪ್ರಕರಣದ ತನಿಖೆಗೆ ಶೀಘ್ರ ಎಸ್ಐಟಿ ರಚಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಡಿಯೊ ಪ್ರಕರಣ ಗಂಭೀರವಾಗಿದೆ. ಎಸ್‌ಐಟಿಗೆ ಯಾರನ್ನು ಮುಖ್ಯಸ್ಥರನ್ನಾಗಿ ನಿಯೋಜನೆ ಮಾಡುತ್ತೇವೆಯೋ ಅವರು ತನಿಖೆಯನ್ನು ಮಾಡಲೇಬೇಕಾಗುತ್ತದೆ’ ಎಂದರು.

‘ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಾಂತಿ, ಯುಗಾದಿ ಹೋಗುತ್ತಲೇ ಇವೆ. ಬಿಜೆಪಿಯವರು ಸರ್ಕಾರ ಬೀಳುತ್ತದೆ ಎಂದು ಡೆಡ್‌ಲೈನ್ ಕೊಡುತ್ತಲೇ ಇದ್ದಾರೆ. ಅವರು 22 ಸ್ಥಾನಗಳನ್ನು ಗೆಲ್ಲುವುದಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ’ ಎಂದು ಹೇಳಿದರು.

‘ಪೊಲೀಸರ ಸಮಗ್ರ ಅಭಿವೃದ್ಧಿಗಾಗಿ ಔರಾದಕರ್ ವರದಿಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದ್ದು, ಈಗಾಗಲೇ ತಾತ್ವಿಕ ಒಪ್ಪಿಗೆಯನ್ನು ನೀಡಲಾಗಿದೆ. ಮುಖ್ಯಮಂತ್ರಿ, ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವರದಿಯನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪೊಲೀಸ್ ತರಬೇತಿ ಶಾಲೆಗಳನ್ನು ಬಲವರ್ಧನೆಗೊಳಿಸಲು ಹಾಗೂ ಪೊಲೀಸ್ ಇಲಾಖೆಯಲ್ಲಿ ಸುಧಾರಣೆಗಳನ್ನು ತರಲು ಡಿಜಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಜತೆಗೆ ನೆರೆಹೊರೆ ರಾಜ್ಯಗಳಲ್ಲಿನ ಪೊಲೀಸ್ ಇಲಾಖೆಗಳಲ್ಲಿನ ಸುಧಾರಣೆಗಳನ್ನು ಅಧ್ಯಯನ ಮಾಡಿ ನಮ್ಮ ರಾಜ್ಯದಲ್ಲಿಯೂ ಅಂತಹ ಸುಧಾರಣೆಗಳನ್ನು ಅಳವಡಿಸಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಾಗೂ ಇನ್‌ಸ್ಪೆಕ್ಟರ್ ಅವರ ಒಂದು ಸ್ಥಾನದ ಸೇವಾ ಅವಧಿಯನ್ನು ಒಂದು ವರ್ಷದ ಬದಲು ಎರಡು ವರ್ಷಕ್ಕೆ ವಿಸ್ತರಿಸಲು ಚಿಂತನೆ ನಡೆದಿದೆ’ ಎಂದು ಹೇಳಿದರು.

**

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಾಗೂ ಇನ್‌ಸ್ಪೆಕ್ಟರ್ ಅವರ ಒಂದು ಸ್ಥಾನದ ಸೇವಾ ಅವಧಿಯನ್ನು ಎರಡು ವರ್ಷಕ್ಕೆ ವಿಸ್ತರಣೆ ಮಾಡಲಾಗುವುದು.

-ಎಂ.ಬಿ.ಪಾಟೀಲ, ಗೃಹ ಸಚಿವ

**

ಪ್ರಶಿಕ್ಷಣಾರ್ಥಿ ಬಸವರಾಜ ಕುಟುಂಬಕ್ಕೆ ₹26.83 ಲಕ್ಷ ನೆರವು

ಜನವರಿ 7ರಂದು ಅನುಮಾನಾಸ್ಪದವಾಗಿ ಮೃತಪಟ್ಟ ಪಿಎಸ್‌ಐ ಪ್ರಶಿಕ್ಷಣಾರ್ಥಿ ಬಸವರಾಜ ಮಂಚನೂರು ಅವರ ಕುಟುಂಬಕ್ಕೆ ಸಹ ಪ್ರಶಿಕ್ಷಣಾರ್ಥಿಗಳು ನೀಡಿದ ₹26.83 ಲಕ್ಷ ನೆರವಿನ ಠೇವಣಿ ಪತ್ರ ಹಾಗೂ ನಗದನ್ನು ಗೃಹ ಸಚಿವ ಎಂ.ಬಿ.ಪಾಟೀಲ ಕುಟಂಬದ ಸದಸ್ಯರಿಗೆ ಹಸ್ತಾಂತರಿಸಿದರು.

590 ಪ್ರಶಿಕ್ಷಣಾರ್ಥಿಗಳು ತಲಾ ₹10 ಸಾವಿರದಂತೆ ₹59 ಲಕ್ಷ ನೆರವು ನೀಡಲು ಒಪ್ಪಿಕೊಂಡಿದ್ದರು. ಈ ಪೈಕಿ ಬುನಾದಿ ತರಬೇತಿ ಪೂರ್ಣಗೊಳಿಸಿರುವ 268 ಪ್ರಶಿಕ್ಷಣಾರ್ಥಿಗಳು ₹25 ಲಕ್ಷ ಠೇವಣಿ ಪತ್ರ ಹಾಗೂ ₹1.83 ಲಕ್ಷ ನಗದು ನೀಡಿದರು. ಇನ್ನುಳಿದ 322 ಪ್ರಶಿಕ್ಷಣಾರ್ಥಿಗಳು ತರಬೇತಿ ಪೂರ್ಣಗೊಂಡ ಬಳಿಕ ₹32 ಲಕ್ಷ ನೆರವು ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT