ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡ ಬನ್ನಿ ಹರಸೂರಿನ ಸೋಗಿನ ಕುಣಿತ, ಬಲಿಪಾಡ್ಯಮಿಗೆ ಹಳ್ಳಿ ಹೈದರ ವಿಶಿಷ್ಟ ಆಚರಣೆ

ಪೌರಾಣಿಕ ವೇಷಗಳದ್ದೇ ಸಂಭ್ರಮ
Last Updated 3 ನವೆಂಬರ್ 2021, 6:15 IST
ಅಕ್ಷರ ಗಾತ್ರ

ಹರಸೂರು (ಕಲಬುರಗಿ ತಾಲ್ಲೂಕು): ದೀಪಾವಳಿಯ ವಿಶಿಷ್ಟ ಆಚರಣೆ ನೋಡಬೇಕೆಂದರೆ ನೀವು ತಾಲ್ಲೂಕಿನ ಹರಸೂರು ಗ್ರಾಮಕ್ಕೆ ಬರಬೇಕು. ಈ ಪುಟ್ಟ ಊರಿನಲ್ಲಿ ಪ್ರತಿ ವರ್ಷದ ದೀಪಾವಳಿಯ ಬಲಿಪಾಡ್ಯಮಿ ದಿನ ಯುವಕರು ಸೋಗಿನ ಕುಣಿತ ಹಾಕುತ್ತಾರೆ. ಅದರಲ್ಲೂ ವಿಶೇಷವಾಗಿ ಹರೆಯದ ಹುಡುಗರೆಲ್ಲ ಹುಡುಗಿಯರ ವೇಷ ಧರಿಸಿ ಸೋಗು ಮಾಡುವುದೇ ಚೆಂದ.

ಹರಸೂರಿನ ಜೈಭೀಮ ತರುಣ ಸಂಘದವರು ಆರು ವರ್ಷಗಳಿಂದ ಈ ಸೋಗಿನ ಕುಣಿತ ಹಾಕುತ್ತಿದ್ದಾರೆ. ಅದಕ್ಕೂ ಹಿಂದೆ ಅಂದರೆ; ನೂರಾರು ವರ್ಷಗಳಿಂದಲೂ ಈ ಉರಲ್ಲಿ ವೇಷ ಹಾಕಿ ಕುಣಿಯುವ ಸಂಪ್ರದಾಯ ನಡೆದುಬಂದಿದೆ. ಯಾವುದೇ ಮಡಿವಂತಿಕೆ, ಹಿಂಜರಿಕೆ, ಸಂಕೋಚಗಳು ಇಲ್ಲದೇ ಊರಿನ ಎಲ್ಲ ಜಾತಿ–ಜನಾಂಗದವರೂ ಇದರಲ್ಲಿ ಪಾಲ್ಗೊಳ್ಳುವುದು ವಿಶೇಷ.

ರಾಮ, ಕೃಷ್ಣ, ರಾವಣ, ಹನುಮಂತ, ಸೀತೆ, ಮಹಿಷಿ, ಲಕ್ಷ್ಮಿ, ಸರಸ್ವತಿ, ಶಿವ, ಪಾರ್ವತಿ, ಜೋಕುಮಾರಸ್ವಾಮಿ... ಹೀಗೆ ವೈವಿಧ್ಯಮಯ ಪೌರಾಣಿಕ ವೇಷ ಧರಿಸಿಕೊಂಡು ಸಂಭ್ರಮಿಸುವವರು ಹೆಚ್ಚು. ಅಲ್ಲದೇ ಮದುವನಗಿತ್ತಿ, ಮದುಮಗ, ಗರ್ಭಿಣಿಯ ವೇಷ ಹಾಕಿಕೊಳ್ಳುವವರೂ ಇದ್ದಾರೆ. ಊರಿನ ಹಿರಿಯರೇ ಈ ಸಂಪ್ರದಾಯವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿಕೊಂಡು ಬಂದಿದ್ದಾರೆ.

ಗ್ರಾಮದೇವತೆ ದೇವಸ್ಥಾನದ ಮುಂದೆ ಇದಕ್ಕಾಗಿಯೇ ಒಂದು ಸಜ್ಜಕೆ ಹಾಕಲಾಗುತ್ತದೆ. ಅದನ್ನು ಸಗಣಿಯಿಂದ ಸಾರಿಸಿ, ರಂಗೋಲಿ ಬಿಡಿಸಿ ಅಲಂಕರಿಸಲಾಗುತ್ತದೆ. ಮಧ್ಯದಲ್ಲಿ ಒಂದು ಕಂಬ ನೆಟ್ಟು ಅದರ ಸುತ್ತ ಹಿರಿಯರು ಜನಪದ ಗೀತೆಗಳನ್ನು ಹಾಡುತ್ತಾರೆ. ಡೋಲು, ತಮಟೆ, ತಾಳ ಬಾರಿಸುವವರೂ ಅವರ ಜತೆಗೂಡುತ್ತಾರೆ.
ಇವರನ್ನು ಸುತ್ತುವರಿದು ಯುವಕರ ಗುಂಪು ಸೋಗಿನ ಕುಣಿತ ಮಾಡುತ್ತದೆ.

‘ಬಂದೇನೋ ಗಣಪ ನಿನಗ ವಂದಿಸಾಕ...’, ‘ಹಳ್ಳಿಯ ಹೆಣ್ಣೋ ಬಾಳಿನ ಕಣ್ಣೋ ಹೋಯ್ ಹೋಯ್ ಹೋಯ್...’ ಮುಂತಾದ ಜನಪದ ಹಾಡುಗಳನ್ನು ಕೇಳುವುದೇ ಅಂದ. ಊರಿನ ಮಕ್ಕಳು, ಮಹಿಳೆಯರು, ಹಿರಿಯರೆಲ್ಲ ಒಂದೆಡೆ ಸೇರಿಕೊಂಡು ಈ ಖುಷಿ ಕಣ್ಣು ತುಂಬಿಕೊಳ್ಳುತ್ತಾರೆ.

ವಿಶೇಷವೆಂದರೆ ಮನೆಯ ಹೆಣ್ಣುಮಕ್ಕಳೇ ಈ ರೀತಿ ಯುವಕರನ್ನು ಅಲಂಕಾರ ಮಾಡುತ್ತಾರೆ. ಬಣ್ಣಬಣ್ಣದ ಸೀರೆಗಳನ್ನು ಉಟ್ಟುಕೊಂಡು, ಉದ್ದ ಜಡೆ ಕಟ್ಟಿಕೊಂಡು, ಬೈತಲೆ ಬೊಟ್ಟು, ಕುಂಕುಮ ಧರಿಸಿ, ಬೆಂಡೋಲೆ, ಬಳೆ, ಸರಗಿಸರ, ಬೋರಮಾಳ, ನೆಕ್ಲೆಸ್, ಕಾಲ್ಗೆಜ್ಜೆ, ತೋಳುಬದಿ, ಸೊಂಟಪಟ್ಟಿ... ಹೀಗೆ ದೇವತೆಯೊಬ್ಬಳಿಗೆ ಮಾಡ ಬಹುದಾದ ಎಲ್ಲ ಅಲಂಕಾರವನ್ನೂಅವರಿಗೆ ಮಾಡುತ್ತಾರೆ. ಮತ್ತೆ ಕೆಲವರು ಚಿನ್ನದ ಸರ, ಬೆಂಡೋಲೆ, ಮೂಗುತಿಗಳನ್ನೂ ಹಾಕುತ್ತಾರೆ. ಉಳಿದವರು ಬಿಂಟೆಕ್ಸ್‌ಆಭರಣಗಳನ್ನೇ ಹಾಕಿಕೊಂಡು ಸಂಭ್ರಮಿಸುತ್ತಾರೆ. ಪ್ಯಾರಿಸ್ಪ್ಲಾಸ್ಟರಿ, ರಟ್ಟು, ವ್ಯರ್ಥಪ್ಲಾಸ್ಟಿಕ್‌ ಕೊಡಗಳನ್ನು ಬಳಸಿಕೊಂಡು ಕಿರೀಟ, ಗದೆ, ಖಡ್ಗ, ಬಿಲ್ಲು– ಬಾಣಗಳನ್ನು ಸಿದ್ಧಪಡಿಸುವುದೂಒಂದು ಕಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT