ಕಮಲಾಪುರ: ಅಳಿಯ ಮೃತಪಟ್ಟಿದ್ದಕ್ಕೆ ಮನನೊಂದು ಅತ್ತೆ ತಾಲ್ಲೂಕಿನ ಕುರಿಕೋಟಾ ಸೇತುವೆ ಬಳಿಯ ಬೆಣ್ಣೆ ತೊರೆ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಕಲಬುರಗಿ ಘಾಟಗೆ ಲೇಔಟ್ ನಿವಾಸಿ ಸಿದ್ಧಮ್ಮ ಬಸಪ್ಪ ಕೊಂಡಿ (82) ಆತ್ಮಹತ್ಯೆ ಮಾಡಿಕೊಂಡ ವೃದ್ಧೆ.
‘ಬೀದರ ಕುಂಬಾರವಾಡ ಗ್ರಾಮದ ಮೂಲ ನಿವಾಸಿಯಾಗಿದ್ದ ಸಿದ್ದಮ್ಮ ಅವರು ತಮ್ಮ ಪುತ್ರಿ ಕಲಬುರಗಿಯ ಘಾಟಗೆ ಲೇಔಟ್‌ನ ನಿವಾಸಿ ಸುಚಿತ್ರಾ ಬಳಿ ಅನೇಕ ವರ್ಷಗಳಿಂದ ವಾಸವಾಗಿದ್ದರು. ಸಿದ್ದಮ್ಮ ಅವರ ಅಳಿಯ, ಸುಚಿತ್ರಾ ಪತಿ ಕಾಶಿನಾಥ ಕೋರಿ (55) ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. 5 ವರ್ಷಗಳ ಹಿಂದೆ ಸಿದ್ದಮ್ಮ ಅವರ ಪುತ್ರ ಸಹ ಮೃತಪಟ್ಟಿದ್ದ. ಇದರಿಂದ ಮನನೊಂದ ಸಿದ್ದಮ್ಮ ಬುಧವಾರ ಬೆಳಿಗ್ಗೆ ಕುರಿಕೋಟಾ ಸೇತುವೆ ಬಳಿಯ ಬೆಣ್ಣೆ ತೊರೆ ಹಿನ್ನೀರಿಗೆ ಜಿಗಿದಿದ್ದಾರೆ. ಮೃತ ದೇಹ ಕಂಡ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ.
ಶವ ಹೊರತೆಗೆದು ಪೊಲೀಸರು ಗುರುತು ಪತ್ತೆ ಹಚ್ಚಿದ್ದು ನಂತರ ಸಾವಿಗೆ ಕಾರಣ ತಿಳಿದು ಬಂದಿದೆ. ಪಿಎಸ್‌ಐ ಆಶಾ ರಾಠೋಡ್, ರಾಮಲಿಂಗ, ಅಮರನಾಥ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.