ಬುಧವಾರ, ಜುಲೈ 6, 2022
21 °C
ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣ; ಕೆಕೆಆರ್‌ಡಿಬಿಯಿಂದ ಅನುದಾನ

ಕಲಬುರಗಿ: ಕ್ರೀಡಾಪಟುಗಳಲ್ಲಿ ಕನಸು ಬಿತ್ತಿದ ‘ಕ್ರೀಡಾ ಸಂಕೀರ್ಣ’

ಸತೀಶ.ಬಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ಮತ್ತು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದು ಕ್ರೀಡಾಪಟುಗಳಲ್ಲಿ ಹಲವು ಕನಸುಗಳನ್ನು ಬಿತ್ತಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) ಈ ಕ್ರೀಡಾ ಸಂಕೀರ್ಣ ನಿರ್ಮಾಣವಾಗಲಿದೆ. ಇದಕ್ಕಾಗಿ 50 ಎಕರೆ ಭೂಮಿ ಹಸ್ತಾಂತರಿಸುವಂತೆ ಉನ್ನತ ಶಿಕ್ಷಣ ಇಲಾಖೆಯು ಗುಲಬರ್ಗಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಈಗಾಗಲೇ ಪತ್ರ ಬರೆದಿದೆ.

ನಗರದಲ್ಲಿನ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗಳಿಗೆ ಅಂಕಣಗಳು ಇವೆ. ಆದರೆ, ಸೂಕ್ತ ತರಬೇತುದಾರರು, ಮಾರ್ಗದರ್ಶನದ ಕೊರತೆ ಇದೆ. ಹೀಗಾಗಿ ಇಲ್ಲಿನ ಕ್ರೀಡಾಪಟುಗಳಿಂದ ಹೆಚ್ಚಿನ ಸಾಧನೆ ಮೂಡಿಬರುತ್ತಿಲ್ಲ.

‘ಹಿಂದುಳಿದ’ ಎಂಬ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯು ಕ್ರೀಡಾ ಕ್ಷೇತ್ರದಲ್ಲಿಯೂ ‘ಸಾಧನೆ’ ಬರ ಎದುರಿಸುತ್ತಿದೆ. ಸೌಕರ್ಯ ಕೊರತೆ ಕ್ರೀಡಾಪಟುಗಳನ್ನು ಬಾಧಿಸುತ್ತಿದೆ. ಹಾಕಿ, ಫುಟ್‌ಬಾಲ್, ಸೈಕ್ಲಿಂಗ್ ಸೇರಿದಂತೆ ಬಹುತೇಕ ಕ್ರೀಡೆಗಳಿಗೆ ಅಗತ್ಯ ಮೈದಾನಗಳೇ ಇಲ್ಲಿ ಇಲ್ಲ. ಇಲ್ಲಿನ ಕ್ರೀಡಾಪಟುಗಳಲ್ಲಿ ಪ್ರತಿಭೆ ಇದ್ದರೂ ಅವಕಾಶ, ಪ್ರೋತ್ಸಾಹ ಸಿಗದೆ ಕಮರುತ್ತಿವೆ.

‘ನಗರದಲ್ಲಿ ಬ್ಯಾಡ್ಮಿಂಟನ್ ಬಿಟ್ಟರೆ ಬೇರೆ ಯಾವುದೇ ರಾಜ್ಯ, ರಾಷ್ಟ್ರಮಟ್ಟದ ಟೂರ್ನಿಗಳು ನಡೆದಿಲ್ಲ. ಮಕ್ಕಳನ್ನು ಸಂಪೂರ್ಣವಾಗಿ ಕ್ರೀಡೆಯಲ್ಲಿ ತೊಡಗಿಸಲು ಇಲ್ಲಿ ಅಗತ್ಯ ತರಬೇತಿ ಸಿಗುವುದಿಲ್ಲ. ಗುಣಮಟ್ಟದ ತರಬೇತಿ ಸಿಗಬೇಕಾದರೆ ಬೇರೆ ಕಡೆಗೆ ಕಳಿಸಬೇಕು. ಹೀಗಾಗಿ ಅವರನ್ನು ಕ್ರೀಡೆಗೆ ಸೇರಿಸಲು ಹಿಂದೇಟು ಹಾಕಬೇಕಾಗಿದೆ’ ಎನ್ನುತ್ತಾರೆ ಪೋಷಕರು.

‘ಅಂತರರಾಷ್ಟ್ರೀಯ ಕ್ರೀಡಾ ಸಂಕೀರ್ಣದಲ್ಲಿ ಬಹುತೇಕ ಎಲ್ಲ ಕ್ರೀಡೆಗಳಿಗೂ ಅಂಕಣಗಳು ಇರಲಿವೆ. ನುರಿತ ಕ್ರೀಡಾ ತರಬೇತುದಾರರು ಅಲ್ಲಿ ನೇಮಕವಾಗಲಿದ್ದಾರೆ. ಹೀಗಾಗಿ ಗುಣಮಟ್ಟದ ತರಬೇತಿ ಸಿಗಲಿದೆ. ಆನಂತರ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ನಿರೀಕ್ಷಿಸಬಹುದು’ ಎಂಬುದು ಕ್ರೀಡಾಪಟುಗಳ ನಿರೀಕ್ಷೆ.

‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) ಅಂದಾಜು ₹250 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುವುದು. ಈ ಕುರಿತು ವಿವರವಾದ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವ ಕುರಿತು ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದು ಕೆಕೆಆರ್‌ಡಿಬಿ ಅಧಿಕಾರಿಗಳು ತಿಳಿಸಿದರು.

‘ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಅನುದಾನ ನೀಡಲಿದೆ. ನಿರ್ಮಾಣವಾದ ನಂತರ ಅದರ ನಿರ್ವಹಣೆ ಹೊಣೆ ಇಲಾಖೆಗೆ ವಹಿಸಲಾಗುವುದು’ ಎಂದರು.

ಈ ಹಿಂದೆ ಕ್ರೀಡಾ ಸಂಕೀರ್ಣದಲ್ಲೇ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಕ್ರಿಕೆಟ್ ಕ್ರೀಡಾಂಗಣಕ್ಕೆ ಹೆಚ್ಚಿನ ಜಾಗದ ಅವಶ್ಯಕತೆ ಇರುವುದರಿಂದ ಅದನ್ನು ಪ್ರತ್ಯೇಕವಾಗಿ ನಿರ್ಮಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಚಿಂತನೆ ನಡೆಸಿದ್ದು, 20 ಎಕರೆ ಭೂಮಿ ನೀಡಬೇಕು ಎಂದು ಮನವಿ ಮಾಡಿದೆ.

ಅಂತರರಾಷ್ಟ್ರಿಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ಇದಾಗಲಿದೆ. ಹೀಗಾಗಿ ಇದು ಇಲ್ಲಿನ ಕ್ರಿಕೆಟ್ ಆಟಗಾರರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.

‘ಕ್ರೀಡಾ ಸಂಕೀರ್ಣ ನಿರ್ಮಾಣವಾದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ರೀಡೆಗೆ ಮೂಲಸೌಕರ್ಯಗಳ ಬರ ನೀಗಲಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ. ಕಲಬುರಗಿ ಸೇರಿದಂತೆ ಈ ಭಾಗವು ಕ್ರೀಡಾ ಕ್ಷೇತ್ರದಲ್ಲಿ ಛಾಪು ಮೂಡಿಸಲು ಸಾಧ್ಯ’ ಎನ್ನುತ್ತಾರೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪ್ರಾಣೇಶ ಹುಟಗಿ.

ಕ್ರೀಡಾ ಸಂಕೀರ್ಣದ ಜತೆಗೆ ಅಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರಿ (ಸಾಯ್‌) ಹಾಸ್ಟೆಲ್ ನಿರ್ಮಿಸಬೇಕು. ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದರು.

‘ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿಯೂ ಅಗತ್ಯ ಮೂಲಸೌಕರ್ಯಗಳಿವೆ. ಅಲ್ಲಿಯೂ ತರಬೇತುದಾರರನ್ನು ನೇಮಿಸಿ ನಿರಂತರವಾಗಿ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳಬೇಕು’ ಎಂಬುದು ಅವರ ಒತ್ತಾಯ.

20 ಎಕರೆ ಭೂಮಿ ನೀಡಲು ಮನವಿ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರತ್ಯೇಕವಾಗಿ 20 ಎಕರೆ ಭೂಮಿ ನೀಡಲು ಮನವಿ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ರಾಯಚೂರು ವಲಯದ ಅಧ್ಯಕ್ಷ ಡಾ.ರಾಜು ಕುಳಗೇರಿ ತಿಳಿಸಿದರು.

‘ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣದ ನಿರ್ಮಿಸಬೇಕಾದರೆ 16–18 ಎಕರೆ ಭೂಮಿ ಬೇಕು. ನಾವು ಪಾರ್ಕಿಂಗ್ ಸೇರಿ ಇನ್ನಿತರ ಸೌಲಭ್ಯಗಳಿಗೆ 20 ಎಕರೆ ಭೂಮಿ ಕೇಳಿದ್ದೇವೆ’ ಎಂದರು.

‘ಪ್ರತ್ಯೇಕ ಭೂಮಿ ನೀಡಿದರೆ ಕೆಎಸ್‌ಸಿಎ ಮತ್ತು ಬಿಸಿಸಿಐನಿಂದ ಸಾಕಷ್ಟು ಸೌಲಭ್ಯಗಳು ಸಿಗಲಿವೆ. ಅಲ್ಲದೆ, ಟೂರ್ನಿ ಆಯೋಜನೆ ಮಾಡಲು ಬಿಸಿಸಿಐ ಹಣವನ್ನೂ ನೀಡಲಿದೆ. ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಜತೆ ಒಡಂಬಡಿಕೆ ಒಪ್ಪಂದ ಮಾಡಿಕೊಳ್ಳಲಿದೆ’ ಎಂದು ಹೇಳಿದರು.

‘ನಗರದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಉದ್ದೇಶ ಇದೆ. ಇದು ಸಾಧ್ಯವಾದರೆ ರಣಜಿ ಸೇರಿದಂತೆ ಬಿಸಿಸಿಐ ಟೂರ್ನಿಗಳನ್ನು ಆಯೋಜಿಸಬಹುದು’ ಎಂದರು.

‘ನಗರದಲ್ಲಿ ಈಗಾಗಲೇ ವಿಮಾನ ನಿಲ್ದಾಣ ಇದೆ. ಉತ್ತಮ ಹೋಟೆಲ್‌ಗಳು ಇವೆ. ಹಿಗಾಗಿ ಕ್ರೀಡಾಪಟುಗಳು ಇಲ್ಲಿಗೆ ಬರಲು, ತಂಗಲು ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದು ಹೇಳಿದರು.

‘ನಾವು ಹತ್ತು ವರ್ಷದ ಹಿಂದೆ ಕ್ರಿಕೆಟ್ ಆಡಿದಾಗ ಇಲ್ಲಿ ಟರ್ಫ್ ಕ್ರೀಡಾಂಗಣ ಇರಲಿಲ್ಲ. ಈಗ ಈ ಭಾಗದಲ್ಲಿ ಖಾಸಗಿಯವರು ಟರ್ಫ್ ಕ್ರೀಡಾಂಗಣ ನಿರ್ಮಿಸಿದ್ದಾರೆ. ಆದರೆ, ಸರ್ಕಾರದ ವತಿಯಿಂದ ಈ ಸೌಲಭ್ಯ ಕಲ್ಪಿಸಿದರೆ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು.

‘ಇಲ್ಲಿ ಕೆಎಸ್‌ಸಿಎ ಟರ್ಫ್ ಕ್ರೀಡಾಂಗಣ ಇಲ್ಲದಿದ್ದರೂ ಸಾಕಷ್ಟು ಕ್ರೀಡಾಪಟುಗಳು ರಾಜ್ಯದ ವಿವಿಧ ವಯೋಮಾನದವರ ತಂಡಕ್ಕೆ ಅಯ್ಕೆ ಆಗಿದ್ದಾರೆ. ಕ್ರೀಡಾಂಗಣ ನಿರ್ಮಾಣವಾದರೆ ಇನ್ನೂ ಹೆಚ್ಚು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಲಿದ್ದಾರೆ’ ಎಂದರು.

‘ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ನಿರ್ಣಯ’

ಕಲಬುರಗಿ: ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಂಕೀರ್ಣದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಯಾವ ಸೌಲಭ್ಯಗಳನ್ನು ನೀಡಬೇಕು ಎಂಬ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಆ ನಂತರ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ವಿ.ವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎನ್.ಜಿ.ಕಣ್ಣೂರ ತಿಳಿಸಿದರು.

ವಿ.ವಿಯ ಆವರಣದಲ್ಲೇ ಕ್ರೀಡಾ ಸಂಕೀರ್ಣ ನಿರ್ಮಾಣವಾಗುವುದರಿಂದ ನಮ್ಮ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದರು.

ನೂತನ ಸಂಕೀರ್ಣದಲ್ಲಿ ಬಹುತೇಕ ಎಲ್ಲ ಕ್ರೀಡೆಗಳಿಗೂ ಅಂಕಣಗಳು ಇರಲಿವೆ. ಅಲ್ಲದೆ, ತರಬೇತುದಾರರು ನೇಮಕವಾಗಲಿದ್ದಾರೆ. ಇದರಿಂದ ನಮ್ಮ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಸ್ಪರ್ಧಿಸಿ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಲಿದೆ. ಅಲ್ಲದೆ, ವೃತ್ತಿಪರ ತರಬೇತಿಯೂ ಸಿಗಲಿದೆ ಎಂದು ಹೇಳಿದರು.

ವಿ.ವಿಯ ಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇಲ್ಲ. ಹೀಗಾಗಿ ಅವರು ಮಣ್ಣಿನ ಮೈದಾನದಲ್ಲೇ ಅಭ್ಯಾಸ ಮಾಡಬೇಕಾಗಿದೆ. ಇದರಿಂದ ಅವರಿಗೆ ಸ್ಪರ್ಧಾತ್ಮಕ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ನೂತನ ಕ್ರೀಡಾ ಸಂಕೀರ್ಣದಲ್ಲಿ ಎಲ್ಲ ವಯೋಮಾನದವರನ್ನು ಗುರುತಿಸಿ ತರಬೇತಿ ನೀಡುವ ಕೆಲಸ ಆಗಬೇಕು. ಇದರಿಂದ ಈ ಭಾಗದಲ್ಲಿ ಉತ್ತಮ ಕ್ರೀಡಾಪಟುಗಳನ್ನು ಸಿದ್ಧಪಡಿಸಬಹುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು