ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಗ ಪ್ರೇಮಿ ಅಮರ್‌ಗೆ ಯೂಟ್ಯೂಬೇ ಗುರು!

ಸುಮಾರು 3,500 ಹಾವುಗಳ ರಕ್ಷಿಸಿದ ಉರಗಪ್ರೇಮಿ; ಸಾರ್ವಜನಿಕರಿಗೆ ಅರಿವು
Last Updated 13 ಡಿಸೆಂಬರ್ 2022, 7:32 IST
ಅಕ್ಷರ ಗಾತ್ರ

ಕಲಬುರಗಿ: ಈ ಯುವಕ ಶಾಲೆ ಕಲಿತಿದ್ದು ಐದನೇ ತರಗತಿ ಮಾತ್ರ. ಆದರೆ ಈತನಲ್ಲಿರುವ ಹಾವುಗಳ ಬಗೆಗಿನ ಜ್ಞಾನ ಯಾವ ತಜ್ಞರಿಗೂ ಕಡಿಮೆ ಇಲ್ಲ. ಊರಿನ ಸುತ್ತಮುತ್ತ ಗ್ರಾಮಗಳಲ್ಲಿ ಎಲ್ಲೆ ಯಾವುದೇ ಬಗೆಯ ಹಾವು ಕಾಣಿಸಿಕೊಳ್ಳಲಿ ಅಲ್ಲಿ ತಕ್ಷಣ ಹಾಜರಿರುತ್ತಾರೆ ಅಮರ ಬಡಿಗೇರ.

ಕಲಬುರಗಿ ತಾಲ್ಲೂಕಿನ ಕೆಸರಟಗಿ ಗ್ರಾಮದ ನಿವಾಸಿಯಾದ ಅಮರ ಬಡಿಗೇರ ಕಳೆದ ನಾಲ್ಕೈದು ವರ್ಷಗಳಿಂದ ಹಾವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, 28 ವರ್ಷದ ಅಮರ ಅವರು ಈವರೆಗೆ ಸುಮಾರು 3,500 ಹಾವುಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ವೃತ್ತಿಯಲ್ಲಿ ಕೃಷಿ ಕೂಲಿಕಾರ್ಮಿಕರಾದ ಅಮರ, ಹಾವುಗಳ ರಕ್ಷಣಾ ಕಾರ್ಯವನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡಿದ್ದಾರೆ.

ಕಲಬುರಗಿ ತಾಲ್ಲೂಕಿನ ಕೆಸರಟಗಿ, ಖಣದಾಳ,ಮಂಟೂರ, ಇಟಗಿ, ಪಾಣೆಗಾಂವ, ನಂದಿಕೂರ, ಕೋಟನೂರ (ಡಿ) ಸೇರಿದಂತೆ ಇತರೆ ಗ್ರಾಮಗಳಲ್ಲಿ ಹೆಚ್ಚಾಗಿ ಹಾವುಗಳನ್ನು ರಕ್ಷಣೆ ಮಾಡಿದ್ದು, ವಿಷಕಾರಿಯಾದ ಕೊಳಕು ಮಂಡಲ, ಗರಗಸ ಮಂಡಲ, ನಾಗರಹಾವು, ಕಟ್ಟಾವು ಹಾಗೂ ವಿಷಕಾರಿಯಲ್ಲದ ಕೆರೆಹಾವು, ಆಭರಣ ಹಾವು, ನೀರಾವು, ಬ್ಯಾಂಡೆಡ್‌ ಕುಕ್ರಿ, ಹುಲ್‌ಸ್ನೇಕ್‌, ಹಸಿರುನಾಗರ, ಅಲ್ಲಮಚಾರಿ, ಅರ್ಧ ವಿಷಕಾರಿಗಳಾದ ಬೆಕ್ಕಿನ ಹಾವು, ಹಸಿರು ಹಾವು ಸೇರಿದಂತೆ ವಿಷಕಾರಿ ಹಾಗೂ ವಿಷಕಾರಿಯಲ್ಲದ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಅಲ್ಲದೇ ಇತ್ತೀಚೆಗೆ ಗ್ರಾಮದಲ್ಲಿ ಸೆರೆಸಿಕ್ಕ ಹೆಬ್ಬಾವೊಂದನ್ನು ಸುರಕ್ಷಿತವಾಗಿ ಹಿಡಿದು ಕಲಬುರಗಿಯ ಕಿರು ಮೃಗಾಲಯಕ್ಕೆ ಒಪ್ಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವುಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಹಾವುಗಳಲ್ಲದೇ ಮಂಗಗಳ ಹಾವಳಿ ಸೇರಿ ಇತರೆ ಕಾಡು ಪ್ರಾಣಿಗಳ ಉಪಟಳದ ಬಗ್ಗೆ ಗಮನಕ್ಕೆ ತಂದರೆ ಅಲ್ಲಿ ಹಾಜರಿದ್ದು, ಅವುಗಳನ್ನು ಕಾಡಿಗೆ ಅಟ್ಟುವ ಹಾಗೂ ಸೆರೆಹಿಡಿಯುವ ಕೆಲಸವನ್ನು ಮಾಡುತ್ತಿದ್ದಾರೆ.

ವಿಷಕಾರಿಯಾದ ಕೊಳಕು ಮಂಡಲ ಹಾಗೂ ನಾಗರಹಾವು ಹಿಡಿಯುವ ಸಂದರ್ಭದಲ್ಲಿ ಬಹಳ ಎಚ್ಚರಿಕೆ ವಹಿಸುತ್ತೇನೆ. ಕೊಳಕು ಮಂಡಲವು ಜಂಪ್‌ ಮಾಡಿ ಕಚ್ಚುವ ಅಪಾಯ ಜಾಸ್ತಿ. ಇದನ್ನು ಹಿಡಿಯುವಾಗ ಮುಂಜಾಗ್ರತಾ ಕ್ರಮ ಅತ್ಯಗತ್ಯ. ಅರ್ಧ ವಿಷಕಾರಿಯಾದಬೆಕ್ಕಿನ ಹಾವು, ಹಸಿರು ಹಾವು ವಯಸ್ಕರಿಗೆ ಕಚ್ಚಿದರೆ ಜೀವ ಅಪಾಯವೇನು ಇಲ್ಲ. ಐದು ವರ್ಷದೊಳಗಿನ ಮಕ್ಕಳಿಗೆ ಕಚ್ಚಿದರೆ ಜೀವಾಪಾಯ ಉಂಟಾಗುವ ಸಾಧ್ಯತೆಯಿದೆ.

ವಿಷಕಾರಿಯಲ್ಲದ ಹಾವುಗಳು 50ಕ್ಕೂ ಹೆಚ್ಚು ಬಾರಿ ನನಗೆ ಕಚ್ಚಿವೆ. ಆದರೂ ಏನು ಆಗಿಲ್ಲ. ಹಾವುಗಳನ್ನು ಕಂಡಾಗ ಸಾಯಿಸಬೇಡಿ. ಅವುಗಳನ್ನು ಅವುಗಳ ಪಾಡಿಗೆ ಇರಲು ಬಿಡಿ ಎಂದು ಸಲಹೆ ನೀಡುತ್ತಾರೆ ಅಮರ.

‘ಸಣ್ಣ ವಯಸ್ಸಿನಿಂದಲೂ ಪ್ರಾಣಿಗಳ ಬಗ್ಗೆ ವಿಶೇಷ ಆಸಕ್ತಿ. ಹಾಗಾಗಿ ಡಿಸ್ಕವರಿ ಚಾನೆಲ್‌ ನೋಡುತ್ತ ಪ್ರಾಣಿಗಳ ಬಗ್ಗೆ ತಿಳಿದುಕೊಂಡೆ. ನಂತರ ಯೂಟ್ಯೂಬ್‌ ನೋಡಿ ಹಾವು ಹಿಡಿಯವ ಕೌಶಲವನ್ನು ಕಲಿತುಕೊಂಡೆ. ಹಿಡಿದ ಹಾವುಗಳನ್ನು ಜೋಗುಡ್ಡ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದೇನೆ’ ಎಂದು ಅಮರ ಬಡಿಗೇರ ಹೇಳಿದರು.

‘ಯಾವುದೇ ಸಮಯದಲ್ಲಿ ಕರೆ ಬಂದರೂ ನಾನು ತೆರಳಿ ಹಾವು ಹಿಡಿದು ನಿರ್ಜನ ಪ್ರದೇಶಗಳಿಗೆ ಬಿಟ್ಟು ಬರುತ್ತೇನೆ. ನಂತರ ಹಾವು ಸೇರಿಕೊಂಡ ಮನೆಯವರು ಕೊಟ್ಟಷ್ಟು ಹಣ ತೆಗೆದುಕೊಳ್ಳುತ್ತೇನೆ. ಇಂತಿಷ್ಟೇ ಕೊಡಿ ಎಂದು ಬೇಡಿಕೆ ಇಡುವುದಿಲ್ಲ. ನಾನು ಕೂಡ ಕೂಲಿಕಾರ್ಮಿಕನಾದ್ದರಿಂದ ಅಲ್ಲಿಗೆ ತೆರಳಲು ತಗುಲುವ ಪೆಟ್ರೋಲ್‌ಗಾಗಿ ಹಣವನ್ನು ಪಡೆದುಕೊಳ್ಳುತ್ತೇನೆಯಷ್ಟೇ. ಹತ್ತಿರದ ಊರುಗಳಿಗೆ ಹೋದರೆ ಅದನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಾವುಗಳ ಕುರಿತ ಮಾಹಿತಿ ಹಾಗೂ ನೆರವು ಪಡೆಯಲು ಉರಗ ತಜ್ಞ ಅಮರ ಬಡಿಗೇರ ಅವರ ಮೊಬೈಲ್‌ ಸಂಖ್ಯೆ.63646 67897 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT